Untitled Document
Sign Up | Login    
ಧಾರ್ಮಿಕ ಕಾರಣಕ್ಕಾಗಿ ರಿಲಯನ್ಸ್‌ಗೆ ‘ನಾನ್‌ವೆಜ್‌ ಬಿಸಿನೆಸ್‌’ ಬೇಡ್ವಂತೆ!

ರಿಲಯನ್ಸ್‌ ಡಿಲೈಟ್‌

ಆಶ್ಚರ್ಯಕರ ಬೆಳವಣಿಗೆಯೊಂದರಲ್ಲಿ ರಿಲಯನ್ಸ್ ರಿಟೇಲ್ ಮಾಲೀಕ ಮುಖೇಶ್ ಅಂಬಾನಿ "ನಾನ್‌ವೆಜ್ ಬಿಸಿನೆಸ್" ಸ್ಥಗಿತಗೊಳಿಸುವಂತೆ ಸೂಚಿಸಿದ್ದಾರೆ ಹೀಗಾಗಿ ಐದು ವರ್ಷಗಳ ಹಿಂದಷ್ಟೇ ಆರಂಭವಾಗಿದ್ದ ರಿಲಯನ್ಸ್ ಡಿಲೈಟ್ ವಹಿವಾಟು ಸ್ಥಗಿತಗೊಳಿಸಿದೆ ಎಂಬ ವರದಿ ಮಾಧ್ಯಮಗಳಲ್ಲಿ ಪ್ರಸಾರವಾಗಿದೆ.

ಸುಮಾರು 40 ಸಾವಿರ ಕೋಟಿ ರೂಪಾಯಿಗಳ ವಹಿವಾಟು ಇರುವ ಪೌಲ್ಟ್ರಿ ಇಂಡಸ್ಟ್ರಿಯಲ್ಲಿ "ರಿಲಯನ್ಸ್ ಡಿಲೈಟ್‌" ಮೂಲಕ ಚಿಕನ್‌, ಮಟನ್‌, ಮೀನು ಮೊದಲಾದ ನಾನ್‌ವೆಜ್‌ ಆಹಾರ ವಸ್ತುಗಳನ್ನು ಮಾರಾಟ ಮಾಡಲಾಗುತ್ತಿತ್ತು. ಈ ಕಂಪನಿ ರಿಲಯನ್ಸ್‌ ರಿಟೇಲ್ ಚೈನ್ ಅಧೀನದಲ್ಲಿದೆ. ಮಾಧ್ಯಮ ವರದಿಗಳ ಪ್ರಕಾರ, ರಿಲಯನ್ಸ್ ರಿಟೇಲ್ ಈಗಾಗಲೇ ಡಿಲೈಟ್‌ನ ಎಲ್ಲ ಮ್ಯಾನೇಜರ್‌ಗಳು ಮತ್ತು ಸಿಬ್ಬಂದಿಗೆ ಕೆಲಸದಿಂದ ತೆಗೆದು ಹಾಕುತ್ತಿರುವ ನೋಟಿಸ್‌ ಕಳುಹಿಸಿದೆ. ಭಾರತದಾದ್ಯಂತ 100 ಕ್ಕೂ ಹೆಚ್ಚು ಡಿಲೈಟ್‌ ಔಟ್‌ಲೆಟ್‌ಗಳಿದ್ದು 150 ಕ್ಕೂ ಹೆಚ್ಚು ಉದ್ಯೋಗಿಗಳಿದ್ದಾರೆ. 2013ನೇ ಹಣಕಾಸು ವರ್ಷದಲ್ಲಿ ಈ ನೂರು ಔಟ್‌ಲೆಟ್‌ಗಳ ಮೂಲಕ 63 ಕೋಟಿ ರೂ.ಗಳ ವಹಿವಾಟು ನಡೆಸಿರುವ ರಿಲಯನ್ಸ್ ಡಿಲೈಟ್‌ 2 ಕೋಟಿ ನಷ್ಟ ಅನುಭವಿಸಿದೆ.

ಧಾರ್ಮಿಕ ಭಾವನೆಗಳೇ ಕಾರಣ
ರಿಲಯನ್ಸ್ ಡಿಲೈಟ್‌ ಮುಚ್ಚುಗಡೆಯಲ್ಲಿ ಧಾರ್ಮಿಕ ಭಾವನೆ ಮಹತ್ವದ ಪಾತ್ರವಹಿಸಿದೆ. ರಿಲಯನ್ಸ್‌ನ ವಾರ್ಷಿಕ ಮಹಾಸಭೆಯಲ್ಲಿ ಅದರ ಪಾಲುದಾರರು, ಷೇರುದಾರರು ಬಹುಪಾಲು ಸಸ್ಯಾಹಾರಿಗಳೇ ಇದ್ದು, ರಿಲಯನ್ಸ್ ಫ್ರೆಶ್‌ ಜತೆಗೆ ಇರುವ ರಿಲಯನ್ಸ್‌ ಡಿಲೈಟ್‌ನ ವಹಿವಾಟನ್ನು ವಿರೋಧಿಸಿದ್ದರು. ರಿಲಯನ್ಸ್ ಆಡಳಿತ ಮಂಡಳಿಯಲ್ಲಿ ಬಹುಪಾಲು ಗುಜರಾತಿಗಳು ಮತ್ತು ಜೈನರಿದ್ದು ಅವರೆಲ್ಲರೂ ಕಟ್ಟಾ ಸಸ್ಯಾಹಾರಿಗಳು. ಇವರ ಒತ್ತಡದಿಂದಾಗಿಯೇ ಮುಖೇಶ್ ಅಂಬಾನಿ ರಿಲಯನ್ಸ್‌ ಡಿಲೈಟ್‌ ಮುಚ್ಚುವ ನಿರ್ಧಾರ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ.

ಪೌಲ್ಟ್ರಿ ಇಂಡಸ್ಟ್ರಿ ವಹಿವಾಟು 40 ಸಾವಿರ ಕೋಟಿ

ಭಾರತದ ಪೌಲ್ಟ್ರಿ ಇಂಡಸ್ಟ್ರಿಯ ವಾರ್ಷಿಕ ವಹಿವಾಟು 40000 ಸಾವಿರ ಕೋಟಿಯಾಗಿದ್ದು, 2007-11ರ ಅವಧಿಯಲ್ಲಿ ವಾರ್ಷಿಕವಾಗಿ ಶೇಕಡ 8ರ ದರದಲ್ಲಿ ಬೆಳವಣಿಗೆ ಕಂಡಿದೆ. ಚಿಕನ್ ಮಾರಾಟ ಶೇಕಡ 7.7, ಮಟನ್‌ ಶೇಕಡ 4.9, ಹಂದಿಮಾಂಸದ ವಹಿವಾಟು ಶೇಕಡ 2.8ರ ದರದಲ್ಲಿ, ಹಿಂದುಗಳು ತಿನ್ನದ "ಬೀಫ್‌" ಮಾರಾಟ ವಹಿವಾಟು ಶೇಕಡ 8.8 ರಷ್ಟು ಏರಿಕೆ ಕಂಡಿದೆ. "ಬೀಫ್" ಬಹುಪಾಲು ಭಾರತದಿಂದ ವಿದೇಶಗಳಿಗೆ ರವಾನಿಸಲ್ಪಡುತ್ತಿದೆ ಎಂಬ ವರದಿಯೂ ಇದೆ. ಇದನ್ನು ಆಧರಿಸಿ ಮೆಕ್‌ಡೊನಾಲ್ಡ್‌, ಕೆಎಫ್‌ಸಿ ಈ ಕ್ಷೇತ್ರವನ್ನಾವರಿಸಿಕೊಳ್ಳುತ್ತಿದೆ. ರಿಲಯನ್ಸ್ ಕೂಡಾ ಇಂಥದ್ದೇ ರೆಸ್ಟೊರಂಟ್‌ಗಳನ್ನು ತೆರೆಯುವ ಇರಾದೆ ಹೊಂದಿತ್ತು. ಆದರೆ, ಸದಸ್ಯರು, ಪಾಲುದಾರರ ವಿರೋಧದ ಕಾರಣದಿಂದ ಈ ಎಲ್ಲ ಯೋಜನೆಗಳೂ ಈಗ ಹಳ್ಳಹಿಡಿದಿವೆ.

 

Author : ಕುಬೇರ್ 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited