Untitled Document
Sign Up | Login    
ಆಧುನಿಕ ಜೀವನ ಶೈಲಿ ಮತ್ತು ಪೆಟ್ಸ್‌

ಸಾಕುಪ್ರಾಣಿಗಳಿಂದ ಸಿಗುವ ಮಾನಸಿಕ ಆನಂದ

ಇಂದಿನ ಆಧುನಿಕ ಜೀವನ ಶೈಲಿಯಲ್ಲಿ ಪೆಟ್ಸ್‌ ಬಗ್ಗೆಯೂ ಜನರ ಆಸಕ್ತಿ ಹೆಚ್ಚುತ್ತಿದೆ. ಮನೆಯಲ್ಲೊಂದು ಮುದ್ದಾನ ಮೊಲವೋ, ನಾಯಿಯೋ, ಬೆಕ್ಕೋ , ಲವ್‌ಬರ್ಡ್ಸ್, ಗಿಳಿಯೋ, ಇರಲಿ ಎಂದು ಹಲವರು ಬಯಸುತ್ತಾರೆ. ವಿವಿಧ ತಳಿಯ ನಾಯಿ, ಬೆಕ್ಕಿನ ಮರಿಗಳನ್ನು ಮನೆಗೆ ತಂದು ಸಾಕುವುದು ಹಲವರಿಗೆ ಇಷ್ಟವೂ ಹೌದು. ಅವರು ಬಯಸಿದ ಮುದ್ದಾದ ಪೆಟ್ಸ್‌ಗೋಸ್ಕರ ಅದೆಷ್ಟು ಹಣ ವ್ಯಯಿಸಲೂ ಅವರು ಸಿದ್ಧರಿರುತ್ತಾರೆ. ಮನೆಯಲ್ಲಿ ಕುದುರೆಯನ್ನೂ, ಜಿಂಕೆಯನ್ನೂ ಸಾಕುವವರಿದ್ದಾರೆ.

ಮೊದಲು ಮನೆ ಕಾಯುವುದಕ್ಕಾಗಿ ನಾಯಿ, ಮನೆಯಲ್ಲಿರುವ ಇಲಿಗಳ ನಿಯಂತ್ರಣಕ್ಕಾಗಿ ಬೆಕ್ಕುಗಳನ್ನು ಸಾಕಲಾಗುತ್ತಿತ್ತು. ಆದರೆ ಈಗ ಕಾಲ ಬದಲಾಗಿದೆ. ಪೆಟ್ಸ್ ಮನೆಯಲ್ಲಿರುವುದು ಈಗಿನ್ ಪ್ಯಾಷನ್‌. ಸುಂದರವಾದ ಆಧುನಿಕ ಶೈಲಿಯ ಮನೆಯಲ್ಲಿ ಮುದ್ದಾದ ಪೆಟ್ಸ್‌ ಓಡಾಡುತ್ತಿರಬೇಕು, ಎಂದು ಬಯಸುವ ಜನರು ತಮ್ಮ ಮನೆಗೆ, ಮನೆಯ ಒಳಾಂಗಣ ಸೌಂದರ್ಯಕ್ಕೆ ಒಪ್ಪುವಂತಹ ಪೆಟ್ಸ್‌ಗಳನ್ನೇ ನೋಡಿ ಖರೀದಿಸುವಂತಹ ಮನಸ್ಥಿತಿಯಲ್ಲಿದ್ದಾರೆ.

ಹಾಗೇ, ಪೆಟ್ಸ್‌ಗಳನ್ನು ಅಷ್ಟೇ ಪ್ರೀತಿಯಿಂದ ನೋಡಿಕೊಳ್ಳುತ್ತಾರೆ. ಅವುಗಳಿಗೆಂದೇ ಇರುವ ನಿರ್ದಿಷ್ಟ ಆಹಾರಗಳನ್ನು ತಂದು, ಸೂಕ್ತ ಸಮಯದಲ್ಲಿ ವೆಟರ್ನರಿ ಡಾಕ್ಟರ್‌ ಬಳಿ ಚಿಕಿತ್ಸೆ ಕೊಡಿಸಿ, ಅದನ್ನು ಒಬ್ಬ ಕುಟುಂಬದ ಸದಸ್ಯನಂತೆಯೇ ಪರಿಗಣಿಸಿ ನೋಡಿಕೊಳ್ಳುತ್ತಿದ್ದಾರೆ. ಅವನ್ನೂ ಜಾಗಿಂಗ್‌, ವಾಕಿಂಗ್‌, ಶಾಪಿಂಗ್‌ಗಳಿಗೆ ಕರೆದುಕೊಂಡು ಹೋಗುತ್ತಾ ಅವಕ್ಕೂ ಒಂದು ಗ್ಲಾಮರ್‌ ಲುಕ್‌ ಕೊಡುತ್ತಿದ್ದಾರೆ.

‘ಪೆಟ್‌ ಶೋ’ಕ್ಕಾಗಿ ಬಿಂದಾಸ್‌ ಆಗಿ ರೆಡಿಯಾಗಿರುವ ಕ್ಯಾಟ್‌
ನಾಯಿಗಳನ್ನೋ, ಬೆಕ್ಕುಗಳನ್ನೋ, ಹಕ್ಕಿಗಳನ್ನೋ ಸಾಕುವುದು ಒಂದು ಒಳ್ಳೆಯ ಹವ್ಯಾಸ. ಅದಕ್ಕಿಂತಲೂ ಹೆಚ್ಚಾಗಿ ಅವುಗಳಿಂದ ಮಾನಸಿಕ ಸಂತೋಷ ಇಮ್ಮಡಿಗೊಳ್ಳುತ್ತದೆ ಎಂದು ಇತ್ತೀಚಿನ ಅಧ್ಯಯನವೊಂದು ತಿಳಿಸಿದೆ. ಒತ್ತಡದ ಜೀವನ ಶೈಲಿಯಲ್ಲಿ, ಮಾನಸಿಕ ಆನಂದವನ್ನು, ನೆಮ್ಮದಿಯನ್ನು ನೀಡುವಲ್ಲಿ ಮನೆಯಲ್ಲಿ ತಮ್ಮೊಂದಿಗೇ ಇರುವ ಪೆಟ್ಸ್‌ ಬಹುಮುಖ್ಯ ಪಾತ್ರ ವಹಿಸುತ್ತವೆ ಎಂದು ಆ ಅಧ್ಯಯನ ತಿಳಿಸಿದೆ.

ಸದಾ ಕಾಲ ತನ್ನ ಒಡೆಯನಲ್ಲಿ ನಿಷ್ಕಲ್ಮಶ ಪ್ರೀತಿ ಮತ್ತು ನಂಬಿಕೆಯನ್ನು ಇಟ್ಟಿರುವ ಆ ಪ್ರಾಣಿಗಳಿಂದ ಬಹಳಷ್ಟು ಜನರಿಗೆ ಕಾಡುತ್ತಿರುವ ಮನೋಕ್ಲೇಶೆ, ಹತಾಶೆಗಳಿಂದಾದ ನೋವು ಕಡಿಮೆಯಾಗಿರುವ ಉದಾಹರಣೆಗಳಿವೆ. ಹಲವು ಮಾನಸಿಕ ಖಾಯಿಲೆಗಳಿಗೆ ಮನಶ್ಶಾಸ್ತ್ರಜ್ಞರೂ ಕೂಡ ಸಾಕು ಪ್ರಾಣಿಗಳನ್ನು ಸಾಕುವುದಕ್ಕೆ ಸಲಹೆ ನೀಡುತ್ತಾರಂತೆ. ಮನೆಯಲ್ಲಿರುವ ಪ್ರೀತಿಯ ಪ್ರಾಣಿಗಳು, ಪಕ್ಷಿಗಳು ಒಂಟಿತನದಿಂದ ಬಳಲುತ್ತಿರುವ ಮನಸ್ಸುಗಳಿಗೆ ಮರುಜೀವ ಕೊಡುತ್ತವೆ.

ಚಿಕ್ಕಮಕ್ಕಳೂ ಕೂಡ, ಪೆಟ್ಸ್‌ ಜೊತೆಗೆ ಬೆಳೆದರೆ ಅವರ ಬುದ್ದಿ ಅತೀ ಚುರುಕಾಗಿರುತ್ತದೆ ಹಾಗೂ ಹಲವು ವಿಷಯಗಳಲ್ಲಿ ಮಕ್ಕಳ ಚುರುಕತನ ಮತ್ತು ಪ್ರತಿಕ್ರಿಯೆಯ ಮಟ್ಟ ಗಣನೀಯ ಮಟ್ಟದಲ್ಲಿ ಸುಧಾರಣೆಯಾಗುತ್ತದೆ ಎಂದು ಅಧ್ಯಯನಕಾರರು ತಿಳಿಸಿದ್ದಾರೆ.
ರ್ಯಾಂಪ್‌ ಮೇಲೆ ಹೆಜ್ಜೆಹಾಕುತ್ತಿರುವ ಸುಂದರಿ
ಕೆಲಸದ ನಿಮಿತ್ತ ದಿನವಿಡೀ ಮನೆಯಿಂದ ಹೊರಗಿರುವವರಿಗೆ ಪ್ರಾಣಿಗಳನ್ನು ಸಾಕುವ ಇಚ್ಛೆಯಿದ್ದರೂ ಸಾಧ್ಯವಿರುವುದಿಲ್ಲ ಎಂಬುದು ಒಪ್ಪಿಕೊಳ್ಳಲೇ ಬೇಕಾದ ಸಂಗತಿ. ಆದರೆ, ಮನೆಯಲ್ಲಿಯೇ ಇದ್ದು, ಒಂಟಿತನವನ್ನು ಅನುಭವಿಸುವವರಿಗೆ, ಪ್ರೀತಿಯಿಂದ ದೂರಾದವರಿಗೆ ಪೆಟ್ಸ್‌ ನೆಮ್ಮದಿ ನೀಡುತ್ತದೆ.

ಪೆಟ್ಸ್‌ ಮನೆಯಲ್ಲಿರುವುದರಿಂದ ಸ್ಥಿರ ಒಡನಾಟ ಬೆಳೆಯುತ್ತದೆ, ಅವುಗಳಿಗೆ ಆಹಾರ, ನೀರು ಒದಗಿಸುವುದು, ಹೊರಗಡೆ ಒಯ್ದು ಅವುಗಳ ಜೊತೆ ಸ್ವಲ್ಪ ಕಾಲ ಕಳೆಯುವುದು ದಿನದ ವೇಳಾಪಟ್ಟಿಯಲ್ಲಿಯೇ ಸೇರಿ ಹೋಗುತ್ತದೆ. ಮನಸ್ಸಿಗೆ ಹೊಸ ಯೋಚನೆಗಳನ್ನು ನೀಡುತ್ತದೆ. ಜೀವನದ ಬಳಲಿಕೆಯನ್ನು ನಿವಾರಿಸುತ್ತವೆ. ಸದಾ ಚಟುವಟಿಕೆಯಿಂದಿರುವ ಮುದ್ದು ಮರಿಗಳು ನಮ್ಮಲ್ಲೂ ಚಟುವಟಿಕೆ ಮೂಡಿಸುತ್ತವೆ. ಮನಸ್ಸಿಗೆ ಅನಿಸಿದ್ದನ್ನು ಯಾವ ಭಯವೂ ಇಲ್ಲದೆ, ಧೈರ್ಯವಾಗಿ ಅವುಗಳ ಬಳಿ ಹೇಳಿಕೊಂಡು ಹಗುರಾಗಬಹುದು. ಇದೊಂದು ಮಾನಸಿಕ ತಜ್ಞರ ಉಪಯುಕ್ತ ಸಲಹೆಯೂ ಹೌದು.

ಇದಕ್ಕೂ ಮಿಗಿಲಾಗಿ, ಬೆಂಗಳೂರಿನಂತಹ ಮಹಾನಗರಗಳಲ್ಲಿ ಅದೆಷ್ಟೋ ಪೆಟ್‌ ಶೋಗಳು ನಡೆಯುತ್ತಿರುತ್ತವೆ. ಹೇಳಿದಂತೆ ಕೇಳುವ ಮುದ್ದು ನಾಯಿಗಳಿಗೆ ಅಂಗಿ ತೊಡಿಸಿ ರ್ಯಾಂಪ್‌ ಮೇಲೆ ನಡಿಸಿ, ಶ್ವಾನಗಳಿಗೆ ಫ್ಯಾಷನ್‌ ಟಚ್‌ ಕೊಟ್ಟು ಸಂತಸಪಡುತ್ತಿದ್ದಾರೆ. ನಾಯಿಗಳನ್ನು ಆಯ್ಕೆ ಮಾಡಿಕೊಂಡು, ಅವುಗಳನ್ನು ಹೇಗೆ ಸಾಕಬೇಕು ಎಂಬ ಕುರಿತು ತರಗತಿಗಳೂ ನಡೆಯುತ್ತಿವೆ.
ಎಲ್ಲರಿಗೂ ತಮ್ಮ ತಮ್ಮ ಸಾಕು ಪ್ರಾಣಿಗಳ ಜೊತೆಗೆ ಹೇಗೆ ಪ್ರೀತಿಯಿಂದ ಇರಬೇಕೆಂಬುದನ್ನು ಅವರು ತಿಳಿಸಿಕೊಡುತ್ತಾರೆ.

1. ಮುದ್ದಿನ ಮೊಲ, ನಾಯಿ ಅಥವಾ ಬೆಕ್ಕಿನ ಮೈಯ್ಯನ್ನು ಹೆಚ್ಚು ಹೆಚ್ಚು ಸವರಿ. ಹೆಚ್ಚಿನ ಪ್ರಾಣಿಗಳು ಹೀಗೆ ತಮ್ಮ ಮೈಯ್ಯನ್ನು ಸವರಿಸಿಕೊಳ್ಳಲು ಇಷ್ಟಪಡುತ್ತವೆ. ಆದರೆ ಅವು ಇಷ್ಟ ಪಡದೇ ಇದ್ದರೆ ಬಿಟ್ಟು ಬಿಡಬೇಕು, ಯಾಕೆಂದರೆ ಇಷ್ಟಪಡದಿದ್ದಲ್ಲಿ ಅವು ಒಡಯನನ್ನು ದ್ವೇಷಿಸುವ ಸಾಧ್ಯತೆ ಹೆಚ್ಚಿರುತ್ತದೆ.

2. ಸಾಕುಪ್ರಾಣಿಗಳಿಗೆ ತುಂಬಾ ಹೆಚ್ಚು ಅಥವಾ ತುಂಬಾ ಕಡಿಮೆ ಆಹಾರ ಹಾಕಬಾರದು. ಅವು ನಿಜವಾಗಿಯೂ ಹಸಿದಿರುವ ಹಾಗೂ ಕೇವಲ ಆಹಾರ ಬೇಕು ಎಂದು ಬಯಸುವ ಸಮಯಗಳನ್ನು ವಿಂಗಡಿಸಿ ನೆನಪಿನಲ್ಲಿಡಬೇಕು

3. ಪೆಟ್ಸ್‌ಗೆ ಆಹಾರ ಹಾಕುವ ಪಾತ್ರವನ್ನು ಸ್ವಚ್ಛಗೊಳಿಸುತ್ತಿರಬೇಕು.

4. ಸಾಕುಪ್ರಾಣಿಗಳ ಬಗ್ಗೆ ಕೊಂಚ ಗಮನ ವಹಿಸಬೇಕು. ಸಾಕು ಪ್ರಾಣಿಗಳು ಅದರಲ್ಲೂ ಮುಖ್ಯವಾಗಿ ನಾಯಿ ನಿಮ್ಮಿಂದ ಸಾಧ್ಯವಾದಷ್ಟೂ ಹೆಚ್ಚಿನ ಗಮನವನ್ನು, ಆರೈಕೆಯನ್ನು ಬಯಸುತ್ತದೆ.

5. ನಾಯಿಗಳನ್ನು ವಾಯು ವಿಹಾರಕ್ಕೆ ಕರೆದುಕೊಂಡು ಹೋಗಿ. ಹೆಚ್ಚಿನ ನಾಯಿಗಳು ಇಡೀ ದಿನ ಮನೆಯೊಳಗೆ ಅಥವಾ ಒಂದೇ ಗೂಡಿನಲ್ಲಿ ಇರಲು ಬಯಸುವುದಿಲ್ಲ.

6. ಸಾಕು ಪ್ರಾಣಿಗಳಿಗೆ ಮನುಷ್ಯರ ಸ್ಪರ್ಶ ಅಗತ್ಯ ಇದು ಅವುಗಳು ನಿಮ್ಮ ಜೊತೆಗೆ ಮತ್ತಷ್ಟು ಸಲಿಗೆಯಿಂದಿರಲು ಸಹಾಯವಾಗುತ್ತದೆ. ಸಾಕು ಪ್ರಾಣಿಯೊಂದಿಗೆ ಆಟವಾಡಿ, ಅವುಗಳಿಗೆ ಮೆತ್ತಗೆ ತಟ್ಟಿ ಅಥವಾ ಅವುಗಳ ಜೊತೆಗೆ ಕೆಲವು ಸಮಯ ಕಳೆಯಬೇಕು.

7. ತುಂಬಾ ಶಿಕ್ಷೆ ನೀಡಬಾರದು ಹೊಡೆಯುವುದು, ಒದೆಯುವುದು ಮಾಡಬಾರದು

8. ಸಾಕುಪ್ರಾಣಿಗಳನ್ನು ನಿಯಮಿತವಾಗಿ ಪ್ರಾಣಿವೈದ್ಯರಲ್ಲಿ ಕರೆದುಕೊಂಡು ಹೋಗುವುದು.


ಒಟ್ಟಾರೆ ಪೆಟ್ಸ್‌ ಮನೆಯಲ್ಲಿರುವುದು ಎಲ್ಲ ರೀತಿಯಿಂದ ಒಳ್ಳೆಯದು ಅನ್ನುವುದಂತೂ ಸುಳ್ಳಲ್ಲ. ಇಷ್ಟ ಇದ್ದವರು ಮನೆಗೊಂದು ಪೆಟ್‌ ತಂದು ಸಾಕಿ ನೋಡಿ..

 

Author : ಅಮೃತಾ ಹೆಗಡೆ

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited