Untitled Document
Sign Up | Login    
ಬುಟ್ಟಿ ತಯಾರಿ ಜೀವನದ ಬುತ್ತಿ


ನಮ್ಮ ಕರಾವಳಿ ಜಿಲ್ಲೆಗಳು ಸುಂದರವಾದ ಪಕೃತಿ ಸೌಂದರ್ಯವನ್ನು ಹೊಂದಿವೆ. ಅಷ್ಟೇ ವಿಶಿಷ್ಟತೆಗೂ ಹೆಸರುವಾಸಿ. ನಮ್ಮ ಕರಾವಳಿ ಜಿಲ್ಲೆಗಳಲ್ಲಿ ಪ್ರಕೃತಿಯ ವಸ್ತುಗಳನ್ನೇ ಬಳಸಿಕೊಂಡು ತಯಾರು ಮಾಡಲಾಗುವ ಹಲವಾರು ವಸ್ತುಗಳು ಇವೆ. ಇವುಗಳು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಪ್ರಯೋಜನಕಾರಿಯಾಗಿವೆ.

ಪರಿಸರದ ಪ್ರತಿಯೊಂದು ವಸ್ತುವಿನಲ್ಲೂ ಒಂದು ವಿಶೇಷತೆ ಇದೆ, ಆದರೆ ಅದನ್ನು ಹುಡುಕಿ ತೆಗೆಯುವುದು ಸಾಹಸಮಯ ಮತ್ತು ಪರಿಶ್ರಮದ ಕೆಲಸವಾಗಿದೆ.ಹೀಗೆ ಸಾಹಸಮಯವಾದ ಬದುಕನ್ನು ವೃತಿಯ ಮೂಲಕ ತಮ್ಮದಾಗಿಸಿಕೊಂಡಿರುವ ಕೊರಗ ಜನಾಂಗದ ಕುಟುಂಬಗಳು ನಮ್ಮ ಕರಾವಳಿ ಜಿಲ್ಲೆಗಳಲ್ಲಿ ಸಾಕಾಷ್ಟು ಇವೆ.

ಇವರು ಗುಡ್ಡ ಬೆಟ್ಟಗಳನ್ನು ಏರಿ ತಮ್ಮ ಹೊಟ್ಟೆ ತುಂಬಿಸಿಕೊಳ್ಳುವ ಕೆಲಸ ಮಾಡುತ್ತಾರೆ. ಕಾಡಿನಲ್ಲಿ ಸಿಗುವ ಬಳ್ಳಿ ಮರದ ಬೀಳಲುಗಳಿಂದ ವಿವಿಧ ಗಾತ್ರದ ಬುಟ್ಟಿ ತಯಾರಿಸುವ ವೃತ್ತಿಯಲ್ಲೂ ಹೂ ಅರಳಿಸುವ ಕಲೆಗಾರಿಕೆ ಇವರದ್ದು. ಈ ವೃತ್ತಿಯನ್ನು ಮಾಡುವ ಕೊರಗ ಜನಾಂಗದವರರು ತುಂಬಾ ಶ್ರಮ ಜೀವಿಗಳು. ಬುಟ್ಟಿ ತಯಾರಿಕೆಗೆ ಬೇಕಾದ ಬೀಳಲನ್ನು ಗುಡ್ಡ ಬೆಟ್ಟದಿಂದ ತಲೆ ಹೊರೆಯಲ್ಲಿಯೇ ಹೊತ್ತುಕೊಂಡು ಬರುತ್ತಾರೆ. ಎಂಜಿರ್, ಮಾದಿರ್, ನೆರಿಲ್ ಬೀಳಲುಗಳಿಂದ ಬುಟ್ಟಿ ತಯಾರಿಸುತ್ತಾರೆ.

ಹಟ್ಟಿ ಗೊಬ್ಬರ ತುಂಬಿಸುವ ಬುಟ್ಟಿ,ಗೋಡೆ ಇಡುವ ಬುಟ್ಟಿ, ಅನ್ನ ಭಾಗಿಸುವ ಕುಡುಪು, ತಿಂಡಿ ಇಡುವ ಕುಡುಪು, ಕೂರಿ, ಗೂಟೆಂಗೆ(ಕೋಳಿ ಮುಚ್ಚಿ ಹಾಕುವ ಸಾಧನ), ಭತ್ತ ತುಂಬಿಸುವ ಬುಟ್ಟಿ ಹೀಗೆ ವಿವಿಧ ಮಾದರಿಯ ಬುಟ್ಟಿಗಳನ್ನು ತಯಾರಿಸುತ್ತಾರೆ.

ಬುಟ್ಟಿ ತಯಾರಿಸುವ ಮಾಂಕು
ಸುಳ್ಯ ತಾಲ್ಲೂಕಿನ ಪಂಜದ ಪಲ್ಲೋಡಿ ನಿವಾಸಸಿಗಳಾದ ಮಾಂಕು ಮತ್ತು ಆತನ ಹೆಂಡತಿ ಸವಿತ ಎಂಬವರು ಕಳೆದ 25 ವರ್ಷಗಳಿಂದ ಈ ವೃತ್ತಿಯನ್ನು ಬಹಳ ನಿಷ್ಠೆಯಿಂದ ಮಾಡಿಕೊಂಡು ಬರುತ್ತಿದ್ದಾರೆ. ಇವರದು ಅಲೆಮಾರಿ ಜೀವನದ ಪದ್ದತಿ. ಪಂಜ, ಕಡಬ, ಐವರ್ನಾಡು, ಕಲ್ಮಡ್ಕ, ಪುಳಿಕುಕ್ಕು, ಸುಬ್ರಹ್ಮಣ್ಯ, ಎಡಮಂಗಲ ಹೀಗೆ ವಿವಿಧ ಕಡೆ ತಿರುಗಿ ಅಲ್ಲಲ್ಲಿ ಒಂದಷ್ಟು ದಿವಸ ಇದ್ದು ಅಲ್ಲಿ ಬುಟ್ಟಿ ತಯಾರಿಸಿ ಅಲ್ಲಿ ಅಂಗಡಿಯವರಿಗೆ ಮತ್ತು ಗಿರಾಕಿಗಳಿಗೆ ಮಾರಟ ಮಾಡುತ್ತಾರೆ. ಕನಿಷ್ಠವೆಂದರೆ ದಿನವೊಂದಕ್ಕೆ 7೦೦ ರೂಪಾಯಿ ಸಂಪಾದನೆ ಮಾಡುತ್ತಾರೆ ಎಂದು ಕಲ್ಮಡ್ಕ ಬುಟ್ಟಿ ಮಾರಾಟದ ವ್ಯಾಪಾರಿ ಧರ್ಮಪಾಲ ಹೇಳುತ್ತಾರೆ.

ಮಾಂಕು ಬುಟ್ಟಿ ತಯಾರಿ ವೃತ್ತಿಯಲ್ಲಿ ಸಂತೋಷ ಪಡುತ್ತಿದ್ದು, ಮಾಂಕುವಿನ ಮಗಳು ಮಂಗಳೂರಿನಲ್ಲಿ ಪದವಿ ಪೂರ್ವ ಶಿಕ್ಷಣ ಪಡೆಯುತ್ತಿದ್ದಾಳೆ. ಮಗ 1೦ ನೇ ತರಗತಿಯಲ್ಲಿ ಒದುತ್ತಿದ್ದಾನೆ. ಮಕ್ಕಳಿಗೂ ಬುಟ್ಟಿ ತಯಾರಿಕೆ ಪಾಠವನ್ನು ಮಾಂಕು ಬೋಧಿಸುತ್ತಿದ್ದು ಹೊಟ್ಟೆಗೆ ಅನ್ನ ನೀಡಿದ ವೃತ್ತಿಯನ್ನು ನಾವು ಯಾರು ಮರೆಯಲು ಅಸಾಧ್ಯ. ಬುಟ್ಟಿ ತಯಾರಿಸುವಾಗ ತುಂಬಾ ಶ್ರಮ ಪಡಬೇಕಾಗುತ್ತದೆ. ಕಾಡುಗಳಿಗೆ ಬೀಳಲುಗಳಿಗೆ ಹೋದಾಗ ಪ್ರಾಣಿ ವಿಷ ಜಂತುಗಳ ಬಗ್ಗೆ ನಾವು ಜಾಗೃತೆ ವಹಿಸಬೇಕಾಗುತ್ತದೆ. ಪೇಟೆಗಳಿಗೆ ಬಣ್ಣ ಬಣ್ಣದ ಪೈಬರ್ ಬುಟ್ಟಿಗಳು ಲಗ್ಗೆಯಿಟ್ಟರೂ ನಾವು ತಯಾರಿಸುವ ಬುಟ್ಟಿಗಳಿಗೆ ಬೇಡಿಕೆ ಕಡಿಮೆಯಾಗಿಲ್ಲವೆಂದು ಸಂತಸದಿಂಲೇ ಮಾಂಕು ಹೇಳುತ್ತಾರೆ.

 

Author : thejas s

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited