ನವದೆಹಲಿ : 'ಬಿಬಿಸಿ' ನಿರ್ಮಿತ ಇಂಡಿಯಾಸ್ ಡಾಟರ್ ಸಾಕ್ಷ್ಯಚಿತ್ರದಲ್ಲಿ ವಿವಾದಾತ್ಮಕ ಹೇಳಿಕೆ ನೀಡಿರುವ ಅಪರಾಧಿ ಮುಖೇಶ್ ಸಿಂಗ್ ಪರ ವಕೀಲರ ವಿರುದ್ಧ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ.
ಅಪರಾಧಿ ಮುಖೇಶ್ ಸಿಂಗ್ ಪರವಾಗಿ ಹೇಳಿಕೆ ನೀಡಿದ್ದೂ ಅಲ್ಲದೇ, ಅತ್ಯಾಚಾರ ನಡೆಯುವುದಕ್ಕೆ ಮಹಿಳೆಯರೇ ಕಾರಣ ಎಂಬ ಮುಖೇಶ್ ಸಿಂಗ್ ಹೇಳಿಕೆಯನ್ನು ಆತನ ಪರ ವಕೀಲರು ಸಮರ್ಥಿಸಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ದೇಶಾದ್ಯಂತ ವ್ಯಾಪಕ ವಿರೋಧ ವ್ಯಕ್ತವಾಗಿದ್ದು, ಬಾರ್ ಕೌನ್ಸಿಲ್ ನಿಂದ ವಕೀಲರ ವಿರುದ್ಧ ಕ್ರಮ ಜರುಗಿಸುವ ಸಾಧ್ಯತೆ ದಟ್ಟವಾಗಿದೆ.
ಸಾಕ್ಷ್ಯಚಿತ್ರದಲ್ಲಿ ಮಹಿಳೆಯರ ವಿರುದ್ಧ ಹೇಳಿಕೆ ನೀಡಿದ್ದ ವಕೀಲರ ವಿರುದ್ಧ ಕ್ರಮ ಜರುಗಿಸುವ ನಿಟ್ಟಿನಲ್ಲಿ ಮಾ.6ರಂದು ಸಂಜೆ ದೆಹಲಿಯಲ್ಲಿ ಬಾರ್ ಕೌನ್ಸಿಲ್ ಸಭೆ ನಡೆಯಲಿದ್ದು, ಈ ಸಭೆಯಲ್ಲಿ ಅಂತಿಮ ನಿರ್ಧಾರ ಕೈಗೊಳ್ಳಲಾಗುತ್ತದೆ.
ರಾತ್ರಿ ವೇಳೆ ಮಹಿಳೆಯರು ಓಡಾಡುವುದರಿಂದಲೇ ಅತ್ಯಾಚಾರಗಳು ನಡೆಯುತ್ತಿವೆ, ಇದಕ್ಕೆ ಮಹಿಳೆಯರೇ ಹೊಣೆ ಎಂದು ಮುಖೇಶ್ ಸಿಂಗ್ ಪರ ವಕೀಲರು ಹೇಳಿದ್ದರು.