ಪಾಟ್ನಾ : 'ಜೆಡಿಯು' ಶಾಸಕಾಂಗ ಪಕ್ಷದ ನಾಯಕನ ಸ್ಥಾನಕ್ಕೆ ನಿತೀಶ್ ಕುಮಾರ್ ಆಯ್ಕೆ ಅಸಂವಿಧಾನಿಕ ಎಂದು ಪಾಟ್ನಾ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಬಿಹಾರ ಮುಖ್ಯಮಂತ್ರಿ ಜಿತನ್ ರಾಮ್ ಮಾಂಝಿ ಅವರನ್ನು ಉಚ್ಛಾಟಿಸಿರುವ ಹಿನ್ನೆಲೆಯಲ್ಲಿ ಉಂಟಾಗಿರುವ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಹೈಕೋರ್ಟ್ ನೀಡಿರುವ ತೀರ್ಪು ಮಹತ್ವ ಪಡೆದುಕೊಂಡಿದೆ.
ಕಳೆದ ಶನಿವಾರದಂದು ಜೆಡಿಯು ಪಕ್ಷದ ನಾಯಕರು ಶಾಸಕಾಂಗ ಪಕ್ಷದ ನಾಯಕನ ಅನುಪಸ್ಥಿತಿಯಲ್ಲಿ ಶಾಸಕಾಂಗ ಪಕ್ಷದ ಸಭೆ ಕರೆದು ನಿತೀಶ್ ಕುಮಾರ್ ಅವರನ್ನು ನಾಯಕನನ್ನಾಗಿ ನೇಮಕ ಮಾಡಿದ್ದರು. ಇದರ ವಿರುದ್ಧ ಹೈಕೋರ್ಟ್ ಗೆ ದೂರು ದಾಖಲಿಸಲಾಗಿತ್ತು. ಈ ಅರ್ಜಿ ವಿಚಾರಣೆ ನಡೆಸಿರುವ ನ್ಯಾಯಾಲಯ ನಿತೀಶ್ ಕುಮಾರ್ ಆಯ್ಕೆ ಅಸಂವಿಧಾನಿಕ ಎಂದು ಸ್ಪಷ್ಟಪಡಿಸಿದೆ. ಬಿಹಾರ ಮುಖ್ಯಮಂತ್ರಿ ಜಿತನ್ ರಾಮ್ ಮಾಂಝಿ ಅವರ ಅನುಪಸ್ಥಿತಿಯಲ್ಲಿ ನಡೆದ ಶಾಸಕಾಂಗ ಪಕ್ಷದ ಸಭೆಯೂ ಸಹ ಮಾನ್ಯವಲ್ಲ ಎಂದು ಪಾಟ್ನಾ ಹೈಕೋರ್ಟ್ ಹೇಳಿದ್ದು ನಿತೀಶ್ ಕುಮಾರ್ ಆಯ್ಕೆಗೆ ತಡೆ ನೀಡಿದೆ.
ಅಸಾಂವಿಧಾನಿಕವಾಗಿ ನಡೆದ ನಿತೀಶ್ ಕುಮಾರ್ ಆಯ್ಕೆಯನ್ನು ಮಾನ್ಯ ಮಾಡಿದ್ದ ಬಿಹಾರ ವಿಧಾನಸಭೆಯ ಸ್ಪೀಕರ್ ಹಾಗೂ ಜೆಡಿಯು ಪಕ್ಷದ ಕ್ರಮಕ್ಕೂ ಸಹ ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ.
ಬಿಹಾರದ ಮುಖ್ಯಮಂತ್ರಿಯಾಗಿದ್ದ ಜಿತಿನ್ ರಾಮ್ ಮಾಂಝಿಯನ್ನು ಉಚ್ಛಾಟಿಸಿದ ಕ್ರಮವನ್ನು ಪ್ರಶ್ನಿಸಿ ಮಾಂಝಿ ಬೆಂಬಲಿಗರು ಪಿ.ಐ.ಎಲ್ ಸಲ್ಲಿಸಿದ್ದರು.