ವಾಷಿಂಗ್ ಟನ್ : 2016ರ ಅಮೆರಿಕಾ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸಲಿರುವ ಹಿಲರಿ ಕ್ಲಿಂಟನ್ ಗೆ ಬೆಂಬಲ ಘೋಷಿಸಲು ಹಾಲಿ ಅಧ್ಯಕ್ಷ ಬರಾಕ್ ಒಬಾಮ ಹಿಂದೇಟು ಹಾಕಿದ್ದಾರೆ.
ತಮ್ಮದೇ ಸರ್ಕಾರದಲ್ಲಿ ಕಾರ್ಯದರ್ಶಿಯಾಗಿದ್ದ ಹಿಲರಿ ಕ್ಲಿಂಟನ್ ಅವರಿಗೆ ಬರಾಕ್ ಒಬಾಮ ಬೆಂಬಲ ಘೋಷಿಸಲಿದ್ದಾರೆ ಎಂಬ ನಿರೀಕ್ಷೆ ಇತ್ತು. ಆದರೆ ಒಬಾಮ ಅವರ ಹಾಲಿ ಕಾರ್ಯದರ್ಶಿಗಳಲ್ಲಿಯೂ ಅನೇಕರು ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸುವ ಸಾಧ್ಯತೆ ಇರುವುದರಿಂದ ಒಬಾಮ ಹಿಲರಿ ಕ್ಲಿಂಟನ್ ಗೆ ಬೆಂಬಲ ಘೋಷಿಸಲು ಹಿಂದೇಟು ಹಾಕುತ್ತಿದ್ದಾರೆ. ಹಿಲರಿ ಕ್ಲಿಂಟನ್ ಗೆ ಬೆಂಬಲ ನೀಡುವ ಸಾಧ್ಯತೆಗಳನ್ನು ವೈಟ್ ಹೌಸ್ ನ ವಕ್ತಾರ ಜೋಶ್ ಅರ್ನೆಸ್ಟ್ ಸ್ಪಷ್ಟಪಡಿಸಿದ್ದಾರೆ.
ಅಮೆರಿಕಾ ಅಧ್ಯಕ್ಷರಾಗಿ 2ನೇ ಅವಧಿಯನ್ನು ಪೂರೈಸಲಿರುವ ಬರಾಕ್ ಒಬಾಮ ಅವರು ಈ ಬಗ್ಗೆ ಪ್ರತಿಕ್ರಿಯಿಸಿದ್ದು ಹಿಲರಿ ಅತ್ಯುತ್ತಮ ಅಧ್ಯಕ್ಷರಾಗಲಿದ್ದಾರೆ ಎಂದು ಅಭಿಪ್ರಾಯಪಟ್ಟಿದ್ದರು. ಈ ಹಿನ್ನೆಲೆಯಲ್ಲಿ ಅಧಿಕೃತವಾಗಿ ಬೆಂಬಲ ಘೋಷಿಸುವ ಸಾಧ್ಯತೆಯನ್ನು ನಿರೀಕ್ಷಿಸಲಾಗಿತ್ತು. 2008ರಲ್ಲಿ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸಿದ್ದ ಹಿಲರಿ ಕ್ಲಿಂಟನ್, ಬರಾಕ್ ಒಬಾಮಾ ವಿರುದ್ಧ ಸೋತಿದ್ದರು.
ನ್ಯೂಯಾರ್ಕ್ ನ ಬ್ರೂಕ್ಲಿನ್ ನಲ್ಲಿ ಚುನಾವಣಾ ಪ್ರಚಾರದ ಮುಖ್ಯ ಕಚೇರಿ ಸ್ಥಾಪಿಸಲು ಹಿಲರಿ ಕ್ಲಿಂಟನ್ ಈಗಾಗಲೇ ಎಲ್ಲ ಸಿದ್ಧತೆ ಮಾಡಿಕೊಂಡಿದ್ದಾರೆ. ಹಿಲರಿ ಕ್ಲಿಂಟನ್ ಅವರು ಅಮೆರಿಕದ ವಿದೇಶಾಂಗ ಕಾರ್ಯದರ್ಶಿಯಾಗಿಯೂ ಕಾರ್ಯನಿರ್ವಹಿಸಿದ್ದರು.