ನವದೆಹಲಿ : ಭಾರತದ ಮಗಳು(ಇಂಡಿಯಾಸ್ ಡಾಟರ್) ಸಾಕ್ಷ್ಯಚಿತ್ರಕ್ಕೆ ಭಾರತೀಯರಾದ ಹರ್ವಿಂದರ್ ಸಿಂಗ್ ಎಂಬುವವರು ಸಾಕ್ಷ್ಯಚಿತ್ರದ ಮೂಲಕವೇ ಪ್ರತಿಕ್ರಿಯೆ ನೀಡಿದ್ದು, ಯುನೈಟೆಡ್ ಕಿಂಗ್ಡಮ್ ಡಾಟರ್ಸ್( ಯು.ಕೆ ಹೆಣ್ಣುಮಕ್ಕಳು) ಮೂಲಕ ಅಲ್ಲಿನ ಹೆಣ್ಣುಮಕ್ಕಳ ಸ್ಥಿತಿಯನ್ನು ಬಯಲಿಗೆಳೆದಿದ್ದಾರೆ.
ಯು.ಕೆಯಲ್ಲಿರುವ ಹೆಣ್ಣುಮಕ್ಕಳ ಸ್ಥಿತಿ ಭಾರತೀಯ ಹೆಣ್ಣುಮಕ್ಕಳ ಸ್ಥಿತಿಗಿಂತಲೂ ಶೋಚನೀಯವಾಗಿದೆ ಎಂಬುದು ಇಡಿ ಜಗತ್ತಿಗೇ ಹರ್ವಿಂದರ್ ಸಿಂಗ್ ನಿರ್ಮಿಸಿರುವ ಸಾಕ್ಷ್ಯಚಿತ್ರದ ಮೂಲಕ ಬಹಿರಂಗವಾಗಿದೆ.
ಯು.ಕೆಯಲ್ಲಿ ಪ್ರತಿದಿನ 250 ಮಹಿಳೆಯರ ಮೇಲೆ ಅತ್ಯಾಚಾರವಾಗುತ್ತದೆ. ಶೇ.10ರಷ್ಟು ಮಹಿಳೆಯರು ಲೈಂಗಿಕ ಕಿರುಕುಳದ ಬಲಿಪಶುಗಳಾಗಿರುತ್ತಾರೆ ಎಂದು ಸಾಕ್ಷ್ಯಚಿತ್ರದ ಮೂಲಕ ತಿಳಿದುಬಂದಿದೆ. ಅಷ್ಟೇ ಅಲ್ಲದೇ ಮೂರನೇ ಒಂದರಷ್ಟು ಬ್ರಿಟನ್ ಪ್ರಜೆಗಳು ರೇಪ್ ನಡೆಯಲು ಹೆಣ್ಣುಮಕ್ಕಳೇ ಕಾರಣ ಎಂದು ಅಭಿಪ್ರಾಯಪಟ್ಟಿದ್ದಾರೆ.
ಯುಕೆ ಮಹಿಳೆಯರು ಅತ್ಯಾಚಾರವನ್ನು ವಿರೋಧಿಸದೇ ಇರುವುದರಿಂದ ಅಲ್ಲಿ ಹೆಣ್ಣುಮಕ್ಕಳ ಕೊಲೆ ನಡೆಯುವ ಸಾಧ್ಯತೆ ಕಡಿಮೆ ಎಂದು ಸಾಕ್ಷ್ಯಚಿತ್ರ ಹೇಳಿದೆ. ಅಲ್ಲದೇ ಎಲ್ಲಾ ಅಪರಾಧಿಕಗಳಿಗೂ ಶಿಕ್ಷೆಯಾಗುವುದಿಲ್ಲ. ಶೇ.10ರಷ್ಟು ಅಪರಾಧಿಗಳಿಗೆ ಮಾತ್ರ ಶಿಕ್ಷೆಯಾಗುತ್ತದೆ ಎಂದು ಯುನೈಟೆಡ್ ಕಿಂಗ್ಡಮ್ ಡಾಟರ್ಸ್ ಸಾಕ್ಷ್ಯಚಿತ್ರ ಹೇಳಿದೆ.
ಬಿಬಿಸಿ ನಿರ್ಮಿತ ಇಂಡಿಯಾಸ್ ಡಾಟರ್ ಸಾಕ್ಷ್ಯಚಿತ್ರದಲ್ಲಿ ಭಾರತ ಅತ್ಯಾಚಾರ ಸಂಸ್ಕೃತಿ ಹೊಂದಿರುವ ರಾಷ್ಟ್ರವೆಂದೇ ಬಿಂಬಿಸಲಾಗಿತ್ತು.