Untitled Document
Sign Up | Login    
ಇಲ್ಲಿ ಆಮಂತ್ರಣ ಪತ್ರಿಕೆಗಳದ್ದೇ ಕಾರುಬಾರು !

sultanpet

ಈಮೇಲ್ - ಎಸ್ಎಂಎಸ್ ಗಳಿಂದಾಗಿ ಅಂಚೆ ಪತ್ರ, ಅಂಚೆ ಕಾರ್ಡ್ ಗಳಿಗೆ ಹೊಡೆತ ಬಿದ್ದಿರಬಹುದು. ಆದರೆ, ಇವಾವುದೂ ಆಮಂತ್ರಣ ಪತ್ರಿಕೆಗಳ ಮೇಲೆ ಪರಿಣಾಮ ಬೀರಿಲ್ಲ. ಬೆಂಗಳೂರಿನ ಸುಲ್ತಾನ್ ಪೇಟೆಗೆ ಒಮ್ಮೆ ಭೇಟಿ ನೀಡಿದವರು ಯಾರು ಬೇಕಾದರೂ ಈ ಮಾತನ್ನು ಧೈರ್ಯದಿಂದ ಹೇಳಬಲ್ಲರು.

ಹೌದು.. ಸುಲ್ತಾನ್ ಪೇಟೆ.. ಇಲ್ಲಿ ವಿವಾಹ ಆಮಂತ್ರಣ ಪತ್ರಿಕೆಗಳದ್ದೇ ಕಾರುಬಾರು! ಅವುಗಳೇ ಇಲ್ಲಿ ನಿಜಾರ್ಥದ "ಸುಲ್ತಾನ್''ಗಳು ! ಮದುವೆಗಳೇನೋ "ಮೇಡ್ ಇನ್ ಹೆವನ್'' ಎಂಬ ಆಂಗ್ಲ ನುಡಿ ಇದೆ. ಆದರೆ, ಬೆಂಗಳೂರಿಗರ ಮಟ್ಟಿಗೆ ವಿವಾಹ ಆಮಂತ್ರಣ ಪತ್ರಿಕೆಗಳು "ಮೇಡ್ ಇನ್ ಸುಲ್ತಾನ್ ಪೇಟ್'' ಎಂಬ ಮಾತು ಇಲ್ಲಿ ಚಾಲ್ತಿಯಲ್ಲಿದೆ.

ಚೆನ್ನೈ ಅಥವಾ ಬೇರಾವುದೇ ಮಹಾನಗರಗಳಲ್ಲಿ ವಿವಾಹ ಆಮಂತ್ರಣ ಪತ್ರಿಕೆ ವಿನ್ಯಾಸ ಆಯ್ಕೆ ಮಾಡಬೇಕೆಂದರೆ ಇಡೀ ಮಹಾನಗರದ ಮೂಲೆ ಮೂಲೆ ಅಲೆಯಬೇಕಾಗುತ್ತದೆ. ಆದರೆ "ನಮ್ಮ ಬೆಂಗಳೂರು'' ಹಾಗಲ್ಲ. ಅದಕ್ಕೆಂದೇ ಇಡೀ "ಸುಲ್ತಾನ್ ಪೇಟೆ'' ಇದೆ. ಯಾವುದೇ ರೀತಿಯ ವಿನ್ಯಾಸದ ಕಾರ್ಡ್ ಬೇಕಿದ್ದರೂ ಇಲ್ಲಿ ಲಭ್ಯ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಹೇಳುವುದಾದರೆ, ನಿಮಗೆ ಬೇಕಾದ ರೀತಿಯ ಕಾರ್ಡ್ ಗಳನ್ನು ನೀವೇ ಹೇಳಿ ಮಾಡಿಸುವುದಕ್ಕೂ ಇಲ್ಲಿ ಅವಕಾಶವಿದೆ.

ಸುಲ್ತಾನ್ ಪೇಟೆ ಬಿಬಿಎಂಪಿ ಶಾಲೆಯ ಎದುರುಭಾಗದಿಂದಲೇ ನಿಜವಾದ "ಸುಲ್ತಾನ್ ಪೇಟೆ'' ಆರಂಭವಾಗುತ್ತದೆ. ರಸ್ತೆ ಇಕ್ಕೆಲಗಳಲ್ಲಿ ಸಾಲುಸಾಲು ಅಂಗಡಿಗಳು. ಆ ಸಾಲಿನಲ್ಲಿ ವಿವಾಹ ಆಮಂತ್ರಣ ಪತ್ರಿಕೆ ಸೇರಿದಂತೆ ವಿವಿಧ ಆಮಂತ್ರಣ ಪತ್ರಿಕೆಗಳ ಅಂಗಡಿ ಬಿಟ್ಟರೆ ಬೇರಾವ ಅಂಗಡಿಗಳು ಕಣ್ಣಿಗೆ ಎಣ್ಣೆ ಬಿಟ್ಟು ಹುಡುಕಿದರೂ ಕಾಣಸಿಗದು. ಎಲ್ಲ ಅಂಗಡಿಗಳೂ ಹೋಲ್ ಸೇಲ್ ದರದಲ್ಲಿ ಕಾರ್ಡ್ ಗಳನ್ನು ಮಾರಾಟ ಮಾಡುತ್ತಿದ್ದು, ಉತ್ತಮ ವಿನ್ಯಾಸ, ಗುಣಮಟ್ಟ ಮತ್ತು ಸ್ಪರ್ಧಾತ್ಮಕ ಬೆಲೆ ಇಲ್ಲಿನ ವಿಶೇಷತೆ. ವಾರದ ಪ್ರತಿದಿನವೂ ಇಲ್ಲಿ ಜನಜಂಗುಳಿ ಇರುತ್ತದಾದರೂ ಭಾನುವಾರ ಮಾತ್ರ ಹೆಚ್ಚು ರಷ್ ಇರುತ್ತದೆ.

ಎರಡು ಮೂರು ದಶಕಗಳಿಂದ ಉತ್ತಮ ರೀತಿಯಲ್ಲಿ ಇಲ್ಲಿ ವ್ಯಾಪಾರ ಮಾಡಿಕೊಂಡು ಗ್ರಾಹಕರ ಸಂತೃಪ್ತಿ ಕಡೆಗೆ ಗಮನಹರಿಸಿದವರು ಬಹಳಷ್ಟು ಜನರಿದ್ದಾರೆ. ಇಲ್ಲಿಗೆ ಬಂದ ಗ್ರಾಹಕರು ತಮ್ಮ ಬಂಧುಗಳು, ಸ್ನೇಹಿತರಿಗೆಲ್ಲ ಮದುವೆ ಆಮಂತ್ರಣ ಕಾರ್ಡ್ ಖರೀದಿಗೆ "ಸುಲ್ತಾನ್ ಪೇಟೆ''ಗೆ ಹೋಗುವಂತೆ ಶಿಫಾರಸು ಮಾಡುತ್ತಾರೆ. ಇನ್ನು ಕೆಲವರು ಇಂಥದ್ದೇ ಅಂಗಡಿಗೆ ಹೋಗಿ ಎನ್ನುವವರಿದ್ದಾರೆ. ಹೀಗಾಗಿ ಮದುವೆ ಆಮಂತ್ರಣ ಕಾರ್ಡ್ ವಿಚಾರದಲ್ಲಿ "ಸುಲ್ತಾನ್ ಪೇಟೆ'' ಮನೆಮಾತಾಗಿದೆ ಎನ್ನುತ್ತಾರೆ ವ್ಯಾಪಾರಿಗಳು.

ಒಂದೆರೆಡು ರೂಪಾಯಿ ದರದ ಕಾರ್ಡ್ ಗಳಿಂದ ಹಿಡಿದು ಲಕ್ಷಾಂತರ ರೂಪಾಯಿ ಮೌಲ್ಯದ ಕಾರ್ಡ್ ಗಳು ಕೂಡಾ ಇಲ್ಲಿ ಲಭ್ಯವಿದೆ. ಒಂದು ರೀತಿಯಲ್ಲಿ ನಿಮ್ಮ ಬಜೆಟ್ ಎಷ್ಟಿದೆಯೋ ಅಷ್ಟಕ್ಕೆ ತಕ್ಕ ಕಾರ್ಡ್ ಗಳನ್ನು ನೀವು ಖರೀದಿ ಮಾಡಬಹುದು ಅರ್ಥಾತ್ "ಕಾಸಿಗೆ ತಕ್ಕ ಕಜ್ಜಾಯ'' ಗ್ಯಾರೆಂಟಿ... ಎನ್ನುತ್ತಾರೆ ಗ್ರಾಹಕರು.

 

Author : ಬೆಂ.ಸ. 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited