Untitled Document
Sign Up | Login    
ಸಾವಿನ ನಂತರ ಮುಂದೇನು?

ಜೀವರಾಶಿಯ ಕಲಾವಿದೆ ಜೆ ರಿಮ್ ಲೀ

ಕೊನೆಯುಸಿರು ಎಳೆದ ಬಳಿಕ ಈ ಜೀವ ಜಗತ್ತು ಹೇಗಿರಬಹುದು ? ಅಂತ್ಯಕ್ರಿಯೆ ಸಂದರ್ಭದಲ್ಲಿ, ಮೃತ ವ್ಯಕ್ತಿಯ ಗುಣಗಾನ ಮಾಡುವ ಗೆಳೆಯರು, ಬಂಧುಗಳು, ಪೀಡೆ ತೊಲಗಿತು ಎಂದು ಶಪಿಸುವ ಶತ್ರುಗಳು.. ಹೀಗೆ ಲೋಕವೇ ವಿಚಿತ್ರ.. ಇತ್ತೀಚಿನ ದಿನಗಳಲ್ಲಂತೂ ನೇತ್ರ ದಾನ, ಶರೀರದಾನ ಮಾಡುವ ಹೊಸ ಸಂಪ್ರದಾಯ ಮಹಾನಗರಗಳಲ್ಲಿ ಶುರುವಾಗಿದೆ. ಅಂತ್ಯಕ್ರಿಯೆ ನೆಪಮಾತ್ರಕ್ಕೆ..

ಒಂದಂತೂ ಖಾತ್ರಿ.. ಸಾವಿನ ಬಳಿಕ ನಡೆಯುವ ಸಂಸ್ಕಾರದ ಸಂಪ್ರದಾಯದಲ್ಲಿ ಕೂಡಾ ಬದಲಾವಣೆ ಆಗುತ್ತಿದೆ. ಅದು ನಮ್ಮ ದೇಶದಲ್ಲಿ ಮಾತ್ರ ಎಂದು ಭಾವಿಸಬೇಕಾಗಿಲ್ಲ. ವಿದೇಶದಲ್ಲಿ ಕೂಡಾ ಮಹತ್ತರವಾದ ಬದಲಾವಣೆ ಆಗುತ್ತಿದೆ. ಪರಿಸರ ಉಳಿಸಿ ಎಂಬ ಕೂಗು ನಮ್ಮ ದೇಶದಲ್ಲಿ ಕೇಳುತ್ತಿದ್ದರೂ, ಅಂತ್ಯ ಸಂಸ್ಕಾರದ ತನಕ ಅದು ವ್ಯಾಪಿಸಿಲ್ಲ. ಆದರೆ, ವ್ಯಾಪಿಸುವ ದಿನಗಳು ದೂರ ಇಲ್ಲ ಎಂದೇ ಹೇಳಬಹುದು.. ಸತ್ತ ಬಳಿಕವೂ ಪರಿಸರ ಪ್ರೇಮಿಯಾಗಿ.. ನೀವು ಈಗಿನ ಟ್ರೆಂಡ್‌ಗೆ ತಕ್ಕಂತೆ, ನಿಮ್ಮ ಸಾವಿನ ನಂತರವೂ ಪರಿಸರ ಪ್ರೇಮಿ ಎಂದು ಹೆಗ್ಗಳಿಕೆ ಪಡೆಯಬಯಸುತ್ತೀರಾ..

ಹಾಗಿದ್ದರೆ ಜೀವರಾಶಿಯ ಕಲಾವಿದೆ ಜೆ ರಿಮ್ ಲೀ ನಿಮಗೊಂದು ದಾರಿ ತೋರಿಸಬಹುದು.. ಆಕೆ ತೋರುತ್ತಿರುವ ದಾರಿ ಅಚ್ಚರಿ ಮೂಡಿಸುತ್ತದೆ. ಮಾತ್ರವಲ್ಲದೇ, ಜಾಗೃತಿ ಮೂಡಿಸುವ ಅಭಿಯಾನವಾಗಿ ರೂಪುಗೊಂಡಿದೆ. ಪರಿಸರದ ಕುರಿತ ಕಾಳಜಿ, ಗ್ರೀನ್ ಮೂವ್‌ಮೆಂಟ್ ಅಥವಾ ಹಸಿರು ಚಳವಳಿ ಹಿನ್ನೆಲೆಯಲ್ಲಿ ಇದು ರೂಪುಗೊಂಡಿದೆ. ಹೆಚ್ಚು ಕಡಿಮೆ ಮಣ್ಣಲ್ಲಿ ಹೂತು ಹಾಕುವ ವಿಧಾನವೇ ಆಗಿದ್ದರೂ, ಶವ ಬಹಬೇಗ ಮಣ್ಣಿಲ್ಲಿ ಮಣ್ಣಾಗುವುದಕ್ಕೆ ಬೇಕಾದ ಅಂಶಗಳನ್ನು ಒಳಗೊಂಡ ಪ್ರಯೋಗ ಇದು.

ಇನ್‌ಫಿನಿಟಿ ಮಶ್ರೂಮ್ ಕೆಲಸ ಮಾಡುವುದು ಹೀಗೆ...
ಎಡಿನ್‌ಬರ್ಗ್‌ನಲ್ಲಿ ಜುಲೈ ೨೦೧೧ರಲ್ಲಿ ನಡೆದ ಟಿಇಡಿ ಗ್ಲೋಬಲ್ ಕಾನ್ಫರೆನ್ಸ್‌ನಲ್ಲಿ ಈ ಜಾಗೃತಿ ಅಭಿಯಾನ ಪಾಶ್ಚಾತ್ಯ ರಾಷ್ಟ್ರಗಳ ಗಮನ ಸೆಳೆತು. ಪರಿಸರ ಸ್ನೇಹಿ ಅಂತ್ಯ ಸಂಸ್ಕಾರ ವಿಧಾನ ಅಳವಡಿಸಿಕೊಳ್ಳಲು ಡಿಕಾಂಪಿಕಲ್ಚರ್ ಸೊಸೈಟಿ ಕೂಡಾ ರೂಪುಗೊಂಡಿತು. ಇಷ್ಟಕ್ಕೂ ಟಿಇಡಿ ಗ್ಲೋಬಲ್ ಕಾನ್ಫರೆನ್ಸ್‌ನಲ್ಲಿ ಅಂಥದ್ದೇನಾತು ಎಂಬ ಕುತೂಹಲವೇ ? ಜಗತ್ತು ಸ್ಪರ್ಧಾತ್ಮಕವಾಗಿ ಮುಂದುವರಿಯುತ್ತಿರಬೇಕಾದರೆ, ಪರಿಸರ ಕಾಳಜಿ ಕುರಿತ ಜಾಗೃತಿ ಕೂಡಾ ಟ್ರೆಂಡ್ ಆಗಿ ಪರಿಣಮಿಸಿದೆ. ಭೋಗ ಜಗತ್ತಿನಲ್ಲಿ ಮನುಷ್ಯ ತನ್ನ ಜೀವಿತಾವಧಿಯ ಅಂತ್ಯದವರೆಗೆ ಚಿಂತಿಸಿ ಪರಿಸರ ಕಾಳಜಿ ತೋರಿಸಿದರೆ, ಕಲಾವಿದೆ ಜೆ ರಿಮ್ ಲೀ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಸಾವಿನ ನಂತರದ ಬದುಕಿನ ಬಗ್ಗೆ ಚಿಂತಿಸಿದ್ದು ಮಾತ್ರವಲ್ಲದೇ ಅದನ್ನು ಕಾರ್ಯ ರೂಪಕ್ಕೆ ತರಲು ಪ್ರಯತ್ನಿಸುತ್ತಿರುವುದು ವಿಶೇಷ.

ಅಂಥದ್ದೇನು ಮಾಡಿದ್ದಾರೆ ಎಂಬ ಪ್ರಶ್ನೆ ಕಾಡುತ್ತಿರಬಹುದು. ಅದನ್ನು ತಿಳಿಯುವುದಕ್ಕೆ ಮೊದಲು ಒಂದಿಷ್ಟು ವಿಷಯಗಳನ್ನು ಹೇಳಬೇಕಿದೆ. ಅಣಬೆ ನೋಡದವರು ಅಥವಾ ಅಣಬೆ ಬಗ್ಗೆ ಕೇಳದವರೇ ಇಲ್ಲ. ಅಣಬೆ ಮತ್ತು ಸಾವಿಗೆ ಎತ್ತಣಿಂದೆತ್ತ ಸಂಬಂಧ ಎಂದು ಹುಬ್ಬೇರಿಸಬೇಡಿ.. ಇದು ಅಂತಿಂಥ ಅಣಬೆ ಅಥವಾ ಫಂಗೈ ಅಲ್ಲ.. “ಇನ್ಫಿನಿಟಿ ಮಶ್ರೂಮ್” ಎಂದೇ ಗುರುತಿಸಲಾಗಿದೆ. ಈ ಇನ್ಫಿನಿಟಿ ಮಶ್ರೂಮ್ ಅನ್ನು ಬಳಸಿ ಈಕೆ ಒಂದು ಹೊಸ ಉಡುಪು ತಯಾರಿಸಿದ್ದಾರೆ. ಇದಕ್ಕೆ ಇನ್ಫಿನಿಟಿ ಮಶ್ರೂಮ್ ಡೆತ್ ಸ್ಯೂಟ್ ಅಂತಾರೆ. ಮಶ್ರೂಮ್ ಡೆತ್ ಸ್ಯೂಟ್‌ನಲ್ಲಿ ಜೆ ರಿಮ್ ಲೀ.. ಇನ್ಫಿನಿಟಿ ಬರಿಯಲ್ ಪ್ರಾಜೆಕ್ಟ್.. ಸದ್ಯ ಈ ಯೋಜನೆ ಕಲಾವಿದೆ ಜೆ ರಿಮ್ ಲೀ ಅವರ ಧ್ಯೇಯ..

ಈಗಾಗಲೇ ಹೇಳಿರುವಂತೆ ಇನ್‌ಫಿನಿಟಿ ಮಶ್ರೂಮ್ ಎಂಬುದು ವಿಶಿಷ್ಟ ಪ್ರಬೇಧಕ್ಕೆ ಸೇರಿದ ಫಂಗೈ. ಮಾನವ ಶರೀರವನ್ನು ಕೊಳೆತು ಹೋಗುವಂತೆ ಮಾಡಲು ಈ ಫಂಗೈಯನ್ನು ರೂಪುಗೊಳಿಸಲಾಗಿದೆ. ಲೀ ಸ್ವತಃ ತಮ್ಮ ಶರೀರದ ಜೀವಕೋಶ, ಚರ್ಮ, ಕೂದಲು, ಉಗುರು, ರಕ್ತ ಎಲುಬು, ಕೊಬ್ಬು, ಕಣ್ಣೀರು, ಮೂತ್ರ ಮೊದಲಾದವುಗಳನ್ನು ಮಣ್ಣಿನ ಜೊತೆ ಯಾವುದೇ ಹಾನಿಕಾರಕ ಅಂಶಗಳಿಲ್ಲದಂತೆ ಬೆರೆಸಲು ಇನ್‌ಫಿನಿಟಿ ಫಂಗೈಗೆ ತರಬೇತಿ ನೀಡುತ್ತಿದ್ದಾರೆ. ಇಂತಹ ಇನ್‌ಫಿನಿಟಿ ಮಶ್ರೂಮ್ ಅನ್ನು ಬೆಳೆಸುವ ಪ್ರಕ್ರಿಯೆಗೆ ಡಿಕಾಂಪಿಕಲ್ಚರ್ ಅನ್ನುತ್ತಾರೆ.
ಇದು ಎಂಟಮಾಲಜಿಸ್ಟ್ ತಿಮೋತಿ ಮೈಲ್ಸ್ ಅವರ ಕಾನ್ಸೆಪ್ಟ್. ಈ ಪ್ರಕ್ರಿಯೆ ಸಾವು ಮತ್ತು ಕೊಳೆಯುವಿಕೆಗೆ ಬೇಕಾದ ವೈಯಕ್ತಿಕ ಅಥವಾ ಖಾಸಗಿ ಪಾಲ್ಗೊಳ್ಳುವಿಕೆಯನ್ನು ಈ ಉಡುಪಿನ ಜೊತೆಗೆ ಪರ್ಯಾಯವಾಗಿ ಶವ ಸಂರಕ್ಷಕ ಸ್ರಾವಕ, ದ್ರವರೂಪದ ಅಣಬೆ ಬೀಜ, ಡಿಕಾಂಪಿಕಲ್ಚರ್ ಮೇಕಪ್ ಒಳಗೊಂಡಿದೆ. ಮೇಕಪ್‌ನಲ್ಲಿ ಎರಡು ಭಾಗವಿದ್ದು, ಒಂದು ಒಣ ಖನಿಜ ಮಿಶ್ರಣಗಳಿಂದ ಕೂಡಿದ ಮೇಕಪ್, ಇನ್ನೊಂದು ಪ್ರತ್ಯೇಕ ದ್ರವರೂಪದ ಮಾಧ್ಯಮ. ಈ ಎರಡರ ಮಿಶ್ರಣವನ್ನು ಶರೀರದ ಮೇಲೆ ಲೇಪ ಮಾಡಿದಾಗ, ಪಾರ್ಥೀವ ಶರೀರವನ್ನು ಮಣ್ಣಿನ ಜೊತೆ ಬೆರೆಸುವ ಕೆಲಸಕ್ಕೆ ಅಣಬೆಗಳು ತೊಡಗುತ್ತವೆ. ಹಾಗೆ ನೋಡಿದರೆ, ಈ ಅಣಬೆ ಮಾಂಸಾಹಾರಿ ಎನ್ನಲೇ ಬೇಕು. ಇದನ್ನು ಉಪಯೋಗಿಸಿಕೊಂಡು ಡೆತ್ ಸ್ಯೂಟ್ ತಯಾರಿಸಿದ ಕಲಾವಿದೆ, ಸಂಶೋಧಕಿ ಜೆ ರಿಮ್ ಲೀ ಗೆ ಟಿಇಡಿ ಜಾಗತಿ ಸಮ್ಮೇಳನದಲ್ಲಿ ತನ್ನ ಸಂಶೋಧನೆಯನ್ನು ಮಂಡಿಸುವ ಅವಕಾಶ ಅರ್ಹವಾಗಿಯೇ ಪ್ರಾಪ್ತವಾಗಿತ್ತು. ಅದಕ್ಕೆ ತಕ್ಕ ಪ್ರತಿಕ್ರಿಯೆ ಕೂಡಾ ಲಭ್ಯವಾಗಿತ್ತು.
ಇಂತಹ ಆಲೋಚನೆ ಹೇಗೆ ಬಂತು.. ?

ಸಾಂಪ್ರದಾಕ ಅಂತ್ಯಕ್ರಿಯೆ ಬಗ್ಗೆ ಆಸಕ್ತಿ ಇಲ್ಲದ ರಿಮ್ ಲೀ, ಸತ್ತ ನಂತರದ ದೃಶ್ಯಾವಳಿಗಳನ್ನು ನೆನಪಿಸುತ್ತಾರೆ. ಯಾಕೆ ನಾವು ನಮ್ಮ ಶರೀರದಿಂದ ಅಷ್ಟೊಂದು ದೂರ ಸರಿಯುತ್ತೇವೆ ? ಸತ್ತ ನಂತರ ಪಾರ್ಥೀವ ಶರೀರವನ್ನು ಅಥವಾ ಶವಕ್ಕೆ ಎಷ್ಟೊಂದು ಅಲಂಕಾರ, ಕೊಳೆಯದಂತೆ ರಾಸಾಯನಿಕ ಇವೆಲ್ಲ ಅಗತ್ಯ ಇದೆಯೇ ? ಇವೆಲ್ಲ ಹೊರನೋಟಕ್ಕೆ ಮಾತ್ರ ಅಲ್ಲವೇ ? ಇಲ್ಲಿ ಬಳಸುವ ಫಾರ್ಮಾಲ್ಡಿಹೈಡ್‌ನಿಂದ ಉಳಿದವರಿಗೆ ಕ್ಯಾನ್ಸರ್ ಉಂಟಾಗುವ ಸಾಧ್ಯತೆ ಇದೆ. ಅಮೇರಿಕಾ ಸರಕಾರ ಫಾರ್ಮಾಲ್ಡಿಹೈಡ್ ಅನ್ನು ಅಪಾಯಕಾರಿ ಎಂದು ಗುರುತಿಸಿದೆ. ಇವೆಲ್ಲ ಮನಸ್ಸಿನಲ್ಲಿ ಮೂಡಿದ್ದ ಚಿಂತನೆಗೆ ಕಿಚ್ಚು ಹಚ್ಚಿತು. ಪರಿಣಾಮವಾಗಿ ಉತ್ತರವಾಗಿ ಕಣ್ಣೆದುರು ಬಂದ ವಿಚಾರ ಇನ್ಫಿನಿಟಿ ಮಶ್ರೂಮ್. ಸಾವಿನ ಕುರಿತ ಚಿಂತನೆಗೆ ಹೊಸದೊಂದು ದಾರಿಯ ಸಂಕೇತ ಇದು ಎನ್ನಬಹುದು.

ಇನ್ನು ಈ ಎಲ್ಲ ಸಂಶೋಧನೆ ಫಲವಾಗಿ ರೂಪುಗೊಂಡ ಡಿಕಾಂಪಿಕಲ್ಚರ್ ಕಿಟ್ ಬಗ್ಗೆ ಹೇಳುವುದಾದರೆ, ಇದರೊಳಗೆ ಜೈವಿಕ ಅಂಶಗಳು, ವಿಷಮುಕ್ತ ರಾಸಾಯನಿಕಗಳು ಮತ್ತು ಶವ ಕೊಳೆತಾಗ ಉಂಟಾಗವ ವಾಸನೆ ಮತ್ತು ಜೀವಕೋಶಗಳ ನಾಶದ ವೇಳೆ ಉಂಟಾಗುವ ವಾಸನೆ ನಿವಾರಣೋಪಾಯಗಳು ಇರುತ್ತವೆ. ಈ ಕಿಟ್ ಇವೆಲ್ಲವೂ ಸೇರಿದ ಕಾಕ್‌ಟೈಲ್ ಮಿಶ್ರಣದಂತಿದ್ದು, ಕ್ಯಾಪ್ಸೂಲ್ ಮಾದರಿಯಲ್ಲಿದೆ. ಒಟ್ಟಾರೆ ಹೇಳಬೇಕು ಅಂದರೆ, ಈ ಕಿಟ್ ಭವಿಷ್ಯದ ಪರಿಸರ ಸ್ನೇಹಿ ಅಂತ್ಯಕ್ರಿಯೆಯ ಉಡುಪು ಅರ್ಥಾತ್ ಫ್ಯೂಚರ್ ಬರಿಯಲ್ ಸ್ಯೂಟ್ ಎಂದು ಹೇಳಲು ಯಾವುದೇ ಅಡ್ಡಿ ಇಲ್ಲ..

 

Author : ಅವತಾರ್‌ 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited