Untitled Document
Sign Up | Login    
ಮಲೆನಾಡ ಸುಂದರಿ ಹೊನ್ನೆಮರಡು

ಹಿನ್ನೀರಿನಲ್ಲಿ ಒಣಗಿ ನಿಂತಿರುವ ಮರಗಳು....

ಹೊನ್ನೆಮರಡು ಇದು ಮಲೆನಾಡ ಸುಂದರ ತಾಣ. ಇಲ್ಲಿದೆ ಶರಾವತಿ ನದಿಯ ವಡಲಿನಲ್ಲಿರುವ ದ್ವೀಪದ ವಿಹಂಗಮ ನೋಟ. ಹಚ್ಚ ಹಸುರಿನ ನಡುವೆ ಶಾಂತವಾಗಿ ಹರಿಯುತ್ತಿರುವ ಶರಾವತಿಯ ಹಿನ್ನೀರ ಪ್ರದೇಶದಲ್ಲಿರುವ ಮನೋಹರ ಪ್ರದೇಶ ಇದು.

ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನಲ್ಲಿರುವ ಹೊನ್ನೆಮರಡು ತಾಣಕ್ಕೆ ಭೇಟಿ ನೀಡಲು ನಿಶ್ಚಯಿಸಿ ಹೊರಟೆವು. ಇಲ್ಲಿಗೆ ಭೇಟಿ ನೀಡಿ ಬಂದ ನನ್ನ ಸ್ನೇಹಿತರು ವರ್ಣಿಸಿದ ಸೌಂದರ್ಯ ನನಗೆ ಹೊನ್ನೆಮರಡಿನ ಕುರಿತು ಮತ್ತಷ್ಟು ಆಸಕ್ತಿ ಹೆಚ್ಚಿಸಿತ್ತು. ಆ ಸುಂದರ ಪ್ರದೇಶವನ್ನು ನಾನೂ ನೋಡಬೇಕೆಂಬ ಹಂಬಲ ಹುಟ್ಟಿತ್ತು. ಅಂತೂ ನನ್ನ ಆಸೆ ಕೈಗೂಡುವ ಸಮಯ ಬಂದೇ ಬಿಟ್ಟಿತ್ತು. ಲಗುಬಗೆಯಿಂದ ಸಿದ್ದಗೊಂಡು ಹೊರಟೇಬಿಟ್ಟೆವು.

ಸುಮಾರು ಒಂದೂವರೆ ಗಂಟೆಗಳ ಪ್ರಯಾಣದ ನಂತರ ಶಿವಮೊಗ್ಗದಿಂದ ಹೊನ್ನೆಮರಡು ತಲುಪಲು ಸಾಧ್ಯ. ಸಾಗರದಿಂದ ಕೇವಲ 25 ಕಿ.ಮೀ ದೂರವಿದೆ ಈ ನಮ್ಮ ಮಲೆನಾಡ ಸುಂದರಿ. ಆದರೆ ನಾವು ಹೊರಟಿದ್ದು ಶಿರಸಿಯಿಂದ. ಶಿರಸಿಯಿಂದ ಹೊನ್ನೆಮರಡು ತಲುಪಲು ಸುಮಾರು ಎರಡುವರೆ ಗಂಟೆ ಬೇಕೆ ಬೇಕು. ಸ್ವಂತ ವಾಹನದಲ್ಲಿ ಹೊರಟಿದ್ದ ನಮಗೆ ಸಾಗರ ತಲುಪಲು ತಡವಾಗಲಿಲ್ಲ. ಸಾಗರದಿಂದ ಕೇವಲ ಅರ್ಧಗಂಟೆಯಲ್ಲಿ ಹೊನ್ನೆಮರಡನ್ನು ತಲುಪಿದೆವು.

ಸೂರ್ಯಾಸ್ತದ ವಿಹಂಗಮ ನೋಟ...
ಹೊನ್ನೆಮರಡನ್ನು ತಲುಪುತ್ತಿದ್ದಂತೆ.. ಹಿನ್ನೀರಿನಲ್ಲಿ ಒಣಗಿನಿಂದ ಮರಗಳು ಗೋಚರಿಸಿದವು..ಅವೆಲ್ಲ ಅದ್ಯಾವುದೋ ಕಥೆ ಹೇಳುತ್ತಿದ್ದಂತೆ ಭಾಸವಾಯ್ತು ನನಗೆ. ಶರಾವತಿಗೆ ಅಡ್ಡಲಾಗಿ ಲಿಂಗನಮಕ್ಕಿ ಅಣೆಕಟ್ಟೆ ನಿರ್ಮಾಣವಾದ ಸಮಯದಲ್ಲಿ ಮುಳುಗಡೆಯಾದ ಕಾಡುಗಳಿಗೆ ಸತ್ತು ನಿಂತಿರುವ ಆ ಮರಗಳೇ ಕುರುಹುಗಳಾಗಿದ್ದವು...

ಇದೊಂದು ಅದ್ಭುತ ತಾಣ ಎನ್ನುವುದರಲ್ಲಿ ಎರಡು ಮಾತಿಲ್ಲ. ಹೊನ್ನೆಮರಡನ್ನು ನೋಡಿ ಬಂದ ಸ್ನೇಹಿತರು ನನಗೆ ವಿವರಿಸಿದ ಶಬ್ಧಗಳಿಗಿಂತಲೂ ಸುಂದರವಾಗಿದೆ ಈ ಹೊನ್ನೆಮರಡು. ಶರಾವತಿ ಹಿನ್ನೀರ ಪ್ರದೇಶದಲ್ಲಿರುವ ಪುಟ್ಟ ದ್ವೀಪ, ಆ ದ್ವೀಪಕ್ಕೆ ದೋಣಿಯಲ್ಲಿ ಪಯಣ.. ಇದೆಲ್ಲ ಇಲ್ಲಿಯ ವಿಶೇಷತೆ. ದೋಣಿ ಪ್ರಯಾಣ ಅಂದರೆ ಎಲ್ಲಿಲ್ಲದ ಖುಷಿ ನಮಗೆ. ದೋಣಿಯ ಮೇಲೆ ಕುಳಿತು ನೀರಿನಲ್ಲಿ ತೇಲಿ ದ್ವೀಪವನ್ನು ತಲುಪಿದೆವು. ಅಲ್ಲಿ ನಮಗೆ ಕಂಡಿದ್ದು ಒಂದು ಸಣ್ಣ ಮನೆ ಮತ್ತು ಅಂಗಳದಂತಹ ಪುಟ್ಟ ವೃತ್ತಾಕಾರದ ವೇದಿಕೆ, ಅಷ್ಟೇ. ದ್ವೀಪದಲ್ಲಿ ಮತ್ತೇನೂ ಇಲ್ಲವಾದರೂ ಸುತ್ತಲೂ ವಿಶಾಲವಾಗಿ ಕಾಣುತ್ತಿದ್ದ ಶರಾವತಿ ನೀರು.. ನಮಗೆಲ್ಲ ಹೊಸ ಅನುಭವ ನೀಡುತ್ತಿತ್ತು. ದ್ವೀಪದ ಸುತ್ತಲೂ ಇರುವ ನೀರನ್ನು ನೋಡುತ್ತಾ ಸುಮ್ಮನೆ ಕುಳಿತೆವು. ನಾವು ಅಲ್ಲಿಗೆ ಭೇಟಿ ಕೊಟ್ಟಾಗ ಸಂಜೆ ನಾಲ್ಕು ಮೂವತ್ತಾಗಿತ್ತು. ಹೀಗಾಗಿ ಸೂರ್ಯಾಸ್ತವಾಗುವವರೆಗೂ ಅಲ್ಲಿಯೇ ಇದ್ದೆವು.
ದೋಣಿ ವಿಹಾರ...
ಹೊನ್ನೆಮರಡುವಿನಲ್ಲಿ ವೀಕ್ಷಿಸಿದ ಸೂರ್ಯಾಸ್ತ ನಿಜಕ್ಕೂ ಒಂದು ಒಳ್ಳೆಯ ಅನುಭವ. ನವೆಂಬರ್‌ ತಿಂಗಳಾದ್ದರಿಂದ ಸಂಜೆಯಾಗುತ್ತಿದ್ದಂತೆ ಚಳಿ ಏರುತ್ತಿತ್ತು. ನೀರಿನ ಮಧ್ಯವಿದ್ದ ನಮಗೆ ಚಳಿ ಸ್ವಲ್ಪ ಹೆಚ್ಚೇ.. ಮತ್ತೆ ದೋಣಿಯಲ್ಲಿ ತೀರಕ್ಕೆ ತಲುಪಿದೆವು.

ಶರಾವತಿ ನದಿಗೆ 1965ರಲ್ಲಿ ಕಟ್ಟಿದ ಆಣೆಕಟ್ಟಿನಿಂದಾಗಿ ನಿರ್ಮಾಣವಾದ ಹಿನ್ನೀರ ಪ್ರದೇಶದಲ್ಲಿರುವ ಈ ಸುಂದರ ಸ್ಥಳ ವಿಂಡ್‌ ಸರ್ಫಿಂಗ್‌, ರಿವರ್‌ ರಾಫ್ಟಿಂಗ್‌ಗೆ ಫೇಮಸ್‌. ನಮ್ಮಲ್ಲಿ ಕೆಲವರು ದ್ವೀಪದಿಂದ ಬೇಗ ಹೊರಟು ರಿವರ್‌ ರಾಫ್ಟಿಂಗ್‌ ಮಾಡಿದರು. ಕೆಲವರು ವಿಂಡ್‌ ಸರ್ಫಿಂಗ್‌ ಆಟವಾಡಿ ಖುಷಿ ಪಟ್ಟರು. ನನಗ್ಯಾಕೋ ದ್ವೀಪದಲ್ಲಿಯೇ ಇನ್ನೂ ಸ್ವಲ್ಪಹೊತ್ತು ಇರೋಣವೆಂದೆನಿಸಿತು. ನದಿಯ ಮಧ್ಯದಲ್ಲಿ ಕುಳಿತು ಸುತ್ತ ಕವಿದಿರುವ ನೀರನ್ನು ವೀಕ್ಷಿಸುತ್ತಾ ಇದ್ದೆ. ಹಕ್ಕಿಗಳೆಲ್ಲ ವಾಪಾಸ್‌ ಗೂಡಿಗೆ ಬರುವ ಸಮಯವಾದ್ದರಿಂದ ಚಿಲಿಪಿಲಿ ಜೋರಾಗಿತ್ತು.. ಹಕ್ಕಿಗಳ ಕಲರವ ಕೇಳುತ್ತಾ ನೀರಿನ ಚಲುವನ್ನು ಸವಿಯುವುದು ಅದೇನೋ ಹಿತ ನೀಡುತ್ತಿತ್ತು..

ಹೊನ್ನೆಮರಡಿನ ಭಾರತೀಯ ಸಾಹಸ ಸಮನ್ವಯ ಕೇಂದ್ರ ಮತ್ತು ಅದರ ಮುಖ್ಯ ರೂವಾರಿ ಡಾ. ಎಸ್. ಎಲ್. ಎನ್. ಸ್ವಾಮಿ ಮತ್ತು ಅವರ ಪತ್ನಿ ನೊಮಿತೋ ಕಮ್ದಾರ್ ಅವರು ಈ ಪ್ರದೇಶದ ಮುತುವರ್ಜಿ ವಹಿಸಿಕೊಂಡಿದ್ದಾರೆ.
ಈ ಆಕರ್ಷಕ ಪ್ರವಾಸಿ ಕೇಂದ್ರವನ್ನು ಇನ್ನಷ್ಟು ಅಭಿವೃದ್ಧಿ ಮಾಡುವ ಅಗತ್ಯತೆ ಇದೆ. ಪ್ರವಾಸಿಗರು ಹೆಚ್ಚು ಹೆಚ್ಚು ಬಂದು ನಿಸರ್ಗದ ಸೌಂದರ್ಯವನ್ನು ಹಾಳು ಮಾಡಿಬಿಡುತ್ತಾರೆ ಎಂಬ ಕಾರಣದಿಂದ ಇಲ್ಲಿ ಅಂಗಡಿಗಳನ್ನು ಪ್ರವಾಸಿಮಂದಿರಗಳನ್ನು ನಿರ್ಮಾಣ ಮಾಡಿಲ್ಲ ಎಂದು ಸ್ಥಳೀಯರೊಬ್ಬರು ನಮಗೆ ತಿಳಿಸಿದರು. ಹೌದು ಪರಿಸರ ಸಂರಕ್ಷಣೆಯ ಜೊತೆ ಜೊತೆಗೆ ಪ್ರವಾಸಿಕೇಂದ್ರದ ಅಭಿವೃದ್ಧಿಯನ್ನೂ ಕೈಗೊಳ್ಳುವುದರಲ್ಲಿ ತಪ್ಪೇನೂ ಇಲ್ಲ ಎಂದು ನಮಗನಿಸಿತು. ಇಂಥ ಸುಂದರ ತಾಣ ಎಲೆಮರೆಯ ಕಾಯಿಯಂತೆ ಉಳಿದುಕೊಳ್ಳುವುದಕ್ಕಿಂತ ಇದೊಂದು ಪ್ರವಾಸಿಕೇಂದ್ರವಾದರೆ ಎಷ್ಟೋ ಉತ್ತಮ ಎಂಬುದು ನಮ್ಮೆಲ್ಲರ ಅಭಿಪ್ರಾಯವಾಗಿತ್ತು.

ಹೊನ್ನೆಮರಡಿನ ಸೌಂದರ್ಯವನ್ನು ಸವಿದ ನಾವೆಲ್ಲ ಮತ್ತೆ ಶಿರಸಿಯ ಕಡೆ ಹೊರಟೆವು..

 

Author : ಅಮೃತಾ ಹೆಗಡೆ

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited