Untitled Document
Sign Up | Login    
ಊಟಿ.. ಮಧುರ ಅನುಭೂತಿ..

ಊಟಿಯ ಪ್ರಸಿದ್ಧ ಬೋಟಾನಿಕಲ್‌ ಗಾರ್ಡನ್‌

ರಮ್ಯ ಮನೋಹರ ಗಿರಿವನಗಳು ... ಒಂದಕ್ಕಿಂತ ಒಂದು ಎತ್ತರ ಶಿಖರಗಳ ಸಾಲು ಸಾಲು.. ಎಲ್ಲಿ ನೋಡಿದರಲ್ಲಿ ಹೂಗಳದೇ ಕಾರು ಬಾರು.. ಹಚ್ಚ ಹಸುರಿನ ಚಹಾ ತೋಟಗಳು, ಇವೆಲ್ಲ ಕಣ್ಣಿಗೆ ಕಟ್ಟುವುದು ಭೂಲೋಕದ ಸ್ವರ್ಗ ಊಟಿಯಲ್ಲಿ. ಮನಸ್ಸಿಗೆ ಮುದ ನೀಡುವ ಅಲ್ಲಿಯ ಅಹ್ಲಾದ ವಾತಾವರಣವನ್ನು ಅನುಭವಿಸಲೆಂದೇ ಲಕ್ಷಾಂತರ ಪ್ರವಾಸಿಗಳು ಇಲ್ಲಿಗೆ ಭೇಟಿ ನೀಡುತ್ತಾರೆ. ಅದೆಷ್ಟೋ ನವ ದಂಪತಿಗಳ ನವ ಜೀವನದ ನವ ಮಜಲು ಪ್ರಾರಂಭವಾಗುವುದು ಕೂಡ ಊಟಿಯಿಂದಲೇ. ಅದಕ್ಕಾಗಿಯೇ ಊಟಿ ಮಧುಚಂದ್ರಕ್ಕೆ ಹೆಸರುವಾಸಿ.

ಊಟಿಗೆ ಹೋಗುವ ದಾರಿಯೂ ಕೂಡ ಅಷ್ಟೇ ಅದ್ಬುತ. ತಿರುವಿರುವ ದಾರಿಯಲ್ಲಿ ಸಾಗುವ ವಾಹನ.. ತಟ್ಟನೆ ಎದುರಾಗುವ ತಿರುವು,ತಿರುವಿನಲ್ಲಿ ಒಮ್ಮೆಲೆ ಎದರುರಾಗುವ ವಾಹನಗಳು, ಶಿಖರ ಏರಿದಂತೆ, ತಂಪಾದ ಗಾಳಿ ಮೈದಡವಿ ಊಟಿಗೆ ಸ್ವಾಗತ ಹೇಳುವ ಪರಿ.. ವಾಹ್‌! ಮಾತಿಗೆ ಮೀರಿದ ಅನುಭವ ಅದು. ಪರ್ವತದ ಸುತ್ತಲೂ ಸುತ್ತುಗಟ್ಟಿರುವ ಊರು, ಗಿರಿ ಮಧ್ಯದಲ್ಲಿ, ಶಿಖರದ ಮೇಲೆಲ್ಲ ಗೂಡಿನಂತೆ ಕಾಣುವ ಮನೆಗಳು, ಹಸಿರು ಹಾಸಿನಲ್ಲಿ ಅಲ್ಲಲ್ಲಿ ಗೂಡು ಕಟ್ಟಿದಂತೆ ಭಾಸವಾಗುವ ಆ ಮನೆಗಳೆಲ್ಲ ಊಟಿಯ ಕುತೂಹಲತೆಯನ್ನು ಮತ್ತಷ್ಟು ಹೆಚ್ಚಿಸುತ್ತವೆ.

ಉದಕ ಮಂಡಲ, ನೀಲಗಿರಿ ಎಂದೂ ಕರೆಯಲ್ಪಡುವ ತಮಿಳುನಾಡಿನ ಊಟಿಯ ವರ್ಣನೆಯನ್ನು ಕೇಳಿದ್ದ, ಫೋಟೋವನ್ನಷ್ಟೇ ನೋಡಿದ್ದ ನನಗೆ, ನಮ್ಮ ಬಸ್ಸು ಊಟಿ ತಲುಪಿದಾಗ ಅದೇನೋ ಹೊಸ ಅನುಭೂತಿ, ತಂಪು ವಾತಾವರಣದ ಅಹ್ಲಾದ ಮುದ ನೀಡಿತ್ತು. ಸಂಜೆ 6 ಗಂಟೆಯ ವೇಳೆಗೆ ಊಟಿಯನ್ನು ತಲುಪಿದ ನಾವು ಊಟಿಯ ಪ್ರಸಿದ್ಧ ಹೋಟೆಲ್‌ಗಳಲ್ಲಿ ಒಂದಾದ ಹೋಟೆಲ್‌ ಲೇಕ್‌ ವ್ಯೂವ್‌ಗೆ ಹೋಗಿ ತಿಂಡಿ ತಿಂದು, ಲಗೇಜ್‌ಗಳ ಭಾರದಿಂದ ಮುಕ್ತಿ ಹೊಂದಿ, ಊಟಿ ಸಿಟಿಯ ಒಂದು ರೌಂಡ್‌ಅಪ್‌ಗಾಗಿ ಹೊರಟೆವು. ಹೋಟೆಲ್‌ನಿಂದ ಬೋಟ್‌ ಹೌಸ್‌ ಲೇಕ್‌ ಅತೀ ಸಮೀಪದಲ್ಲಿ ಇದ್ದುದ್ದರಿಂದ ಮೊದಲು ಅಲ್ಲಿಗೇ ಭೇಟಿ ನೀಡಿದೆವು.

ವಿಹಂಗಮ ನೋಟ..
ಬೋಟ್‌ ಹೌಸ್‌ ಲೇಕ್‌ ಪ್ರವಾಸಿಗರ ಪ್ರಧಾನ ಆಕರ್ಷಣೆಗಳಲ್ಲೊಂದು. 1824ರಲ್ಲಿಯೇ ಬ್ರಿಟೀಷರಿಂದ ನಿರ್ಮಾಣವಾದ 65 ಎಕರೆ ಪ್ರದೇಶದಲ್ಲಿ ಹರಡಿಕೊಂಡಿರುವ ಊಟಿಯ ಈ ಕೆರೆಯಲ್ಲಿ ಸಾಕಷ್ಟು ಬೋಟ್‌ಗಳ ವ್ಯವಸ್ಥೆಯೂ ಇದೆ. ಬೆಟ್ಟದಿಂದ ಇಳಿದು ಬರುವ ನೀರಿಗೆ ಅಣೆಕಟ್ಟು ಕಟ್ಟಿ ವಿಶಾಲ ಕೆರೆಯನ್ನು ವಿಸ್ತರಿಸಲಾಗಿರುವುದರಿಂದ ಈ ಬೃಹತ್‌ ಕೆರೆ ವರ್ಷಕಾಲಾವಧಿ ತುಂಬಿರುತ್ತದೆ..ಪೆಡಲ್ ಬೋಟಿಂಗ್ ಆಯ್ದುಕೊಂಡು ಕೆರೆಯಲ್ಲಿ ಒಂದಷ್ಟು ಸುತ್ತಾಡಿದೆವು. ನಂತರ ಸ್ಪೀಡ್ ಬೋಟ್‌ಗಳನ್ನೂ ಏರಿ ಕೆರೆಯಲ್ಲಿ ತೇಲಿದೆವು.

ನಂತರ ಸಂಜೆಯ ವೇಳೆಗೆ ಊಟಿಯ ಚಾಕೋಲೇಟ್‌ ಸಿಟಿಗೆ ಭೇಟಿ ನೀಡಿದೆವು. ರುಚಿ ರುಚಿಯಾದ ಹೋಮ್‌ಮೇಡ್‌ ಚಾಕೋಲೇಟ್‌ಗಳು ಊಟಿಯ ವಿಶೇಷ. ಬಿಸಿ ಬಿಸಿ ತಾಜಾ ತಾಜಾ ಚಾಕೋಲೇಟ್‌ಗಳನ್ನು ಸವಿದು, ಒಂದಷ್ಟು ಚಾಕೋಲೇಟ್‌ ಬಾಕ್ಸ್‌ಗಳನ್ನು ಖರೀದಿಸಿದೆವು. ಸ್ವೆಟರ್‌, ಮಾಪ್ಲರ್‌, ಜಾಕೀಟ್‌ ಶಾಲು ಇವೆಲ್ಲ ಚಳಿಗೇ ಹೆಸರುವಾಸಿಯಾಗಿರುವ ಊಟಿಯ ಜನರ ನಿತ್ಯ ಉಡುಪು. ಅಲ್ಲಿ ವಿವಿಧ ನಮೂನೆಯ ಸ್ವೆಟರ್‌ಗಳು ಕೂಡ ಸಿಗುತ್ತವೆ. ಸಂಜೆಯಾಗುತ್ತಿದ್ದಂತೆ ವಾತಾವರಣದ ತಂಪು ಮತ್ತಷ್ಟು ಹೆಚ್ಚುತ್ತಿತ್ತು. ಹೀಗಾಗಿ ಊಟಿಯಲ್ಲಿ ಸಿಗುವ ವಿಶೇಷ ಉಣ್ಣೆಯ ಉಡುಗೆಗಳನ್ನು ಖರೀದಿಸಿ ಹೋಟೆಲ್‌ಗೆ ಮರಳಿದೆವು.

ಮಾರನೆಯ ದಿನ ಮುಂಜಾನೆ.. ಬೊಟಾನಿಕಲ್ ಗಾರ್ಡನ್‌ಗೆ ಭೇಟಿ ನೀಡಿದೆವು. ಈ ಗಾರ್ಡನ್‌ 22 ಹೆಕ್ಟೇರ್‌ ಪ್ರದೇಶದಷ್ಟು ವಿಸ್ತಾರ ಹೊಂದಿದ್ದು ಅತ್ಯಂತ ಆಕರ್ಷಕವಾಗಿದೆ. ಸಾವಿರಾರು ಜಾತಿಯ ಹೂವು, ಗಿಡ, ಪೊದೆ, ಬಳ್ಳಿ, ಮರ ಮತ್ತು ಗಿಡಮೂಲಿಕೆಗಳ ಜತೆಗೆ ಬೋನ್ಸಾಯ್ ಗಿಡಗಳು ಉದ್ಯಾನದ ಅಂದವನ್ನು ಮತ್ತಷ್ಟು ಹೆಚ್ಚಿಸಿವೆ. ವಿಶಾಲವಾದ ಹುಲ್ಲಿನ ಹಾಸು, ಹುಲ್ಲಿನ ಹಾಸಿನ ಮೇಲೆಯೇ ಹರಿದು ಹೋಗಿರುವ ಸುಂದರವಾದ ದಾರಿ.. ಉದ್ಯಾನದ ಅಂದವನ್ನು ಪ್ರವಾಸಿಗ ಕುಳಿತು ಸವಿಯುವುದಕ್ಕಾಗಿಯೇ ಅಲ್ಲಲ್ಲಿ ಇರುವ ಬೆಂಚು.
ಬೊಟಾನಿಕಲ್ ಗಾರ್ಡನ್‌ನ ಐದು ಪ್ರಮುಖ ವಿಭಾಗಗಳಾದ ಲೋವರ್ ಗಾರ್ಡನ್, ನ್ಯೂ ಗಾರ್ಡನ್, ಇಟಾಲಿಯನ್ ಗಾರ್ಡನ್, ಕನ್ಸರ್ವೇಟರಿ, ಫೌಂಟೇನ್ ಟೆರೇಸ್ ಮತ್ತು ನರ್ಸರಿ. ಬೊಟಾನಿಕಲ್‌ನ ಎಲ್ಲ ವಿಭಾಗಗಳಿಗೂ ಭೇಟಿ ನೀಡಿ ಖುಷಿಪಟ್ಟೆವು. ಗಾಲ್ಫ್ ಕೋರ್ಸ್, ಟ್ರೈಬಲ್ ಮ್ಯೂಸಿಯಂ, ಅಣೆಕಟ್ಟುಗಳಿಗೆ ಭೇಟಿ ನೀಡಿ ಅಲ್ಲಿಯ ಸೌಂದರ್ಯವನ್ನು ಸವಿದ ಮೇಲೆ, ನೀಲಗಿರಿ ಪ್ಯಾಸೆಂಜರ್‌ ರೈಲು ಏರಿದೆವು. ಬೆಟ್ಟ ಗುಡ್ಡಗಳ ನಡುವೆ ಹೋಗುವ ರೈಲು ಅತ್ಯಾನಂದವನ್ನು ನೀಡಿತ್ತು. ಶಿಖರವನ್ನೂ ಏರಿ ಇಳಿಯುವ ಈ ರೈಲಿನಲ್ಲಿದ್ದ ನಮಗೆ ಕಂಡ ಟಿ ಪ್ಲಾಂಟೇಶನ್‌ಗಳು ಭೂರಮೆಯ ಸೌಂದರ್ಯವನ್ನು ದರ್ಶನ ಮಾಡಿದವು. ಆಳ ಪರ್ವತಗಳ ನಡುವೆ ಸಾಗಿ ಹೋಗುವ ರೈಲು ವರ್ಣನಾತೀತ ರೋಮಾಂಚನ ನೀಡಿದ್ದವು. ಮೆಟ್ಟುಪಾಲಯಂನಿಂದ ಊಟಿಯ ಬೆಟ್ಟಕ್ಕೆ ಸಾಗುವ ಈ ಟ್ರೈನ್ ಅತ್ಯಂತ ಪುರಾತನವಾದದ್ದು, ಬ್ರಿಟೀಷರೇ ನಿರ್ಮಿಸಿದ ಈ ರೈಲು ನಮ್ಮ ದೇಶದ ಮೊದಲ ಗುಡ್ಡಪ್ರದೇಶದ ರೈಲು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ನಮ್ಮೊಂದಿಗಿದ್ದ ಗೈಡ್‌, ಊಟಿಯ ಬಗ್ಗೆ ವರ್ಣನೆ ಮಾಡುತ್ತಿದ್ದ.. ಊಟಿಯ ಮೂಲ ನಿವಾಸಿಗಳು ತೋಡಾ ಜನಾಂಗದವರು. ಈ ಶಿಖರದ ಮೇಲಿನ ಪ್ರದೇಶದಲ್ಲಿ ಗುಡಿಸಲು ನಿರ್ಮಿಸಿಕೊಂಡು ಬದುಕುತ್ತಿದ್ದ ಬುಡಕಟ್ಟು ಜನಾಂಗವಿದು. ಭಾರತಕ್ಕೆ ಬ್ರೀಟೀಷರ ಆಗಮನವಾದ ಮೇಲೆ, ಊಟಿ ಅಭಿವೃದ್ಧಿಯಾಗಲು ಪ್ರಾರಂಭವಾಯ್ತು.

ತೋಡಾ ಜನಾಂಗದವರು ಮಾತ್ರ ವಾಸಿಸುತ್ತಿದ್ದ ಊಟಿಯನ್ನು, ಅದರ ರಮ್ಯತೆಯನ್ನು ಬ್ರಿಟೀಷರು ಅರಿತರು. 18ನೇ ಶತಮಾನದ ಕೊನೆಯ ಹೊತ್ತಿಗೆ ಈಸ್ಟ್ ಇಂಡಿಯಾ ಕಂಪನಿ ಊಟಿಯನ್ನು ತನ್ನ ಅಧೀನಕ್ಕೆ ಪಡೆಯಿತು. ತಮ್ಮ ಜನರಿಗೆ ಹಿತ ನೀಡುವ ಸಲುವಾಗಿ, ವಿಶ್ರಾಂತಿ ಧಾಮಗಳನ್ನು ನಿರ್ಮಿಸಿ ಊಟಿಯನ್ನು ಅಭಿವೃದ್ಧಿ ಮಾಡಲು ಪ್ರಾರಂಭ ಮಾಡಿದರು.
ಟಿಪ್ಪು ಸುಲ್ತಾನ್ ಕೂಡ ಊಟಿಯನ್ನು ಆಳಿದ್ದನಂತೆ. ಅವನ ಮರಣಾನಂತರ ಇಂಗ್ಲಿಷರ ಆಳ್ವಿಕೆ ಗಟ್ಟಿಯಾಯಿತು. ನಂತರ ಮೈಸೂರು ರಾಜರ ಆಡಳಿತ ಪ್ರದೇಶಕ್ಕೆ ಒಳಪಟ್ಟಿದ್ದ ಊಟಿ, ಸ್ವಾತಂತ್ರ್ಯಾನಂತರ ಭಾಷಾವಾರು ವಿಂಗಡಣೆಯ ಸಂದರ್ಭದಲ್ಲಿ ತಮಿಳುನಾಡಿಗೆ ಸೇರಿಹೋಯ್ತು.

ಪ್ರವಾಸೋದ್ಯಮವೇ ಊಟಿಯ ಪ್ರಮುಖ ಉದ್ಯೋಗ. ಚಹಾ ತೋಟ, ತರಕಾರಿ ಬೆಳೆ ಮತ್ತು ಔಷಧ ಮತ್ತು ಫೋಟೋಗ್ರಾಫಿಕ್ ಫಿಲ್ಮ್‌ಗಳ ತಯಾರಿಕೆಗೂ ಇದು ಪ್ರಸಿದ್ಧ.

ಊಟಿಯ ಮೂಲ ನಿವಾಸಿಗಳಾದ ತೋಡಾಗಳ ಗುಡಿಸಲಿನ ಮಾದರಿಗಳು ನೋಡಲು ಸಾಧ್ಯ. ಅವುಗಳ ಮಾದರಿಗಳನ್ನು ಇಂದಿಗೂ ಇರಿಸಲಾಗಿದೆ. 'ಅರಗಿನ ಮನೆ' ಎಂಬ ಹೆಸರಿನ 142 ವರ್ಷಗಳ ಹಳೆ ಬಂಗಲೆಯಲ್ಲಿ ಭಾರತೀಯ ಇತಿಹಾಸ, ಸಂಸ್ಕೃತಿ ಮತ್ತು ಸಂಪ್ರದಾಯಗಳಿಗೆ ಸಂಬಂಧಿಸಿದ ಪ್ರಮುಖ ವ್ಯಕ್ತಿಗಳ ಅರಗಿನ ಮೂರ್ತಿಗಳನ್ನು ಇಡಲಾಗಿದೆ.

ಇಳೆಯ ಸೊಬಗಿನ ಶಿಖರಗಳ ಮೇಲಿರುವ ಊಟಿ ನಮಗೆ ಒಂದು ಸುಂದರ ಅನುಭವ ನೀಡಿತ್ತು. ಊಟಿಯಿಂದ ಮರಳುವಾಗ ಅದೇನೋ ಬೇಸರ. ಇಲ್ಲಿಯ ಜನರು ಎಷ್ಟು ಪುಣ್ಯವಂತರು ಎಂಬ ಭಾವ. ಮನಸ್ಸಿಗೆ ಅಹ್ಲಾದ ನೀಡಿದ ಊಟಿಯ ರಮ್ಯತೆಗೆ ಊಟಿಯೇ ಸಾಟಿ. ಸೃಷ್ಠಿ ಸೊಬಗಿಗೆ ಮತ್ತೊಂದು ಹೆಸರಾಗಿರುವ ಉದಕಮಂಡಲ ಎಂಬುದೊಂದು ಸ್ವರ್ಗ ಎಂಬ ಮಾತಿಗೆ ಎರಡು ಮಾತಿಲ್ಲ.

 

Author : ಅಮೃತಾ ಹೆಗಡೆ

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited