Untitled Document
Sign Up | Login    
ಅಫ್ಘಾನಿಸ್ತಾನದ ಏಕೈಕ ಮತ್ತು ಮೊದಲ ಮಹಿಳಾ ಗವರ್ನರ್

ಹಬೀಬಾ

90ರ ದಶಕ ಅದು. ಅಫ್ಘಾನಿಸ್ತಾನದಲ್ಲಿ ತಾಲಿಬಾನಿಗಳ ಕಾರುಬಾರು. ಅಂಥ ಸನ್ನಿವೇಶದಲ್ಲಿ, "ನಾನು ಯುದ್ಧನಾಯಕಿ ಅಲ್ಲ..ನಾನೊಬ್ಬ ಸಾಮಾನ್ಯ ಆಧುನಿಕ ಮಹಿಳೆ ಅಷ್ಟೆ.. ಹೆಣ್ಮಕ್ಕಳ ಶಿಕ್ಷಣ ಮತ್ತು ಸಬಲೀಕರಣ ಇಂದಿನ ಅಗತ್ಯ. ಅದಕ್ಕಾಗಿ ಕೆಲಸ ಮಾಡುತ್ತಿದ್ದೇನೆ'' ಹೀಗೊಂದು ಹೆಣ್ಣು ಧ್ವನಿ ಆ ನಾಡಿನಲ್ಲಿ ಮೊಳಗಿತ್ತು.. ಈ ಧ್ವನಿಗೆ ಜಗತ್ತೇ ತಿರುಗಿ ಅಫ್ಘಾನಿಸ್ತಾನದ ಕಡೆಗೆ ಒಮ್ಮೆ ತಿರುಗಿ ನೋಡಿತ್ತು. ಈ ಅಫ್ಘಾನ್ ಮಹಿಳೆಯ ಹೆಸರು ಹಬೀಬಾ ಸರಾಬಿ. ಸದ್ಯ 57 ವರ್ಷದ ಅವರು ಅಫ್ಘಾನಿಸ್ತಾನದ ಏಕೈಕ ಮತ್ತು ಮೊದಲ ಮಹಿಳಾ ಗವರ್ನರ್. ಅಷ್ಟೇ ಅಲ್ಲ, ಇತ್ತೀಚೆಗೆ ಮ್ಯಾಗ್ಸೆಸ್ಸೆ ಪ್ರಶಸ್ತಿ ಪಡೆದವರ ಪೈಕಿ ಅತಿ ಹೆಚ್ಚು ಜಗತ್ತಿನ ಗಮನ ಸೆಳೆದವರು ಹಬೀಬಾ.
ಭಾರತದ ಜತೆಗೆ ಇವರದ್ದು ಶೈಕ್ಷಣಿಕ ನಂಟು. ಇವರು ಭಾರತದಲ್ಲಿ ವೈದ್ಯಕೀಯ ಶಿಕ್ಷಣ ಪಡೆದವರು ಎಂಬ ಹೆಮ್ಮೆಯ ಕಾರಣದಿಂದ ಇವರನ್ನು ಓದುಗರಿಗೆ ಪರಿಚಯಿಸುವ ಅಗತ್ಯವಿದೆ.

ಹಿನ್ನೆಲೆ: 1956ರಲ್ಲಿ ಮಜರ್ ಏ ಷರೀಫ್ ಎಂಬಲ್ಲಿ ಹಝಾರ ಸಮುದಾಯಕ್ಕೆ ಸೇರಿದ ಹಬೀಬಾ ಜನಿಸಿದರು. ಅಫ್ಘಾನಿಸ್ತಾನದಲ್ಲೇ ಪ್ರಾಥಮಿಕ ಶಿಕ್ಷಣವನ್ನು ಪೂರೈಸಿದ ಅವರು, ಹೈಸ್ಕೂಲ್ ಶಿಕ್ಷಣ ಕಾಬೂಲ್‍ನಲ್ಲಿ ಪಡೆದರು. ಅಲ್ಲದೆ, ಸ್ಥಳೀಯ ವಿಶ್ವವಿದ್ಯಾಲಯದಲ್ಲಿ ವೈದ್ಯಶಾಸ್ತ್ರದ ಅಧ್ಯಯನ ನಡೆಸಿ ಬಳಿಕ ಹೆಮಟಾಲಜಿ(ರಕ್ತಶಾಸ್ತ್ರ) ಕುರಿತ ಹೆಚ್ಚುವರಿ ಶಿಕ್ಷಣವನ್ನು ಭಾರತದಲ್ಲಿ ಪಡೆದರು. ವಿಶ್ವ ಆರೋಗ್ಯ ಸಂಸ್ಥೆಯ ಫೆಲೋಶಿಪ್‍ ಪಡೆದಿದ್ದರು.
1996ರ ಸೆಪ್ಟೆಂಬರ್ ತನಕ ಎಲ್ಲವೂ ಸರಿಯಾಗೇ ಇತ್ತು. ಈ ಅವಧಿಯಲ್ಲಿ ತಾಲಿಬಾನಿಗಳ ಕೈ ಮೇಲಾಗಿ ಪ್ರಜಾಪ್ರಭುತ್ವದ ಕಗ್ಗೊಲೆಯಾಗಿತ್ತು. ತಾಲಿಬಾನಿಗಳ ಆಳ್ವಿಕೆಯಲ್ಲಿ ಹಬೀಬಾ ಅವರ ಮಕ್ಕಳಂತೆ ಅಲ್ಲಿನ ಅನೇಕ ಮಕ್ಕಳ ಶಿಕ್ಷಣದ ಕನಸು ಕಮರಿ ಹೋಗಿತ್ತು. ಇದೇ ವೇಳೆ, ಹಬೀಬಾ ತಮ್ಮ ಮೂವರು ಮಕ್ಕಳ(ಇಬ್ಬರು ಪುತ್ರರು ಮತ್ತು ಒಬ್ಬ ಪುತ್ರಿ) ಜತೆ ಪಾಕಿಸ್ತಾನದ ಪೇಶಾವರಕ್ಕೆ ವಲಸೆ ಹೋಗಿ ತಲೆಮರೆಸಿಕೊಂಡರು. ಅವರ ಪತಿ ಕೂಡಾ ವೈದ್ಯರಾಗಿದ್ದು ಕಾಬೂಲ್‍ನಲ್ಲೇ ಉಳಿದುಕೊಂಡು ಅವರ ಕುಟುಂಬದ ರಕ್ಷಣೆ ಕಡೆಗೆ ಗಮನಹರಿಸಿದರು. ಇಲ್ಲಿಂದ ಮುಂದೆ ಅವರು ಸಾಧನೆಯ ಹಾದಿ ಕಲ್ಲುಮುಳ್ಳಿನದ್ದಾಗಿತ್ತು.
ತಾಲಿಬಾನಿಗಳ ಆಳ್ವಿಕೆ...
1996ರಿಂದ 2001ರ ಅವಧಿ. ತಾಲಿಬಾನಿಗಳದ್ದೇ ಕಾರುಬಾರು. ಆ ಅವಧಿಯಲ್ಲಿ ಕಾಬೂಲ್ ಮತ್ತು ಪೇಶಾವರ ನಡುವಿನ ಬೆಟ್ಟವನ್ನು ಅದೆಷ್ಟೋ ಬಾರಿ ಹಬೀಬಾ ಕಾಲ್ನಡಿಗೆಯಲ್ಲೇ ಹತ್ತಿಳಿದಿದ್ದರು. ಕತ್ತೆ ಮೇಲೆ ಕುಳಿತು ಪಯಣಿಸುವಂತೆ ಪತಿ ಒತ್ತಾಯಿಸಿದ್ದರೂ, ಅಫ್ಘಾನ್ ಮಹಿಳೆಯರ ನಡುವೆ ಒಗ್ಗಟ್ಟು ಮೂಡಿಸುವುದಕ್ಕಾಗಿ ತಾನೂ ಅವರ ಜತೆ ಸಾಮಾನ್ಯರಂತೆ ಪಯಣಿಸುತ್ತಿರುವುದಾಗಿ ಪತಿಗೆ ಮನವರಿಕೆ ಮಾಡಿ ಕೊಟ್ಟಿರುವುದಾಗಿ ಹಬೀಬಾ ಹೇಳಿಕೊಂಡಿದ್ದಾರೆ.
ಈ ನಡುವೆ, ಹಬೀಬಾ ಮತ್ತು ಅವರ ಪತಿ ಇಬ್ಬರೂ ಭೂಗತರಾಗಿದ್ದುಕೊಂಡು ಅಫ್ಘಾನಿಸ್ತಾನದ ಹೆಣ್ಮಕ್ಕಳಿಗೆ ಪಾಠ ಹೇಳಿದರು. 1998ರಲ್ಲಿ ಅಫ್ಘಾನ್ ಇನ್ಸಿಟ್ಯೂಟ್ ಆಫ್ ಲರ್ನಿಂಗ್ ಎಂಬ ಸಂಸ್ಥೆಗೆ ಸೇರಿದ ಹಬೀಬಾ, ಕೆಲವೇ ವರ್ಷಗಳಲ್ಲಿ ಇಡೀ ಸಂಸ್ಥೆಯ ಜನರಲ್ ಮ್ಯಾನೇಜರ್ ಹುದ್ದೆಗೇರಿದರು. ಅಲ್ಲದೆ, ಹ್ಯುಮಾನಿಟೇರಿಯನ್ ಅಸಿಸ್ಟೆನ್ಸ್ ಫಾರ್ ದ ವುಮೆನ್ ಅಂಡ್ ಚಿಲ್ಡ್ರನ್ ಆಫ್ ಅಫ್ಘಾನಿಸ್ತಾನ್ ಎಂಬ ಸಂಸ್ಥೆಯ ಉಪಾಧ್ಯಕ್ಷೆಯೂ ಆದರು.
ತಾಲಿಬಾನಿಗಳ ಅಟ್ಟಹಾಸ ಕೊನೆಗೊಳಿಸಲು ಅಮೆರಿಕ ನೇತೃತ್ವದ 'ನಾರ್ತನ್ ಅಲಯನ್ಸ್' ಕಾಲಿರಿಸಿತು. ಅಲ್ಲಿಗೆ ಅಫ್ಘಾನರ ಬದುಕು ಇನ್ನಷ್ಟು ದುರ್ಬರವಾಯಿತು. ಯಾವ ಕ್ಷಣದಲ್ಲಿ ಎಲ್ಲಿ ಬಾಂಬ್ ಬೀಳುತ್ತದೋ ಎಂಬ ಭೀತಿಯಲ್ಲೇ ಜನ ಬದುಕಿದರು ಎಂಬುದನ್ನು ಹಬೀಬಾ ಸ್ಮರಿಸುತ್ತಾರೆ.

ಹೆಣ್ಮಕ್ಕಳ ಸ್ಥಿತಿಗತಿ: ಅಫ್ಘಾನ್ ಹೆಣ್ಮಕ್ಕಳ ಬಗ್ಗೆ ಅತೀವ ಕಾಳಜಿ ವಹಿಸುವ ಅವರು ಅಫ್ಘಾನಿಸ್ತಾನದ ಮಹಿಳೆಯರನ್ನು ಎರಡು ಗುಂಪುಗಳಲ್ಲಾಗಿ ಕಾಣುತ್ತಾರೆ. ಒಂದು ಪಟ್ಟಣದಲ್ಲಿ ಹುಟ್ಟಿ ಶಿಕ್ಷಣ ಪಡೆದವರು ಮತ್ತು ಎರಡನೇಯದಾಗಿ ಹಳ್ಳಿಯಲ್ಲಿ ಹುಟ್ಟಿ ಬೆಳೆದವರು. ಇದರಲ್ಲಿ ಪಟ್ಟಣದಲ್ಲಿ ಹುಟ್ಟಿದವರು ಸ್ವಲ್ಪ ಮಟ್ಟಿಗೆ ಶಿಕ್ಷಿತರಂತೆ ಬದುಕಿದರೂ, ಹಳ್ಳಿ ಹೆಣ್ಮಕ್ಕಳ ಬದುಕು ಅಕ್ಷರಶಃ ಪ್ರಾಣಿಗಳಂತೆಯೇ ಸರಿ. ಬಾಲ್ಯದಲ್ಲೇ ಬಲವಂತದ ಮದುವೆಗೊಳಗಾಗುತ್ತಿದ್ದಾರೆ ಎಂದು ಖೇದ ವ್ಯಕ್ತಪಡಿಸುತ್ತಾರೆ.

ಬದಲಾಯಿತು ಬದುಕು: ನಾರ್ತನ್ ಅಲಯನ್ಸ್ ತಾಲಿಬಾನಿಗಳ ವಶದಲ್ಲಿದ್ದ ಅಫ್ಘಾನಿಸ್ತಾನವನ್ನು ವಶಕ್ಕೆ ಪಡೆದ ಬಳಿಕ ಕಾಬೂಲ್‍ಗೆ ತೆರಳಿದ್ದೆ. ಅಲ್ಲಿ ಹೋದರೆ ಎಲ್ಲವೂ ಸ್ಮಶಾನದಂತೆ ಕಾಣಿಸಿತ್ತು. ಸೈನಿಕರ ದಾಳಿಗೆ ಬೆದರಿ ಮಹಿಳೆಯರು ಬುರ್ಖಾ ಧರಿಸಿಯೇ ಓಡಾಡುತ್ತಿದ್ದರು. ನನ್ನ ಕಾರು ಚಾಲಕನ ಮೇಲೂ ಅವರು ಹಲ್ಲೆ ನಡೆಸಿದ್ದರು. ಅಲ್ಲಿ ತಾಲಿಬಾನಿಗಳ ಬದಲು ಸಶಸ್ತ್ರ ಪಡೆಯ ಇನ್ನೊಂದು ವರ್ಗ ಅಲ್ಲೆಲ್ಲ ಓಡಾಡುತ್ತಿತ್ತು ಅಷ್ಟೆ.. ಬೇರೇನೂ ಬದಲಾವಣೆ ಕಾಣಲಿಲ್ಲ ಎಂಬುದನ್ನು ಹಬೀಬಾ ನೆನಪಿಸಿಕೊಳ್ಳುತ್ತಾರೆ.
ಇನ್ನು ನಾನು ಕೆಲಸ ಮಾಡುತ್ತಿದ್ದ ಆಸ್ಪತ್ರೆ ಕಡೆಗೆ ಹೋದರೆ ಅದು ಸ್ಮಶಾನದಂತಾಗಿತ್ತು. ಎಲ್ಲ ಬಾಗಿಲುಗಳಿಗೂ ಬೀಗ ಹಾಕಲಾಗಿತ್ತು. ನನ್ನ ಹೆಮಟಾಲಜಿ ವಿಭಾಗಕ್ಕೂ ಬೀಗ ಬಿದ್ದಿತ್ತು. ಕಾಬೂಲ್‍ನಲ್ಲಿ ಮತ್ತೆ ಆರೋಗ್ಯ ವ್ಯವಸ್ಥೆ ಸೇರಿದಂತೆ ಎಲ್ಲವನ್ನೂ ಸಹಜ ಸ್ಥಿತಿಗೆ ತರಬೇಕೆಂಬ ತುಡಿತ ಇತ್ತಾದರೂ, ಹೊಸ ಸರ್ಕಾರದ ಬಗ್ಗೆ ಸಾಕಷ್ಟು ನಂಬಿಕೆ ಬರಲಿಲ್ಲ. ವಿಶ್ವಾಸವೂ ಮೂಡಲಿಲ್ಲ. ಹೀಗಾಗಿ ಸ್ವಲ್ಪ ಸಮಯ ಪೇಶಾವರದಲ್ಲೇ ಉಳಿದುಕೊಂಡಿದ್ದಾಗಿ ಹೇಳಿದರು.

ಗವರ್ನರ್ ಆದ ಕ್ಷಣ..
ಹಬೀಬಾ ಅವರ ಹೋರಾಟದ ಬದುಕಿಗೆ ರಾಜಕೀಯ ತಿರುವು ನೀಡತು. ಕೊನೆಗೆ ಅಫ್ಘಾನಿಸ್ತಾನದ ಪುನಶ್ಚೇತನಕ್ಕೆ ಯೋಜನೆಗಳನ್ನು ಸಿದ್ಧಪಡಿಸಿ ಇಟ್ಟುಕೊಂಡಿದ್ದ ಅವರಿಗೆ, ಹೊಸ ಸರ್ಕಾರ ರಚನೆಯಾದಾಗ ಮಂತ್ರಿಯಾಗುವ ಅವಕಾಶವೂ ಲಭಿಸಿತು. ಸಂಸ್ಕೃತಿ ಮತ್ತು ಶಿಕ್ಷಣದ ಖಾತೆ ಹಾಗೆಯೇ ಮಹಿಳಾ ವ್ಯವಹಾರದ ಸಚಿವರಾಗಿಯೂ ಅವರು ಕರ್ತವ್ಯ ನಿಭಾಯಿಸಿದರು. ಐದು ವರ್ಷದ ಬಳಿಕ ಹಬೀಬಾರನ್ನು ಕರೆಸಿಕೊಂಡ ಅಧ್ಯಕ್ಷ ಹಮೀದ್ ಕರ್ಜಾಯಿ, ಮುಂದಿನ ಹಾದಿ ಬಗ್ಗೆ ವಿಚಾರಿಸುತ್ತಾರೆ. ಆಗ ಹಬೀಬಾ ಇಟ್ಟ ಬೇಡಿಕೆ ಒಂದೇ..`ನಾನು ಗವರ್ನರ್ ಆಗಬೇಕು' ಎಂಬ ಉತ್ತರ ನೀಡಿ ಅಧ್ಯಕ್ಷರೇ ಬೆಚ್ಚಿ ಬೀಳುವಂತೆ ಮಾಡುತ್ತಾರೆ. ಹಬೀಬಾ ಅವರ ದಿಟ್ಟತನಕ್ಕೆ ಮೆಚ್ಚುಗೆ ಸೂಚಿಸಿದ ಕರ್ಜಾಯಿ, ಬಮಿಯಾನ ಪ್ರಾಂತ್ಯದ ಗವರ್ನರ್ ಆಗಿ ಅವರನ್ನು ನೇಮಕ ಮಾಡುತ್ತಾರೆ. ಇದರೊಂದಿಗೆ ಅವರು ಅಫ್ಘಾನಿಸ್ತಾನದ ಏಕೈಕ ಮತ್ತು ಮೊದಲ ಮಹಿಳಾ ಗವರ್ನರ್ ಎಂಬ ಖ್ಯಾತಿಗೂ ಭಾಜನರಾಗುತ್ತಾರೆ. ಅಂದ ಹಾಗೆ, ತಾಲಿಬಾನಿಗಳು ಹಾಳುಗೆಡವಿದ ಜಗತ್ತಿನ ಅತ್ಯಂತ ಪ್ರಾಚೀನ ಬದ್ಧ ಶಿಲ್ಪಗಳು ಬಮಿಯಾನದಲ್ಲೇ ಇದ್ದವು. ತಾಲಿಬಾನಿಗಳ ಆಳ್ವಿಕೆ, ಕಟ್ಟಾ ಸಂಪ್ರದಾಯವಾದದ ಸಮುದಾಯದಲ್ಲಿದ್ದರೂ ಅದನ್ನೆಲ್ಲ ಮೀರಿ ಆ ಸಮುದಾಯದ ಮಹಿಳೆಯರ ಪ್ರಗತಿಗೆ ಶ್ರಮಿಸಿದ್ದು ಹಬೀಬಾ ಅವರ ಸಾಧನೆ. ಪಾಕಿಸ್ತಾನದಲ್ಲಿರುವ ಅಫ್ಘಾನ್ ನಿರಾಶ್ರಿತರ ಶಿಬಿರಕ್ಕೆ ತೆರಳಿ ಅಲ್ಲಿ ಮಹಿಳೆಯರಲ್ಲಿ ಉತ್ತೇಜನ ತುಂಬಿದ್ದಲ್ಲದೇ, ಹೆಣ್ಮಕ್ಕಳ ಶಿಕ್ಷಣಕ್ಕಾಗಿ ಹಬೀಬಾ ತನ್ನ ಶಕ್ತಿ, ಸಮಯವನ್ನು ಮೀಸಲಿರಿಸಿದ್ದರು. ತಾಲಿಬಾನಿಗಳ ಅತಿಕ್ರಮಣಕ್ಕೆ ತುತ್ತಾಗಿ ನಾಶವಾಗಿದ್ದ ಬಮಿಯಾನ ಪ್ರಾಂತ್ಯಕ್ಕೆ ಹೊಸ ರೂಪ ಕೊಡುವ ನಿಟ್ಟಿನಲ್ಲಿ ಮಹತ್ವದ ಯೋಜನೆಗಳನ್ನು ಹಮ್ಮಿಕೊಂಡಿದ್ದಾರೆ. ಸಂಕಷ್ಟ ಎದುರಿಸಿದರೂ ಎದೆಗುಂದದೆ ಸಾಧನೆಯ ಪಥದಲ್ಲಿ ಮುನ್ನುಗ್ಗಿದ ಸಾಧನೆ ಅವರದ್ದು.

 

Author : ಬೆಂಗಳೂರು ವೇವ್ಸ್ 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited