Untitled Document
Sign Up | Login    
'ಪುಣೆ ಟು ಉಡುಪಿ' ಕಣ್ಣ ಕ್ಲಿಕ್ಕಿಸುವ ಒಂದು ವಿಹಂಗಮ ಯಾನ


ರೈಲುಗಾಡಿ ಪಯಣ ಅಂದರೆ ಅಲ್ಲಿ ರಾಶಿ ರಾಶಿ ಕನಸು,ಸಣ್ಣಗೆ,ನುಣ್ಣಗೆ ಕಣ್ಣ ಹೊಡೆಯೋ ನದಿಗಳ ಥಳುಕು, ಮತ್ತೊಂದು ಟ್ಯಾಕಿನ ಮೇಲೆ ಕೂತು ರೊಟ್ಟಿ ತಿನ್ನುವ ಬಡಪಾಯಿ ಮಕ್ಕಳು,ಬೆಟ್ಟ ಕಾಡಿನ ನಡುವೆ ಚಕ್ಕಂದವಾಡೋ ಮೋಡದ ಮಂಜು ಇವೆಲ್ಲಾ ಇದ್ದರೆ ಕಣ್ಣತುದಿಯಲ್ಲಿ ಉತ್ಸಾಹದ ಕಾರಂಜಿ ಇಡೀ ಪಯಣಕ್ಕೇ ಲವಲವಿಕೆ ಸಿಂಚಿಸದೇ ಇದ್ದಿತೇ? ಅಂತಹ ದಟ್ಟ ಹುಮ್ಮಸ್ಸಿನಲ್ಲೇ ಪೂರ್ಣ ಎಕ್ಸಪ್ರೆಸ್ಸ್ ಪರಿಪೂರ್ಣ ಕಾಡು ದಾಟುತ್ತಾ.. ಆನೆಯಂತೆ ಘೀಳಿಡುತ್ತಾ ಅಗರ್ಭ ಕತ್ತಲೆಯ ಸುರಂಗದೊಳಗೆ ಸುಂಯ್ ಅಂತ ಸಾಗಿ ತನ್ನ ಸದ್ದನ್ನು ನೂರ್ಮಡಿದು ಹೋಗುತ್ತಿತ್ತು.

ಕಿಟಕಿ ಬಳಿ ಕೂತು ಕಾಡೊಳಗೆ ಹುಟ್ಟಿಕೊಳ್ಳುವ ರೈಲಿನ ಹಾಡಿಗೆ ತಲೆದೂಗುವ ಹೂವು ನಾನಾಗಿದ್ದೆ. ರಾತ್ರಿ 10ಕ್ಕೆ ಪುಣೆಯಿಂದ ಹೊರಟ ರೈಲು..ರಾತ್ರಿಯ ಸುಖ ನಿದಿರೆಯನ್ನು ಕಾಣದೇ,ಯಾವುದೋ ಒಂದು ಸುಧೀರ್ಘ ಕನಸ ಹೊತ್ತು ಟ್ರ್ಯಾಕಿನಂಚಿನ ದಾರಿಯಲ್ಲಿ ನುಗ್ಗುತ್ತಿತ್ತು. ಲೋಂಡಾ,ಮೀರಜ್ ಸ್ಟೇಷನ್ನಿನಲ್ಲಿ ಸುಸ್ತಾದಂತೆ ನಿಂತುಕೊಂಡಾಗ, ಅರ್ದಂಬರ್ಧ ನಿದಿರೆ ಮತ್ತಲ್ಲೇ ತೂರಾಡುವ ಮಂದಿಗಳೆಲ್ಲಾ ನಿದಿರಾದೇವಿಗೆ ತಾಕ್ಕಾಲಿಕ ನಮಸ್ಕಾರ ಬಿದ್ದು ಲಗೇಜು ಏರಿಸಿ ಬೋಗಿ ಹತ್ತಿದರೆ, ಒಂದು ವಿಚಿತ್ರ ಫಮಲು,ವಾಸನೆಯ ಸ್ಪ್ರೇ ಹೊಡೆದಂತಾಗಿ...ಮಲಗಿದ್ದವರ ಮೂಗೆಲ್ಲಾ ಜಖಂ ಗೊಂಡು ಅವರ ನಿದ್ರೆಯೆಲ್ಲಾ ಪಾತಾಳಕ್ಕಿಳಿದು ಹೋಗುತ್ತಿತ್ತು.

ನೀವು ಪುಣೆ ಟು ಕರ್ನಾಟಕ ಗಡಿನಾಡ ಪ್ರಯಾಣ ಮಾಡಿದರೆ ಕಣ್ಣಿಗೆ ಜೊಂಪು ತರಿಸಿ ಬಿಡುವಷ್ಟು ಪ್ರಕೃತಿಯ ವಯ್ಯಾರ,ಕಾನನದ ತರಹೇವಾರಿ ಭಂಗಿಗಳೆಲ್ಲಾ..ನಿಮ್ಮ ಕ್ಯಾಮರಾ ಕಣ್ಣಲ್ಲೋ, ಅಥವಾ ಕಣ್ಣೊಳಗಣ ಮೆಮೋರಿ ಕಾರ್ಡಿನಲ್ಲೋ ಶಾಶ್ವತವಾಗಿ ತಗುಲಿ ಹಾಕಿಕೊಂಡು ಬಿಡುತ್ತದೆ.

ಹವ್ಯಾಸಿ ಛಾಯಾಗ್ರಾಹಕರು, ಕಾನನ ಕಂಡು ಎದೆಯಾಳದಲ್ಲೊಂದಿಷ್ಟು ಕಲ್ಪನೆಯ ಸಾಲುಗಳನ್ನು ಭಟ್ಟಿ ಇಳಿಸಿಬಿಡುವವರು, ಪ್ರೇಮದ ಚಿಪ್ಪಲ್ಲಿ ಕೂತು ಗಪ್ ಚುಪ್ ಎನ್ನುತ್ತಾ ಹೊಸ ಹೊಂಗನಸುಗಳನ್ನು ಹುಡುಕುವವರು, ಮದುವೆಯಾಗಿ ಹನಿಮೂನ ಜಾಮೂನು ತಿಂದು ಬರೋಣ ಅಂತ ಹೊಂಚು ಹಾಕುವವರು, ಇವರಿಗೆಲ್ಲಾ ಈ ರೋಮಾಂಚನದ ಪಯಣ ಇಷ್ಟವಾಗದೇ ಇರಲಿಕ್ಕೆ ಸಾಧ್ಯಾನೇ ಇಲ್ಲ ಬಿಡಿ. ಯಾಕಂದ್ರೆ, ಈ ರೇಲು ಟ್ರ್ಯಾಕು, ಆ ತಣ್ಣಗಿನ ನೋಟ, ಸೆಳೆವ ಬೆಡಗು, ಸಣ್ಣಗೆ ಹನಿಯೋ ಜಡಿ ಮಳೆ, ಎಲ್ಲೋ ಸದ್ದು ಮಾಡುವ ಕಾಡ ಝರಿ. ಇಂತಹ ಬಿಟ್ಟೆನೆಂದರೂ ಬಿಡದ ಮಾಯೆಯ ಮಾಯಾಜಾಲದ ಅನುಭೂತಿಯಲ್ಲಿ ಮುಳುಗಲು ಮೀನಾಮೇಶ ಎಣಿಸುವ ಮಂದಿ ಯಾರಿದ್ದಾರೆ ಹೇಳಿ? ಅನುಭವಿಸುವ ಮನಸ್ಸು, ನೋಡುವ ಕಣ್ಣು, ಜತೆಗೆ ಬೇಕಾದರೆ ಕ್ಯಾಮರಾ ಇದ್ದರೆ ಸಾಕು. ನಿಮ್ಮ ನೋಟ, ಆಟ, ಬೊಂಬಾಟಗಳ ಹಳಿ ತಪ್ಪಲು ಮಾತ್ರ ಸಾಧ್ಯಾನೇ ಇಲ್ಲ.
ಮಹಾರಾಷ್ಟೃದ ಸಣ್ಣ ಪುಟ್ಟ ಸ್ಟೇಶನ್ನುಗಳನ್ನು ದಾಟಿ..ರೇಲು ಗೋವಾದ ಗಡಿಗೆ ಬರುತ್ತಿದ್ದಂತೆಯೇ ಪ್ರಯಾಣಿಕರಲ್ಲಿ ಕೌತುಕಗಳ ನಾಯಿಕೊಡೆ ತಲೆ ಎತ್ತಲಾರಂಭಿಸುತ್ತದೆ.. ಗೋವಾ ಕರ್ನಾಟಕದ ಗಡಿಯಲ್ಲಿರುವ ಮಾಂಡೋವಿ ನದಿಯಲ್ಲಿ ಧುಮ್ಮಿಕ್ಕುವ ದೂದ್ಸಾಗರ್ ಜಲಪಾತದ ಫೋಟೋ ಹೊಡೆಯಲು..ರೇಲಿನ ಬಾಗಿಲಲ್ಲಿ ಕಣ್ಣುಗಳ ನೂಕುನುಗ್ಗಲು ದಟ್ಟೈಸಿ, ಬೆಟ್ಟದ ತಪ್ಪಲಿಂದ ಜಿಗಿಯುವ ದೂದ್ ಸಾಗರ್ ಜಲಪಾತದ ಆರ್ಭಟಕ್ಕೆ ಇಡೀ ಟ್ರೈನೇ ಉಘೇ..ಉಘೇ ಎನ್ನುತ್ತದೆ. ಹಾಲ ಸಮುದ್ರದ ಫೋರ್ಸಿಗೆ ತಮ್ಮ ಹಾಲುಗಲ್ಲದಲ್ಲೂ..ಸಂತೃಪ್ತಿ ಚಿಮ್ಮಿಸೋ..ಮಂದಿ ರೈಲು ಗಾಡಿ ಮತ್ತೊಂದು ಸುರಂಗದೊಳಗೆ ನಗ್ಗುವ ಮುಂಚೆ..ಬೆಟ್ಟದ ಹಾಲು ಹೊಳೆಯ ನೊರೆಗೆ ಮಿಲ್ಕ್ ಶೇಕಿನಂತಾಗಿ ಬಿಡುತ್ತಾರೆ.
ನಾನು ಪ್ರಯಾಣ ಮಾಡುವಾಗ ಜೂನ್ ತಿಂಗಳ ಸಣ್ಣಗಿನ ಮಳೆ ಬೀಳುತ್ತಿತ್ತಾದ್ದರಿಂದ ದಟ್ಟ ಕಾನನ, ಮಳೆಗೆ ಒದ್ದೆ ಮುದ್ದೆಯಾದ ಹಳಿ ತೀರಾ ಚೆನ್ನಾಗಿ ಕಾಣುತ್ತಿತ್ತು. ಭಾರೀ ಉದ್ದದ ಟನೆಲ್ ಒಳಗೆ ಹೋಗುತ್ತಿದಂತೆಯೇ ರೈಲು ಭಾರೀ ಜೋರಿನಲ್ಲಿ ಸಂಗೀತ ಹಾಡಲು ಶುರುಮಾಡುತ್ತಿತ್ತು. ಹಾಗೂ ಹೀಗೂ ಅಲೆದಾಡಿ ರೈಲು ಸೋನಾಲಿಯಂ ಹತ್ತಿರ ಬಂದಾಗ..ಮಳೆಗೆ ಗೊರಬು ಕಟ್ಟಿ ಓಡುವ ಮಂದಿ..ಮೂತ್ರಶಂಕೆಗೆ ಕುಳಿತ ನಾಯಿ ಯದ್ವಾತದ್ವಾ ಓಡುತ್ತಿದ್ದ ದೃಶ್ಯಗಳು ನನ್ನ ಕ್ಯಾಮರಾ ಕಣ್ಣಿನಲ್ಲಿ ಬಂಧಿಯಾಯಿತು. ಟ್ರೈನು ಕರ್ನಾಟಕ ಪ್ರವೇಶಿಸಿದಾಗ ಕರುನಾಡಿನ ಪಶ್ಚಿಮಘಟ್ಟದ ಸಾಲುಗಳು..ಮತ್ತೆ ಕಾಡೊಳಗೆ ಕಳೆದು ಹೋಗುವಂತೆ ಮಾಡಿದವು.
ಘೀಳಿಡುತ್ತಾ ರೈಲು ಉಡುಪಿಯ ಸ್ಟೇಶನ್ನಿನಲ್ಲಿ ನಿಂತಿತು..ಹಾಗೆಯೇ ಇಳಿಯುವಾಗ ಹಾದು ಹೋದ ನದಿ, ಕಾಡು, ಜಲಪಾತ, ಸುರಂಗ, ಬೆಟ್ಟ, ಆ ರೋಮಾಂಚನ, ಪುಳಕ, ನಗು, ಎಲ್ಲವೂ ಮತ್ತೆ ನುಗ್ಗಿದವು ಕಣ್ಣ ಕ್ಯಾಮರಾವನ್ನು ತೆರೆಯುತ್ತಾ..

 

Author : ಪ್ರಸಾದ್ ಶೆಣೈ ಆರ್ ಕೆ

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited