ಪಾಟ್ನಾ : ಬಿಹಾರದ ಮಾಜಿ ಮುಖ್ಯಮಂತ್ರಿ ಜಿತನ್ ರಾಮ್ ಮಾಂಝಿ, ಹೊಸ ಪಕ್ಷವನ್ನು ಸ್ಥಾಪಿಸಿ ಅದಕ್ಕೆ ಹಿಂದೂಸ್ಥಾನ್ ಅವಾಮಿ ಮೋರ್ಚಾ(ಹೆಚ್.ಎ.ಎಂ) ಎಂದು ನಾಮಕರಣ ಮಾಡಿದ್ದಾರೆ.
ಸದ್ಯದಲ್ಲೇ ನಡೆಯಲಿರುವ ಬಿಹಾರದ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದ ಎಲ್ಲಾ 243 ಕ್ಷೇತ್ರಗಳಲ್ಲಿಯೂ ತಮ್ಮ ಪಕ್ಷದ ಅಭ್ಯರ್ಥಿಗಳು ಸ್ಪರ್ಧಿಸಲಿದ್ದಾರೆ ಎಂದು ಹಿಂದೂಸ್ಥಾನ್ ಅವಾಮಿ ಮೋರ್ಚಾ ಸ್ಥಾಪಕ ಜಿತನ್ ರಾಮ್ ಮಾಂಝಿ ಹೇಳಿದ್ದಾರೆ.
ಪಕ್ಷದ ರಾಜ್ಯಾಧ್ಯಕ್ಷರಾಗಿ ಶಕುನಿ ಚೌಧರಿ ಆಯ್ಕೆಯಾಗಿದ್ದಾರೆ. ಮೇ.10ರಂದು ಹೊಸ ಪಕ್ಷವನ್ನು ಅಧಿಕೃತವಾಗಿ ಘೋಷಿಸಬೇಕಾಗಿತ್ತಾದರೂಎರಡು ದಿನಗಳ ಕಾಲ ಪಾಟ್ನಾದಿಂದ ಹೊರ ತೆರಳುತ್ತಿರುವುದರಿಂದ ಮೇ.8ರಂದೇ ಹೊಸ ಪಕ್ಷವನ್ನು ಘೋಷಣೆ ಮಾಡುತ್ತಿರುವುದಾಗಿ ಜಿತನ್ ರಾಮ್ ಮಾಂಝಿ ತಿಳಿಸಿದ್ದಾರೆ.
ಹೊಸ ಪಕ್ಷವನ್ನು ಚುನಾವಣಾ ಆಯೋಗದೊಂದಿಗೆ ನೋಂದಣಿ ಮಾಡುವ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ, ಮುಂದಿನ ಚುನಾವಣೆಯಲ್ಲಿ ಹೆಚ್.ಎ.ಎಂ ಪಕ್ಷದ ಅಭ್ಯರ್ಥಿಗಳು ರಾಜ್ಯಾದ್ಯಂತ ಕಣಕ್ಕಿಳಿಯಲಿದ್ದಾರೆ.
ಇದೇ ವೇಳೆ ಬಿಹಾರ ಸಿ.ಎಂ ನಿತೀಶ್ ಕುಮಾರ್ ವಿರುದ್ಧ ವಾಗ್ದಾಳಿ ನಡೆಸಿರುವ ಜಿತನ್ ರಾಮ್ ಮಾಂಝಿ, ನಿತೀಶ್ ಕುಮಾರ್ ಸಾಮಾಜಿಕ ನ್ಯಾಯಕ್ಕೆ ಮಾರಕವಾಗಿದ್ದಾರೆ ಎಂದು ಆರೋಪಿಸಿದ್ದಾರೆ. ಅಲ್ಲದೇ, ಹೆಚ್.ಎ.ಎಂ ಪಕ್ಷವನ್ನು ಸೇರ್ಪಡೆಗೊಳ್ಳುವಂತೆ ಆರ್.ಜೆ.ಡಿಯ ಉಚ್ಛಾಟಿತ ಸಂಸದ ಪಪ್ಪು ಯಾದವ್ ಗೆ ಜಿತನ್ ರಾಮ್ ಮಾಂಝಿ ಆಹ್ವಾನ ನೀಡಿದ್ದಾರೆ.