Untitled Document
Sign Up | Login    
ದೇವರ ಮೀನು ನೋಡ ಬನ್ನಿ


ಮೀನುಗಳು ನೋಡಲು ಸುಂದರ. ಅವುಗಳ ಚಲನವಲನ ನೋಡುತ್ತಾ ಇದ್ದರೆ ಹೊತ್ತು ಹೋಗುವುದೇ ತಿಳಿಯದು. ಬಣ್ಣ, ಗಾತ್ರ ಹಾಗೂ ವಿನ್ಯಾಸಗಳಲ್ಲಿ ಮೀನುಗಳನ್ನು ಮೀರಿಸುವ ಬೇರೆ ಜೀವಿಗಳಿರವು. ಪ್ರತಿಯೊಂದು ಪ್ರಬೇಧಗಳನ್ನು ಬೇರೆ ಬೇರೆ ಹೆಸರುಗಳಿಂದ ಕರೆಯಲಾಗುತ್ತದೆ. ಕರಾವಳಿ ಪ್ರದೇಶಗಳ ಕೆಲವೆಡೆ ನದಿ ಕೆರೆಗಳಲ್ಲಿ ಕೆಲವು ವಿಶಿಷ್ಟ ಹಾಗೂ ವಿಶೇಷವಾದ ಮೀನುಗಳು ಕಂಡು ಬರುತ್ತವೆ. ಅಂತವುಗಳಲ್ಲಿ "ಮಹಶಿರ್" ಮೀನು ಒಂದು.

ದ.ಕ. ಜಿಲ್ಲೆಯ ಸುಳ್ಯ ತಾಲ್ಲೂಕಿನ ತೊಡಿಕಾನ ಮಲ್ಲಿಕಾರ್ಜುನ ದೇವಳದ ಮತ್ಸ್ಯ ತೀರ್ಥ ಹೊಳೆಯಲ್ಲಿ ದೇವರ ಅಥವಾ ಮಹಷೀರ್ ಮೀನುಗಳು ಕಂಡುಬರುತ್ತವೆ. ಇವುಗಳಲ್ಲಿ ಸಣ್ಣ, ದೊಡ್ಡ ಗಾತ್ರದ ಸಾವಿರಾರು ಮೀನುಗಳನ್ನು ಕಾಣಬಹುದು. ಇವುಗಳನ್ನು ನೋಡಲು ನೂರಾರು ಪ್ರವಾಸಿ ಪ್ರೇಮಿಗಳು ದಿನನಿತ್ಯ ಆಗಮಿಸುತ್ತಾರೆ.

ಮಕ್ಕಳಿಗಂತು ನೀರಿನಲ್ಲಿ ಈ ಮೀನುಗಳೊಂದಿಗೆ ಆಟವಾಡುವುದೆಂದರೇ ಖುಷಿಯೋ ಖುಷಿ. ಮಕ್ಕಳನ್ನು ಅಲ್ಲಿಂದ ವಾಪಸ್ ಕರೆದುಕೊಂಡು ಹೋಗಲು ತಂದೆ-ತಾಯಿಗಳು ಹರಸಾಹಸ ಪಡುತ್ತಾರೆ!.

ಇಲ್ಲಿಗೆ ಆಗಮಿಸುವ ಪ್ರವಾಸಿಗರು ಹುರಿಯಕ್ಕಿ ಮತ್ತು ಬೆಳ್ತಿಗೆ ಅಕ್ಕಿಯನ್ನು ದೇವಳದ ವತಿಯಿಂದ ಪಡೆದು ಮಧ್ಯಾಹ್ನ
ನೈವೇದ್ಯವನ್ನು ನೀರಿಗೆ ಹಾಕುತ್ತಾರೆ. ಆಹಾರ ಹಾಕಿದ ಕೂಡಲೇ ಅದನ್ನು ತಿನ್ನಲು ಮೀನುಗಳು ಮೇಲೇರಿ ಬರುತ್ತಿದ್ದರೆ ಅದನ್ನು ನೋಡುವುದೇ ಒಂದು ಮಜ.

ಚಟ-ಪಟ,ಚಟ-ಪಟ ಎಂದು ಶಬ್ದ ಮಾಡುತ್ತ ಆಹಾರವನ್ನು ಮುತ್ತಿಕ್ಕಿ ತಿನ್ನುತ್ತವೆ. ಆಹಾರವನ್ನು ನಮ್ಮ ಕೈಯಲ್ಲಿಟ್ಟು ನೀರಲ್ಲಿ ಹಿಡಿದರೆ ಸಾಕು ಮೀನುಗಳು ನಮ್ಮ ಕೈಯನ್ನು ಕಚ್ಚಿಕೊಂಡೆ ಆಹಾರ ತಿನ್ನುತ್ತವೆ. ಮೀನು ಕೈಗಳಿಗೆ ಕಚ್ಚುವಾಗ ಹಿತವಾದ ಅನುಭವವಾಗುತ್ತದೆ.

ಮತ್ಸ್ಯ ತೀರ್ಥದಲ್ಲಿ ದೇವರ ಮೀನುಗಳು..
ಬೇಸಿಗೆಯಲ್ಲಿ ಕೃಷಿಕರು ತಮ್ಮ ತೋಟಗಳಿಗೆ ಮತ್ಸ್ಯ ತೀರ್ಥ ಹೊಳೆಯಿಂದ ನೀರು ಹಾಯಿಸುವುದರಿಂದ ನೀರಿನ ಹರಿಯುವಿಕೆ ಕಡಿಮೆಯಾಗುತ್ತಿದ್ದು, ಇದರಿಂದ ಆ ಸಮಯದಲ್ಲಿ ಮೀನುಗಳಿಗೆ ಆಮ್ಲಜನಕ ಕೊರತೆ ಎದುರಾಗುತ್ತಿದೆ. ಈ ಕಾರಣದಿಂದ ಇಲ್ಲಿಂದ ಸುಮಾರು ಎರಡು ಕಿ.ಮೀ. ದೂರದಲ್ಲಿರುವ ದೇವರ ಗುಂಡಿ ಜಲಪಾತಕ್ಕೆ ಪೈಪ್ ಅಳವಡಿಸಿ ಇದರ ಮೂಲಕ ಮೀನು ಗುಂಡಿಗೆ ನೀರು ಹರಿಸಲಾಗುತ್ತದೆ. ಈ ಯೋಜನೆಯ ಬಳಿಕ ಮೀನುಗಳು ಸ್ವಲ್ಪ ಮಟ್ಟಿಗೆ ಬೇಸಿಗೆಯಲ್ಲಿ ಉಲ್ಲಾಸ ಭರಿತವಾಗಿ ಕಾಲ ಕಳೆಯುತ್ತವೆ.

ತೊಡಿಕಾನದಲ್ಲಿ ಪ್ರತಿವರ್ಷ ಏಪ್ರಿಲ್ ತಿಂಗಳಲ್ಲಿ ಕಾಲಾವಧಿ ಜಾತ್ರೋತ್ಸವ ನಡೆಯುತ್ತಿದ್ದು, ಈ ಸಮಯದಲ್ಲಿ ದೇವಳಕ್ಕೆ ಹೆಚ್ಚು ಪ್ರವಾಸಿ ಪ್ರೇಮಿಗಳು ಮತ್ತು ಭಕ್ತಾದಿಗಳು ಆಗಮಿಸುತ್ತಾರೆ. ಈ ಅವಧಿಯಲ್ಲಿ ಮೀನುಗಳಿಗೆ ನಿಯಮಿತವಾಗಿ ಆಹಾರ ಹಾಕುವುದಕ್ಕೆ ಭಕ್ತಾದಿಗಳಿಗೆ ಸೂಚಿಸಲಾಗುತ್ತದೆ.
ಈ ಹೊಳೆಯಲ್ಲಿ ದೇವರ (ಮಹಷೀರ್) ಮೀನುಗಳನ್ನು ಹಿಡಿಯುವುದನ್ನು ನಿಷೇಧಿಸಲಾಗಿದೆ. ಅಲ್ಲದೆ, ಈ ಮೀನುಗಳನ್ನು ಇಲ್ಲಿಯ ಜನರು ತಿನ್ನುವುದಿಲ್ಲ. ಚರ್ಮ ರೋಗ ಇದ್ದವರು ದೇವರ ಮೀನುಗಳಿಗೆ ಅಕ್ಕಿ ಹಾಕುತ್ತೇವೆ ಎಂದು ಹರಕೆ ಹೇಳಿಕೊಂಡರೆ ಚರ್ಮ ರೋಗ ವಾಸಿಯಾಗುತ್ತದೆ ಎಂಬ ನಂಬಿಕೆ ಇಲ್ಲಿಗೆ ಬರುವ ಭಕ್ತಾದಿಗಳಲ್ಲದೆ.

ಮನಸ್ಸಿನ ಒಂದಷ್ಟು ಬೇಸರವನ್ನು ನೀವು ಕಳೆಯಬೇಕಾ? ಇಲ್ಲಿನ ಮೀನುಗಳೊಂದಿಗೆ ನೀವು ಚೆಲ್ಲಾಟವಾಡಬೇಕಾ? ಹಾಗಿದ್ದರೆ, ತೊಡಿಕಾನ ಮಲ್ಲಿಕಾರ್ಜುನ ದೇವಸ್ಥಾನದ ಮತ್ಸ್ಯತೀರ್ಥ ಹೊಳೆಯಲ್ಲಿರುವ ದೇವರ ಮೀನುಗಳನ್ನು ನೋಡಲು ಬನ್ನಿ.

ಪ್ರವಾಸಿ ಪ್ರೇಮಿಗಳು ದೇವಸ್ಥಾನದ ಈ ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಬಹುದುಃ 08257 287242

 

Author : ತೇಜಸ್ ಎಸ್

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited