ವಾಷಿಂಗ್ಟನ್ : ಇಡೀ ವಿಶ್ವದ ಗಮನ ಸೆಳೆದಿರುವ ಅಮೆರಿಕದ ಹೊಸ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆಗೆ, ಮಂಗಳವಾರ ಅಮೆರಿಕಾದ್ಯಂತ ಮತದಾನ ಪ್ರಾರಂಭಗೊಂಡಿದೆ. ಡೆಮಾಕ್ರೆಟ್ ಪಕ್ಷದ ಪರವಾಗಿ ಹಿಲರಿ ಕ್ಲಿಂಟನ್ ಕಣದಲ್ಲಿದ್ದರೆ, ರಿಪಬ್ಲಿಕನ್ ಪಕ್ಷದಿಂದ ವಿವಾದಿತ ಉದ್ಯಮಿ ಡೊನಾಲ್ಡ್ ಟ್ರಂಪ್ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.
ಒಂದು ವೇಳೆ ನಿರೀಕ್ಷೆಯಂತೆ ಹಿಲರಿ ಕ್ಲಿಂಟನ್ ನೂತನ ಅಧ್ಯಕ್ಷೆಯಾಗಿ ಹೊರಹೊಮ್ಮಿದರೆ, ಅವರು ವಿಶ್ವದ ದೊಡ್ಡಣ್ಣ ಎಂದೇ ಖ್ಯಾತಿ ಹೊಂದಿರುವ ಅಮೆರಿಕದ ಮೊದಲ ಮಹಿಳಾ ಅಧ್ಯಕ್ಷೆ ಎಂಬ ಹಿರಿಮೆಗೆ ಪಾತ್ರವಾಗಲಿದ್ದಾರೆ, ಒಂದು ವೇಳೆ ಎಲ್ಲರ ನಿರೀಕ್ಷೆಗಳನ್ನು ಮೀರಿ ಶ್ರೀಮಂತ ಕುಳ ಟ್ರಂಪ್ ಆಯ್ಕೆಯಾಗಿದ್ದೇ ಆದಲ್ಲಿ ಅದು ರಾಜಕೀಯೇತರ ವ್ಯಕ್ತಿಯೊಬ್ಬನ ಹೊಸ ಅವತಾರಕ್ಕೆ ಸಾಕ್ಷಿಯಾಗಲಿದೆ.
ಚುನಾವಣೆಯ ಮುನ್ನಾ ದಿನ ಎಫ್ಬಿಐ ತನಿಖೆಯಲ್ಲಿ ಕ್ಲೀನ್‌ಚಿಟ್ ಸಿಕ್ಕಿರುವುದು ಹಿಲರಿಗೆ ಆನೆಬಲ ತಂದುಕೊಟ್ಟಿದೆ.
ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ಮುನ್ನಾ ದಿನ ನಡೆಸಿದ ಸಮೀಕ್ಷೆಯಲ್ಲಿ ಹಿಲರಿ ಕ್ಲಿಂಟನ್ ಅವರು ಡೊನಾಲ್ಡ್ ಟ್ರಂಪ್‌ಗಿಂತ 4 ಅಂಕದಲ್ಲಿ ಮುಂದಿದ್ದಾರೆ. ಸಿಬಿಎಸ್ ನ್ಯೂಸ್ ನಡೆಸಿದ ಸಮೀಕ್ಷೆಯಲ್ಲಿ ಹಿಲರಿ 45 ಅಂಕ ಪಡೆದಿದ್ದರೆ, ಡೋನಾಲ್ಡ್ ಟ್ರಂಪ್ 41 ಅಂಕ ಪಡೆದಿದ್ದಾರೆ.