Untitled Document
Sign Up | Login    
ಅಂದದ ಕಣ್ಣುಗಳಿಗಾಗಿ ಸಲಹೆಗಳು

ಮುಖಕ್ಕೆ ಅಂದ ಹೆಚ್ಚಿಸುವ ಸುಂದರ ಕಣ್ಣುಗಳು

ಹೊಳೆಯುವ ಕಣ್ಣುಗಳು ಮುಖಕ್ಕೆ ಶೋಭೆ. ಚೆಂದದ ವಿಶಾಲವಾದ ಕಣ್ಣುಗಳಿಂದಲೇ ಮುಖ ಮತ್ತಷ್ಟು ಆಕರ್ಷಕವಾಗಿ ಕಾಣಲು ಸಾಧ್ಯ. ತೇಜಸ್ಸುಳ್ಳ ಕಣ್ಣುಗಳ ಸುಂದರಿಯ ನೋಟಕ್ಕೆ ಮತ್ತಷ್ಟು ಮೆರಗು ನೀಡುತ್ತದೆ. ಇಂತಹ ಆಕರ್ಷಕ ಕಣ್ಣುಗಳನ್ನು ಹೊಂದಬೇಕು ಎಂಬುದು ಎಲ್ಲ ಚಲುವೆಯರ ಬಯಕೆ, ಆದರೆ ವಿಶಾಲ ಉದ್ದುದ್ದ ರೆಪ್ಪೆಗಳ ಕಣ್ಣುಗಳನ್ನು ಹೊಂದಿರದೇ ಇರುವವರು ಬೇಸರಪಟ್ಟುಕೊಳ್ಳುವ ಅಗತ್ಯವೇನಿಲ್ಲ.. ಅಗಲವಾದ ಮತ್ತು ಆಕರ್ಷಕವಾದ ಕಣ್ಣುಗಳಿಗಾಗಿ ಕೆಲವು ಸಲಹೆಗಳನ್ನು ನಾವಿಲ್ಲಿ ನೀಡಿದ್ದೇವೆ ಓದಿ..

ರೆಪ್ಪೆಗಳನ್ನು ಕರ್ಲ್‌ ಮಾಡಿರಿ..

ವಿಶಾಲವಾದ ಹರಡಿಕೊಂಡಿರುವ ಮೇಲಕ್ಕೆ ಬಾಗಿರುವ ಕಣ್ಣು ರೆಪ್ಪೆಗಳಿಗಾಗಿ, ಐಲ್ಯಾಷ್‌ ಕರ್ಲರ್‌ ಬಳಸಿ. ಇದರಿಂದ ನಿಮ್ಮ ಕಣ್ಣು ರೆಪ್ಪೆಗಳನ್ನು ಕರ್ಲ್‌ ಮಾಡಿ. ಐಲ್ಯಾಷ್‌ ಕರ್ಲರ್‌ನ್ನು ರೆಪ್ಪೆಗಳಿಗೆ ಇಟ್ಟು ಕೆಲವೇ ಸೆಕೆಂಡ್‌ಗಳಲ್ಲಿ ತೆಗೆಯಿರಿ, ರೆಪ್ಪೆಗಳು ಬುಡದಿಂದ ಮೇಲೆ ಕರ್ಲ್‌ ಆಗುವಂತೆ ಎರಡರಿಂದ ಮೂರು ಬಾರಿ ಮಾಡಿ, ಇದರಿಂದಾಗಿ ನಿಮ್ಮ ರೆಪ್ಪೆಗಳಿಗೆ ನೈಸರ್ಗಿಕ ಕರ್ಲ್‌ ಲುಕ್‌ ಬರುತ್ತದೆ.

ಬಿಳಿ ಬಣ್ಣದ ಆಕರ್ಷಣೆ..

ನಸು ಬಿಳಿ ಬಣ್ಣದ ಐ ಶ್ಯಾಡೋ ಬಳಸಿ. ಕಣ್ಣಿನ ಒಳ ಮೂಲೆಯಿಂದ ನಸು ಬಿಳಿಯ ಐ ಶ್ಯಾಡೋವನ್ನು ಮೃದುವಾಗಿ ಹಚ್ಚಿ. ಬಿಳಿ ಬಣ್ಣದ ಐ ಶ್ಯಾಡೋ ನಿಮ್ಮ ಕಣ್ಣಿಗೆ ವಿಶಾಲವಾದ ನೋಟವನ್ನು ನೀಡುತ್ತದೆ. ಬೆಳ್ಳಿ ಬಣ್ಣದ ಐಶ್ಯಾಡೋ ಅಥವಾ ಪೆನ್ಸಿಲ್‌ನಿಂದ ರೆಪ್ಪೆಯ ಮೇಲ್ಭಾಗದಲ್ಲಿ ತಿದ್ದಿ.. ಚಿನ್ನದ ಬಣ್ಣದ ಪೆನ್ಸಿಲ್‌ ಕೂಡ ಕಣ್ಣಿನ ಆಕರ್ಷಣೆ ಹೆಚ್ಚಿಸಬಲ್ಲದು.

ಸುಂದರಿಯ ಮುಖದ ಆಕರ್ಷಣೆಯೇ ವಿಶಾಲವಾದ ಕಣ್ಣುಗಳು..
ಕಪ್ಪು ಕಾಡಿಗೆಯ ಬದಲಾಗಿ ಉತ್ಸಾಹಿ ಬಣ್ಣಗಳನ್ನು ಬಳಸಿ...

ಕಪ್ಪು ಬಣ್ಣದ ಕಾಜಲ್‌ ಅಥವಾ ಐ ಲೈನರ್‌ಗಳನ್ನು ಕಣ್ಣುಗಳು ಚಿಕ್ಕದಾಗಿ ಕಾಣುವಂತೆ ಮಾಡುತ್ತವೆ. ಹೀಗಾಗಿ ತಾಮ್ರ ಬಣ್ಣ, ಕಂಚಿನ ಬಣ್ಣ, ಬೆಳ್ಳಿಯ ಬಣ್ಣದ ಐ ಲೈನರ್‌ ಬಳಸಿ, ಕಪ್ಪು ಬಣ್ಣದ ಕಾಜಲ್‌ ಜೊತೆ ಕಂಚಿನ ಬಣ್ಣದ ಐ ಶ್ಯೋಡೋ ಬಳಸಿ. ಇದರಿಂದ ನಿಮ್ಮ ಕಣ್ಣುಗಳು ಮತ್ತೂ ಮುದ್ದಾಗಿ ಕಾಣಲು ಸಾಧ್ಯ.

ಕಪ್ಪು ಬಣ್ಣದ ಐ ಲೈನರ್‌ನನ್ನು ಕಣ್ಣಿನ ಮೇಲಿನ ಮತ್ತು ಕೆಳಗಿನ ರೆಪ್ಪೆಗಳ ಬುಡಕ್ಕೆ ಅತೀ ತೆಳ್ಳಗೆ ತಿದ್ದಿ, ಕಣ್ಣಿನ ಒಳ ಮತ್ತು ಹೊರ ಮೂಲೆಗೆ ತಿಳಿ ನೀಲಿ ಬಣ್ಣದ ಲೈನರ್‌ ತಿದ್ದಿ, ಕಣ್ಣಿನ ಎರಡೂ ತುದಿಗೂ ಒಂದೇ ಹದವಾಗಿ ತಿದ್ದಿ. ನಿಮ್ಮ ಡ್ರೆಸ್‌, ಸೀರೆಗೆ ಅನುಗುಣವಾಗಿ ತಿಳಿ ಕಂದು, ತಿಳಿ ನೀಲಿ, ತಿಳಿ ಹಸಿರು ಮತ್ತು ತಿಳಿ ನೇರಳೆ ಬಣ್ಣದ ಐ ಲೈನರ್‌ನ್ನು ಬಳಸಬಹುದು.

ನೀವು ದೊಡ್ಡದಾದ ಕಣ್ಣುಗಳನ್ನು ಹೊಂದಿದ್ದರೂ, ಒತ್ತು ಒತ್ತಾದ ರೆಪ್ಪೆಗಳಿಲ್ಲದ ಕಾರಣ ಕಣ್ಣುಗಲು ತಮ್ಮ ಆಕರ್ಷಣೆಯನ್ನು ಕಳೆದುಕೊಂಡಿರಬಹುದು ಹೀಗಾಗಿ, ನಿಮಗೆ ಅಗತ್ಯವೆನಿಸಿದಾದ ಕೃತಕ ರೆಪ್ಪೆಗಳನ್ನೂ ಬಳಸಬಹುದು.

ನಿಮ್ಮ ಹುಬ್ಬುಗಳಿಗೆ ಚೆನ್ನಾದ ಆಕಾರ ಕೊಡಿಸಿ, ನಿಮ್ಮ ಕಣ್ಣಿನ ಆಕಾರಕ್ಕೆ ತಕ್ಕಂತೆ ಹುಬ್ಬು ಇರುವಂತೆ ನೋಡಿಕೊಳ್ಳಿ. ಅತೀ ತೆಳುವಾದ ಹುಬ್ಬು ಅಂದಗೆಡಿಸುತ್ತದೆ. ಹೀಗಾಗಿ ಹುಬ್ಬು ಸ್ಪಲ್ಪ ದಪ್ಪವೇ ಇರಲಿ.
ರೆಪ್ಪೆಗಳಿಗೆ ಒಪ್ಪುವ ಮಸ್ಕರಾ ಬಳಸಿ. ವಾಟರ್‌ ಪ್ರೂಫ್‌ ಮಸ್ಕರಾ ಒಳ್ಳೆಯದು. ಮಸ್ಕರಾದಲ್ಲಿಯೂ ಹಲವು ವಿಧಗಳಿವೆ.

ಕಣ್ಣುಗಳಿಗೆ ಶೃಂಗಾರವೊಂದೇ ಅಲ್ಲ. ಕಣ್ಣಿನ ಕಾಂತಿ ಹೆಚ್ಚಲು, ಕಣ್ಣಿನ ಆರೋಗ್ಯಕ್ಕಾಗಿ ಕೆಲವು ಸಲಹೆಯನ್ನೂ ನೀಡಿದ್ದೇವೆ ನೋಡಿ..

ರಾತ್ರಿ ಮಲಗುವಾಗ ಕಣ್ಣಿಗೆ ಸುತ್ತ ಕೊಬ್ಬರಿ ಎಣ್ಣೆಯನ್ನು ಹಚ್ಚಿ, ನಿಧಾನವಾಗಿ ಮಸಾಜ್‌ ಮಾಡಿ. ಎರಡು ನಿಮಿಷದ ಮಸಾಜ್‌ ನಂತರ ಮಲಗಿಕೊಳ್ಳಿ. ಕಣ್ಣಿನ ಸುತ್ತ ಕೋಲ್ಡ್‌ ಕ್ರೀಮ್‌ ಹಚ್ಚಿಯೂ ಮಸಾಜ್‌ ಮಾಡಬಹುದು. ಹೀಗೆ ದಿನವೂ ಮಾಡುತ್ತಿದ್ದರೆ ಕಣ್ಣಿನ ಸುತ್ತವಿರುವ ಕಪ್ಪು ವರ್ತುಲ ನಿಧಾನವಾಗಿ ಮಾಯವಾಗುತ್ತದೆ.

ಕಣ್ಣಿನ ಮೇಲೆ ದಿನಕ್ಕೊಂದು ಬಾರಿ 15 ನಿಮಿಷಗಳ ಕಾಲ ಸವತೆಕಾಯಿ ಇಟ್ಟು ಮಲಗಿಕೊಳ್ಳಿ. ಕಣ್ಣು ತಂಪಾಗಿ ಹಿತವೆನಿಸುತ್ತದೆ. ಮತ್ತು ಕಣ್ಣಿನ ಆರೋಗ್ಯಕ್ಕೂ ಇದು ಒಳ್ಳೆಯದು.

ತಲೆಯಲ್ಲಿ ಹೊಟ್ಟಾಗಿದ್ದರೆ, ಕಣ್ಣಿನ ರೆಪ್ಪೆಗಳಿಗೂ ಅದು ಆವರಿಸುತ್ತದೆ, ಇದರಿಂದ ಕಣ್ಣಿನ ಅಂದಗೆಡುತ್ತದೆ. ಹೀಗಾಗಿ ತಲೆಹೊಟ್ಟಿಗೆ ಪರಿಹಾರ ಕಂಡುಕೊಳ್ಳಿ.

ನೀವು ಕನ್ನಡಕ ಧರಿಸುತ್ತಿದ್ದರೆ, ಅದು ಕಣ್ಣಿನ ಸುತ್ತ ಕಪ್ಪು ವರ್ತುಲವನ್ನು ಉಂಟುಮಾಡುತ್ತದೆ ಹೀಗಾಗಿ ಕನ್ನಡಕದ ಬದಲು ಲೆನ್ಸ್‌ ಬಳಸುವುದು ಉತ್ತಮ.
ವಿಟಮಿನ್‌ ಎ ಮತ್ತು ವಿಟಮಿನ್‌ ಸಿ ಇರುವ ಆಹಾರವನ್ನು ಹೆಚ್ಚು ಸೇವಿಸುವುದರಿಂದ ಕಣ್ಣಿಗೆ ಒಳ್ಳೆಯದು.

ಅತಿಯಾಗಿ ಚಿಂತೆ ಮಾಡುವುದರಿಂದಲೂ ಕಣ್ಣಿನ ತೇಜಸ್ಸು ಕಡಿಮೆಯಾಗುತ್ತದೆ. ದಿನವೂ ಧ್ಯಾನ ಮಾಡುವುದರಿಂದ ಮನಸ್ಸು ಉಲ್ಲಸಿತಗೊಂಡು ಕಣ್ಣಿಗೆ ಹೊಳಪು ಬರುತ್ತದೆ.

ನಿಮ್ಮ ಸುಂದರ ಕಣ್ಣಿಗೆ ಇನ್ನಷ್ಟು ಆರೋಗ್ಯ ನೀಡಿ.. ಮುಖಕ್ಕೆ ಶೋಭೆ ನೀಡುವ ಕಣ್ಣುಗಳಿಗೆ ಮತ್ತಷ್ಟು ಅಂದ ನೀಡಿ.. ಚೆಂದವಾಗಿ ಕಾಣಿರಿ.

 

Author : ಅಮೃತಾ ಹೆಗಡೆ

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited