Untitled Document
Sign Up | Login    
ಯಾಣ...ಇದೊಂದು ಅದ್ಭುತ ತಾಣ

ಭೈರವೇಶ್ವರ ಶಿಖರ ( ಹಿರಿಬಂಡೆ)

ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯಲ್ಲಿ ಹಾದು ಹೋಗಿರುವ ಪಶ್ಚಿಮ ಘಟ್ಟಗಳ ಶ್ರೇಣಿಯಲ್ಲಿರುವ ಅತ್ಯಂತ ರಮ್ಯ ತಾಣವೇ ಯಾಣ. ಬೃಹದಾಕಾರದ ಕಲ್ಲು ಇಲ್ಲಿಯ ವಿಶೇಷ. ಮೊನಚಾಗಿರುವ ಬೃಹತ್‌ ಶಿಲೆಯೇ ಯಾಣದ ಆಕರ್ಷಣೆ.

ಅನೇಕ ಆಶ್ಚರ್ಯಗಳನ್ನು, ಸೌಂದರ್ಯಗಳನ್ನು ತನ್ನಲ್ಲಿಟ್ಟುಕೊಂಡು ಪೋಷಿಸುತ್ತಿರುವ ಪಶ್ಚಿಮಘಟ್ಟಗಳ ಪರ್ವತಗಳ ಪ್ರದೇಶಗಳಲ್ಲಿ ಇರುವ ಅದೆಷ್ಟೋ ಅದ್ಭುತಗಳಲ್ಲಿ ಯಾಣವೂ ಒಂದು. ಅಂತಹ ವಿಶೇಷ ತಾಣವನ್ನು ನೋಡುವುದಕ್ಕಾಗಿಯೇ ನಮ್ಮ ಸ್ನೇಹಿತರ ತಂಡ ಅಲ್ಲಿಗೆ ಭೇಟಿ ನೀಡಿತ್ತು.

ಶಿರಸಿಯಿಂದ ಸುಮಾರು 45 ಕಿ.ಮೀ ದೂರದಲ್ಲಿರುವ ಈ ಪ್ರದೇಶಕ್ಕೆ ಖಾಸಗಿ ವಾಹನಗಳಲ್ಲಿ ನಮ್ಮ ತಂಡ ತೆರಳಿತ್ತು. ಡಿಸೆಂಬರ್‌ ತಿಂಗಳ ಚಳಿಯಲ್ಲಿ ಶಿರಸಿಯಿಂದ ಬೆಳಗ್ಗೆ ಬೇಗನೇ ಹೊರಟಿದ್ದೆವು. ಯಾಣಕ್ಕೆ ಹೋಗುವ ದಾರಿಯೂ ಕೂಡ ಅಷ್ಟೇ ಸುಂದರ. ಚಳಿಗಾಲದ ದಿನಗಳಾಗಿದ್ದರಿಂದ ಮುಂಜಾನೆಯ ಆ ಮಂಜು ಮುಸುಕಿದ ವಾತಾವರಣ ನಮಗೆಲ್ಲ ಆಹ್ಲಾದ ನೀಡಿತ್ತು. ಮಂಜಿನೊಂದಿಗೆ ಮಿಂದೆದ್ದಂತೆ ಕಾಣುವ ಮರಗಿಡಗಳೆಲ್ಲ ಬಾಗಿ ಬಾಗಿ ಮುಂಜಾನೆಯ ಶುಭ ಸಂದೇಶ ನೀಡುತ್ತಿದ್ದವು.

ಯಾಣದ ಒಳಗಿರುವ ಗುಹೆಯ ಒಂದು ನೋಟ..
ಯಾಣದ ಹತ್ತಿರ ಸಮೀಪಿಸುತ್ತಿದ್ದಂತೆ ಮತ್ತೂ ದಟ್ಟವಾದ ಕಾಡು. ಕಾಡಿನ ನಡುವೆಯೇ ಇರುವ ರಸ್ತೆ. ಎತ್ತರವಾದ ಮರಗಳ ನಡುವೆ ನುಸುಳಿರುವ ರಸ್ತೆಯಲ್ಲಿ ನಮ್ಮ ವಾಹನ ಚಲಿಸುತ್ತಿತ್ತು. ಅಂತೂ ಶಿರಸಿಯಿಂದ ಸುಮಾರು 1 ಗಂಟೆಗಳ ಕಾಲದ ಪ್ರಯಾಣದಲ್ಲಿ ಸಮಯ ಹೋದದ್ದೇ ತಿಳಿದಿರಲಿಲ್ಲ. ಯಾಣಕ್ಕೆ ಬಂದು ನಿಂತ ನಮ್ಮ ವಾಹನದಿಂದ ಇಳಿದು, ಆ ಅದ್ಭುತ ಶಿಲೆ ಇರುವಲ್ಲಿಗೆ ಕಾಲು ನಡಿಗೆಯಲ್ಲಿಯೇ ಹೊರಟೆವು. ಯಾಣದ ಸಮೀಪದವರೆಗೂ ರಸ್ತೆಯ ಸೌಲಭ್ಯವಾಗಿರುವ ಕಾರಣ, ಕೇವಲ 1 ಕಿ.ಮೀ ನಡೆದರೆ ಸಾಕು.

ಯಾಣದ ಆ ಅದ್ಭುತ ಶಿಲೆ ನಮ್ಮ ಕಣ್ಣಿಗೆ ಕಾಣುತ್ತಿದ್ದಂತೆ... ನಾವೆಲ್ಲ ಮೂಕ ವಿಸ್ಮಿತರಾದೆವು.. ಪ್ರಕೃತಿಯ ವಿಸ್ಮಯ ಕಂಡು ಅಲ್ಲಿರುವ ಯಾರಿಗೂ ಮಾತೇ ಹೊರಡಲಿಲ್ಲ. ಆ ಶಿಲೆಯ ಬುಡದಲ್ಲಿ ಒಂದು ಶಿವಾಲಯವಿದೆ. ಮೊದಲು ನಾವೆಲ್ಲ ಶಿವಾಲಯದ ಒಳಹೊಕ್ಕು ದೇವರ ದರ್ಶನ ಮಾಡಿದೆವು. ನಂತರ ಯಾಣದ ಬೃಹತ್‌ ಶಿಲೆಯನ್ನು ವೀಕ್ಷಿಸಲು ಹೊರಟೆವು.

ಅನುಪಮವಾದ ಮಹಾ ಶಿಲೆಯ ಒಳಗೆ ಗುಹೆಯೂ ಇದೆ. ಶಿಲೆಯ ಒಳಗಿರುವ ಗುಹೆಯೊಳಗೆ ಪ್ರವಾಸಿಗರ ಸಂಚಾರಕ್ಕೆಂದೇ ದಾರಿಯನ್ನೂ ಮಾಡಲಾಗಿದೆ. ಹೀಗಾಗಿ ಸುಗಮವಾಗಿ ನಾವು ಯಾಣದ ಗುಹೆಯೊಳಗೆ ಪ್ರವೇಶಿಸಿದೆವು. ಎಂಥ ಅದ್ಭುತ ಸ್ಥಳ.. ಹೊರಗಡೆ ಎಷ್ಟೇ ಬಿಸಿಲಿದ್ದರೂ ಒಳಗೆ ಮಾತ್ರ ನಡುಕ ತರುವ ಚಳಿ.. ಅಲ್ಲಲ್ಲಿ ಬಾವಲಿಗಳು, ಮೇಲಿನಿಂದ ಇಣುಕುವ ಬಿಸಿಲು ಕೋಲುಗಳು... ಅಬ್ಬಾ! ಗುಹೆಯೊಳಗೆ ಪ್ರವೇಶಿಸಿದ ನಮಗೆಲ್ಲ ನಿಜವಾಗಿಯೂ ರೋಮಾಂಚವಾಗಿದ್ದಂತೂ ಸುಳ್ಳಲ್ಲ. ನಮ್ಮ ಧ್ವನಿ ಪ್ರತಿಧ್ವನಿಯಾಗಿ ನಮಗೇ ಕೇಳಿಸುತ್ತಿದ್ದವು. ಹೀಗಾಗಿ ನಮ್ಮ ಹೆಸರನ್ನು ನಾವೇ ಕೂಗಿಕೊಂಡು ಖುಷಿ ಪಟ್ಟೆವು.
ಯಾಣಕ್ಕೆ ಹೋಗುವಾಗ ನಾವು ಸಾಗಿರುವ ಕಾಡಿನ ನಡುವೆಯ ಕಾಲುದಾರಿ...
ಈ ಯಾಣದ ಹಿರಿಬಂಡೆ 120 ಮೀಟರ‍್ ಎತ್ತರವಾಗಿದ್ದು, ಸುಮಾರು ಅಷ್ಟೇ ಅಗಲವಾಗಿದೆ. ಈ ಬಂಡೆಯ ಮಧ್ಯದಲ್ಲಿಯೇ ಜಲ ಸಂಚಯವೂ ಇದೆ. ಬೃಹತ್‌ ಬಂಡೆಯಿಂದ ನೀರು ಒಸರುವುದು ನಿಜವಾಗಿಯೂ ಅದ್ಭುತವಲ್ಲದೆ ಇನ್ನೇನು..? ಈ ಬೃಹತ್‌ ಬಂಡೆಯ ಬುಡದಲ್ಲಿರುವ ಸುಮಾರು 2 ಮೀಟರ್‌ ಎತ್ತರವಿರುವ ಭೈರವೇಶ್ವಲಿಂಗವು ತಾನಾಗಿಯೇ ಉದ್ಭವವಾಗಿದೆ ಎಂಬ ಪ್ರತೀತಿ ಇದೆ. ಹಾಗೇ ಶಿಖರದ ಮಧ್ಯದಲ್ಲಿ ಒಸರುವ ನೀರು ವರ್ಷವಿಡೀ ಭರವೇಶ್ವರ ಲಿಂಗದ ಮೇಲೆ ಬಿದ್ದು ಶಿವನಿಗೆ ಅಭಿಷೇಕ ಮಾಡುತ್ತದೆ. ಪ್ರತಿ ವರ್ಷ ಶಿವರಾತ್ರಿಯ ದಿನ ಯಾಣದ ಭೈರವೇಶ್ವರ ದೇವ, ವಿಶೇಷ ಪೂಜೆಯನ್ನು ಸ್ವೀಕರಿಸುತ್ತಾನೆ. ಅಂದು ಭಕ್ತರು ದೊಡ್ಡ ಸಂಖ್ಯೆಯಲ್ಲಿ ಭೇಟಿ ನೀಡಿ, ಶಿವನ ಪೂಜೆ ಮಾಡಿ ಪುನೀತರಾಗುತ್ತಾರೆ,

ಸ್ಕಂದ ಪುರಾಣದಲ್ಲಿ ಕೂಡ ಇದೇ ಯಾಣದ ಉಲ್ಲೇಖವಿದೆಯಂತೆ. ಶಿವನಿಂದ ವರಪಡೆದ ಭಸ್ಮಾಸುರ ಶಿವನನ್ನೇ ಭಸ್ಮ ಮಾಡಲು ಹೊರಟಾಗ, ಶಿವ ಈ ಪ್ರದೇಶಕ್ಕೆ ಬಂದು ಯಾಣ ಶಿಲೆಯೊಳಗೆ ಅಡಗಿ ಕುಳಿತಿದ್ದನಂತೆ. ಆ ನಂತರ ಮೋಹಿನಿಯ ವೇಶದಲ್ಲಿ ಬಂದ ವಿಷ್ಣು ಭಸ್ಮಾಸುರನನ್ನು ಮರುಳು ಮಾಡಿ, ಭಸ್ಮಾಸುರನನ್ನು ಇಲ್ಲಿಯೇ ಹತ್ಯೆ ಮಾಡಿದ್ದಾನೆ ಎಂಬ ಪ್ರತೀತಿಯೂ ಇದೆ. ಇಲ್ಲಿಯ ಮಣ್ಣೂ ಕೂಡ ವಿಶಿಷ್ಠವಾದ ಕಪ್ಪು ಬಣ್ಣವನ್ನು ಹೊಂದಿದ್ದು, ಭಸ್ಮವನ್ನು ಹೋಲುತ್ತದೆ. ಹೀಗಾಗಿ ಭಸ್ಮಾಸುರನ ಕಥೆಗೆ ಈ ಮಣ್ಣು ಪುಷ್ಠಿ ನೀಡುತ್ತದೆ.

ಯಾಣದ ಹಿರಿಬಂಡೆಯ ಮುಂದೆ ನಿಂತರೆ ಹಿರಿಬಂಡೆಗೇ ಹೋಲುವ ಶಿಲಾಶಿಖರವೊಂದು ದೂರದಲ್ಲಿ ಗೋಚರಿಸುತ್ತದೆ. ಇದಕ್ಕೆ ಮೋಹಿನಿ ಶಿಖರವೆಂದು ಹೆಸರು. ಇಂಥ ಇನ್ನೂ ಹಲವು ಕಿರಿಯ ಬಂಡೆಗಳು ಸುತ್ತಮುತ್ತಲಿನ ಪರಿಸರದಲ್ಲಿ ಇವೆ ಎಂದು ಸ್ಥಳೀಯರೊಬ್ಬರು ನಮಗೆ ತಿಳಿಸಿದರು.
ಆಶ್ಚರ್ಯವೇನೆಂದರೆ ಇಲ್ಲಿ ಅನೇಕ ಜೇನುಗೂಡುಗಳಿವೆ. ಹಿರಿಬಂಡೆಯಲ್ಲಿರುವ ಶಿವಾಲಯದ ಸುತ್ತಮುತ್ತ ಜೇನುಗಳು ಗೂಡುಕಟ್ಟಿವೆ. ಇವು ಯಾವತ್ತೂ ಇಲ್ಲಿಗೆ ಬರುವ ಪ್ರವಾಸಿಗರಿಗೆ ತೊಂದರೆ ಕೊಟ್ಟಿಲ್ಲವಂತೆ. ಜೇನು ಈ ಪ್ರದೇಶದಲ್ಲಿ ಅತೀ ಸಾಮಾನ್ಯವಂತೆ.

ಯಾಣವನ್ನು ವೀಕ್ಷಿಸಿದ ನಾವೆಲ್ಲ ಮತ್ತೆ ಶಿರಸಿಗೆ ಹೊರಟೆವು. ಮಟ ಮಟ ಮಧ್ಯಾಹ್ನನ ಸಮಯದಲ್ಲಿಯೂ ಇಲ್ಲಿ ಮಾತ್ರ ಆಯಾಸವಾಗುವುದಿಲ್ಲ. ಮಲೆನಾಡಿನ ತಂಪು ಪ್ರದೇಶದಲ್ಲಿರುವ ಯಾಣವನ್ನು ನೋಡಿದ ನಮಗೆ ಧನ್ಯ ಎಂದೆನಿಸಿದ್ದಂತೂ ಸುಳ್ಳಲ್ಲ.

 

Author : ಅಮೃತಾ ಹೆಗಡೆ

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited