Untitled Document
Sign Up | Login    
ರಾಜಕೀಯ ಪಕ್ಷಗಳಿಗೆ ಕಾರ್ಪೊರೆಟ್ ದೇಣಿಗೆ ಬಹಿರಂಗವಾಗಲಿದೆಯೇ?

ಸಾಂದರ್ಭಿಕ ಚಿತ್ರ

ರಾಜಕೀಯದ ವ್ಯವಹಾರ ಮತ್ತು ವ್ಯವಹಾರದ ರಾಜಕೀಯ ಇವೆರಡೂ ಕೂಡಾ ದೇಶದ ಆರ್ಥಿಕತೆಯನ್ನು ಸಂಪೂರ್ಣವಾಗಿ ಹಾಳುಗೆಡಹಬಲ್ಲವು. ಹೀಗಾಗಿ ರಾಜಕೀಯ ಮತ್ತು ವ್ಯವಹಾರ ಇವೆರಡನ್ನೂ ಪ್ರತ್ಯೇಕಿಸುವ ಕೆಲಸವನ್ನು ಕಾನೂನು ಅನುಷ್ಠಾನಗೊಳಿಸುವವರು ಮಾಡಬೇಕಿದೆ. ಇದಕ್ಕೆಂದೇ ಹೊಸ ಕಂಪನೀಸ್ ಆಕ್ಟ್ 2013 ಜಾರಿ ಹಂತದಲ್ಲಿದೆ. ಈ ಕಾನೂನು ಎಲ್ಲ ವ್ಯವಹಾರಗಳನ್ನೂ ಬಹಳ ಪಾರದರ್ಶಕವಾಗಿರಿಸುವಂಥದ್ದಾಗಿದೆ. ಇಂತಹ ಪ್ರಕ್ರಿಯೆ ಭ್ರಷ್ಟಾಚಾರಕ್ಕೆಬಲಿಯಾಗಬಾರದು ಎಂಬುದು ಎಲ್ಲರ ಆಶಯ.

ಆದರೆ ದುರದೃಷ್ಟವಶಾತ್ ಈ ಕಾನೂನಿನ ಕೆಲವು ಅಂಶಗಳನ್ನು ಕಾನ್ಫೆಡರೇಷನ್‌ ಆಫ್‌ ಇಂಡಿಯನ್‌ ಇಂಡಸ್ಟ್ರಿ(ಸಿಐಐ) ವಿರೋಧಿಸತೊಡಗಿದೆ. ಇತ್ತೀಚೆಗೆ ಈ ಕುರಿತು ಕೇಂದ್ರ ಕಾರ್ಪೊರೆಟ್‌ ಸಚಿವಾಲಯಕ್ಕೂ ಪತ್ರ ಬರೆದಿದೆ.
ಅನೇಕ ಕಾರ್ಪೊರೆಟ್‌ ಸಂಸ್ಥೆಗಳಿಗೆ ತಾವು ರಾಜಕೀಯ ಪಕ್ಷಗಳಿಗೆ ಎಷ್ಟೆಷ್ಟು ದೇಣಿಗೆ ನೀಡುತ್ತಿದ್ದೇವೆ ಎಂಬ ಅಂಶ ಬಹಿರಂಗಗೊಳ್ಳುವುದು ಬೇಕಿಲ್ಲ. ಹೀಗಾಗಿ ಅಂಥ ಸಂಸ್ಥೆಗಳೆಲ್ಲ ಸರ್ಕಾರದ ಮಟ್ಟದಲ್ಲಿ ಕಾರ್ಪೊರೆಟ್‌ ವಲಯದ ಅತ್ಯಂತ ಪ್ರಭಾವಿ ಸಂಘಟನೆಯಾಗಿರುವ ಸಿಐಐ ಮೊರೆ ಹೋಗಿವೆ. ಇದರ ಬೆನ್ನಲ್ಲೇ ಸಿಐಐ ಈ ಪತ್ರ ಬರೆದಿದೆ. ಸಿಐಐನಲ್ಲಿ 7000 ನೇರ ಸದಸ್ಯರು ಮತ್ತು 90000 ಸಹಸದಸ್ಯರಿದ್ದಾರೆ. ಹೀಗಾಗಿ ಸಿಸಿಐ ಪತ್ರ ಬರೆದ ಕೂಡಲೇ ಸರ್ಕಾರ ಕೂಡಾ ಅದನ್ನು ವಿಶೇಷ ರೀತಿಯಲ್ಲೇ ಪರಿಗಣಿಸುತ್ತದೆ. ಸರ್ಕಾರಕ್ಕೆ ಪತ್ರ ಬರೆದಿರುವ ವಿಚಾರವನ್ನು ಸಿಐಐನ ಡೈರೆಕ್ಟರ್‌ ಜನರಲ್‌ ಚಂದ್ರಜಿತ್‌ ಬ್ಯಾನರ್ಜಿ ಮಾಧ್ಯಮಗಳ ಜತೆ ಹಂಚಿಕೊಂಡಿದ್ಧಾರೆ.

ಕಂಪನಿಗಳ ಕಾಯ್ದೆಯ ಸೆಕ್ಷನ್ 182(3) ಹೇಳುವ ಪ್ರಕಾರ, "ಪ್ರತಿಯೊಂದು ಕಂಪನಿ ಯಾವುದೇ ರಾಜಕೀಯ ಪಕ್ಷಕ್ಕೆ ದೇಣಿಗೆ ನೀಡಿದಲ್ಲಿ, ಅದು ಎಷ್ಟು ಮೊತ್ತದ ದೇಣಿಗೆ ಯಾವ ಪಕ್ಷಕ್ಕೆ ನೀಡಿದೆ ಎಂಬ ವಿಚಾರವನ್ನು ಅದರ ಲಾಭ ನಷ್ಟದ ವರದಿಯಲ್ಲಿ ಬಹಿರಂಗಪಡಿಸಬೇಕು''.

ಒಂದೊಮ್ಮೆ ಈ ಕಾನೂನು ಸಮರ್ಪಕವಾಗಿ ಅನುಷ್ಠಾನಕ್ಕೆ ಬಂದಲ್ಲಿ ಚುನಾವಣೆ ಬಳಿಕ ಮಹತ್ವದ ರಹಸ್ಯಗಳೆಲ್ಲ ತ್ಸುನಾಮಿಯಂತೆ ಹೊರಬೀಳಲಿದೆ. ಯಾವ್ಯಾವ ಕಾರ್ಪೊರೆಟ್‌ ಸಂಸ್ಥೆ ಯಾವ್ಯಾವ ಪಕ್ಷದ ಜತೆ ಕೈ ಜೋಡಿಸಿಕೊಂಡಿದೆ. ಎಷ್ಟೆಷ್ಟು ಹಣ ಲಂಚದ ರೂಪದಲ್ಲಿ ನೀಡಿವೆ ಎಂಬಿತ್ಯಾದಿ ವಿವರಗಳೆಲ್ಲ ಬಹಿರಂಗವಾಗಲಿವೆ. ಹೀಗಾದಲ್ಲಿ, ಚುನಾವಣೆಯಲ್ಲಿ ಸೋತ ಪಕ್ಷ ಇಂತಹ ರಹಸ್ಯಗಳನ್ನು ಖಚಿತವಾಗಿ ದಾಖಲೆ ಸಹಿತ ಬಹಿರಂಗಪಡಿಸಲಿವೆ.
ಈ ಹಿಂದಿನ ಕಂಪನಿಗಳ ಕಾಯ್ದೆಯಲ್ಲಿ ವೈಯಕ್ತಿಕ ದೇಣಿಗೆ ನೀಡಿದವರ ಹೆಸರುಗಳನ್ನಷ್ಟೇ ಬಹಿರಂಗಪಡಿಸಲು ಹೇಳಲಾಗಿತ್ತು. ಆದರೆ, ಹೊಸ ಕಾಯ್ದೆಯಲ್ಲಿ ರಾಜಕೀಯ ಪಕ್ಷಗಳ ಹೆಸರು ನಮೂದಿಸಬೇಕಾಗಿದೆ. ನಿಜವಾಗಿ ಇಂತಹ ದೇಣಿಗೆ ಕಾರ್ಪೊರೆಟ್ ಕ್ಷೇತ್ರದಲ್ಲಿ ಕಂಪನಿಗಳ ಬೆನ್ನಲೆಬು.
ಕಳೆದ ವರ್ಷ ಡೆಮಾಕ್ರಟಿಕ್‌ ರಿಫಾರ್ಮ್ಸ್‌ ಮತ್ತು ನ್ಯಾಷನಲ್‌ ಎಲೆಕ್ಷನ್ ವಾಚ್‌ ಸಂಸ್ಥೇ ಅಧ್ಯಯನ ನಡೆಸಿ ಕಾಂಗ್ರೆಸ್‌(ಐ), ಬಿಜೆಪಿ, ಬಿಎಸ್‌ಪಿ, ಎನ್‌ಸಿಪಿ, ಸಿಪಿಐ ಮತ್ತು ಸಿಪಿಐ(ಎಂ) ಪಕ್ಷಗಳಿಗೆ 2004-05ರಿಂದ 2011-12 ರ ಅವಧಿಯಲ್ಲಿ ಎಷ್ಟು ದೇಣಿಗೆ ಲಭಿಸಿದೆ ಎಂಬ ವಿಷಯ ಬಹಿರಂಗಪಡಿಸಿದೆ. ವಿಶೇಷ ಎಂದರೆ ಈ ಅಂಕಿ ಅಂಶಗಳನ್ನು ನೋಡಿದರೆ, ರಾಜಕೀಯಕ್ಕೂ ಕಾರ್ಪೊರೆಟ್‌ ವಲಯಕ್ಕೂ ಇರುವ ಅಕ್ರಮ ಸಂಬಂಧದ ಅಗಾಧತೆ ಅರಿವುಂಟಾಗುತ್ತದೆ. ಬಹುತೇಕ ರಾಜಕೀಯ ಪಕ್ಷಗಳ ದೇಣಿಗೆ ಮೂಲ "ಗುಪ್ತ''ವಾಗಿದ್ದು, ಗೊತ್ತಿಲ್ಲದಿರುವ ಮೂಲ ಎಂದು ನಮೂದಿಸಲ್ಪಟ್ಟಿದೆ. ಗೊತ್ತಿರುವ ಮೂಲದಿಂದ ಈ ಅವಧಿಯಲ್ಲಿ ಈ ಆರು ರಾಜಕೀಯ ಪಕ್ಷಗಳು 4000 ಕೋಟಿ ರೂ.ಗಳಿಗೂ ಅಧಿಕ ದೇಣಿಗೆ ಪಡೆದಿವೆ. ಈ ಪಕ್ಷಗಳು ಸಲ್ಲಿಸಿದ ಆದಾಯ ತೆರಿಗೆ ಪತ್ರದಲ್ಲಿ ಈ ಮಾಹಿತಿ ಬಹಿರಂಗವಾಗಿದೆ.

ಕಾಂಗ್ರೆಸ್‌ ಪಕ್ಷಕ್ಕೆ ಗುಪ್ತ ಮೂಲಗಳಿಂದ 2008 ಕೋಟಿ ರೂ., ಬಿಎಸ್‌ಪಿಗೆ 1226 ಕೋಟಿ ರೂ., ಬಿಜೆಪಿಗೆ 852 ಕೋಟಿ ರೂ., ಸಿಪಿಐಗೆ 335 ಕೋಟಿ ರೂ., ಎಸ್‌ಪಿ 200 ಕೋಟಿ ರೂ., ಎ‌ನ್‌ಸಿಪಿ 140 ಕೋಟಿ ರೂ. ದೇಣಿಗೆ ಪಡೆದುಕೊಂಡಿವೆ. ಇವುಗಳ ಅಧ್ಯಯನ ನಡೆಸಿದ ವೇಳೆ, ದೇಶದ ಟಾಪ್‌ 50 ಕಂಪನಿಗಳ ಪೈಕಿ ಜಿಂದಾಲ್ ಗ್ರೂಪ್‌, ಅದಾನಿ ಗ್ರೂಪ್‌, ಶ್ಯಾಮ್‌ ಗ್ರೂಪ್‌, ಎಸ್ಸಾರ್‍ ಗ್ರೂಪ್‌, ಎಸಿಸಿ, ಅಂಬುಜಾ ಸಿಮೆಂಟ್ಸ್‌, ವೇದಾಂತ ಗ್ರೂಪ್‌ ಟೊರೆಂಟ್‌ ಪವರ್‌ ಸೇರಿದಂತೆ 26 ಕಂಪನಿಗಳು ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡಿರುವುದು ಬಹಿರಂಗಗೊಂಡಿವೆ.

ಎಎಪಿಯಿಂದ ಹೊಸ ಟ್ರೆಂಡ್‌
ಕಾನೂನು ಜಾರಿಗೆ ಮೊದಲೇ ಅರವಿಂದ ಕೇಜ್ರಿವಾಲರ ಆಮ್‌ ಆದ್ಮಿ ಪಕ್ಷ ರಾಜಕೀಯ ರಂಗದಲ್ಲಿ ಹೊಸದೊಂದು ಟ್ರೆಂಡ್‌ ಸೃಷ್ಟಿ ಮಾಡಿದೆ. ತಾನು ಪಡೆಯುವ ಪ್ರತಿಯೊಂದು ದೇಣಿಗೆ ಯಾರು ನೀಡಿದ್ದು ಎಂಬಿತ್ಯಾದಿ ವಿವರಗಳನ್ನು ತನ್ನ ಅಂತರ್ಜಾಲ ತಾಣದಲ್ಲಿ ಪ್ರಕಟಿಸಿದೆ. ಪ್ರತಿಯೊಂದು ಕೂಡಾ ಇಲ್ಲಿ ಪಾರದರ್ಶಕ. ಇದೇ ಟ್ರೆಂಡ್‌ ಉಳಿದ ಪಕ್ಷಗಳೂ ಅನುಸರಿಸಿದರೆ..?!

 

Author : ಸುಧನ್ವ 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited