Untitled Document
Sign Up | Login    
ಪ್ಯಾನ್ ಕಾರ್ಡ್ ನಿಯಮ ಬಿಗಿ ಯು ಟರ್ನ್ ತೆಗೆದುಕೊಂಡ ಕೇಂದ್ರ ಸರ್ಕಾರ

ಪ್ಯಾನ್ ಕಾರ್ಡ್

ಆರ್ಥಿಕ ಅವ್ಯವಹಾರಗಳನ್ನು ತಡೆಗಟ್ಟುವ ಕ್ರಮವಾಗಿ ಆದಾಯ ತೆರಿಗೆ ಇಲಾಖೆ ಪರ್ಮನೆಂಟ್ ಅಕೌಂಟ್ ನಂಬರ್ (ಪ್ಯಾನ್) ಪಡೆಯಲಿರುವ ನಿಯಮವನ್ನು ಬಿಗಿಗೊಳಿಸಲು ಮುಂದಾಗಿತ್ತು. ಪ್ಯಾನ್ ಕಾರ್ಡ್ ಗಾಗಿ ಅರ್ಜಿ ಸಲ್ಲಿಸುವವರು ಇನ್ನು ಮುಂದೆ ಕಟ್ಟುನಿಟ್ಟಾಗಿ ನಿಯಮಗಳನ್ನು ಪಾಲಿಸಬೇಕಾಗುವ ಈ ನಿಯಮ ಫೆ.3ರಿಂದ ಚಾಲ್ತಿಗೆ ಬರಲಿದೆ ಎಂದು ಹೇಳಿದ್ದ ಕೇಂದ್ರ ಸರ್ಕಾರ ಜ.30ರಂದು ಮತ್ತೆ ಯು ಟರ್ನ್ ತೆಗೆದುಕೊಂಡಿದ್ದು ಪ್ಯಾನ್ ಕಾರ್ಡ್ ನಿಯಮ ಬಿಗಿಗೊಳಿಸುವ ಯಾವುದೇ ಪ್ರಸ್ತಾಪ ಇಲ್ಲ ಎಂದು ಹೇಳಿಕೊಂಡಿದೆ.

ಹಿಂದೆ ಏನು ಹೇಳಿತ್ತು ? : ನೇರ ತೆರಿಗೆಗಳ ಕೇಂದ್ರೀಯ ಮಂಡಳಿ ಇತ್ತೀಚೆಗೆ ಈ ಕುರಿತು ಪ್ರಕಟಣೆ ಹೊರಡಿಸಿತ್ತು. ಅದರಂತೆ, ಫೆ.3ರ ಬಳಿಕ ಪ್ಯಾನ್ ಕಾರ್ಡಿಗೆ ಅರ್ಜಿ ಸಲ್ಲಿಸುವ ಪ್ರತಿಯೊಬ್ಬ ವ್ಯಕ್ತಿಯೂ ಸ್ವಯಂ ದೃಢೀಕರಿಸಿದ ಗುರುತಿನ ಪತ್ರದ ಕಾಪಿ, ವಿಳಾಸದ ದೃಢೀಕರಣ, ಜನನ ದಿನಾಂಕ ದಾಖಲೆಗಳ ಛಾಯಪ್ರತಿಯನ್ನು ಸಲ್ಲಿಸಬೇಕು. ಇದರ ಜತೆಗೆ ಮೂಲಪ್ರತಿಗಳನ್ನು ಪರಿಶೀಲನೆಗಾಗಿ ಅರ್ಜಿ ಕೇಂದ್ರದಲ್ಲಿ ಸಲ್ಲಿಸಿ ವಾಪಸ್ ಪಡೆದುಕೊಳ್ಳಬೇಕು.
ಪ್ರತಿ ವರ್ಷ 14 ಲಕ್ಷ ಹೊಸ ಪ್ಯಾನ್ ಕಾರ್ಡ್ ವಿತರಿಸಲಾಗುತ್ತಿದ್ದು, ಇವುಗಳಲ್ಲಿ ಕೇವಲ 0.2 % ಅರ್ಜಿಗಳನ್ನಷ್ಟೇ ಸರಿಯಾಗಿ ಪರಿಶೀಲಿಸಲು ಸಾಧ್ಯವಾಗುತ್ತದೆ. ಹೊಸ ನೀತಿ ಜಾರಿಗೊಳಿಸುವುದರಿಂದಾಗಿ ನಕಲಿ ದಾಖಲೆಗಳನ್ನು ಸಲ್ಲಿಸಿ ಪ್ಯಾನ್ ಕಾರ್ಡ್ ಪಡೆಯುವುದನ್ನು ತಪ್ಪಿಸಬಹುದು ಎಂದು ಇಲಾಖೆ ಹೇಳಿಕೊಂಡಿದೆ.

ಈ ಹೊಸ ನಿಯಮ ಜಾರಿಗೆ ತರುವುದರಿಂದಾಗಿ ನಕಲಿ ದಾಖಲೆ ಸೃಷ್ಟಿ ಅವ್ಯವಹಾರ ನಡೆಸುವುದಕ್ಕೆ ಕಡಿವಾಣ ಹಾಕಿದಂತಾಗುತ್ತದೆ. ಆದರೆ, ಇದರಿಂದಾಗಿ ಪ್ಯಾನ್ ಕಾರ್ಡ್ ಪಡೆಯುವುದು ವಿದೇಶಿಯರಿಗೆ ತುಸು ತ್ರಾಸವೆನಿಸಲಿದೆ. ಇನ್ನೊಂದೆಡೆ, ಹೊಸ ನಿಯಮ ಪ್ರಕಾರ ಪ್ಯಾನ್ ಕಾರ್ಡ್ ಪ್ರತಿನಿಧಿಗಳ ಜತೆಗೆ ಮೂಲ ಪ್ರತಿಗಳನ್ನು ಪರಿಶೀಲನೆಗೆ ಒಪ್ಪಿಸುವುದು ಕೆಲವರಿಗೆ ಕಿರಿಕಿರಿ ಉಂಟುಮಾಡುವ ಸಾಧ್ಯತೆಯೂ ಇಲ್ಲದಿಲ್ಲ. ಆದರೆ ಆರ್ಥಿಕ ಅವ್ಯವಹಾರ ತಡೆಯುವ ನಿಟ್ಟಿನಲ್ಲಿ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳುವುದಕ್ಕೆ ಅಧಿಕಾರಿಗಳು ಸಜ್ಜಾಗಿರುವುದಂತೂ ಸ್ಪಷ್ಟ ಎಂಬ ಮಾತು ತಜ್ಞರ ವಲಯದಲ್ಲಿ ಕೇಳಿಬರುತ್ತಿದೆ.

ಆದಾಯ ತೆರಿಗೆ ನಿಯಮಗಳ ಪ್ರಕಾರ, ಬ್ಯಾಂಕ್ ಪಾಸ್ ಪುಸ್ತಕ, ರೇಷನ್ ಕಾರ್ಡ್, ಪಾಸ್ ಪೋರ್ಟ್, ಮತದಾರರ ಗುರುತಿನ ಚೀಟಿ, ಚಾಲನಾ ಪರವಾನಗಿ, ಆಸ್ತಿ ತೆರಿಗೆ ಘೋಷಣಾ ಪತ್ರ, ಸಂಸದ, ಶಾಸಕ, ಕಾರ್ಪೊರೇಟರ್, ಕೌನ್ಸಿಲರ್ ಅಥವಾ ಗಜೆಟೆಡ್ ಅಧಿಕಾರಿ ನೀಡಿದ ಪ್ರಮಾಣದ ಪತ್ರವನ್ನು ಗುರುತು ಮತ್ತು ವಿಳಾಸ ದೃಢೀಕರಣಕ್ಕಾಗಿ ಬಳಸಿಕೊಳ್ಳಬಹುದಾಗಿದೆ. ಹೀಗಾಗಿ ಕೆಲವು ವಿದೇಶೀಯರು ಪ್ಯಾನ್ ಕಾರ್ಡನ್ನು ಗುರುತಿನ ಚೀಟಿಯಾಗಿ ಭಾರತದಲ್ಲಿ ಬಳಸುತ್ತಿದ್ದಾರೆ. ಬಹುತೇಕ ಪ್ರಕರಣಗಳಲ್ಲಿ ಪ್ಯಾನ್ ಕಾರ್ಡ್ ಪಡೆಯುವುದಕ್ಕೆ ಸಂಸದರ ಶಿಫಾರಸು ಪತ್ರ ಬಳಸಲಾಗುತ್ತಿದೆ. ಅಲ್ಲದೆ ಅದರಲ್ಲಿ ನೀಡಲಾಗಿರುವ ನಕಲಿ ಗುರುತು ಮತ್ತು ವಿಳಾಸದಲ್ಲೇ ಪ್ಯಾನ್ ಕಾರ್ಡ್ ಕೂಡಾ ನೀಡಲಾಗಿರುತ್ತದೆ.

ಆದಾಯ ತೆರಿಗೆ ಇಲಾಖೆ ಅಂಕಿ ಅಂಶ ಪ್ರಕಾರ ಭಾರತದಲ್ಲಿ 14 ಕೋಟಿ ಜನರು ಈಗಾಗಲೇ ಪ್ಯಾನ್ ಕಾರ್ಡ್ ಹೊಂದಿದ್ದಾರೆ. ಆದರೆ, ಇವರಲ್ಲಿ 3.4 ಕೋಟಿ ಜನರಷ್ಟೇ ಆದಾಯ ತೆರಿಗೆ ಪಾವತಿಸುತ್ತಿದ್ದಾರೆ. ಒಟ್ಟಿನಲ್ಲಿ ಹೊಸ ನಿಯಮ ಜಾರಿಯಿಂದ ದೇಶದ ಬೊಕ್ಕಸಕ್ಕೆಷ್ಟು ಲಾಭವಾಗಲಿದೆ ಎಂಬುದೀಗ ಎಲ್ಲರ ಮುಂದಿರುವ ಪ್ರಶ್ನೆ.

 

Author : ಬೆಂಗಳೂರು ವೇವ್ಸ್ 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited