Untitled Document
Sign Up | Login    
ಕ್ರಿಕೆಟ್ ನಲ್ಲಿ ನೂತನ ದಾಖಲೆ ಬರೆದ ಮುಂಬೈ ಬಾಲಕ


ಕ್ರಿಕೆಟ್ ದೇವರು ತಮ್ಮ ವೃತ್ತಿ ಜೀವನಕ್ಕೆ ವಿದಾಯ ಹೇಳಿ ಇನ್ನೂ ವಾರ ಕಳೆದಿಲ್ಲ. ಸಚಿನ್ ತೆಂಡೂಲ್ಕರ್ ವಿದಾಯ ಹೇಳಿದ ಅದೇ ನೆಲದಲ್ಲಿ ಬಾಲಕನೊಬ್ಬ ಕ್ರಿಕೆಟ್ ಲೋಕವೇ ಬೆರಗಾಗುವಂತಹ ದಾಖಲೆ ಮಾಡಿದ್ದಾನೆ.

ಹೌದು. ಶಾಲಾ ಮಟ್ಟದ ಪಂದ್ಯಾವಳಿಯೊಂದರಲ್ಲಿ ಮುಂಬೈನ ರಿಜ್ವಿ ಸ್ಟ್ರಿಂಗ್ ಫೀಲ್ಡ್ ಶಾಲೆ ಪರ ಆಡಿದ ಪೃಥ್ವಿ ಷಾ ಬರೋಬ್ಬರಿ 546 ರನ್ ಬಾರಿಸಿದ್ದಾನೆ. ಈ ಮೂಲಕ ಇಡೀ ದೇಶವೇ ನಿಬ್ಬೆರಗಾಗುವಂತೆ ಮಾಡಿದ್ದಾನೆ. ಸಚಿನ್-ವಿನೋದ್ ಕಾಂಬ್ಳಿ 664 ರನ್ ಜೊತೆಯಾಟದ ಮೂಲಕ ವಿಶ್ವದಾಖಲೆ ಬರೆದಿದ್ದ ಹ್ಯಾರಿಸ್ ಶೀಲ್ಡ್ ಅಂತರ್ ಶಾಲಾ ಪಂದ್ಯಾವಳಿಯಲ್ಲೇ 15 ವರ್ಷದ ಪೃಥ್ವಿ ಈ ದಾಖಲೆ ಬರೆದಿರುವುದು ಮತ್ತೊಂದು ವಿಶೇಷ. ಸಚಿನ್ ರವರನ್ನು ಬೆಳಕಿಗೆ ತಂದಿದ್ದೇ ಈ ಹ್ಯಾರಿಸ್ ಶೀಲ್ಡ್ ಎಂಬುದು ಗಮನಿಸಬೇಕಾದ ಅಂಶ.

ಪೃಥ್ವಿ ಷಾ, 16 ವರ್ಷದೊಳಗಿನವರ ಮುಂಬೈ ತಂಡದ ನಾಯಕ. ಆಜಾದ್ ಮೈದಾನದಲ್ಲಿ ನ.20ರಂದು ನಡೆದ ಮುಂಬೈನ ಪ್ರತಿಷ್ಠಿತ ಅಂತರ್ ರಾಜ್ಯ ಡಿ ಅಸ್ಸಿಸಿ ಬೊರಿವಿಲಿ ತಂಡದ ವಿರುದ್ಧ ಪೃಥ್ವಿ 330 ಎಸೆತಗಳಲ್ಲಿ 85 ಬೌಂಡರಿ ಹಾಗೂ 5 ಸಿಕ್ಸರ್ ಸೇರಿದಂತೆ 546 ರನ್ ಸಿಡಿಸಿ ಅಧಿಕೃತ ಅಂತರ್ ಶಾಲಾ ಟೂರ್ನಿಯಲ್ಲಿ 500ಕ್ಕೂ ಅಧಿಕ ರನ್ ಬಾರಿಸಿದ ಮೊದಲ ಶಾಲಾ ಬಾಲಕ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಸೆಂಟ್ ಫ್ರಾನ್ಸಿಸ್ ತಂಡವನ್ನು 92ರನ್ ಗಳಿಗೆ ಆಲೌಟ್ ಮಾಡಿದ ನಂತರ ಬ್ಯಾಟಿಂಗ್ ಪ್ರಾರಂಭಿಸಿದ ರಜ್ವಿ ತಂಡದ ಪರ ಪೃಥ್ವಿ 166 ಎಸೆತಗಳಲ್ಲಿ 257 ರನ್ ಬಾರಿಸಿದರು. 2ನೇ ದಿನವಾದ ನ.20ರಂದು ಪೃಥ್ವಿ 289 ರನ್ ಸೇರಿಸಿ ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ಹೊಸ ಮೈಲುಗಲ್ಲು ನೆಟ್ಟರು.

ಭಾರತದಲ್ಲಿ ನಡೆದ ಸ್ಪರ್ಧಾತ್ಮಕ ಕ್ರಿಕೆಟ್ ನಲ್ಲಿ ಅತ್ಯಧಿಕ ರನ್ ಪೇರಿಸಿದ ದಾಖಲೆ ದಾದಾಭಾಯ್ ಹವೇವಾಲಾ ಹೆಸರಿನಲ್ಲಿತ್ತು. 1933-34ರಲ್ಲಿ ಮುಂಬೈನಲ್ಲಿ ನಡೆದ ಅಂತರ ಕಾಲೇಜು ಟೂರ್ನಿಯಲ್ಲಿ ಅವರು 515 ರನ್ ಪೇರಿಸಿದ್ದರು. ವಿಶ್ವಮಟ್ಟದಲ್ಲಿ ಸ್ಪರ್ಧಾತ್ಮಕ ಕ್ರಿಕೆಟ್ ನಲ್ಲಿ ಮೂಡಿಬಂದ ಮೂರನೇ ವೈಯಕ್ತಿಕ ಗರಿಷ್ಠ ಮೊತ್ತ ಪೃಥ್ವಿಯದ್ದು.

ಈ ಮೂಲಕ ಪೃಥ್ವಿ ವಿಶ್ವದಲ್ಲಿಯೇ ಅತ್ಯಧಿಕ ರನ್ ಬಾರಿಸಿದ ಮೂರನೇ ಆಟಗಾರ ಎಂಬ ದಾಖಲೆಗೆ ಪಾತ್ರರಾಗಿದ್ದಾರೆ. ಎಇಜೆ ಕಾಲಿನ್ಸ್ ಇಂಗ್ಲೆಂಡ್ ನಲ್ಲಿ 1899 ರಲ್ಲಿ 628 ರನ್ ಬಾರಿಸಿದ್ದರೆ, ಸಿಜೆ ಎಡಿ 1901ರಲ್ಲಿ 566 ರನ್ ಗಳಿಸಿದ್ದರು.

ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ತಮ್ಮ 24 ವರ್ಷಗಳ ಕ್ರಿಕೆಟ್ ವೃತ್ತಿ ಜೀವನಕ್ಕೆ ವಿದಾಯ ಹೇಳಿದ ಬೆನ್ನಲ್ಲೇ ಪೃಥ್ವಿ ಈ ದಾಖಲೆ ಮಾಡಿರುವುದು ಕ್ರಿಕೆಟ್ ಅಭಿಮಾನಿಗಳಲ್ಲಿ ಮುಂದಿನ ದಿನಗಳಲ್ಲಿ ಮೈದಾನದಲ್ಲಿ ಸಚಿನ್ ಸ್ಥಾನ ಈ ಬಾಲಕ ತುಂಬಬಹುದೇ ಎಂಬ ನಿರೀಕ್ಷೆಯೊಂದು ಮೂಡುವಂತಾಗಿದೆ.

 

Author : ಲೇಖಾ ಆರ್

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited