Untitled Document
Sign Up | Login    
ಬೇಸಿಗೆಯಲ್ಲಿ ತ್ವಚೆಯ ರಕ್ಷಣೆಗಾಗಿ ಬಳಸಿ ಸನ್‌ಸ್ಕ್ರೀನ್‌

ಬರುತ್ತಿದೆ ಬೇಸಿಗೆ - ಬಿಸಿಲಿನಿಂದ ರಕ್ಷಿಸಿಕೊಳ್ಳಿ ನಿಮ್ಮ ತ್ವಚೆ

ಚಳಿಗಾಲ ಮುಗಿದು... ಬೇಸಿಗೆಯ ಬಿಸಿಲು ಹತ್ತಿರ ಬರುತ್ತಿದೆ. ಚುಮು ಚುಮು ಚಳಿಯ ದಿನಗಳು ಇನ್ನು ಸ್ವಲ್ಪ ದಿನಗಳಲ್ಲಿ ಮುಗಿದು ಬೇಸಿಗೆಯ ಧಗೆ ಆವರಿಸಿಕೊಳ್ಳುತ್ತದೆ. ಈ ಸಮಯದಲ್ಲಿ ತ್ವಚೆ ತನ್ನ ಕಾಂತಿಯನ್ನು ಕಳೆದುಕೊಳ್ಳುವ ಸಂಭವವಿರುವುದರಿಂದ ಚರ್ಮವನ್ನು ಬಿಸಿಲಿನಿಂದ ಸೂಕ್ಷ್ಮವಾಗಿ ಕಾಪಾಡಿಕೊಲ್ಳುವುದು ಅತೀ ಮುಖ್ಯ.

ಹೊಳೆಯುವ, ಮೃದುವಾದ ಚರ್ಮಕ್ಕೆ ಬಿಸಿಲು ಪ್ರಭಾವ ಬೀರಬಾರದು ಅಂದರೆ, ಚರ್ಮಕ್ಕೆ ಒಪ್ಪುವ ಸನ್‌ಸ್ಕ್ರೀನ್‌ ಲೋಶನ್‌ನ್ನು ಬಳಸಲೇಬೇಕು ಎಂದು ಸಲಹೆ ನೀಡುವ ವೈದ್ಯರು, ಸೂರ್ಯನ ಧಗೆಯಿಂದ ಚರ್ಮಕ್ಕೆ ರಕ್ಷಣೆ ನೀಡುವ ಲೇಪನವನ್ನು ನಿರ್ಲಕ್ಷಿಸಕೂಡದು ಎಂದು ಎಚ್ಚರಿಸುತ್ತಾರೆ. ಜೊತೆಗೆ ಪ್ರಖರ ಬಿಸಿಲಿಗೆ ಚರ್ಮ ಸೋಕದಂತೆ ಜಾಗೃತೆ ವಹಿಸಲು ತಿಳಿಸುತ್ತಾರೆ.
ಹಲವರು ಸನ್‌ಸ್ಕ್ರೀನ್‌ ಲೋಶನ್‌ ನ ಬಳಕೆ ಮಾಡದಿರುವುದಕ್ಕೆ ಕಾರಣಗಳೂ ಇದೆ. ತುಂಬಾ ಜಿಡ್ಡು ಜಿಡ್ಡಾಗಿರುವ ಈ ಲೇಪನದಿಂದ ಮುಖ ಸುಂದರವಾಗಿ ಕಾಣುವುದಿಲ್ಲ, ಇದರಲ್ಲಿರುವ ಎಣ್ಣೆಯಂಶದಿಂದಾಗಿ ಮುಖದ ಮೇಲೆ ಮೊಡವೆ ಬರುವ ಸಂಭವವಿರುತ್ತದೆ ಹಾಗೇ..ಮೇಕಪ್‌ಗೆ ಸನ್‌ಸ್ಕ್ರೀನ್‌ ಲೋಶನ್‌ನ ಸಹಕರಿಸುವುದಿಲ್ಲ ಎಂಬ ಕಾರಣಗಳಿಂದ ಇದು ನಿರ್ಲಕ್ಷಿಸಲ್ಪಡುತ್ತದೆ. ಹಲವರಿಗೆ ಇದರ ಬಳಕೆಯ ಅನಿವಾರ್ಯತೆ ತಿಳಿಯದೆ, ಮಾಹಿತಿಯ ಕೊರತೆಯಿಂದ ಸನ್‌ಸ್ಕ್ರೀನ್‌ ಲೋಶನ್‌ ಬಳಕೆ ಮಾಡಿರುವುದಿಲ್ಲ.

ಸನ್‌ ಬರ್ನ್‌, ಡಾರ್ಕ್ ಸರ್ಕಲ್ಸ್‌ ನಂತಹ ಸಮಸ್ಯೆಯಿಂದ ಹಿಡಿದು ಸ್ಕಿನ್‌ ಕ್ಯಾನ್ಸರ್‌ ತನಕ ಚರ್ಮಕ್ಕೆ ತೀವ್ರ ಬಿಸಿಲಿನಿಂದ ಹಾನಿಯಾಗಬಲ್ಲದು. ಹೀಗಾಗಿ ಆಸ್ಟ್ರೇಲಿಯಾ, ಮಲೇಶಿಯಾ, ಥೈಲ್ಯಾಂಡ್‌, ಸೌತ್‌ ಅಮೇರಿಕಾದಂತಹ ದೇಶಗಳಲ್ಲಿ ಸನ್‌ಸ್ಕ್ರೀನ್‌ ಲೋಶನ್‌ನ ಬಳಕೆ ಸಾಮಾನ್ಯ. ಪ್ರಖರ ಬಿಸಿಲಿನಿಂದ ರಕ್ಷಿಸಿಕೊಳ್ಳುವ ಸಲುವಾಗಿ ಇದರ ಉಪಯೋಗ ಅಲ್ಲಿ ಅನಿವಾರ್ಯ ಕೂಡ.

ಆದರೆ, ನಮ್ಮ ದೇಶದ ಜನರಲ್ಲಿಯೂ, ಈಗೀಗ ಚರ್ಮದ ಸಮಸ್ಯೆಗಳು ಹೆಚ್ಚು ಹೆಚ್ಚು ಕಾಣಿಸಿಕೊಳ್ಳುತ್ತಿವೆ. ಬಿಸಿಲಿನ ತಾಪ ಚರ್ಮದ ಮೇಲೆ ಪ್ರಭಾವ ಬೀರುತ್ತಿರುವುದು ಗಮನಕ್ಕೆ ಬಂದಿದೆ. ಹೀಗಾಗಿ ಸನ್‌ಸ್ಕ್ರೀನ್‌ ಲೋಶನ್‌ ಬಳಕೆ ಇಲ್ಲಿಯೂ ಅನಿವಾರ್ಯವಾಗುತ್ತಿದೆ.

ಸನ್‌ಸ್ಕ್ರೀನ್‌ ಲೋಶನ್‌ಗಳಲ್ಲಿ ಹಲವಾರು ವಿಧಗಳಿವೆ. ದೇಹಕ್ಕೆ ಲೇಪಿಸಿಕೊಳ್ಳುವುದಕ್ಕಾಗಿ, ಮತ್ತು ಮುಖಕ್ಕೆ ಲೇಪಿಸಿಕೊಳ್ಳುವುದಕ್ಕಾಗಿ ಪ್ರತ್ಯೇಕ ಲೋಶನ್‌ಗಳು ಲಭ್ಯವಿದೆ. ಹಲವಾರು ವಿಧದ ಸನ್‌ಸ್ಕ್ರೀನ್‌ಗಳು ಸಿಗುತ್ತದೆ. ಭಾರತದ ಬಿಸಿಲಿನ ತಾಪಮಾನಕ್ಕೆ 30+ ಎಸ್‌ಪಿಎಫ್‌ (ಸನ್‌ ಪ್ರೋಟೆಕ್ಷನ್‌ ಫ್ಯಾಕ್ಟರ್‌ ) ನ ಸನ್‌ಸ್ಕ್ರೀನ್‌ ಸೂಕ್ತ. ಕೊಳ್ಳುವಾಗ ನಿಗಾ ಇರಲಿ. 30+ ಎಸ್‌ಪಿಎಫ್‌ ನ ಸನ್‌ಸ್ಕ್ರೀನ್‌ ಲೋಶನ್‌ನ್ನೇ ಖರೀದಿಸಿ, ಮಕ್ಕಳಿಗಾಗಿಯೇ ಪ್ರತ್ಯೇಕ ಸನ್‌ಸ್ಕ್ರೀನ್‌ ಬಳಸಿ ಎಂಬುದು ತಜ್ಞರು ಸಲಹೆ.
ಸನ್‌ಸ್ಕ್ರೀನ್ ಬಳಸಲು ಇಷ್ಟಪಡದವರು ಕನಿಷ್ಠ ಚರ್ಮಕ್ಕೆ ಕಠೋರ ಬಿಸಿಲು ತಗುಲದಂತೆಯಾದರೂ ನೋಡಿಕೊಳ್ಳಿ. ಬಿಸಿಲಿನಲ್ಲಿ ಹೋಗುವಾಗ ಪೂರ್ತಿ ಚರ್ಮ ಮುಚ್ಚುವಂತೆ ವಸ್ತ್ರ ಧರಿಸಿ. ಮುಖಕ್ಕೆ ಬಿಸಿಲು ತಾಗದಂತೆ ಹ್ಯಾಟ್‌ ಹಾಕಿ, ಸ್ಟಾಲ್‌ ಉಪಯೋಗಿಸಿ, ಬಿಸಿಲಿನಲ್ಲಿ ಚಲಿಸುವಾಗ ಕೊಡೆ ಬಳಸಿ ಸೂರ್ಯನ ಪ್ರಖರ ಬಿಸಿಲಿನಿಂದ ಚರ್ಮವನ್ನು ರಕ್ಷಿಸಿಕೊಳ್ಳಿ, ಬಿಸಿಲಿನಲ್ಲಿ ಹೋಗಲೇಬೇಕಾದ ಅನಿವಾರ್ಯತೆ ಇದ್ದರೆ, ಪ್ರತಿ 2 ಗಂಟೆಗಳಿಗೊಮ್ಮೆ ಸನ್‌ಸ್ಕ್ರೀನ್‌ ಲೋಶನ್‌ ಚರ್ಮಗಳಿಗೆ ಹಚ್ಚಿ. ಮುಂಬರುವ ಬೇಸಿಗೆಗಾಗಿ ಸುರಕ್ಷತಾ ಕ್ರಮ ಕೈಗೊಂಡು, ಚರ್ಮವನ್ನು ರಕ್ಷಿಸಿಕೊಳ್ಳಿ.

 

Author : ಅಮೃತಾ ಹೆಗಡೆ

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited