ನ್ಯೂಯಾರ್ಕ್ : ಭಾರತದ ನ್ಯಾಯಾಲಯಗಳು ಸರ್ಕಾರದ ಕೈಗೊಂಬೆಗಳಲ್ಲದ ಕಾರಣ ಬಿಬಿಸಿ ನಿರ್ಮಿತ ಇಂಡಿಯಾಸ್ ಡಾಟರ್ ಸಾಕ್ಷ್ಯಚಿತ್ರಕ್ಕೆ ಭಾರತದಲ್ಲಿ ಹೇರಿರುವ ನಿಷೇಧ ದೀರ್ಘಾವಧಿಯವರೆಗೂ ಮುಂದುವರೆಯುವುದಿಲ್ಲ ಎಂದು ಲೆಸ್ಲಿ ಉಡ್ವಿನ್ ಹೇಳಿದ್ದಾರೆ.
ನ್ಯೂಯಾರ್ಕ್ ನಲ್ಲಿ ನಡೆದ ಸಂದರ್ಶನದಲ್ಲಿ ಸಾಕ್ಷ್ಯಚಿತ್ರಕ್ಕೆ ವಿಧಿಸಿರುವ ನಿಷೇಧದ ಬಗ್ಗೆ ಪ್ರತಿಕ್ರಿಯಿಸಿರುವ ಲೆಸ್ಲಿ ಉಡ್ವಿನ್ ಭಾರತ ಪ್ರಜಾಪ್ರಭುತ್ವ ರಾಷ್ಟ್ರವಾಗಿದ್ದು ಅತ್ಯುನ್ನತ ನಾಗರಿಕತೆ ಹೊಂದಿದ ದೇಶವಾಗಿದೆ. ಆದ್ದರಿಂದ ಭಾರತದಲ್ಲಿ ಸಾಕ್ಷ್ಯಚಿತ್ರಕ್ಕೆ ವಿಧಿಸಿರುವ ನಿಷೇಧ ಹೆಚ್ಚುದಿನ ಮುಂದುವರೆಯುವುದಿಲ್ಲ, ತಾತ್ಕಾಲಿಕವಾಗಷ್ಟೇ ಉಳಿಯಲಿದ್ದು ನಿಷೇಧವನ್ನು ತೆರವುಗೊಳಿಸುವ ವಿಶ್ವಾಸವಿದೆ ಎಂದು ಹೇಳಿದ್ದಾರೆ.
ಅಮೆರಿಕಾದಲ್ಲಿ ಇಂಡಿಯಾಸ್ ಡಾಟರ್ ಸಾಕ್ಷ್ಯಚಿತ್ರ ಪ್ರದರ್ಶನ ಏರ್ಪಡಿಸಲಾಗಿದ್ದ ಸಂದರ್ಭದಲ್ಲಿ ಅಲ್ಲಿನ ಪತ್ರಿಕೆಗಳಿಗೆ ಸಂದರ್ಶನ ನೀಡಿದ ವೇಳೆ ಲೆಸ್ಲಿ ಉಡ್ವಿನ್ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಅತ್ಯಾಚಾರದ ಕುರಿತು ಭಾರತದ ರಾಜಕೀಯ ಮುಖಂಡರು ವ್ಯಕ್ತಪಡಿಸಿರುವ ಅಭಿಪ್ರಾಯಕ್ಕಿಂತಲೂ ಮುಕೇಶ್ ಸಿಂಗ್ ವ್ಯಕ್ತಪಡಿಸಿರುವ ಅಭಿಪ್ರಾಯ ಭಿನ್ನವಾಗಿಲ್ಲ ಎಂದು ಲೆಸ್ಲಿ ಉಡ್ವಿನ್ ಹೇಳಿದ್ದಾರೆ.
ಭಾರತದ ರಾಜಕಾರಣಿಗಳು ಅತ್ಯಾಚಾರದ ಬಗ್ಗೆ ನೀಡಿದ ಹೇಳಿಕೆಗಳಿಗೆ ವ್ಯಕ್ತವಾಗದ ವಿರೋಧ ಮುಖೇಶ್ ಸಿಂಗ್ ಸಂದರ್ಶನಕ್ಕೆ ವ್ಯಕ್ತವಾಗಿದ್ದು ಹೇಗೆ ಎಂದು ಲೆಸ್ಲಿ ಉಡ್ವಿನ್ ಪ್ರಶ್ನಿಸಿದ್ದಾರೆ. ಇಂತಹ ಬೂಟಾಟಿಕೆಯ ಕೂಗು ಅಲ್ಲಿನ ಸಮಾಜದ ಮಾನಸಿಕತೆಯನ್ನು ತೋರಿಸುತ್ತದೆ ಎಂದು ಹೇಳಿದ್ದಾರೆ.