Untitled Document
Sign Up | Login    
ಫೇಸ್ ಬುಕ್ ನಿಮಗಿರಲಿ ನಿಮ್ಮ ಫೇಸ್ ಕಳೆದುಕೊಳ್ಳಬೇಡಿ..........

ಫೇಸ್‍ಬುಕ್ ಸೈನ್ ಅಪ್ ಪೇಜ್

ಸಮಯ ನಿಲ್ಲುತ್ತಿಲ್ಲ. ನಾಗಾಲೋಟದಿಂದ ಓಡುತ್ತಿದೆ. ಟೆಕ್ನಾಲಜಿ ವ್ಯಾಪಕವಾಗಿ ಬೆಳೆದಿದೆ. ವಯರ್‍ಲೆಸ್ ಟೆಕ್ನಾಲಜಿ ನಮಗೆ ನಿಜಕ್ಕೂ ವರದಾನವಾಗಿದೆ. ಮೊಬೈಲ್‍ಗಳು ಇಂದು ನಮ್ಮ ಜೀವನವನ್ನೇ ಬದಲಾಯಿಸಿದೆ. ಪತ್ರ ಬರೆದು ಅಂಚೆ ಮೂಲಕ ಕಳುಹಿಸುವ ಪರಿಪಾಠ ಬದಲಾಗಿದ್ದು, ಎಸ್‍ಎಮ್‍ಎಸ್ ಸಂದೇಶ ಕಳಿಸುವುದು ಮತ್ತು ಪಡೆಯುವುದು ಪ್ರಾರಂಭವಾಗಿದೆ. ವಿಜ್ಞಾನದ ಆನ್ವೇಷಣೆ ನಿರಂತರವಾಗಿ ಸಾಗಿದೆ. ದೂರದಲ್ಲಿರುವ ನಮ್ಮವರೊಂದಿಗೆ ಮಾತನಾಡಲು ಹಾಗೂ ಸುಖ-ದುಃಖಗಳನ್ನು ಹಂಚಿಕೊಳ್ಳಲು ಮೊಬೈಲ್ ಕನೆಕ್ಷನ್‍ಗಳು ನಿಜಕ್ಕೂ ನಮಗೆ ಸಹಕಾರಿಯಾಗಿವೆ. ಇದಕ್ಕೂ ಮೀರಿದ ಉನ್ನತ ಟೆಕ್ನಾಲಜಿ ಫೇಸ್‍ಬುಕ್. ಸೋಷಿಯಲ್ ನೆಟ್‍ವರ್ಕಿಂಗ್ ಸೈಟ್‍ಗಳಾದ ಫೇಸ್‍ಬುಕ್, ಟ್ವಿಟರ್ ಹಾಗೂ ಗೂಗಲ್+ ಗಳು ಇಂದು ಮನೆ ಮನೆಗೆ ತಲುಪಿವೆ, ಗದ್ದಲಗಳನ್ನು ಮಾಡುತ್ತಿವೆ. ಫೇಸ್‍ಬುಕ್ ಎನ್ನುವುದು ಸಾಮಾಜಿಕವಾಗಿ ಜನರನ್ನು ಒಂದುಗೂಡಿಸುವುದಕ್ಕೆ ಬದಲಾಗಿ ದುರಂತಗಳನ್ನು ತಂದಿದೆ, ಡೈವೋರ್ಸ್‍ಗೆ ಕಾರಣವಾಗಿದೆ. ಎಳೆಯ, ಬೆಳೆಯುವ ಕುಡಿಗಳು ಆತ್ಮಹತ್ಯೆ ಹಾದಿ ಹಿಡಿಯುವುದಕ್ಕೆ ಕಾರಣವಾಗಿವೆ. ಕುಟುಂಬಗಳ ನೆಮ್ಮದಿಯನ್ನೇ ಅಲ್ಲೋಲ ಕಲ್ಲೋಲ ಮಾಡಿವೆ.

ಸೋಷಿಯಲ್ ನೆಟ್‍ವರ್ಕಿಂಗ್ ಸೈಟ್‍ಗಳಲ್ಲಿ ಫೇಸ್‍ಬುಕ್ ಅತ್ಯಂತ ಸುಲಭವಾದ ಮತ್ತು ಜನಪ್ರಿಯವಾದ ಸೈಟ್ ಆಗಿದೆ. ಇದೊಂದು ಸಾರ್ವಜನಿಕ ವೇದಿಕೆಯಾಗಿದೆ. ನಿಮ್ಮ ವಿಚಾರಗಳು, ಅಭಿಪ್ರಾಯಗಳು, ಜ್ಞಾನ ಮತ್ತು ಸಂದೇಶಗಳನ್ನು ಯಾವುದೇ ಖರ್ಚಿಲ್ಲದೆ ಇತರರೊಂದಿಗೆ/ನಿಮ್ಮ ಸ್ನೇಹಿತರು/ಬಂಧು-ಮಿತ್ರರೊಂದಿಗೆ ಹಂಚಿಕೊಳ್ಳಬಹುದಾಗಿದೆ. ಇದರಲ್ಲಿ ನೀವು ನಿಮ್ಮ ಪರಿಚಯದವರನ್ನು ಫ್ರೆಂಡ್ ಮಾಡಿಕೊಳ್ಳುತ್ತೀರಿ. ಇದರಲ್ಲಿ ನೀವು ಹಾಕಿರುವ ಪ್ರತಿಯೊಂದು ಚಿತ್ರ/ಸಂದೇಶ/ಅಭಿಪ್ರಾಯಗಳು ನಿಮ್ಮ ಎಲ್ಲಾ ಫ್ರೆಂಡ್‍ಗಳಿಗೂ ತಲುಪುತ್ತದೆ. ನಿಮ್ಮವರು ಅಮೇರಿಕಾದಲ್ಲಿ, ಲಂಡನ್‍ನಲ್ಲಿ, ಮಡಿಕೇರಿ, ದೆಹಲಿ, ಬೆಂಗಳೂರು, ಸುಳ್ಯ ಎಂಬಂತೆ ಎಲ್ಲೇ ಇರಲಿ, ಅವರೊಂದಿಗೆ ನೀವು ನಿಮ್ಮ ಸಂದೇಶಗಳನ್ನು ಕಳಿಸಬಹುದು.

ಫೇಸ್ ಬುಕ್ ಖಾತೆ ತೆರೆಯುವುದು ಹೇಗೆ ?

ಫೇಸ್‍ಬುಕ್‍ನಲ್ಲಿ ಎಕೌಂಟ್ ತೆರೆಯುವುದು ತುಂಬಾ ಸುಲಭ. ಇದಕ್ಕಾಗಿ ನೀವು ಮೊದಲಾಗಿ ಒಂದು ಇ-ಮೇಲ್ ಖಾತೆ ಹೊಂದಿರಬೇಕು. ಇ-ಮೇಲ್ ಖಾತೆ(ಇ-ಮೇಲ್ ಐಡಿ) ಹೊಂದಿಲ್ಲದಿದ್ದರೆ ಖಾತೆ ತೆರೆದು ಬಳಿಕ ನೆಟ್‍ನಲ್ಲಿ www.facebook.com ಕ್ಲಿಕ್ ಮಾಡಿ. ಬಳಿಕ ಫೇಸ್‍ಬುಕ್ ಸೈನ್ ಅಪ್ ಕ್ಲಿಕ್ ಮಾಡಿ. ಆವಾಗ ಫೇಸ್‍ಬುಕ್ ಸೈನ್ ಅಪ್ ಪೇಜ್ ಕಾಣಿಸಿಕೊಳ್ಳುತ್ತದೆ. ಅದರಲ್ಲಿ ನಿಮ್ಮ ಹೆಸರು, ಇ-ಮೇಲ್ ಐಡಿ ಹಾಗೂ ಪಾಸ್‍ವರ್ಡ್ ಭರ್ತಿ ಮಾಡಬೇಕು. ನಿಮ್ಮ ಫೇಸ್‍ಬುಕ್ ಎಕೌಂಟ್ ಓಪನ್ ಆಗುತ್ತದೆ. ಬಳಿಕ ನಿಮ್ಮ ಪ್ರೊಫೈಲ್ ಭರ್ತಿ ಮಾಡಬೇಕು. ನೀವು ಓದಿರುವ ಶಾಲೆ, ಕಾಲೇಜು ಇತ್ಯಾದಿ ವಿವರಗಳನ್ನು ನೀಡಬಹುದು. ಪ್ರೊಫೈಲ್‍ನಲ್ಲಿ ನಿಮ್ಮ ಫೋಟೊ ಹಾಕಬಹುದು. ಇದಕ್ಕಾಗಿ ನೀವು ಕಂಪ್ಯೂಟರ್‍ನಲ್ಲಿ/ಮೊಬೈಲ್‍ನಲ್ಲಿ ಇರಿಸಿಕೊಂಡಿರುವ ನಿಮ್ಮ ಫೋಟೋ ಲೋಡ್ ಮಾಡಬಹುದು. ಈ ಪ್ರಕಾರವಾಗಿ ನಿಮ್ಮದೊಂದು ಫೇಸ್ ಬುಕ್ ಎಕೌಂಟ್ ತೆರೆಯಲ್ಪಡುತ್ತದೆ.

ಫೇಸ್‍ಬುಕ್ ನಿರ್ವಹಿಸುವ ವಿಧಾನ

ನಿಮ್ಮ ಫೇಸ್‍ಬುಕ್‍ನಲ್ಲಿ ಒಂದು ವಾಲ್ ಇದೆ. ಅಂದರೆ ಪಬ್ಲಿಕ್ ಪೇಜ್. ಮೇಲ್ಗಡೆ ವಾಟ್ ಈಸ್ ಇನ್ ಯುವರ್ ಮೈಂಡ್ ಅಂತ ಕೇಳುತ್ತಾರಲ್ಲಾ, ಅಲ್ಲಿ ನೀವು ತಿಳಿಸಬೇಕಾದ ವಿಚಾರಗಳನ್ನು/ನಿಮ್ಮ ಅಭಿಪ್ರಾಯಗಳನ್ನು/ಸಂದೇಶಗಳನ್ನು ಬರೆದು ಹಾಕಬಹುದು. ನಿಮ್ಮ/ ನೀವು ಮೆಚ್ಚಿದ ಫೋಟೋಗಳು/ವೀಡಿಯೋಗಳನ್ನು ಕೂಡಾ ಹಾಕಬಹುದು. ಫೋಟೋ/ವೀಡಿಯೋಗಳನ್ನು ಹಾಕುವಾಗ ಅವುಗಳ ಸಂದರ್ಭ, ಅದರಲ್ಲಿರುವ ವ್ಯಕ್ತಿಗಳು ಹೆಸರು/ಪರಿಚಯ ಇತ್ಯಾದಿಗಳನ್ನು ಹಾಕಬೇಕು. ಅದಕ್ಕಾಗಿ ಪಕ್ಕದಲ್ಲಿ ಕಾಲಂ ಇರುತ್ತದೆ. ಪೋಸ್ಟ್ ಎಂದು ಬರೆದಿದ್ದನ್ನು ಕ್ಲಿಕ್ ಮಾಡಿದ ತಕ್ಷಣ ಇದು ಫೇಸ್‍ಬುಕ್‍ನಲ್ಲಿ ಕಾಣಿಸಿಕೊಳ್ಳುತ್ತದೆ. ಇದನ್ನು ನಿಮಗೆ ಫ್ರೆಂಡ್ ಆಗಿರುವ ಎಲ್ಲರೂ ನೋಡಬಹುದಾಗಿದೆ. ಇದಕ್ಕಾಗಿ ನೀವು ನಿಮ್ಮ ಫ್ರೆಂಡ್ ಸರ್ಕಲ್ ವೃದ್ಧಿಸಬೇಕು. ನಿಮ್ಮ ಫ್ರೆಂಡ್‍ಗಳನ್ನು ಮಾಡಿಕೊಳ್ಳುವಾಗ ತುಂಬಾ ಜಾಗರೂಕತೆ ವಹಿಸಬೇಕು. ನಿಮಗೆ ಗುರುತು-ಪರಿಚಯ ಇರುವವರನ್ನು ಮಾತ್ರವೇ ಫ್ರೆಂಡ್ ಮಾಡಿಕೊಳ್ಳಬೇಕು. ಇದಕ್ಕಾಗಿ ನಿಮ್ಮ ಗುರುತು-ಪರಿಚಯ ಇರುವವರನ್ನು ಕೇಳಿ ವಿಚಾರಿಸಿ. ಅವರು ಯಾವ ಹೆಸರಿನಲ್ಲಿ ಫೇಸ್‍ಬುಕ್ ತೆರೆದಿದ್ದಾರೆ ಎಂಬುದನ್ನು ತಿಳಿದುಕೊಳ್ಳಬೇಕು. ಉದಾಹರಣೆಗಾಗಿ ಸುಚಿತ್ರ ಅಥವಾ ಮನೋಹರ್ ನಿಮಗೆ ತಿಳಿದವರು ಎಂದು ಭಾವಿಸೋಣ. ನೀವು ವಾಲ್ ಮೇಲೆ ಸರ್ಚ್ ಯುವರ್ ಫ್ರೆಂಡ್ಸ್ ಪಟ್ಟಿಯಲ್ಲಿ ಸುಚಿತ್ರ ಅಥವಾ ಮನೋಹರ ಎಂದು ಟೈಪ್ ಮಾಡಿ. ಅದರ ಕೆಳಗಡೆ ಅವರ ಫೋಟೋ ಮತ್ತು ಒಂದು ಲೈನ್ ಬರುತ್ತದೆ. ಅದನ್ನು ಕ್ಲಿಕ್ ಮಾಡಿದಾಗ ಅವರ ಪೂರ್ತಿ ಪೇಜ್ ಕಾಣಿಸಿಕೊಳ್ಳುತ್ತದೆ. ಅದರಲ್ಲಿ ಅವರ ಬಗ್ಗೆ ಕಿರು ಪರಿಚಯ ನಿಮಗೆ ಸಿಗುತ್ತದೆ. ನಿಮಗೆ ಅವರ ಪರಿಚಯವಿದ್ದಲ್ಲಿ, ಅವರೊಂದಿಗೆ ಫ್ರೆಂಡ್ ಆಗಲು ಬಯಸಿದ್ದಲ್ಲಿ ಆಡ್ ಫ್ರೆಂಡ್ ಕ್ಲಿಕ್ ಮಾಡಿ. ನಿಮ್ಮ ಫ್ರೆಂಡ್‍ಶಿಪ್ ಕೋರಿಕೆ ಅವರಿಗೆ ಹೋಗುತ್ತದೆ. ಅವರ ಪೇಜ್‍ನಲ್ಲಿ ಆಡ್ ಫ್ರೆಂಡ್ ಜೊತೆಗೆ ಮೆಸೇಜ್ ಎಂಬ ಇನ್ನೊಂದು ಆಯ್ಕೆ ಇದೆ. ಅದನ್ನು ಕ್ಲಿಕ್ ಮಾಡುತ್ತಾ ನೀವು ಅವರಿಗೆ ಸಂದೇಶಗಳನ್ನು ಕಳಿಸಬಹುದು. ನಿಮ್ಮ ಫ್ರೆಂಡ್ ಆಗಿಲ್ಲದವರಿಗೂ ನೀವು ಸಂದೇಶ ಕಳಿಸಬೇಕಾಗಿದ್ದಲ್ಲಿ ಇದೇ ರೀತಿ ಅವರ ಹೆಸರಿನಲ್ಲಿ ಕ್ಲಿಕ್ ಮಾಡಿ ಅವರ ಪೇಜ್‍ಗೆ ಹೋಗಿ ಮೆಸೇಜ್ ಕ್ಲಿಕ್ ಮಾಡಿ ಸಂದೇಶ ಪಡೆಯಬಹುದಾಗಿದೆ. ನಿಮ್ಮ ಫ್ರೆಂಡ್ ನಿಮ್ಮ ಕೋರಿಕೆ ಸ್ವೀಕರಿಸಿದಲ್ಲಿ ನಿಮಗೆ ಸಂದೇಶ ಮೂರನೇ ಕಾಲಂನಲ್ಲಿ ಬರುತ್ತದೆ.

ನಿಮ್ಮ ಫೇಸ್‍ಬುಕ್ಕನ್ನು ಈ ಪ್ರಕಾರವಾಗಿ ನಿರ್ವಹಿಸಬಹುದಾಗಿದೆ.

ಎಫ್ ಎಂಬ ನೀಲಿ ಚಿಹ್ನೆ ಪಕ್ಕದಲ್ಲಿರುವ ಬಿಳಿ ಪಟ್ಟಿಯಲ್ಲಿ ನೀವು ಮೇಲಿನಂತೆ ಹೆಸರು ಹಾಕಿ ನಿಮ್ಮ ಸ್ನೇಹಿತರನ್ನು ಹುಡುಕಬಹುದಾಗಿದೆ. ಈಗ ಅದರ ಪಕ್ಕಕ್ಕೆ ಬನ್ನಿ. ವ್ಯಕ್ತಿಗಳ ಗುರುತು ಇರುವ ಒಂದು ಚಿಹ್ನೆ, ಸಂದೇಶ ಚಿಹ್ನೆ ಮತ್ತು ಪ್ರಪಂಚದ ಚಿನ್ಹೆ ಎಂದು ಮೂರು ಸಂಕೇತಗಳಿವೆ. ನೀವು ಮುಂದಿನ ಬಾರಿ ಫೇಸ್‍ಬುಕ್ ಎಕೌಂಟ್ ತೆರೆದಾಗ ಇವುಗಳಲ್ಲಿ ಕೆಂಪು ಬಣ್ಣದಲ್ಲಿ ನಂಬರ್‍ಗಳು ಬಂದಿರುತ್ತವೆ. ಮೊದಲನೆಯದ್ದರಲ್ಲಿ - ನಿಮ್ಮ ಫ್ರೆಂಡ್ ರಿಕ್ವೆಸ್ಟ್ ಬಂದಿದೆ ಎಂದು ಅರ್ಥ. ಎರಡನೆಯದ್ದರಲ್ಲಿ - ನಿಮಗೆ ಯಾವುದೋ ಪ್ರೈವೇಟ್ ಸಂದೇಶ ಬಂದಿದೆ ಎಂದು ಅರ್ಥ. ಮೂರನೆಯದ್ದರಲ್ಲಿ ನೀವು ಹಾಕಿರುವ ಪೋಸ್ಟಿಂಗ್‍ಗಳು/ಫೋಟೋಗಳು/ವೀಡಿಯೋಗಳಿಗೆ ಪ್ರತಿಕ್ರಿಯೆ ಬಂದಿದೆ ಎಂದು ಅರ್ಥ.

ಫೇಸ್‍ಬುಕ್ ಆವಾಂತರಗಳು

ಫೇಸ್‍ಬುಕ್‍ನಲ್ಲಿ ನೀವು ಯಾರನ್ನು ಬೇಕಾದರೂ ಫ್ರೆಂಡ್ ಮಾಡಬಹುದು. ಬೇರೆ ಊರಿನಲ್ಲಿರುವವರು, ವಿದೇಶದಲ್ಲಿರುವವರು, ಎಲ್ಲರನ್ನೂ ಫ್ರೆಂಡ್ ಮಾಡಿಕೊಳ್ಳಬಹುದು. ನಿಮ್ಮ ಫ್ರೆಂಡ್ ಆದವರ ಹೆಸರು ಬಲ ಬದಿಯಲ್ಲಿರುವ ಚ್ಯಾಟ್ ಲಿಸ್ಟಿನಲ್ಲಿ ಹಸಿರು ಸಿಗ್ನಲ್‍ನಲ್ಲಿ ಅವರ ಹೆಸರಿನೊಂದಿಗೆ ಕಾಣಿಸಿಕೊಳ್ಳುತ್ತದೆ. ಉದಾಹರಣೆಗೆ ನೀವು ಮನೋಹರ್ ಫ್ರೆಂಡ್ ಆಗಿದ್ದಲ್ಲಿ ನೀವು ಚ್ಯಾಟ್ ಲಿಸ್ಟಿನಲ್ಲಿ ಹಸಿರು ಸಿಗ್ನಲ್‍ನಲ್ಲಿ ಅವರ ಹೆಸರು ನೋಡುತ್ತೀರಿ. ಅದನ್ನು ಕ್ಲಿಕ್ ಮಾಡಿದಾಗ ಅವರ ಚ್ಯಾಟ್ ಬಾಕ್ಸ್ ತೆರೆಯುತ್ತದೆ ಮತ್ತು ಅವರೊಂದಿಗೆ
ನೀವು ಸಂದೇಶಗಳನ್ನು ಕಳುಹಿಸುತ್ತಾ ಖಾಸಗಿಯಾಗಿ ಮಾತನಾಡಬಹುದಾಗಿದೆ. ಬೆಂಗಳೂರಿನ ಒಬ್ಬ ಯುವಕ (22-25 ವರ್ಷ) ಜರ್ಮನಿಯ ಮಹಿಳೆಯೊಂದಿಗೆ ಫ್ರೆಂಡ್ ಆದ. ನೋಡಲು ಚೆನ್ನಾಗಿದ್ದಳು, ಬಿಳಿ-ಬಿಳಿಯಾಗಿದ್ದಳು. ಚ್ಯಾಟಿಂಗ್ ಮೂಲಕ ಸಂಭಾಷಣೆ ಪ್ರಾರಂಭವಾಯಿತು. ಸಂಭಾಷಣೆಗಳು ಪ್ರಣಯ ಸಂಭಾಷಣೆಗೆ ತಿರುಗಿತು. ಇಬ್ಬರಲ್ಲೂ ಲವ್ ಆಯಿತು. ಪ್ರತಿದಿನ ರಾತ್ರಿಯೆಲ್ಲಾ ಆಕೆಯೊಂದಿಗೆ ಮಾತು. ಹುಚ್ಚನಾದ ಅವಳಿಗಾಗಿ. ಆರು ತಿಂಗಳ ವರೆಗೆ ಹೀಗೆಯೇ ಮುಂದುವರಿಯಿತು. ಆರು ತಿಂಗಳ ಬಳಿಕ ಒಂದು ದಿನ ಆಕೆ ನಾನು ಲಂಡನ್‍ಗೆ ಬರುತ್ತಿದ್ದೇನೆ ನೀನು ಕೂಡಾ ಅಲ್ಲಿಗೆ ಬಾ ಎಂದು ಇವನನ್ನು ಕರೆದಳು. ಇವ ಲಂಡನ್‍ಗೆ ಹೋಗಲು ತಯಾರಾದ. ಇನ್ನೇನು ಹೊರಡಬೇಕು, ಎನ್ನುವುದಕ್ಕೆ ಮುಂಚೆ ಅವಳು ತನ್ನ ನಿಜ ರೂಪ ತೋರಿಸಿದಳು. ಅವಳು ಸುಂದರ ಯುವತಿಯಲ್ಲ. ಬೊಜ್ಜಿನ ಶರೀರದ 60 ವರ್ಷ ಮೀರಿದ ದಪ್ಪ ಮಹಿಳೆಯಾಗಿದ್ದಳು. "ನೋಡು.... ಇದು ನನ್ನ ನಿಜ ರೂಪ. ನನಗೆ ಮದುವೆ ಆಗಿದೆ'' ಎಂದಳು. ಯುವಕನಿಗೆ ಶಾಕ್. ಇದೇ ದುಃಖದಲ್ಲಿ ಆತ್ಮಹತ್ಯೆ ಮಾಡಿಕೊಂಡ ಅವ. ಯಾರೋ ತಿಳಿಯದ ಮಹಿಳೆಗಾಗಿ ದೇವರು ಕೊಟ್ಟ ಸುಂದರ ಜೀವನ ಕಳೆದುಕೊಂಡ. ಆತನ ತಂದೆ-ತಾಯಿಗಳಿಗೆ ಎಷ್ಟು ದುಃಖವಾಗಿರಬೇಡ. ನೀವೇ ಯೋಚಿಸಿ?
ಇನ್ನೊಂದು ಪ್ರಕರಣ ದೆಹಲಿಯದ್ದು. ರಾಷ್ಟ್ರೀಕೃತ ಬ್ಯಾಂಕ್‍ನಲ್ಲಿ ಉದ್ಯೋಗದಲ್ಲಿರುವ ಮಹಿಳೆಯೊಬ್ಬಳು (30 ರ ಹರೆಯ) ಯುವಕನೊಬ್ಬನೊಂದಿಗೆ ಫ್ರೆಂಡ್ ಆದಳು. ದಿನವೂ ಚ್ಯಾಟ್ ಮಾಡುತ್ತಾ ಲವ್ ಆಯಿತು. ಆತ ತಾನು ದೊಡ್ಡ ಬಿಸಿನೆಸ್‍ಮ್ಯಾನ್, ಅಲ್ಲಿ-ಇಲ್ಲಿ ಬಿಸಿನೆಸ್ ಇದೆ, ಕಂಪೆನಿಯೊಂದರ ಎಮ್‍ಡಿ ಅಂತ ಎನೇನೋ ಹೇಳಿ ಆಕೆಯನ್ನು ಮರುಳು ಮಾಡಿದ. 10 ನೇ ಕ್ಲಾಸ್ ಫೇಲ್ ಆಗಿರುವ ಬಿಹಾರದ ನಿರುದ್ಯೋಗಿಯಾಗಿರುವ ಆತನ ಮಾತು ಕೇಳಿ ಆಕೆ ಅವನಿಗಾಗಿ ಬ್ಯಾಂಕ್ ಖಾತೆ ತೆರೆದಳು. ಸುಮಾರು 20 ಲಕ್ಷ ರೂಪಾಯಿ ವರೆಗೆ ಹಣವನ್ನೂ ಕೊಟ್ಟಳು. 2 ಲಕ್ಷ, 5 ಲಕ್ಷ, ಎನ್ನುತ್ತಾ ಬೇರೆ ಬೇರೆ ಸಂದರ್ಭಗಳಲ್ಲಿ ಹಣವನ್ನು ಕೊಟ್ಟಿದ್ದಳು. ಒಂದೂವರೆ ವರ್ಷದ ಬಳಿಕ ಆತ "ನಿನ್ನನ್ನು ನಾನು ಮದುವೆ ಆಗುವುದಿಲ್ಲ" ಎಂದು ಹೇಳುತ್ತಾ ಹಣದೊಂದಿಗೆ ಪರಾರಿಯಾದ. ಈಕೆ ಪೋಲಿಸ್ ಕಂಪ್ಲೇಂಟ್ ಕೊಟ್ಟಳು. ಒಟ್ಟಿನಲ್ಲಿ ಫೇಸ್‍ಬುಕ್‍ನಿಂದಾಗಿ ಹಣ ಹೋಯಿತು, ಮರ್ಯಾದೆ ಹೋಯಿತು.

ಫೇಸ್‍ಬುಕ್ ಎಷ್ಟೋ ಮಂದಿ ಅಸಂತೃಪ್ತ ಪುರುಷ/ಮಹಿಳೆಯರಿಗೆ, ವಿಧವೆಯರಿಗೆ, ಸಂಗಾತಿಗಳನ್ನು ಕಂಡುಕೊಳ್ಳಲು ಹಾಗೂ ವಿವಾಹಿತರಲ್ಲಿ ಹೆಚ್ಚುವರಿ ಸಂಬಂಧಗಳನ್ನು ಬೆಳೆಸಿಕೊಳ್ಳಲು ಖರ್ಚಿಲ್ಲದ ಸುಲಭೋಪಾಯವಾಗಿದೆ. ಇಂತಹ ಸಂಬಂಧಗಳು ಬೆಳೆದು ಅನೇಕ ಕುಟುಂಬಗಳು ಒಡೆದು ಹೋಗಿವೆ. ಏಕೆಂದರೆ, ಒಂದು ಗಂಡು ಮತ್ತು ಹೆಣ್ಣು ತುಂಬಾ ಸಮೀಪಕ್ಕೆ ಬರಲು ಹಾಗೂ ವೈಯಕ್ತಿಕ ಸಂಬಂಧಗಳನ್ನು ಬೆಳೆಸಿಕೊಳ್ಳಲು ಅಥವಾ ಸಾರ್ವಜನಿಕವಾಗಿ ಹೇಳಲು ಸಾಧ್ಯವಾಗದ ವಿಷಯಗಳನ್ನು ತಿಳಿಸಲು ಇದು ಸೂಕ್ತ ವೇದಿಕೆ. ಒಬ್ಬ ಯುವಕ ರಸ್ತೆಯಲ್ಲಿ ಹೋಗುವಾಗ ಒಬ್ಬ ಯುವತಿಗೆ "ಐ ಲವ್ ಯೂ" ಎಂದು ಹೇಳಿದರೆ ಆಕೆ ಕಾಲಿನಿಂದ ಚಪ್ಪಲಿ ತೆಗೆದು ಕಪಾಳ ಮೋಕ್ಷ ಮಾಡಬಹುದು. ಆದರೆ ಫೇಸ್‍ಬುಕ್‍ನಲ್ಲಿ ಹಾಗೆ ಮಾಡಲು ಸಾಧ್ಯವಿಲ್ಲ. ಇಂತಹ ಸಂದರ್ಭದಲ್ಲಿ ಅವರನ್ನು ಬ್ಲಾಕ್ ಮಾಡಬಹುದು, ಅಥವಾ ಇಚ್ಛೆ ಇದ್ದಲ್ಲಿ ಸಂಬಂಧ ಬೆಳೆಯಬಹುದು, ಹಕ್ಕಿ ಬಲೆಗೆ ಬೀಳಬಹುದು. ಈ ಪ್ರಕಾರವಾಗೆ ಏನೆಲ್ಲಾ ವಹಿವಾಟುಗಳು ಫೇಸ್‍ಬುಕ್‍ನಲ್ಲಿ ನಡೆಯುತ್ತವೆ. ಇದಲ್ಲದೆ ವೇಶ್ಯಾವಾಟಿಕೆ (ಬುಕ್ಕಿಂಗ್‍ಗಳು) ಕೂಡಾ ಫೇಸ್‍ಬುಕ್‍ನಲ್ಲಿ ನಡೆಯುತ್ತವೆ. ಇಂತಹ ಹಲವಾರು ಪ್ರೊಫೈಲ್‍ಗಳು ಫೇಸ್‍ಬುಕ್‍ನಲ್ಲಿವೆ.
ಕ್ಷಮಿಸುವ ಗುಣ ನಿಮ್ಮದಾಗಿರಲಿ..

ಫೇಸ್‍ಬುಕ್ ಎನ್ನುವುದು ವಾಸ್ತವ ಜಗತ್ತಿಗಿಂತ ಭಿನ್ನವಾಗಿರುವ ಒಂದು ಪ್ರಪಂಚ. ಇಲ್ಲಿ ಬರುವುದೆಲ್ಲಾ ನಿಜ ಎಂದು ತಿಳಿದುಕೊಳ್ಳಬೇಡಿ. ಎಷ್ಟೋ ನಕಲಿ ಎಕೌಂಟ್‍ಗಳಿವೆ. ಕೆಲವು ಗಂಡಸರು ಹೆಣ್ಣಿನ ಹೆಸರಿನಲ್ಲಿ ಎಕೌಂಟ್ ತೆರೆದಿರುತ್ತಾರೆ. ಉದಾಹರಣೆಗಾಗಿ ಸುನೀತಾ ಎಂಬ ಹೆಸರಿನಲ್ಲಿ ಎಕೌಂಟ್ ಇರುತ್ತದೆ. ಫೋಟೊಗಳೆಲ್ಲಾ ಹೆಣ್ಣಿನದ್ದೇ ಮತ್ತು 28 ವರ್ಷ ಎಂದು ಪರಿಚಯದಲ್ಲಿರುತ್ತದೆ. ಕೆಲವರು ಅವಳ ರೂಪಕ್ಕೆ ಮರುಳಾಗಿ ತನ್ನ ಮನೆ-ಮಕ್ಕಳು ವಿಚಾರಗಳನ್ನು ಆಕೆಯೊಂದಿಗೆ ಹಂಚಿಕೊಳ್ಳುತ್ತಾರೆ. ಕೆಲವು ಯುವಕ/ಯುವತಿ ಗುಪ್ತ ಫೋಟೊಗಳನ್ನು ಚ್ಯಾಟ್ ಬಾಕ್ಸ್ ಮೂಲಕ ಅಂಥವರಿಗೆ ಕಳಿಸುತ್ತಾರೆ. ಇದನ್ನೇ ಆಧಾರವಾಗಿಟ್ಟುಕೊಂಡು ಆತ/ಆಕೆ ಬ್ಲಾಕ್‍ಮೇಲ್ ಮಾಡಲು ಪ್ರಾರಂಭಿಸುತ್ತಾರೆ. "2 ಲಕ್ಷ ಕೊಡಿ. ಇಲ್ಲಾಂದ್ರೆ ಪಬ್ಲಿಕ್ ಮಾಡಿ ಬಿಡ್ತೇನೆ" ಎಂದು ಬೆದರಿಕೆ ಬರುತ್ತದೆ. ಆದ್ದರಿಂದ, ನಿಮಗೆ ಪರಿಚಯವಿಲ್ಲದವರನ್ನು ಫ್ರೆಂಡ್ ಮಾಡುವಾಗ ತುಂಬಾ ಜಾಗರೂಕರಾಗಬೇಕು. ಅವರ ಫ್ಯಾಮಿಲಿ ಫೋಟೊ ಇದೆಯೇ, ಏನು ವೃತ್ತಿ, ಗುರುತು ಪುರಾವೆ ಇತ್ಯಾದಿಗಳನ್ನು ಖಚಿತ ಮಾಡಿಕೊಳ್ಳಬೇಕು. ಭಾವನೆಗಳ ಮುಂದೆ ದುರ್ಬಲರಾಗಬಾರದು. ಜೀವನ ಪರ್ಯಂತ ಸರಿಪಡಿಸಲು ಸಾಧ್ಯವಾಗದಂತಹ ಹಾನಿ ಅಥವಾ ಪರಿಣಾಮವನ್ನು ಎದುರಿಸಬೇಕಾಗಬಹುದು. ಪತಿ-ಪತ್ನಿಯಲ್ಲಿ ಫೇಸ್‍ಬುಕ್‍ಗೆ ಸಂಬಂಧಿಸಿದಂತೆ ಎಲ್ಲಾ ವಿಚಾರಗಳು ಮುಕ್ತವಾಗಿರುವುದು ಒಳ್ಳೆಯದು.ಇಲ್ಲಿ ಯಾವುದೂ ರಹಸ್ಯ ಬೇಡ. ತಪ್ಪುಗಳು ನಡೆದಲ್ಲಿ ಚಿಂತಿಸಬೇಡಿ. ಅದನ್ನು ಕ್ಷಮಿಸುತ್ತಾ ಸರಿಪಡಿಸಿಕೊಳ್ಳಬಹುದು ಅಥವಾ ಕ್ಷಮಿಸುವ ದೊಡ್ಡ ಗುಣ ನಿಮ್ಮಲ್ಲಿರಲಿ. ಏಕೆಂದರೆ ನಿಮ್ಮ ಸುಂದರ ಬಾಳು ನಿಮ್ಮ ಕೈಯಲ್ಲಿದೆ. ಮಕ್ಕಳು ಫೇಸ್‍ಬುಕ್ ಎಕೌಂಟ್ ತೆರೆದಿದ್ದಲ್ಲಿ ಅವರ ಮೇಲೆ ನಿಯಂತ್ರಣವಿದ್ದರೆ ಒಳ್ಳೆಯದು.
ಫೇಸ್‍ಬುಕ್ ನಮಗೆ ಟೆಕ್ನಾಲಜಿ ಒದಗಿಸಿರುವ ಒಂದು ಉತ್ತಮ ಸೌಕರ್ಯವಾಗಿದೆ. ಇದರಲ್ಲಿ ನಾವು ಮಾಹಿತಿಗಳನ್ನು, ಫೋಟೊಗಳನ್ನು ಅಥವಾ ವೀಡಿಯೋಗಳನ್ನು ಹಂಚಿಕೊಳ್ಳಬಹುದು. ಉದಾಹರಣೆಗಾಗಿ ನಿಮ್ಮಲ್ಲಿ ನಡೆದಿರುವ ಯಾವುದೇ ವಿವಾಹ ಅಥವಾ ಸಾರ್ವಜನಿಕ ಕಾರ್ಯಕ್ರಮದ ಫೋಟೊಗಳನ್ನು ಅಥವಾ ವೀಡಿಯೋಗಳನ್ನು ಹಾಕಿದಲ್ಲಿ, ಅಂತಹ ಸಮಾರಂಭಕ್ಕೆ ಬರಲು ಸಾಧ್ಯವಾಗದ ನಿಮ್ಮ ದೂರದ ಸಂಬಂಧಿಕರು/ಸ್ನೇಹಿತರು ಅದನ್ನು ನೋಡಬಹುದು ಮತ್ತು ಆನಂದಿಸಬಹುದು. ಡಯಾಬಿಟಿಸ್, ಬ್ಲಡ್ ಪ್ರೆಶರ್, ಹಣ್ಣು ಹಂಪಲುಗಳ ಪ್ರಯೋಜನ ಎಂಬಂತೆ ಹಲವಾರು ಆರೋಗ್ಯ ಮಾಹಿತಿಗಳನ್ನು ಫೇಸ್‍ಬುಕ್‍ನಲ್ಲಿ ಇತರರೊಂದಿಗೆ ಹಂಚಿಕೊಳ್ಳಬಹುದು ಅಥವಾ ನೀವು ತಿಳಿದುಕೊಳ್ಳಬಹುದು. ಬೇರೆ ಬೇರೆ ಪತ್ರಿಕೆಗಳಲ್ಲಿ ಪ್ರಕಟವಾಗಿರುವ ನಿಮ್ಮ ಲೇಖನಗಳನ್ನು, ಅಂತಹ ಪತ್ರಿಕೆ ಲಭ್ಯವಿಲ್ಲದ ಊರಿನಲ್ಲಿರುವ ನಿಮ್ಮ ಬಂಧು-ಮಿತ್ರರಿಗೆ ತೋರಿಸಬಹುದಾಗಿದೆ. ರಾಷ್ಟ್ರೀಯ/ ಅಂತಾರಾಷ್ಟ್ರೀಯ ಸಮಾಚಾರಗಳು, ಕಾನೂನಿನ ಮಾಹಿತಿಗಳನ್ನು ಹಂಚಿಕೊಳ್ಳಬಹುದು ಅಥವಾ ಕೇಳಿ ತಿಳಿದುಕೊಳ್ಳಬಹುದು. ಉತ್ತಮ ಸಂಗೀತ, ಚಲನಚಿತ್ರ, ನಾಟಕ, ಯಕ್ಷಗಾನಗಳನ್ನು ಇತರರೊಂದಿಗೆ ಹಂಚಿಕೊಳ್ಳಬಹುದು. ಈ ಮೂಲಕ ನಿಮ್ಮ ಜ್ಞಾನ ಮತ್ತು ವ್ಯಕ್ತಿತ್ವವನ್ನು ಹೆಚ್ಚಿಸಿಕೊಳ್ಳಬಹುದಾಗಿದೆ. ಆದ್ದರಿಂದ ಫೇಸ್‍ಬುಕ್ ಕೆಟ್ಟದ್ದಲ್ಲ, ಅದನ್ನು ನಾವು ಹೇಗೆ ಬಳಸಿಕೊಳ್ಳುತ್ತಿದ್ದೇವೆ ಎಂಬುದರ ಮೇಲೆ ಅದು ನಿರ್ಧರಿಸಿರುತ್ತದೆ. ಚೂರಿಯಿಂದ ಸೇಬು ಕತ್ತರಿಸಿ ತಿನ್ನಬಹುದು. ಅದೇ ಚೂರಿಯಿಂದ ಒಬ್ಬನ ಪ್ರಾಣವನ್ನು ಕೂಡಾ ತೆಗೆಯಬಹುದು. ಆದ್ದರಿಂದ ವಿಜ್ಞಾನದ ಕೊಡುಗೆ ಚೂರಿ. ಉಪಯೋಗ ನಿಮ್ಮ ಕೈಯಲ್ಲಿದೆ.

 

Author : ಎ.ವಿ.ಚಿತ್ತರಂಜನ್ ದಾಸ್ 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited