Untitled Document
Sign Up | Login    
ನೀರು ಉತ್ಪಾದಿಸುವ ಬಿಲ್‌ಬೋರ್ಡ್‌!

ಕುಡಿವ ನೀರು ಉತ್ಪಾದಿಸುವ ಬಿಲ್‌ಬೋರ್ಡ್‌

ಗಾಳಿಯಿಂದ ನೀರು ಉತ್ಪಾದನೆ ಸಾಧ್ಯವೇ? ಅದೂ ಜಾಹೀರಾತಿಗೆಂದು ಅಳವಡಿಸಿದ ಬೃಹತ್‌ ಬಿಲ್‌ಬೋರ್ಡ್‌ ಆ ಕೆಲಸ ನಿರ್ವಹಿಸುವುದು ಸಾಧ್ಯವೇ? ಎಂದುಕೊಂಡು ಇದನ್ನು ನೋಡಿದ ಎಲ್ಲರ ಹುಬ್ಬೇರುವುದು ಸಹಜವೇ. ಆದರೆ "ಪೆರು''ವಿನ ಲಿಮಾ ಎಂಬಲ್ಲಿರುವ ಯುನಿವರ್ಸಿಟಿ ಆಫ್‌ ಇಂಜಿನಿಯರಿಂಗ್‌ ಅಂಡ್‌ ಟೆಕ್ನಾಲಜಿ(ಯುಟಿಇಸಿ) ಇದನ್ನು ಮಾಡಿ ತೋರಿಸಿದೆ. ಮಯೋ-ಡ್ರಾಫ್ಟ್‌ ಎಫ್‌ಸಿಬಿ ಎಂಬ ಜಾಹೀರಾತು ಸಂಸ್ಥೆ ಈ ಪ್ರಯೋಗದ ಜತೆ ಕೈ ಜೋಡಿಸಿದೆ.

ಲಿಮಾದಲ್ಲಿ ಹೆಚ್ಚೇನೂ ಮಳೆಯಾಗುತ್ತಿಲ್ಲ. ಆದರೆ, ಅಲ್ಲಿನ ವಾತಾವರಣದಲ್ಲಿ ಗರಿಷ್ಠ ಪ್ರಮಾಣದ ಅಂದರೆ ಶೇಕಡ 98 ರಷ್ಟು ತೇವಾಂಶವಿದೆ. ಅಲ್ಲಿರುವ ಜಲಾಶಯ ಅಥವಾ ಬಾವಿಗಳಲ್ಲಿ ಕಲುಷಿತ ನೀರೇ ಹೆಚ್ಚು. ಅದನ್ನು ಕುಡಿಯಲು ಮತ್ತು ಅಡುಗೆಗೆ ಬಳಸುವುದು ಸಾಧ್ಯವಿಲ್ಲ. ಹೀಗಾಗಿ ಸ್ಥಳೀಯರು ಬಹಳ ಸಂಕಷ್ಟಕ್ಕೆ ಒಳಗಾಗಿದ್ದರು. ಕುಡಿವ ನೀರಿಗಾಗಿ ಪರದಾಡುತ್ತಿದ್ದರು. ಈ ವಿಷಯಕ್ಕೆ ಸಂಬಂಧಪಟ್ಟಂತೆ ಯುಟಿಇಸಿ ನಿರಂತರ ಅಧ್ಯಯನ ನಡೆಸಿದೆ. ಇದರ ಫಲಿತಾಂಶವೇ ಹೀಗೊಂದು ಅಭೂತಪೂರ್ವ ಯೋಜನೆ.

ಕಾರ್ಯನಿರ್ವಹಣೆ ಹೀಗೆ...
ಏನಿದು ಯೋಜನೆ ?

ವಾತಾವರಣದಲ್ಲಿರುವ ತೇವಾಂಶದಿಂದಲೇ ಯಾಕೆ ಕುಡಿವ ನೀರು ಸಂಗ್ರಹಿಸಬಾರದು ಎಂಬ ಆಲೋಚನೆ ಯುಟಿಇಸಿ ವಿಜ್ಞಾನಿಗಳ ಮನದಲ್ಲಿ ಅಂಕುರಿಸಿತು. ಅದಕ್ಕೆ ಬೇಕಾದ ಯೋಜನೆಯನ್ನೂ ಸಿದ್ಧಗೊಳಿಸಿದರು. ಮಯೋ-ಡ್ರಾಫ್ಟ್‌ ಜಾಹೀರಾತು ಸಂಸ್ಥೆ ಒಂದು ಬಿಲ್‌ಬೋರ್ಡನ್ನು ಈ ಪ್ರಯೋಗಕ್ಕಾಗಿ ಒದಗಿಸಿತು.ಆ ಬಿಲ್‌ಬೋರ್ಡ್‌‌ನಲ್ಲಿ ಅಳವಡಿಸಿರುವ ತಂತ್ರಜ್ಞಾನದ ಪರಿಣಾಮ, ಅದು ವಾತಾವರಣದಲ್ಲಿರುವ ತೇವಾಂಶವನ್ನು ಹೀರಿಕೊಂಡು ಅದನ್ನು ಪರಿಶುದ್ದ ನೀರನ್ನಾಗಿ ಪರಿವರ್ತಿಸಿ ಕೊಡುವ ಕೆಲಸ ಮಾಡುತ್ತಿದೆ. ಪ್ರಾಯೋಗಿಕವಾಗಿ ಕಳೆದ ವರ್ಷ ಡಿಸೆಂಬರ್ ತಿಂಗಳಲ್ಲಿ ಪ್ಯಾನ್-ಅಮೆರಿಕ ಹೈವೇಯಲ್ಲಿರುವ ಒಂದು ಜಾಹೀರಾತು ಬಿಲ್‌ಬೋರ್ಡ್‌ ಒಂದರಲ್ಲಿ ಈ ತಂತ್ರಜ್ಞಾನ ಅಳವಡಿಸಲಾಗಿದೆ.
ಕುಡಿವ ನೀರು ಸಂಗ್ರಹಿಸುತ್ತಿರುವ ಸ್ಥಳೀಯರು
ಕಾರ್ಯನಿರ್ವಹಣೆ ಹೇಗೆ?

ತೇವಾಂಶ ಹೀರುವ ಮತ್ತು ಅದನ್ನು ನೀರನ್ನಾಗಿ ಪರಿವರ್ತಿಸುವ ಹಾಗೂ ಅದನ್ನು ಶುದ್ಧೀಕರಿಸುವ ವ್ಯವಸ್ಥೆ(ಏರ್ ಫಿಲ್ಟರ್‍, ಕಂಡೆನ್ಸರ್‌, ಕಾರ್ಬನ್‌ ಫಿಲ್ಟರ್‍ ಮತ್ತು ಕೋಲ್ಡ್ ಟ್ಯಾಂಕ್‌)ಯನ್ನು ಬಿಲ್‌ಬೋರ್ಡ್‌‌ನಲ್ಲಿ ಅಳವಡಿಸಿದ ತಂತ್ರಜ್ಞಾನ ಒಳಗೊಂಡಿದೆ. ವಿದ್ಯುದೀಕರಣಗೊಳಿಸಿದ ಈ ವ್ಯವಸ್ಥೆ ತೇವಯುಕ್ತ ಗಾಳಿಯಲ್ಲಿರುವ ತೇವಾಂಶವನ್ನು ಹೀರಿಕೊಂಡು(ರಿವರ್ಸ್‌ ಓಸ್ಮೋಸಿಸ್‌) ಪರಿಶುದ್ಧ ನೀರನ್ನು ಬಿಲ್‌ಬೋರ್ಡ್‌ನ ತಳಭಾಗದಲ್ಲಿ ಅಳವಡಿಸಿರುವ ನಳಗಳ ಮೂಲಕ ಒದಗಿಸುತ್ತದೆ. ಪ್ರತಿದಿನ 96 ಲೀಟರ್‌ ನೀರನ್ನು ಈ ಬಿಲ್‌ಬೋರ್ಡ್‌ ಸಂಗ್ರಹಿಸಿ ಕೊಡುತ್ತದೆ. ಸ್ಥಳೀಯರಲ್ಲದೆ, ರಸ್ತೆಯಲ್ಲಿ ಸಂಚರಿಸುವವರೂ ಇಲ್ಲಿ ಕುಡಿವ ನೀರು ಸಂಗ್ರಹಿಸುತ್ತಾರೆ. ಈಗಾಗಲೇ ಸುಮಾರು 9500 ಲೀಟರ್‌ ನೀರನ್ನು ಇದು ಉತ್ಪಾದಿಸಿದ್ದು, ಪ್ರಾಯೋಗಿಕ ಹಂತದಲ್ಲಿ ಯಶಸ್ವಿಯಾಗಿದೆ.

 

Author : ಅವತಾರ್‌ 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited