ನವದೆಹಲಿ : 'ಇಂಡಿಯಾಸ್ ಡಾಟರ್' ಸಾಕ್ಷ್ಯಚಿತ್ರ ಅತಿ ಹೆಚ್ಚು ವೀಕ್ಷಣೆಯಾಗಿರುವುದಕ್ಕೆ ಭಾರತ ಸರ್ಕಾರ ನಿಷೇಧ ಹೇರಿರುವುದೇ ಕಾರಣ ಎಂದು ಸಾಕ್ಷ್ಯಚಿತ್ರ ನಿರ್ಮಾಪಕಿ ಲೆಸ್ಲಿ ಉಡ್ವಿನ್ ಹೇಳಿದ್ದಾರೆ.
ಎಕೆನಾಮಿಕ್ ಟೈಮ್ಸ್ ಗೆ ನೀಡಿರುವ ಸಂದರ್ಶನದಲ್ಲಿ ಭಾರತ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿರುವ ಲೆಸ್ಲಿ ಉಡ್ವಿನ್, ಸಾಕ್ಷ್ಯಚಿತ್ರದ ಬಗ್ಗೆ ತಮ್ಮನ್ನು ಸಂಪರ್ಕಿಸದೇ ತಪ್ಪಾದ ಮಾಹಿತಿ ನೀಡಿದೆ ಎಂದು ಹೇಳಿದ್ದಾರೆ.
ಗೃಹ ಸಚಿವ ರಾಜನಾಥ್ ಸಿಂಗ್ ಅವರು ಸಾಕ್ಷ್ಯಚಿತ್ರವನ್ನು ವೀಕ್ಷಿಸದೇ, ವಿರೋಧಿಸಿದ್ದಾರೆ, ಅಲ್ಲದೇ ಚಿತ್ರದ ವಿರುದ್ಧ ಪದೇ ಪದೇ ತಪ್ಪು ಮಾಹಿತಿ ನೀಡಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇಂದಿನ ಡಿಜಿಟಲ್ ಯುಗದಲ್ಲಿ ಸಾಕ್ಷ್ಯಚಿತ್ರಗಳನ್ನು ನಿಷೇಧಿಸುವುದು ಅವಿವೇಕಶೂರತ್ವ ಎಂದೂ ಲೆಸ್ಲಿ ಉಡ್ವಿನ್ ಸರ್ಕಾರದ ಕ್ರಮವನ್ನು ಜರೆದಿದ್ದಾರೆ.
ಸಾಕ್ಷ್ಯಚಿತ್ರಕ್ಕೆ ಅತ್ಯಾಚಾರಕ್ಕೊಳಗಾದ ಯುವತಿಯ ಪೋಷಕರೂ ಬೆಂಬಲ ವ್ಯಕ್ತಪಡಿಸಿದ್ದರು. ಅಲ್ಲದೇ ಇಂಡಿಯಾಸ್ ಡಾಟರ್ ಸಾಕ್ಷ್ಯಚಿತ್ರಕ್ಕೆ ಯುವತಿಯ ತಂದೆ ಮೆಚ್ಚುಗೆ ವ್ಯಕ್ತಪಡಿಸಿ ಸರಿಯಾದ ದಾರಿಯಲ್ಲಿ ನಡೆಯುವವರಿಗೆ ತೊಂದರೆ ಉಂಟಾಗುವುದು ಸಹಜ ಎಂದು ಹೇಳಿದ್ದನ್ನು ಲೆಸ್ಲಿ ಉಡ್ವಿನ್ ಸ್ಮರಿಸಿದ್ದಾರೆ.