Untitled Document
Sign Up | Login    
ಮೇಕೆದಾಟು

ಕಿರಿದಾದ ಜಾಗದಲ್ಲಿ ಆಳವಾಗಿ ಹರಿದ ಕಾವೇರಿ ...

ಕಾವೇರಿ ನದಿ ಸೃಷ್ಠಿಸಿದ ಅದೆಷ್ಟೋ ಅಚ್ಚರಿಗಳಲ್ಲಿ ಈ ಮೇಕೆದಾಟು ಒಂದು. ಕಂದಕದಂತಹ ಆಳ ಆದರೆ ಮೇಕೆ ದಾಟುವಷ್ಟು ಮಾತ್ರ ಅಗಲವುಳ್ಳ ಅಚ್ಚರಿಯ ಸ್ಥಳ ಇದು. ಇದೇ ಕಾರಣಕ್ಕೆ ಈ ಪ್ರದೇಶಕ್ಕೆ ಮೇಕೆ ದಾಟು ಎಂಬ ಹೆಸರು ಬಂತು.

ಬೆಂಗಳೂರಿನಿಂದ ಕೇವಲ 90 ಕಿ.ಮೀ ದೂರದಲ್ಲಿರುವ ಮೇಕೆದಾಟು ಬೆಂಗಳೂರಿಗರ ಒಂದು ದಿನದ ಪ್ರವಾಸಕ್ಕೆ ಹೇಳಿ ಮಾಡಿಸಿದ ತಾಣ. ಬೆಳಗ್ಗೆಯೇ ಹೊರಟ ನಮ್ಮ ಗೆಳೆಯರ ತಂಡಕ್ಕೆ ಸಂತಸ, ಆಶ್ಚರ್ಯ, ಖುಷಿ ನೀಡಿದ ಜಾಗ ಇದು.

ಒಂದು ದಿನವನ್ನು ಪೃಕೃತಿಯ ಮಡಿಲಿನಲ್ಲಿ ಕಳೆಯಬೇಕು ಎಂಬ ಉದ್ದೇಶದಿಂದ ಮೂರು ಬೈಕ್‌ಗಳಲ್ಲಿ ಆರು ಜನ ಹೊರಟಿದ್ದೆವು. ಹಾಗಾಗಿ ಊಟ ತಿಂಡಿ ಕಟ್ಟಿಕೊಂಡೇ ಬೆಂಗಳೂರು ಬಿಟ್ಟೆವು. ಮೂರು ತಾಸಿನ ಪ್ರಯಾಣದ ನಂತರ ಕಾವೇರಿ-ಅರ್ಕಾವತಿ ನದಿಯ ಸಂಗಮ ಸಿಕ್ಕಿತು. ಅಲ್ಲಿಂದ ನಾಲ್ಕು ಕಿ.ಮೀ ಮೇಕೆದಾಟು ನಾಲ್ಕು ಕಿ.ಮೀ ದೂರವಿದೆ. ಎಲ್ಲರೂ ಅಲ್ಲಿಂದಲೇ ನಡೆಯಲು ಪ್ರಾರಂಭಿಸಿದೆವು. ಒಂದು ತಾಸಿಗೂ ಹೆಚ್ಚು ಕಾಲ ನಡೆದ ನಂತರ ಮೇಕೆ ದಾಟು ಸಿಕ್ಕಿತ್ತು.

ಕಾವೇರಿಯ ಅದೆಷ್ಟೋ ಅಚ್ಚರಿಗಳಲ್ಲಿ ಈ ಮೇಕೆದಾಟುವೂ ಒಂದು..
ಎಂಥ ಅದ್ಭುತ ಸ್ಥಳ! ನಾವು ಬೇಸಿಗೆಯಲ್ಲಿಯೇ ಹೋಗಿದ್ದ ಕಾರಣ, ನೀರು ಸ್ವಲ್ಪವೇ ಇತ್ತು. ನದಿಯ ಕಲ್ಲುಗಳೆಲ್ಲ ಒಣಗಿದ್ದವು. ಕಲ್ಲಿನ ಮೇಲಿನ ನೀರಿನ ಕೆತ್ತನೆ ಮಾತ್ರ ಅದ್ಭುತವಾಗಿತ್ತು. ಅದೆಷ್ಟೋ ವರ್ಷಗಳಿಂದ ಸತತವಾಗಿ ಹರಿಯುತ್ತಿರುವ ನೀರಿನಿಂದ ಕೊರೆದು ಕಲ್ಲುಗಳು.

ಮತ್ತೂ ಅಚ್ಚರಿ ಮೂಡಿಸಿದ್ದು ಏನೆಂದರೆ, ಮೇಕೆ ದಾಟು ಎಂಬ ನಿರ್ದಿಷ್ಠ ಪ್ರದೇಶ. ಅತ್ಯಂತ ಕಿರಿದಾಗಿದ್ದು ಆಳವಾಗಿರುವ ಈ ಜಾಗವನ್ನು ಅತೀ ಹತ್ತಿರದಿಂದ ನೋಡಿದ ನನಗೆ ರೋಮಾಂಚನವಾಗಿತ್ತು. ಅಲ್ಲಿಯೇ ಪೃಕೃತಿಗೊಂದು ಹ್ಯಾಟ್ಸ್‌ಆಫ್‌ ಹೇಳಿ ಬಿಟ್ಟೆ.

ನಂತರ ಅಲ್ಲಿಯೇ ಮರದ ನೆರಳಿನಲ್ಲಿ ಕುಳಿತು ಊಟ ಮಾಡಿ, ನೀರಿನಲ್ಲಿ ಸ್ವಲ್ಪ ಕಾಲ ಆಟ ಆಡಿ.. ಅಲ್ಲೆಲ್ಲಾ ಸುತ್ತಾಡಿ, ಬಂಡೆ ಕಲ್ಲುಗಳನ್ನು ಹತ್ತಿ ಇಳಿದು ಖುಷಿ ಪಟ್ಟೆವು. ನಂತರ ಸಂಜೆ ಐದು ಗಂಟೆಯಾಗುತ್ತಿದ್ದವಂತೆ ಅಲ್ಲಿಂದ ಹೊರಟೆವು.
ಹೋಗುವಾಗ ಹುರುಪಿನಲ್ಲಿ ಹೋಗಿದ್ದ ನಮಗೆ ವಾಪಾಸ್ ಬರುವಾಗ ಮಾತ್ರ ಮೈಯಲ್ಲಿ ಶಕ್ತಿಯೇ ಇರಲಿಲ್ಲ. ಮೇಕೆ ದಾಟುವಿನಿಂದ ಕಾವೇರಿ-ಅರ್ಕಾವತಿ ನದಿಯ ಸಂಗಮದ ತನಕ ನಾವು ನಡೆಯಲೇ ಬೇಕಾಗಿತ್ತು.

ಮತ್ತೆ ನಾಲ್ಕು ಕಿ.ಮಿ ನಡೆದು ಕಾವೇರಿ ಅರ್ಕಾವತಿ ನದಿಯ ಸಂಗಮವನ್ನು ತಲುಪಿದೆವು. ಸಂಗಮ ತಲುಪುವಾಗ ಸಂಜೆ 7 ಗಂಟೆಯಾಗಿತ್ತು. ಪೃಕೃತಿಯ ಒಡಲಿನಲ್ಲಿ ಒಂದು ದಿನವನ್ನು ಕಳೆದ ತೃಪ್ತಿಯಲ್ಲಿ ಅತ್ಯಂತ ಸಂತೋಷದಿಂದ ಬೆಂಗಳೂರಿಗೆ ಹಿಂದಿರುಗಿದೆವು.

ಮಳೆಗಾಲದಲ್ಲಿ ಮೇಕೆ ದಾಟು ಪ್ರದೇಶಕ್ಕೆ ಹೋಗುವುದು ಅಪಾಯಕಾರಿ. ತುಂಬಿ ಹರಿಯುವ ನದಿಯಲ್ಲಿ ಅವಗಢಗಳಾಗುವ ಸಂಭವ ಹೆಚ್ಚು ಹೀಗಾಗಿ ಮಳೆಗಾಲದ ನಂತರ ಇಲ್ಲಿಗೊಂದು ಟ್ರಿಪ್‌ ಹಾಕಿ. ಬೆಂಗಳೂರಿಗೆ ಹತ್ತಿರವಿರುವ ಸುಂದರ ತಾಣಗಳಲ್ಲಿ ಒಂದಾದ ಮೇಕೆ ದಾಟು ನಿಜವಾಗಿಯೂ ಪ್ರವಾಸಿಗರಿಗೆ ಖುಷಿ ನೀಡುವಂತಹ ಸ್ಥಳ ಎಂಬುದರಲ್ಲಿ ಸಂಶಯವಿಲ್ಲ.
ಬೆಂಗಳೂರಿನಿಂದ ಮೇಕೆ ದಾಟು ಪ್ರದೇಶಕ್ಕೆ ತೆರಳಲು ಕೆ.ಎಸ್‌.ಆರ‍್.ಟಿ.ಸಿ ಮತ್ತು ಖಾಸಗಿ ಬಸ್‌ಗಳೂ ಕೂಡ ಇವೆ.

 

Author : ಅಮೃತಾ ಹೆಗಡೆ

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited