ಲಕ್ನೋ : 2017ರಲ್ಲಿ ನಡೆಯಲಿರುವ ಬಹುನಿರೀಕ್ಷಿತ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ ಎಂದು ಚುನಾವಣಾ ಪೂರ್ವ ಸಮೀಕ್ಷೆ ಭವಿಷ್ಯ ನುಡಿದಿದೆ.
ಎಬಿಪಿ ನ್ಯೂಸ್- ಸಿಸೆರೋ ಉತ್ತರ ಪ್ರದೇಶದ 10 ಕ್ಷೇತ್ರಗಳ ಜನರನ್ನು ಸಂದರ್ಶಿಸಿ ಸಮೀಕ್ಷೆ ನಡೆಸಲಾಗಿದ್ದು, ಅದರಂತೆ ಶೇ.32 ರಷ್ಟು ಮಂದಿ ಬಿಜೆಪಿ ರಾಜ್ಯದಲ್ಲಿ ಮುಂದಿನ ಸರ್ಕಾರವನ್ನು ರಚಿಸಲಿದೆ ಎಂದು ಹೇಳಿದ್ದಾರೆ.
ಶೇ. 26ರಷ್ಟು ಮಂದಿ ಸಮಾಜವಾದಿ ಪಕ್ಷ ಪುನಃ ಅಧಿಕಾರಕ್ಕೆ ಬರಲಿದೆ ಎಂದು ಹೇಳಿದರೆ, ಶೇ.24ರಷ್ಟು ಜನ ಬಿಎಸ್ಪಿ, ಶೇ.7ರಷ್ಟು ಮಂದಿ ಕಾಂಗ್ರೆಸ್, ಶೇ.4ರಷ್ಟು ಜನ ಅತಂತ್ರ ವಿಧಾನಸಭೆ ಸೃಷ್ಟಿಯಾಗಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಮುಖ್ಯಮಂತ್ರಿ ಅಭ್ಯರ್ಥಿ ಹುದ್ದೆಗೆ ಶೇ. 28ರಷ್ಟು ಮಂದಿ ಅಖೀಲೇಶ್ ಯಾದವ್ ಮೊದಲ ಆಯ್ಕೆ ಎಂದು ಹೇಳಿದ್ದಾರೆ. ಶೇ. 25ರಷ್ಟು ಮಂದಿ ಮಾಯಾವತಿ, ಶೇ. 17ರಷ್ಟು ಜನ ಯೋಗಿ ಆದಿತ್ಯನಾಥ್ ಮತ್ತು ಶೇ. 5ರಷ್ಟು ಜನರು ಶೀಲಾ ದೀಕ್ಷಿತ್ ಪರ ಒಲವು ವ್ಯಕ್ತಪಡಿಸಿದ್ದಾರೆ.
ಉತ್ತರ ಪ್ರದೇಶ ಚುನಾವಣೆಯಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಪುತ್ರಿ ಪ್ರಿಯಾಂಕಾ ಗಾಂಧಿ ಪ್ರಚಾರ ನಡೆಸಿದರೂ ರಾಜ್ಯದಲ್ಲಿ ಕಾಂಗ್ರೆಸ್ ಅನ್ನು ಮತ್ತೆ ಅಧಿಕಾರಕ್ಕೆ ತರಲು ಸಾಧ್ಯವಿಲ್ಲ ಎಂದು ಸಮೀಕ್ಷೆ ಹೇಳಿದೆ.