Untitled Document
Sign Up | Login    
ಉತ್ತರ ಕನ್ನಡ ಜಿಲ್ಲೆಯ ಪ್ರವಾಸಿ ಪ್ರಸಿದ್ಧ ತಾಣ ಮುರುಡೇಶ್ವರ

ಮುರುಡೇಶ್ವರದ ವಿಹಂಗಮ ನೋಟ

ಮುರುಡೇಶ್ವರ ಉತ್ತರ ಕನ್ನಡ ಜಿಲ್ಲೆಯ ಪ್ರಮುಖ ಪ್ರವಾಸಿ ತಾಣಗಳಲ್ಲೊಂದು. ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿಗೆ ಒಳಪಡುವ ಮುರುಡೇಶ್ವರಕ್ಕೆ ಎರಡು ವಿಶೇಷತೆಗಳಿಗೆ, ಭಕ್ತರನ್ನು ಸೆಳೆಯುವ ಪ್ರಖ್ಯಾತ ಮುರುಡೇಶ್ವರ ದೇವರು ಹಾಗೂ ಸುಂದರವಾಗಿ ನಿರ್ಮಿಸಲಾದ ದೇವಸ್ಥಾನದ ಸುತ್ತಮುತ್ತಲಿನ ತಾಣ. ಮುರುಡೇಶ್ವರ ದೇವಾಲಯದ ಮುಂದೆ ಗೋಚರಿಸುವ ನಿಸರ್ಗದತ್ತ ವಿಶಾಲ ಸಮುದ್ರ, ದೇವಾಲಯಕ್ಕೆ ಮತ್ತಷ್ಟು ವರ್ಚಸ್ಸು ನೀಡಿದೆ.

ಇಂಥ ಒಂದೊಳ್ಳೆ ಪ್ರವಾಸಿತಾಣಕ್ಕೆ ನಾವು ಭೇಟಿ ನೀಡಿದಾಗ ಮಧ್ಯಾಹ್ನ ಮೂರು ಗಂಟೆಯ ಸಮಯ, ಮುರುಡೇಶ್ವರ ಪ್ರವೇಶಿಸುತ್ತಿದ್ದಂತೆಯೇ ಗೋಚರಿಸಿದ ಬೃಹತ್‌ ಶಿವನ ಪ್ರತಿಮೆ, ನಮ್ಮನ್ನು ಕೈಬೀಸಿ ಕರೆಯುತ್ತಿತ್ತು. ಮುರುಡೇಶ್ವರ ದೇವಾಲಯದ ಹಿಂಭಾಗದಲ್ಲಿರುವ ಬೃಹತ್‌ ಶಿವನ ಪ್ರತಿಮೆ, ಮುರುಡೇಶ್ವರ ಮಹಿಮೆಯನ್ನು ಎತ್ತಿತೋರಿಸುವಂತಿದೆ.

ಅದು ಬೇಸಿಗೆಯ ಸಮಯವಾದ್ದರಿಂದ ಕರಾವಳಿ ಪ್ರದೇಶದಲ್ಲಿರುವ ಮುರುಡೇಶ್ವರದಲ್ಲಿ ಬಿಸಿಲಿನ ಧಗೆ ಇತ್ತು. ಹೀಗಾಗಿ ಮುರುಡೇಶ್ವರದ ದೇವಾಲಯದ ಮುಂದೆಯೇ ಇರುವ ಸಮುದ್ರದಲ್ಲಿ ನಿರ್ಮಿಸಲಾದ ಹೋಟೆಲ್‌ನಲ್ಲಿ ಸ್ವಲ್ಪಕಾಲ ವಿಶ್ರಮಿಸಿದೆವು.

ಪ್ರವಾಸಿಗರನ್ನು ಸೆಳೆಯುವ ಮರುಡೇಶ್ವರದ ವಿಶಾಲ ಸಮುದ್ರ
ನಂತರ ದೇವಾಲಯವನ್ನು ಪ್ರವೇಶಿಸಿದ ನಮಗೆ ಆತ್ಮಲಿಂಗ ಮುರುಡೇಶ್ವರನ ದರ್ಶನವಾಯಿತು. ಪೂರ್ತಿ ಕಲ್ಲಿನಿಂದಲೇ ನಿರ್ಮಿಸಲಾದ ಪುರಾತನ ದೇವಾಲಯದ ಸೊಬಗು ನಮಗೆ ಖುಷಿ ನೀಡಿತ್ತು. ದೇವಾಲಯದ ಮುಂದೆಯೇ ಇರುವ ವಿಶಾಲ ಸಮುದ್ರದ ನೋಟ ಅತ್ಯಂತ ಅಪ್ಯಾಯಮಾನವಾಗಿತ್ತು. ಹೊರಗೆ ಅದೆಷ್ಟೇ ಬಿಸಿಲಿದ್ದರೂ ಕಲ್ಲಿನ ಆ ದೇವಾಲಯದ ಒಳಗೆ ತಂಪಿನ ಅನುಭವವಾಯ್ತು. ಕಲ್ಲಿನ ದೇವಾಲಯ ತಂಪು ನೀಡಿತ್ತು.

ಮುರುಡೇಶ್ವರದ ಆಕರ್ಷಣೆಗಳಲ್ಲೊಂದಾದ ಬೃಹತ್ ಶಿವಮೂರ್ತಿ, 123 ಅಡಿ ಎತ್ತರದ ಭವ್ಯ ಮೂರ್ತಿಯಾಗಿದ್ದು, ಏಷ್ಯಾದಲ್ಲಿಯೇ ಅತೀ ಎತ್ತರದ ಶಿವಮೂರ್ತಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. 10 ದಶ ಲಕ್ಷ ರೂಪಾಯಿ ವೆಚ್ಚದಲ್ಲಿ ಈ ಮಹಾ ಮೂರ್ತಿಯನ್ನು ನಿರ್ಮಾಣಮಾಡಲಾಗಿದೆ. ನಮ್ಮ ರಾಜ್ಯದವರೇ ಆದ ಶಿವಮೊಗ್ಗದ ಕಾಶಿನಾಥ ಮತ್ತು ಅವರ ಪುತ್ರ ಶ್ರೀಧರ್ ನೇತೃತ್ವದ ಶಿಲ್ಪಿಗಳ ಗುಂಪು ಈ ಬೃಹತ್‌ ಈಶ್ವರನನ್ನು ನಿರ್ಮಿಸಿದೆ. ದೇವಾಲಯದ ಎದುರಿಗೆ 20 ಅಂತಸ್ತಿನ ಬಹು ಎತ್ತರದ ಗೋಪುರವನ್ನು ನಿರ್ಮಿಸಲಾಗಿದೆ.

ಕೇವಲ ಪುಣ್ಯ ಕ್ಷೇತ್ರ ಮಾತ್ರವಾಗಿದ್ದ ಮುರುಡೇಶ್ವರವನ್ನು ಒಂದು ಪ್ರೇಕ್ಷಣೀಯ ಸ್ಥಳವನ್ನಾಗಿ ಮಾಡಿದ್ದು ಶ್ರೀ ಆರ್‌.ಎನ್‌ ಶೆಟ್ಟಿಯವರು. ದೇವಾಲಯದ ಸುತ್ತಮುತ್ತ ಸುಂದರ ಉದ್ಯಾನವನ ಮತ್ತು ಹಲವು ರಾಮಾಯಣ ಮಹಾಭಾರತ ಪುರಾಣಪ್ರಸಿದ್ಧ ಕಥೆಯನ್ನು ಹೇಳುವ ಪ್ರತಿಮೆಗಳನ್ನು ರಚಿಸಲಾಗಿದೆ. ಆ ಸುಂದರ ಉದ್ಯಾನವನದಲ್ಲಿ ಕಂಡುಬರುವ ಬೃಹತ್ ರಾಜಗೋಪುರ, ಬೃಹತ್ ಭಗೀರಥ, ಪಾರ್ಥನಿಗೆ ಶ್ರೀಕೃಷ್ಣ ಭಗವದ್ಗೀತೆ ಭೋಧಿಸುತ್ತಿರುವ ಕಲಾಕೃತಿ ಅತ್ಯಂತ ಸುಂದರವಾಗಿದೆ.
ಮುರುಡೇಶ್ವರವೂ ಆತ್ಮಲಿಂಗದ ಒಂದು ತುಣುಕು ಎಂಬ ಪ್ರತೀತಿ ಇದೆ. ರಾವಣ ತನ್ನ ತಪಸ್ಸಿನಿಂದ ಶಿವನನ್ನು ಒಲಿಸಿ ಅತ್ಮಲಿಂಗವನ್ನು ಪಡೆದಾಗ, ಗಣೇಶ ಒಂದು ವಟುವಿನ ವೇಷ ಧರಿಸಿ ಬಂದು ಆತ್ಮಲಿಂಗವನ್ನು ಭೂಮಿಗಿಟ್ಟು ಬಿಡುತ್ತಾನೆ. ಭೂಮಿಗೆ ಅಂಟಿಹೋಗುವ ಆತ್ಮಲಿಂಗವನ್ನು ರಾವಣ ಕಿತ್ತು ಕಿತ್ತು ಐದು ತುಂಡುಗಳನ್ನು ಮಾಡಿ ಎಸೆಯುತ್ತಾನೆ. ಆ ಐದು ತುಂಡುಗಳಲ್ಲಿ ಈ ಮುರುಡೇಶ್ವರ ಲಿಂಗವೂ ಒಂದು ಎಂಬ ನಂಬಿಕೆ ಇದೆ. ಹೀಗಾಗಿ ಮುರುಡೇಶ್ವ ಶಿವಾಲಯ ಪ್ರಾಚೀನ ಕಾಲದಿಂದಲೂ ಪೌರಾಣಿಕವಾಗಿ ಪ್ರಸಿದ್ಧಿಯಾಗಿತ್ತು. ಆದರೆ, ಚಿಕ್ಕ ದೇವಾಲಯ ಮಾತ್ರವೇ ಇದ್ದ ಈ ಜಾಗದಲ್ಲಿ ಶ್ರೀ. ಆರ‍್.ಎನ್‌ ಶೆಟ್ಟಿ ಒಂದು ಪ್ರವಾಸಿ ತಾಣವನ್ನೇ ನಿರ್ಮಾಣ ಮಾಡಿದರು.

ದೇವಾಲಯದ ಸುತ್ತಮುತ್ತಲಿನ ಆ ಎಲ್ಲಾ ಕಲಾಕೃತಿಗಳು, ಉದ್ಯಾನವನ್ನೆಲ್ಲ ವೀಕ್ಷಿಸಿದ ನಂತರ ನಾವೆಲ್ಲ ಸಮುದ್ರದ ದಂಡೆಗೆ ತೆರಳಿದೆವು. ಆಗ ಸಂಜೆ 5.30ರ ಸಮಯ. ಸಂಜೆವೆ ವೇಳೆಗೆ ಸಮುದ್ರ ತೀರ ಪ್ರವಾಸಿಗರಿಂದ ತುಂಬಿತ್ತು. ಅಲ್ಲಿಯೇ ಇದ್ದ ಚುರುಮುರಿ, ಮಂಡಕ್ಕಿ ಖರೀದಿಸಿ ಸಮುದ್ರ ದಂಡೆಗೆ ಹೋಗಿ ನಿಂತ ನಮಗೆಲ್ಲ ತುಂಬ ಖುಷಿಯಾಯ್ತಿ. ಉಕ್ಕಿ ಬರುತ್ತಿದ್ದ ತೆರೆಗಳು, ಹತ್ತಿರ ಹೋಗಿ ನಿಂತ ನಮ್ಮ ಪಾದ ಸ್ಪರ್ಷಿಸುತ್ತಿದ್ದ ನೀರು, ನಾವು ನಿಂತ ಜಾಗವನ್ನೇ ತೊಳೆದುಕೊಂಡು ಹೋಗುತ್ತಿದ್ದ ಸಮುದ್ರದ ಅಲೆಗಳು.. ವಾವ್‌..! ನಿಜವಾಗಿಯೂ ಮುರುಡೇಶ್ವರ ಪ್ರವಾಸ ಒಂದು ಸುಂದರ ಅನುಭವ ನೀಡಿತ್ತು.

 

Author : ಅಮೃತಾ ಹೆಗಡೆ

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited