Untitled Document
Sign Up | Login    
ಸಂತಸದ ಬದುಕಿಗೆ ಬೇಕು ‘ಸ್ವ ಪ್ರೇರಣೆ’

‘ಸ್ವ ಪ್ರೇರಣೆ’ಯೊಂದಿಗಿನ ಸಂತಸ

ಒತ್ತಡ, ಧಾವಂತದ ಕೆಲಸದಿಂದ ದಿನಕ್ಕೆ 6 ತಾಸುಗಳಷ್ಟೂ ನಿದ್ದೆ ಮಾಡದೇ ಬದುಕುವ ಜನರ ಜೀವನ ಶೈಲಿ ಮಹಾನಗರಗಲ್ಲಿ ಸರ್ವೇಸಾಮಾನ್ಯ. ನಗರೀಕರಣಗೊಂಡ ಜೀವನಶೈಲಿಗೆ ಜನರು ಒಗ್ಗಿಕೊಂಡುಬಿಟ್ಟಿದೆ ಎಂದರೆ ಅದು ಅತಿಶಯೋಕ್ತಿಯೂ ಅಲ್ಲ. ಆದರೆ ಮಹಾನಗರಗಳಲ್ಲಿ ಬದುಕುವ ಜನರಲ್ಲಿ ಸ್ವಪ್ರೇರಣೆಯ ಸಮಸ್ಯೆ ಬಹಳವಾಗಿ ಕಾಣಿಸಿಕೊಳ್ಳುತ್ತಿರುವುದು ಆಧುನಿಕತೆಯ ಪರಿಣಾಮ.

ನಮ್ಮ ಬದುಕನ್ನು ನಾವೇ ಸುಂದರವಾಗಿ ಅರ್ಥೈಸಿಕೊಂಡು, ನಮಗೆ ನಾವೇ ಪ್ರೇರಕರಾಗಿರುವುದೇ ಸ್ವ ಪ್ರೇರಣೆ ( ಸೆಲ್ಫ್‌ ಮೋಟಿವೇಶನ್‌ ). ದೊಡ್ಡ ದೊಡ್ಡ ಹುದ್ದೆಯನ್ನು ನಿಭಾಯಿಸಿ ಕೈತುಂಬ ಸಂಬಳ ಪಡೆಯುವ ಜನರಿಂದ ಹಿಡಿದು ವಿದ್ಯಾರ್ಥಿ ವಿದ್ಯಾರ್ಥಿನಿಯರಲ್ಲಿಯೂ ಸ್ವಪ್ರೇರಣೆಯ ಕೊರತೆ ಗಂಭೀರವಾಗಿ ಕಾಡುತ್ತಿದೆ. ಅದೂ ಮಹಾನಗರಗಳಲ್ಲಿ ಅನ್ನೋದು ಹಲವು ಬಾರಿ ಸಾಬೀತಾಗಿದೆ.

ಆಧುನಿಕತೆ ಬೆಳೆದಂತೆ, ಎಲ್ಲರ ಜೀವನವೂ ಜಾಗತಿಕ ಮಟ್ಟದಲ್ಲಿ ತೆರೆದುಕೊಳ್ಳುತ್ತಿದೆ, ಒಂದು ಊರಿಗೋ, ಪ್ರಾಂತ್ಯಕ್ಕೋ, ರಾಜ್ಯಕ್ಕೋ ಸೀಮಿತವಾಗಿರದೇ ಹಲವು ಕ್ಷೇತ್ರಗಳಲ್ಲಿ ಇಡೀ ವಿಶ್ವವೇ ಸ್ಪರ್ಧೆಗಿಳಿದಿದೆ. ಇಂತಹ ಕಠಿಣ ಸ್ಪರ್ಧೆಯನ್ನು ಎದುರಿಸುವ ವ್ಯಕ್ತಿಗೆ ಸ್ವ ಪ್ರೇರಣೆ ಅತ್ಯಂತ ಅವಶ್ಯ.
ಸ್ಪಪ್ರೇರಣೆಯ ಕೊರತೆ ಅನ್ನೋದು ಚಿಕ್ಕ ಸಮಸ್ಯೆಯಂತೆ ಕಂಡರೂ ಅದು ಸೂಕ್ಷ್ಮವಾಗಿ ವ್ಯಕ್ತಿತ್ವದ ಮೇಲೆಯೇ ಪರಿಣಾಮ ಬೀರಬಲ್ಲದು. ಆತ್ಮವಿಶ್ವಾಸದ ಕೊರತೆ, ಬೇಕು ಬೇಡಗಳನ್ನು ಸಮರ್ಪಕವಾಗಿ ತಿಳಿಸಲು ವಿಫಲರಾಗುವುದು, ಸ್ವ ನಿರ್ದೇಶನದ ಕೊರತೆ, ಸರಿಯಾದ ನಿರ್ಧಾರವನ್ನು ತೆಗೆದುಕೊಳ್ಳಲು ಸಾಧ್ಯವಾಗದೇ ಇರುವುದು ಇವೆಲ್ಲ ಸ್ವ ಪ್ರೇರಣೆಯ ಕೊರತೆಯಿಂದಲೇ ಎದುರಾಗುವ ಸಮಸ್ಯೆಗಳು.

ಆತ್ಮವಿಶ್ವಾಸದ ಕೊರತೆಯೇ ಸ್ವಪ್ರೇರಣೆಯ ಕೊಲೆಗಾರ ಎಂಬ ಮಾತೊಂದಿದೆ. ಆತ್ಮವಿಶ್ವಾಸದ ಕೊರತೆ, ಋಣಾತ್ಮಕ ಯೋಚನೆಗಳನ್ನು ಹುಟ್ಟುಹಾಕುತ್ತದೆ. ಆಗ ಮನಸ್ಸಿನಲ್ಲಿರುವ ಭೂತಕಾಲದ ಸೋಲು, ಕೆಟ್ಟ ಘಟನೆಗಳು, ದೌರ್ಬಲ್ಯಗಳು ಮನಸ್ಸನ್ನೇ ಆಳಲು ಪ್ರಾರಂಭ ಮಾಡುತ್ತವೆ. ಇಂತಹ ಸಂದರ್ಭ ಎಷ್ಟೋ ಜೀವಗಳನ್ನು ಬಲಿ ಪಡೆದುಕೊಂಡಿವೆ. ಅತಿಯಾದ ನಿರೀಕ್ಷೆ, ಹಣಗಳಿಸುವ ಹಪಹಪ, ಪ್ರೇಮ ವೈಫಲ್ಯ, ಹತಾಶೆ ಇವೆಲ್ಲವುಗಳಿಂದ ಘಾಸಿಗೊಳ್ಳುವ ಮನಸು ದುಡುಕುವ ಪ್ರಯತ್ನಕ್ಕೆ ಕೈ ಹಾಕುತ್ತದೆ. ಇಂತಹ ಪ್ರಕರಣಗಳು ನಗರಗಳಲ್ಲಿ ವೇಗವಾಗಿ ಹೆಚ್ಚುತ್ತಿದೆ.

ನಮ್ಮ ಹತಾಶೆಯನ್ನು ಸ್ನೇಹಿತರಲ್ಲಿಯೋ, ಅಕ್ಕತಂಗಿಯರಲ್ಲಿಯೋ, ತಂದೆ ತಾಯಿಗಳಲ್ಲಿಯೋ ಹೇಳಿಕೊಂಡು, ಅವರಿಂದ ಸಮಾಧಾನ ಪಡೆಯುವುದು ಉತ್ತಮ ಆದರೆ, ಎಲ್ಲ ಸಂದರ್ಭದಲ್ಲಿಯೂ ಅವರೆಲ್ಲ ನಿಮ್ಮೊಂದಿಗೆ ಇರಲು ಸಾಧ್ಯವಾಗದೇ ಇರಬಹುದು. ನಮ್ಮ ಕೆಲಸ ಕಾರ್ಯಗಳಿಗೆ ಬೇರೆಯವರಿಂದ ಸ್ಪೂರ್ತಿ ಸಿಗಲಿ ಎಂದು ಅಪೇಕ್ಷಿಸುವುದು ಕೂಡ ಅತ್ಯಂತ ಅಪಾಯಕಾರಿ. ಹೀಗಾಗಿ ‘ಪ್ರೇರಣೆ’ಗೆ ಬೇರೆಯವರನ್ನು ಅವಲಂಬಿಸಿರುವುದಕ್ಕಿಂತ, ನಮಗೆ ನಾವೇ ಪ್ರೇರಕರಾಗಿರುವುದು ಒಳ್ಳೆಯದು. ನಿಮಗೆ ನಿವೇ ಮೋಟಿವೇಟರ್‌ ಆಗಿರುವುದು ಸೂಕ್ತ. ಮನಸಿಗೆ ಸಂತಸ ತರುವ ಕೆಲಸಗಳೇನು ಎಂಬುದನ್ನು ತಮ್ಮನ್ನು ತಾವೇ ಅಭ್ಯಸಿಸಿಕೊಂಡು ಅರಿತುಕೊಳ್ಳಬೇಕು, ಎಂಬುದು ಮಾನಸಿಕ ತಜ್ಞರ ಅಭಿಪ್ರಾಯ.
ಸ್ವ ಪ್ರೇರಣೆ ಹೇಗೆ ಸಾಧ್ಯ:

ತನ್ನ ಮೇಲೆ ತಾನು ನಂಬಿಕೆ ಇಡುವುದು, ತನಗೇ ತಾನೇ ಧೈರ್ಯ ಹೇಳಿಕೊಳ್ಳುವುದು, ಸ್ವತಃ ತಾನೇ ನಿರ್ದೇಶಿಸಿಕೊಳ್ಳುವುದು,ಗೆದ್ದೇ ಗೆಲ್ಲುತ್ತೇನೆ ಎಂಬ ಆತ್ಮವಿಶ್ವಾಸ, ಧನಾತ್ಮಕ ಯೋಚನೆಗಳು, ಇವೆಲ್ಲ ಸ್ಪ ಪ್ರೇರಣೆಯನ್ನು ಹುಟ್ಟುಹಾಕುತ್ತವೆ.

ನಿಮ್ಮಲ್ಲಿರುವ ಧನಾತ್ಮಕ ಅಂಶಗಳನ್ನು ಪಟ್ಟಿಮಾಡಿ. ಬೇರೆಯವರಿಗಿಂತ ನೀವು ಹೇಗೆ ಭಿನ್ನ ಎಂಬುದನ್ನು ಅರಿತುಕೊಳ್ಳಿ. ಅವುಗಳಲ್ಲಿರುವ ಧನಾತ್ಮಕ ಅಂಶಗಳಿಂದ ಮನಸ್ಸು ಉಲ್ಲಸಿತಗೊಳ್ಳುತ್ತದೆ.

ನಿಮ್ಮ ದೌರ್ಬಲ್ಯಗಳನ್ನೂ ಪಟ್ಟಿಮಾಡಿ, ದೌರ್ಬಲ್ಯಗಳಿಂದ ಹೊರಬರುವ ಮಾರ್ಗೋಪಾಯಗಳನ್ನು ಹಾಕಿಕೊಳ್ಳಿ.

ನಿಮಗೆ ನೀವೇ ಪುಟ್ಟ ಪುಟ್ಟ ಗುರಿಯನ್ನು ಹಾಕಿಕೊಳ್ಳಿ, ( ಅತೀ ದೀರ್ಘವಾದ ಗುರಿ ಬೇಡ ) ನೀವು ಹಾಕಿಕೊಂಡ ಗುರಿಯನ್ನು ತಲುಪಿದಾಗ ಅಭಿನಂದಿಸಿಕೊಳ್ಳಿ. ಗೆದ್ದಿರುವುದಕ್ಕಾಗಿ ನಿಮ್ಮ ಪ್ರಯತ್ನವನ್ನು ನಿಮ್ಮಲ್ಲಿಯೇ ಶ್ಲಾಘಿಸಿಕೊಳ್ಳಿ

ಆದದ್ದೆಲ್ಲ ಒಳ್ಳೆಯದು, ಒಳ್ಳೆಯದಕ್ಕಾಗಿಯೇ ಇದೆಲ್ಲವೂ ಆಗುತ್ತಿರುವುದು ಎಂಬ ಯೋಚನೆ ಮನಸ್ಸಿನಲ್ಲಿ ಯಾವಾಗಲೂ ಇರಲಿ

ಒತ್ತಡದ ಬದುಕು ನಗರಗಳಲ್ಲಿ ಸರ್ವೇಸಾಮಾನ್ಯ. ಆದರೆ, ಆ ಒತ್ತಡದಲ್ಲಿ ಮುಳುಗಿ ಸ್ವ ಸಂತೋಷವನ್ನು ಕಡೆಗಣಿಸಬಾರದು. ಮಾನಸಿಕವಾಗಿ ನೆಮ್ಮದಿಯಿಂದಿರಲು ಪ್ರಯತ್ನಿಸಿ. ಗಡಿಬಿಡಿಯ ಜೀವನವನ್ನೂ ಎಂಜಾಯ್‌ ಮಾಡಿ. ಇಡೀ ಪ್ರಪಂಚವನ್ನು ಧನಾತ್ಮಕವಾಗಿ ನೋಡಿ. ಆಗ ಸಿಕ್ಕೇ ಸಿಗುತ್ತದೆ ಸ್ವ ಪ್ರೇರಣೆ.




ಚಿತ್ರಕೃಪೆ - http://freelancefolder.com

 

Author : ಅಮೃತಾ ಹೆಗಡೆ

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited