Untitled Document
Sign Up | Login    
'ನೃತ್ಯ ಸಂಶೋಧಕರ ಒಕ್ಕೂಟ' ಎಂಬ ಸಂಶೋಧನಾ ಕೇಂದ್ರ


ನೂಪುರ ಭ್ರಮರಿ ಪ್ರತಿಷ್ಠಾನ ಈಗಾಗಲೇ ನೃತ್ಯ ಕ್ಷೇತ್ರದಲ್ಲಿ ಹೆಸರು ಮಾಡಿರುವ ಸಂಸ್ಥೆ. ಸಮಾನ ಮನಸ್ಕರ ಜೊತೆಗೂಡಿ ಈ ಸಂಸ್ಥೆ, ನೃತ್ಯಸಂಸ್ಕೃತಿಗೆ ಸಂಬಂಧಿಸಿದ ವಸ್ತುನಿಷ್ಠ ಅಧ್ಯಯನ, ಕ್ರಮಬದ್ಧ ಸಂಶೋಧನಾಕ್ರಮ ಮತ್ತು ಅವಕಾಶಗಳಿಗೆ ಒತ್ತು ನೀಡಲು 'ನೃತ್ಯ ಸಂಶೋಧಕರ ಒಕ್ಕೂಟ' ಸ್ಥಾಪಿಸಿದೆ. ಈ ಒಕ್ಕೂಟ ಕೇವಲ ಸಂಶೋಧನೆಗೆ ಮೀಸಲಾದ ಸಂಸ್ಥೆ.  ನಾಲ್ಕು ತಿಂಗಳ ಹಿಂದೆ, ಫೆಬ್ರವರಿ ೨೦ ರಂದು ಬೆಂಗಳೂರಿನ ನಯನ ಸಭಾಂಗಣದಲ್ಲಿ ಈ ಸಂಸ್ಥೆ ವಿದ್ಯುಕ್ತವಾಗಿ ಉದ್ಘಾಟನೆಗೊಂಡಿದೆ. 

ನೃತ್ಯ ಕ್ಷೇತ್ರದಲ್ಲ್ಲಿನ ಸಮಸ್ಯೆಗಳು, ಸಂಶೋಧನಾ ಕ್ಷೇತ್ರದ ಸವಾಲುಗಳು, ಜವಾಬ್ದಾರಿಗಳನ್ನು ಕಂಡುಕೊಂಡು ಅದಕ್ಕೆ ಸೂಕ್ತ ಪರಿಹಾರೋಪಾಯಗಳನ್ನು, ಕರ್ತವ್ಯಗಳನ್ನು ರೂಪಿಸಿಕೊಳ್ಳುವ ಯೋಜನೆಗಾಗಿ ಮೈತಳೆದ ಒಂದಷ್ಟು ವರುಷದ ಚಿಂತನ-ಮಂಥನದ ಫಲವೇ ಈ ಒಕ್ಕೂಟ.  ಬೆನ್ನತ್ತಿ ಬಂದ ಬೇಗುದಿ, ಅನವರತ ಆತಂಕ, ಗಡಿಬಿಡಿಯ ಓಡಾಟ, ಸಮಯದ ಹೊಂದಾಣಿಕೆಯಲ್ಲಾಗುವ ಸಂದಿಗ್ಥತೆ, ಅಳುಕು, ಅಳು -ನಗು..ಹೀಗೆ ಸಂಘಟನೆಯ ಹಿಂದಿನ ಸಂಕಟಗಳಿಂದಾಚೆಗೂ ಧನ್ಯತೆಯನ್ನೂ; ಕೃತಕೃತ್ಯತೆಯ ನೆನವರಿಕೆಗಳನ್ನು, ಪರಸ್ಪರ ಕೈಹಿಡಿದು ಮುನ್ನಡೆವ ದಾರಿಯನ್ನು, ಸಾಧಿಸುವ ಛಲವನ್ನು, ಕಣ್ಣಂಚಿನಲ್ಲಿ ಆನಂದದ ಹನಿ ನೀರನ್ನು ಇತ್ತದ್ದು ಕರ್ನಾಟಕದ ಮೊದಲ ನೃತ್ಯ ಸಂಶೋಧನಾ ವಿಚಾರಸಂಕಿರಣ. ನಾಲ್ಕು ಪ್ರಬುದ್ಧ ಸಂಶೋಧನಾ ಪ್ರಬಂಧವಾಚನ, ೩ ವಿಶೇಷ ಉಪನ್ಯಾಸ, ವಿದ್ವಾಂಸರೊಂದಿಗೆ ಸಂವಾದ, ವಿಮರ್ಶಾ ಪ್ರಶಸ್ತಿ, ಹಿರಿಯ ಸಂಶೋಧಕರಿಂದ ಆಶೀರ್ವಾದದೊಂದಿಗಿನ ಬೆಂಬಲ, ಚಿಂತನ-ಮಂಥನ, ಸಂಶೋಧನಾಧಾರಿತ ನೃತ್ಯ ಕಾರ್ಯಕ್ರಮ ಮತ್ತು ಎಲ್ಲಾ ಪ್ರಯತ್ನಕ್ಕೂ ಭವಿತವ್ಯದಲ್ಲಿ ಸಿದ್ಧ ಅಡಿಪಾಯ ಮೂಡುವಂತೆ ಒಲುಮೆಯ ಗೆಳೆಯರ ಸದಾಶಯದೊಂದಿಗೆ ಪ್ರಾರಂಭವಾದ ನೃತ್ಯ ಸಂಶೋಧಕರ ಒಕ್ಕೂಟವೆಂಬ ಸಂಶೋಧನೆ-ನೃತ್ಯದ ತಂತುಗಳನ್ನು ಬೆಸೆಯುವ ಕೆಲಸ. ಒಟ್ಟಿನಲ್ಲಿ ಇಡೀ ದಿನದ ಎಲ್ಲಾ ವಿಚಾರ-ವಿಶೇಷಗಳನ್ನು ಬರೆಯಹೊರಟರೆ ಪುಟಗಟ್ಟಲೆ ಸಾಲದು.

ಒಕ್ಕೂಟದ ಆಶಯಗಳು

ಒಕ್ಕೂಟಕ್ಕೆ ಯಾವುದೇ ಭಾಷಾ, ಭೌಗೋಳಿಕ ಮಿತಿಗಳಿರುವುದಿಲ್ಲ. ಕಾರ್ಯವಾಪ್ತಿ ವಿಸ್ತಾರವಾಗಿರುತ್ತದೆ. ನವೀನ, ಸ್ವಸಂಶೋಧಿತ ಸಂಶೋಧನೆಗಳನ್ನು ಸ್ವಾಗತಿಸುವುದು, ಅವಕಾಶ ನೀಡುವುದು ಧ್ಯೇಯಗಳಲ್ಲೊಂದು. ಚರ್ವಿತ ಚರ್ವಣವೆನಿಸುವ ಯಾವುದೇ ವಿಷಯ ಪ್ರಸ್ತುತಿಗೆ ಅವಕಾಶವಿಲ್ಲ. · ನೃತ್ಯಕ್ಕೆ ಸಂಬಂಧಿಸಿದಂತೆ ಸಂಶೋಧಕರನ್ನು ಒಗ್ಗೂಡಿಸುವುದು ಮತ್ತು ಪರಸ್ಪರ ಸೌಹಾರ್ದ ಬಾಂಧವ್ಯದ ನಿರೂಪಣೆ ಮುಖ್ಯ ಉದ್ದೇಶ. ಈ ನೆಲೆಯಲ್ಲಿ ಈ ಒಕ್ಕೂಟದ್ದು ಶೋಧದ, ಸಂಚಯದ ಶೈಕ್ಷಣಿಕ ಹಾದಿ. · ಯುವ ಸಂಶೋಧಕರು ಮತ್ತು ಯುವಜನತೆಯಲ್ಲಿ ಸೂಕ್ತ ಸಂಶೋಧನಾ ದಿಕ್ಕು, ಮಾದರಿಗಳ ನಿರ್ಮಿತಿಯು ಒಕ್ಕೂಟದ ಪ್ರಧಾನ ಲಕ್ಷ್ಯ.

ಆದ್ದರಿಂದ ಹಿರಿತನಕ್ಕೆ ಗೌರವವಿರುವುದಾದರೂ ಅರಿವಿನ ಹಿರಿತನವೇ ಪ್ರಧಾನವಾದುದು. ಪದವಿ/ಪ್ರತಿಷ್ಠೆ/ವಯಸ್ಸಿನ ಅಡೆತಡೆಗಳಿಲ್ಲದೆ ಕಾಲಾನುಕಾಲವಾಗಿ ಸಂಶೋಧನೆಗೆ ಸಂಬಂಧಿಸಿದಂತೆ ಮುನ್ನಡೆಯುವುದು ಉದ್ದೇಶ. · ಯಾವುದೇ ರಾಜಕೀಯ, ಮುಚ್ಚುಮರೆ, ಕಪೋಲಕಲ್ಪಿತ, ಗಾಸಿಪ್‌ನಂತಹ ಸುದ್ದಿ, ವಿಷಯ ವಿಶ್ಲೇಷಣೆಗಳಿಗೆ ಅವಕಾಶ ಕೊಡದೆ ಮುಕ್ತ, ಸಸ್ನೇಹಪೂರ್ಣ, ಕೌಟುಂಬಿಕ ಮನಸ್ಥಿತಿ ಮತ್ತು ನಡವಳಿಕೆಗಳನ್ನು ಒಕ್ಕೂಟದಲ್ಲಿ ಕಾಪಾಡಿಕೊಳ್ಳುವುದು. · ಪ್ರಯೋಗ ಮತ್ತು ಸಿದ್ಧಾಂತಗಳ ನಡುವಿನ ಸಂಬಂಧವನ್ನು ಸ್ಪಷ್ಟಪಡಿಸುವಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು. · ನೃತ್ಯಕ್ಕೆ ಪೂರಕವಾಗುವ ಸಂಗೀತ ಮತ್ತು ಇತರ ಲಲಿತ ಕಲೆಗಳ ಸಂಶೋಧನೆಗೆ ಸಂಬಂಧಿಸಿದ ಅಗತ್ಯ ಅನುಕೂಲಗಳನ್ನು ಕಲ್ಪಿಸುವುದು; ಮತ್ತು ನಿರ್ದಿಷ್ಟ ಮಾನದಂಡ, ದಿಕ್ಕನ್ನು ಕಂಡುಕೊಳ್ಳುವುದು. · ವಾರ್ಷಿಕವಾಗಿ ಮತ್ತು ಸಂದರ್ಭೋಚಿತವಾದ ಸಭೆ-ಸಮಾರಂಭಗಳನ್ನು ನಡೆಸುವುದರೊಂದಿಗೆ ಸಂಪನ್ಮೂಲ ವ್ಯಕ್ತಿಗಳನ್ನು ಯೋಜಿಸಿಕೊಂಡು ಸಂಶೋಧನೆಯ ವಿವಿಧ ದಿಕ್ಕುಗಳಿಗೆ ಸಂಬಂಧಿಸಿದ ಹಲವು ಬಗೆಯ ಉಪನ್ಯಾಸ, ಕಮ್ಮಟ, ವಿಚಾರಸಂಕಿರಣ, ಕಾರ್ಯಾಗಾರ, ಪ್ರಾತ್ಯಕ್ಷಿಕೆ ಇತ್ಯಾದಿ ಕಾರ್ಯಕ್ರಮಗಳನ್ನು ಯಥೋಚಿತವಾಗಿ ನಿರ್ಧರಿತ ವಾರ್ಷಿಕ ನಿಯಮಾವಳಿಗಳನುಸಾರವಾಗಿ ನಡೆಸಿಕೊಂಡು ಬರುವುದು. ·

ಪ್ರತಿವರ್ಷ ಮಹಾಶಿವರಾತ್ರಿಯ ಆಸುಪಾಸಿನ ದಿನಗಳಲ್ಲಿ ಆಯೋಜಿಸಲಾಗುವ ವಿಚಾರಸಂಕಿರಣದಲ್ಲಿ ಆದಷ್ಟು ಹೊಸ ಸಂಶೋಧಕರಿಗೆ, ಸಂಶೋಧನೆಗೆ, ಸಂಶೋಧನಾಧರಿತ ನೃತ್ಯಪ್ರಸ್ತುತಿ, ಪ್ರಾತ್ಯಕ್ಷಿಕೆಗಳಿಗೆ ಅವಕಾಶ ನೀಡಲಾಗುತ್ತದೆ. ಈ ಸಂದರ್ಭದಲ್ಲಿ ಮಂಡನೆಯಾದ ಸಂಶೋಧನಾ ಪ್ರಬಂಧಗಳನ್ನು ಸಂಕಲಿಸಿ ಸಂಶೋಧನಾ ನಿಯತಕಾಲಿಕೆಯನ್ನು ಯಥೋಚಿತವಾಗಿ ಪ್ರಕಟಿಸುವುದು ಮತ್ತು ಸೂಕ್ತ ಮಾದರಿಯಲ್ಲಿ ವೀಡಿಯೋ ಸಿಡಿ ರೂಪದಲ್ಲಿ ದಾಖಲಿಸುವುದು. · ಅಸೋಸಿಯೇಷನ್ ಸದಸ್ಯರಾಗಲು ಸದಸ್ಯಧನ ೧೫೦೦/- ರೂ. ಸಮಯದ ಅನಿವಾರ್ಯತೆಯನ್ನು ಅವಲಂಬಿಸಿ ವಾರ್ಷಿಕವಾಗಿ ಮೊತ್ತವನ್ನು ಹೆಚ್ಚು ಅಥವಾ ಕಡಿಮೆ ಮಾಡುವುದು ಪ್ರಧಾನ ಸಮಿತಿಯ ಸರ್ವ ಸದಸ್ಯರ ಒಮ್ಮತದ ನಿರ್ಣಯಕ್ಕೆ ಬಿಟ್ಟದ್ದು. ಸದಸ್ಯರಿಗೆ ಕಾಲಾನುಕೂಲ ಮತ್ತು ಕಾರ್ಯಕ್ರಮದ ಸ್ವರೂಪದನ್ವಯ ವಿಶೇಷ ಸೌಲಭ್ಯ ಮತು ರಿಯಾಯ್ತಿಗಳಿರುತ್ತವೆ
ಒಕ್ಕೂಟದ ಗೌರವ ಸಲಹೆಗಾರರಾಗಿ ಡಾ.ಶತಾವಧಾನಿ ಆರ್.ಗಣೇಶ್, ಡಾ.ಎಚ್.ಎಸ್.ಗೋಪಾಲ ರಾವ್ ಇರುತ್ತಾರೆ. ಒಕ್ಕೂಟದ ಪ್ರಧಾನ ಸಮಿತಿಯಲ್ಲಿ, ಮನೋರಮಾ ಬಿ.ಎನ್ ( ಮುಖ್ಯ ಸಂಚಾಲಕರು, ಆಡಳಿತ ವಿಭಾಗ ಮುಖ್ಯಸ್ಥೆ), ಡಾ.ಕರುಣಾ ವಿಜಯೇಂದ್ರ ( ಶೈಕ್ಷಣಿಕ ವಿಭಾಗ ಮುಖ್ಯಸ್ಥೆ),ಡಾ. ಶೋಭಾ ಶಶಿಕುಮಾರ್( ಪ್ರದರ್ಶಕಕಲಾ ವಿಭಾಗ ಮುಖ್ಯಸ್ಥೆ), ವಿಷ್ಣುಪ್ರಸಾದ್ ಎನ್.( ಖಚಾಂಚಿ), ನಿವೇದಿತಾ ಶ್ರೀನಿವಾಸ್( ಗ್ರಂಥಾಲಯ ಮತ್ತು ಆರ್ಕೈವ್ ವಿಭಾಗ ಮುಖ್ಯಸ್ಥೆ), ಶಾಲಿನಿ ವಿಠಲ್ ( ಆಫೀಸು ಮತ್ತು ದಾಖಲೀಕರಣ ವಿಭಾಗಾಧಿಕಾರಿಗಳು), ಪದ್ಮಿನಿ ಕುಮಾರ್( ಆಫೀಸು ಮತ್ತು ದಾಖಲೀಕರಣ ವಿಭಾಗಾಧಿಕಾರಿಗಳು) ಇರುತ್ತಾರೆ.  

ಕಲಾಸಂಶೋಧನೆಯ ಗುಣಮಟ್ಟ ಕುಸಿಯುತ್ತಿರುವ ಹಿನ್ನೆಲೆಯಲ್ಲಿ ಸೂಕ್ತ ನಡಾವಳಿಗಳ ಅಗತ್ಯ ಮನಗಂಡು ಭಾರತೀಯ ಸಂಶೋಧನಾ ನೆಲೆಗೆ ಅನುಸಾರವಾಗಿ ಕಲೆಗೆ ಒದಗಬೇಕಾದ ಸಂಸ್ಪರ್ಶಗಳನ್ನೇ ಮುಖ್ಯ ಉದ್ದೇಶವಾಗಿ ಹೊತ್ತು, ವಾಸ್ತವದ ಇತಿಮಿತಿಯನ್ನು ಅರಿತು ಮುನ್ನಡೆಯುತ್ತಿದ್ದೇವೆ. ಕಲೆಗೆ ಎಷ್ಟರಮಟ್ಟಿಗೆ ಕೊಡುಗೆ ನೀಡಬಹುದು ಎಂಬ ದಾರ್ಷ್ಟ್ಯಕ್ಕಿಂತ ಹೆಚ್ಚಾಗಿ ನಮ್ಮೆಲ್ಲರ ಮತ್ತು ಭವಿಷ್ಯದಲ್ಲಿ ಆಶೋತ್ತರ ಹೊತ್ತು ಬರುವ ಹಲವರ ನಡುವಿನ ಶ್ರಮವನ್ನು ಎಷ್ಟರಮಟ್ಟಿಗೆ ಫಲಪ್ರದವಾಗಿಸಿಕೊಳ್ಳಬಹುದು ಎಂಬುದರತ್ತ ನಮ್ಮ ನಿಲುವು.

ಕಲೆ ಮತ್ತು ಸಂಶೋಧನೆಯ ನಡುವಿನ ಬಿಕ್ಕಟ್ಟುಗಳನ್ನು ಬಗೆಹರಿಸಿಕೊಳ್ಳುತ್ತಾ ಕಾಲಕಾಲಕ್ಕೂ ಅಗತ್ಯವಾದ ರಸದೃಷ್ಟಿ, ಕಾಲ-ದೇಶಕ್ಕೆ ಪೂರಕವಾದ ಔಚಿತ್ಯಪ್ರಜ್ಞೆಯನ್ನು ಕಾಯ್ದುಕೊಳ್ಳಬೇಕೆಂಬ ಹಪಹಪಿ ನಮ್ಮದು. ಜೊತೆಗೆ ಪ್ರದರ್ಶಕ ಕಲೆಯೆಂಬ ಮಾತ್ರಕ್ಕೆ ಶಾಸ್ತ್ರ-ಪ್ರಯೋಗದ ಔಚಿತ್ಯ, ನಾವೀನ್ಯ ಮರೆಯಾಗುತ್ತಿರುವ ಹೊತ್ತು.. ಇಂತಹ ಒಂದು ಪ್ರಯತ್ನ ಚಿಗುರೊಡೆಯಬೇಕಾಗಿದೆ ಎಂಬುದನ್ನೇ ಆಶಯವಾಗಿರಿಸಿ ಒಂದಷ್ಟು ಗುರಿ, ಪರಿಕಲ್ಪನೆಗಳನ್ನು ಜೊತೆಗಿಟ್ಟು ಸಾಹಸಕ್ಕೆ ಮುಂದಾಗುತ್ತಿದ್ದೇವೆ. ನಿಮ್ಮ ಸಲಹೆ-ಸೂಚನೆಗಳು ರಸಸೌಂದರ್ಯವನ್ನು, ಜೀವಚೈತನ್ಯವನ್ನು ಶೋಧಿಸುತ್ತಾ, ದರ್ಶಿಸುತ್ತಾ ನಮಗೆ ಪ್ರೇರಕ, ಪೋಷಕವಾಗಲಿ. ನಮ್ಮೆಲ್ಲರೊಳಗಿನ ಅಮೂರ್ತಶಕ್ತಿಯನ್ನು ಮೂರ್ತರೂಪಕ್ಕಿಳಿಸಲಿ. ಸಂಶೋಧನಾ ಸತ್ರದಲ್ಲಿ ಒಂದಾಗಲಿಚ್ಛಿಸುವ ಮನಸ್ಸುಗಳಿಗೆ ಸೇತು ಬೆಸೆಯುವ ಕಾರ್ಯ ಕರುನಾಡಿನಿಂದಲೇ ಮೊದಲ್ಗೊಳ್ಳಲಿ. ಈ ಆಶಯ ನಮ್ಮದು. ಹಾರೈಕೆ ನಿಮ್ಮದು.
ಆಸಕ್ತ ಸಂಶೋಧಕರು/ ವಿದ್ಯಾರ್ಥಿಗಳು ಈ ಒಕ್ಕೂಟದ ಸದಸ್ಯರಾಗುವುದರೊಂದಿಗೆ ಭವಿಷ್ಯದ ಹಲವು ಸಂಶೋಧನಾ ಕರ್ತವ್ಯಗಳನ್ನು ಸುಸೂತ್ರವಾಗಿ ಮುನ್ನಡೆಸಿಕೊಂಡು ಹೋಗುವಲ್ಲಿ ಸಹಕಾರ ಪಡೆಯಬಹುದಾಗಿದೆ. ಈಗಾಗಲೇ ವಿಶ್ವದಾದ್ಯಂತದಿಂದ ಸುಮಾರು ೩೦ಕ್ಕೂ ಹೆಚ್ಚು ಮಂದಿ ವಿವಿಧ ವಲಯದ ಅಪೇಕ್ಷಿತ ಅಭ್ಯರ್ಥಿಗಳು ಸದಸ್ಯರಾಗಿದ್ದಾರೆ. ೨೦೧೨ರ ಸಾಲಿಗೆ ಜೂನ್ ೧೫ ಕೊನೆಯ ದಿನವಾಗಿದ್ದು ನಂತರ ಬಂದ ಪ್ರವೇಶಗಳನ್ನು ಕೆಲವು ಷರತ್ತುಗಳನ್ವಯ ಸ್ವೀಕರಿಸಲಾಗುತ್ತದೆ. ೨೪ ಜೂನ್‌ನಂದು ಸಕಲ ಸದಸ್ಯರ ಕೂಟವು ಬೆಂಗಳೂರಿನಲ್ಲಿ ನಡೆಯಲಿದೆ. ಸಂಶೋಧನಾ ವಿಶೇಷ ಉಪನ್ಯಾಸ ಮತ್ತು ತರಗತಿಗಳು ನಡೆಯಲಿವೆ. ಆಸಕ್ತರು ಕೂಡಲೇ ಸಂಪರ್ಕಿಸಬಹುದು. 


ನೃತ್ಯ ಸಂಶೋಧಕರ ಒಕ್ಕೂಟ 

ನೂಪುರ ಭ್ರಮರಿ ಪ್ರತಿಷ್ಠಾನ(ರಿ.)

'ಸಾನ್ನಿಧ್ಯ', ದೇಚೂರು ರಸ್ತೆ,

ಅಶ್ವತ್ಥಕಟ್ಟೆ ಹತ್ತಿರ, ಮಡಿಕೇರಿ, ಕೊಡಗು ೫೭೧೨೦೧. 

 

 

Author :  

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited