ವಾಷಿಂಗ್ಟನ್ : ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿಯಾಗಿ ಡೊನಾಲ್ಡ್ ಟ್ರಂಪ್ ಹಾಗೂ ಡೆಮೊಕ್ರಟಿಕ್ ಹುರಿಯಾಳಾಗಿ ಹಿಲರಿ ಕ್ಲಿಂಟನ್ ಅವರು ಮುಖಾಮುಖೀಯಾಗುವುದು ಬಹುತೇಕ ಖಚಿತವಾಗಿದೆ.
ಇಂಡಿಯಾನಾದಲ್ಲಿ ನಡೆದ ರಿಪಬ್ಲಿಕನ್ ಪಕ್ಷದ ಆಂತರಿಕ ಚುನಾವಣೆಯಲ್ಲಿ ಬುಧವಾರ ಡೊನಾಲ್ಡ್ ಟ್ರಂಪ್ ಅವರು ಜಯಭೇರಿ ಬಾರಿಸಿದ್ದು, ಅವರ ಸಮೀಪದ ಪ್ರತಿಸ್ಪರ್ಧಿ ಟೇಡ್ ಕ್ರೂಜ್ ಅವರು ಸ್ಪರ್ಧೆಯನ್ನು ಕೈಬಿಟ್ಟಿದ್ದಾರೆ.
ಈ ಮೂಲಕ ಡೊನಾಲ್ಡ್ ಟ್ರಂಪ್ ಈಗ ಡೆಮಾಕ್ರಟಿಕ್ ಪಕ್ಷದ ಪ್ರಬಲ ಸ್ಪರ್ಧಿ ಹಿಲರಿ ಕ್ಲಿಂಟನ್ ಅವರೊಂದಿಗೆ ನೇರವಾಗಿ ಚುನಾವಣಾ ಕಣದಲ್ಲಿ ಸೆಣಸಲಿದ್ದಾರೆ.
10 ತಿಂಗಳ ಹಿಂದಷ್ಟೇ ರಾಜಕೀಯಕ್ಕೆ ಬಂದಿರುವ ಡೊನಾಲ್ಡ್ ಟ್ರಂಪ್ ಅವರ ಬಳಿ ಪ್ರಸ್ತುತ 1047 ಪ್ರತಿನಿಧಿಗಳ ಮತಗಳಿವೆ. ಅಧ್ಯಕ್ಷೀಯ ಅಭ್ಯರ್ಥಿಯಾಗಲು ಅವರಿಗೆ ಕೇವಲ 190 ಪ್ರತಿನಿಧಿಗಳ ಅಗತ್ಯವಿದ್ದು, ಆ ಕೊರತೆ ಶೀಘ್ರದಲ್ಲೇ ನೀಗುವುದು ನಿಚ್ಚಳವಾಗಿದೆ. ಉಳಿದಂತೆ ಜಾನ್ ಕಸಿಚ್, ರಿಪಬ್ಲಿಕನ್ ಪಕ್ಷದ ಆಂತರಿಕ ಚುನಾವಣೆಯಲ್ಲಿ ಕಣದಲ್ಲಿದ್ದಾರೆಯಾದರೂ, ಅವರ ಬಳಿ ಇರುವ ಪ್ರತಿನಿಧಿಗಳ ಮತ ಸಂಖ್ಯೆ ಕೇವಲ 200.
ಇನ್ನೊಂದೆಡೆ ಇಂಡಿಯಾನಾದಲ್ಲಿ ನಡೆದ ಡೆಮೊಕ್ರಟಿಕ್ ಪಕ್ಷದ ಆಂತರಿಕ ಚುನಾವಣೆಯಲ್ಲಿ ಬರ್ನಿ ಸ್ಯಾಂಡರ್, ಹಿಲರಿ ಕ್ಲಿಂಟನ್ ಅವರನ್ನು ಮಣಿಸಿದ್ದಾರೆ. ಆದಾಗ್ಯೂ ಹಿಲರಿ ಅಧ್ಯಕ್ಷೀಯ ಅಭ್ಯರ್ಥಿಯಾಗುವುದಕ್ಕೆ ಯಾವುದೇ ತೊಡಕಿಲ್ಲ ಎಂದು ಹೇಳಲಾಗಿದೆ.