Untitled Document
Sign Up | Login    
ನೋಡ ಬನ್ನಿ ದೇವರಗುಂಡಿ ಜಲಪಾತ

'ದೇವರಗುಂಡಿ' ಜಲಪಾತ

ದಕ್ಷಿಣ ಕನ್ನಡ ಜಿಲ್ಲೆಯ ಪ್ರಕೃತಿ ಮಾತೆಯ ಮಡಿಲಿನಲ್ಲಿ ಹರಿಯುವ ಜಲಪಾತಗಳಿಗೇನು ಕಡಿಮೆಯಿಲ್ಲ. ಸಹ್ಯಾದ್ರಿಯ ತಪ್ಪಲಿನ ಕಾನನವೇ ಹಾಗೆ ಅದೆಷ್ಟೋ ಜಲಧಾರೆಗಳನ್ನು ತನ್ನೊಡಲಲ್ಲಿ ಬಚ್ಚಿಟ್ಟುಕೊಂಡಿದೆ. ಕೆಲ ಜಲಪಾತಗಳು ಮಳೆಗಾಲದಲ್ಲಿ ಮಾತ್ರ ಹುಟ್ಟಿ, ಪ್ರವಾಸಿಗರ ಕಣ್ಮನ ಸೆಳೆದು ಬೇಸಿಗೆ ಬರುತ್ತಿದ್ದಂತೆ ಕಣ್ಮರೆಯಾಗುತ್ತವೆ. ಇನ್ನು ಹಲವು ಜಲಪಾತಗಳು ವರ್ಷಂಪ್ರತಿ ಪ್ರಕೃತಿ ಪ್ರೇಮಿಗಳನ್ನು ಕೈಬೀಸಿ ಕರೆಯುತ್ತವೆ.

ದಕ್ಷಿಣ ಕನ್ನಡಹಾಗೂ ಕೊಡಗು ಜಿಲ್ಲೆಗಳ ಗಡಿ ಭಾಗದಲ್ಲಿರುವ 'ದೇವರಗುಂಡಿ' ಜಲಪಾತ ಈ ಪ್ರಬೇಧಕ್ಕೆ ಸೇರುತ್ತದೆ. ಇದು ವರ್ಷ ಪೂರ್ತಿ ಪ್ರಕೃತಿ ಪ್ರೇಮಿಗಳನ್ನು ಸಂತೋಷಗೊಳಿಸುತ್ತದೆ. ಪಟ್ಟಿಮಲೆಯಲ್ಲಿ ಹುಟ್ಟಿ ಭೋರ್ಗರೆದು ಧುಮ್ಮಿಕ್ಕುವ ಈ ಜಲಧಾರೆಯ ಸೊಬಗನ್ನು ನೋಡುವುದೇ ಒಂದು ರಮಣೀಯವಾದ ಅನುಭವ.
ಸುಳ್ಯದಿಂದ ತೊಡಿಕಾನಕ್ಕೆ ಖಾಸಗಿ ಬಸ್ ಸಂಚಾರವಿದೆ. ಇಲ್ಲಿಗೆ ಬಸ್ಸಿನಲ್ಲಿ ಬರುವುದಾದರೆ 45 ನಿಮಿಷದ ಪ್ರಯಾಣ. ಸ್ವಂತ ವಾಹನವಿದ್ದರೆ ಕೇವಲ 30 ನಿಮಿಷ ಬೇಕು. ಸುಳ್ಯದಿಂದ 11 ಕಿ.ಮೀ ಸುಳ್ಯ-ಮಡಿಕೇರಿ ರಾಜ್ಯ ರಸ್ತೆಯಲ್ಲಿ ಸಾಗಿದರೆ ಅರಂತೋಡು ಎಂಬಲ್ಲಿಗೆ ತಲುಪಿದಾಗ ರಸ್ತೆಯ ಬಲ ಭಾಗದಲ್ಲಿ ಶ್ರೀ ಮಲ್ಲಿಕಾರ್ಜುನ ದೇವಾಲಯದ ದ್ವಾರ ಕಾಣುತ್ತದೆ. ಈ ದ್ವಾರದ ಮೂಲಕ 6 ಕಿ.ಮೀ ಪ್ರಯಾಣಿಸಿದರೆ ತೊಡಿಕಾನ ಮಲ್ಲಿಕಾರ್ಜುನ ದೇವಾಲಯ ಸಿಗುತ್ತದೆ.

ಇಲ್ಲಿಂದ ತೊಡಿಕಾನ-ಪಟ್ಟಿ-ಭಾಗಮಂಡಲ ಕಚ್ಚಾ ರಸ್ತೆಯಲ್ಲಿ ಹೋಗಬೇಕಾಗಿರುವುದರಿಂದ ಪಾದಯಾತ್ರೆ ಅನಿವಾರ್ಯ. ಜೀಪನ್ನು ಬಿಟ್ಟರೆ ಇತರ ವಾಹನಗಳು ಈ ರಸ್ತೆಯಲ್ಲಿ ಹೋಗುವುದಿಲ್ಲ. ರಸ್ತೆ ಬದಿಯಲ್ಲಿ ಆಳವಾದ ಕಂದಕಗಳು ಭಯ ಹುಟ್ಟಿಸುತ್ತವೆಯಾದರೂ ಒಂದು ಕುತೂಹಲಭರಿತ ಅನುಭವ ನೀಡುತ್ತದೆ. ಮುಂದೆ ಮುಂದೆ ಸಾಗುತ್ತಿದಂತೆ ಇದೆ ಹೊಳೆಯ ಚಿಕ್ಕ ಪುಟ್ಟ ತೊರೆಗಳು ಮನಸನ್ನು ಪುಳಕಿತಗೊಳಿಸುತ್ತವೆ. ಸುತ್ತಮುತ್ತಲ ಹಸಿರು ಬೆಟ್ಟ-ಗುಡ್ಡಗಳು, ಅಡಿಕೆ, ತೆಂಗಿನ ತೋಟಗಳ ಸಾಲು ಮನಮೋಹಕ ದೃಶ್ಯಕಾವ್ಯದಂತೆ ಭಾಸವಾಗುತ್ತವೆ. ಹಕ್ಕಿಗಳ ಇಂಚರ, ದುಂಬಿಗಳ ಝೇಂಕಾರ, ಕೋಗಿಲೆಗಳ ಗಾನ ಮನಸಿಗೆ ಮುದ ನೀಡುತ್ತವೆ.

ಹಾಗೆ ಸ್ವಲ್ಪ ಮುಂದೆ ಮುಂದೆ ಸಾಗಿದರೆ ಜೀರುಂಡೆಗಳ ಕೂಗು ಭಯ ಹುಟ್ಟಿಸುತ್ತವೆ. ಇನ್ನೂ ಮುಂದಡಿ ಇಟ್ಟರೆ ಜಿಗಣೆಗಳ ಕಾಟ ಸ್ವಲ್ಪ ಮಟ್ಟಿಗೆ ತೊಂದರೆ ಕೊಡುತ್ತವೆಯಾದರೂ ಹೊಸದೊಂದು ಅನುಭವವಾಗುವುದು. ದೇವಾಲಯದಿಂದ 1800 ಮೀಟರ್ ದೂರ ಸಾಗಿದಾಗ ಬಲ ಭಾಗದಲ್ಲಿ ಖಾಸಗಿ ವ್ಯಕ್ತಿಯೊಬ್ಬರ ಅಡಿಕೆ ತೋಟ ಕಾಣ ಸಿಗುತ್ತದೆ. ಈ ಅಡಿಕೆ ತೋಟದಲ್ಲಿ ಸುಮಾರು 100 ಮೀಟರ್ ಹೆಜ್ಜೆ ಹಾಕಿದರೆ 'ದೇವರ ಗುಂಡಿ ಜಲಪಾತ' 60 ಅಡಿ ಎತ್ತರದಿಂದ ಧುಮ್ಮಿಕ್ಕಿ ಹರಿಯುವ ಮನಮೋಹಕ ದೃಶ್ಯ ಕಂಡುಬರುತ್ತದೆ. ಅದೊಂದು ವರ್ಣನಾತೀತ ಸಂದರ್ಭ; ಸ್ವರ್ಗವೇ ಧರೆಗಿಳಿದ ಕ್ಷಣ.

ಜಲಪಾತದ ಹತ್ತಿರ ತಲುಪುತ್ತಿದಂತೆ ನೀರಿನ ಜುಳು ಜುಳು ನಿನಾದ ಮನಸ್ಸಿಗೆ ಮುದ ನೀಡಿದರೆ, ಭೋರ್ಗರೆಯುವ ಜಲಧಾರೆಯ ದನಿ ಎದೆಯಾಳದೊಳಗೆ ತಣ್ಣಗೆ ಭಯದ ಅನುಭೂತಿಯನ್ನೂ ಹುಟ್ಟಿಸುತ್ತದೆ. ಮೇಲಿನಿಂದ ಕೆಳಗೆ ಬೀಳುವ ಝರಿ ಪಾಲ್ಗಡಲ ಪ್ರವಾಹದಂತೆ ಕಂಡುಬರುತ್ತದೆ. ಅದರ ಮೇಲಿನ ನೀರಿನ ಗುಳ್ಳೆಗಳು ತೇಲುವ ರೀತಿ ಮುತ್ತಿನ ಮಣಿಯಾಟದಂತೆ ಭಾಸವಾಗುತ್ತದೆ. ಜಲಪಾತದ ನೀರು ಬೆಳಕಿನಾಟವನ್ನು ನೋಡುತ್ತಾ ನಿಂತರೆ ಆ ಪ್ರಕೃತಿ ಸೌಂದರ್ಯಕ್ಕೆ ಮನಸೋತು ಮೂಕವಿಸ್ಮಿತರಾಗುತ್ತೇವೆ. ತಂಗಾಳಿ ಹೊತ್ತು ತರುವ ನೀರಿನ ಸಿಂಚನ ನಮ್ಮನ್ನು ಒದ್ದೆ ಮಾಡುತ್ತದೆ. ನಿಸರ್ಗದ ಈ ಭಾವಲಹರಿಯಲ್ಲಿ ತೇಲಿಹೋದರೆ ಸಮಯ ಜಾರುವುದೇ ತಿಳಿಯದು.

ಆದರೆ ಇಲ್ಲಿಯ ನೀರಿನ ಗುಂಡಿಗೆ ಇಳಿಯುವುದು ಅಪಾಯಕರ. ಸ್ನಾನಕ್ಕೆ ಹೋದ ಕೆಲವರು ತಮ್ಮ ಪ್ರಾಣವನ್ನು ಕಳೆದುಕೊಂಡಿರುವ ಘಟನೆಯು ಇಲ್ಲಿ ನಡೆದಿದೆ. ಈ ಕಾರಣದಿಂದ ಇಲ್ಲಿ ಸ್ನಾನ ಮಾಡುವುದದನ್ನು ನಿಷೇಧಿಸಲಾಗಿದೆ. ಮಳೆಗಾಲದ ಆರಂಭದಲ್ಲಿ ಜಲಪಾತದ ಸೊಬಗು ಇಮ್ಮಡಿಸುತ್ತದೆ.
ತೊಡಿಕಾನ ದೇವಾಲಯದಲ್ಲಿ ಉಟೋಪಚಾರದ ವ್ಯವಸ್ಥೆ ಮಾಡಲಾಗುತ್ತದೆ. ನೀವು ಗಂಪು ಗುಂಪಾಗಿ ಹೋಗುವುದಾದರೆ, ತಿಂಡಿ ತಿನಿಸಿಗಾಗಿ ದೇವಾಲಯಕ್ಕೆ ಒಂದು ದಿನ ಮುಂಚಿತವಾಗಿ ತಿಳಿಸಬೇಕಾಗುತ್ತದೆ. ಶ್ರೀ ಮಲ್ಲಿಕಾರ್ಜುನ ದೇವಾಲಯದ ದೂರವಾಣಿ ಸಂಖ್ಯೆ 082572 87242

 

Author : ತೇಜೇಶ್ವರ್ ಕುಂದಲ್ಪಾಡಿ

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited