ನವದೆಹಲಿ : 'ದೆಹಲಿ'ಯಲ್ಲಿ ಆಮ್ ಆದ್ಮಿ ಪಕ್ಷ ಐತಿಹಾಸಿಕ ಗೆಲುವು ಸಾಧಿಸಿರುವುದರ ಬಗ್ಗೆ ಪ್ರತಿಕ್ರಿಯಿಸಿರುವ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ, ದೆಹಲಿ ಮತದಾರರಿಗೆ ಅಭಿನಂದನೆ ಸಲ್ಲಿಸಿದ್ದಾರೆ.
ರಾಷ್ಟ್ರೀಯ ಪಕ್ಷಗಳು ಮೊದಲಿನಿಂದಲೂ ಪ್ರಾದೇಶಿಕ ಪಕ್ಷಗಳನ್ನು ತುಳಿಯಲು ಯತ್ನಿಸುತ್ತಿವೆ. ದೆಹಲಿ ವಿಧಾನಸಭಾ ಚುನಾವಣೆ ಫಲಿತಾಂಶ ರಾಷ್ಟ್ರೀಯ ಪಕ್ಷಗಳ ಅಹಂಕಾರವನ್ನು ಕುಗ್ಗಿಸಿದೆ ಎಂದು ಹೇಳಿದ್ದಾರೆ.
ಯುಪಿಎ ಸರ್ಕಾರ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ಪ್ರಾದೇಶಿಕ ಪಕ್ಷದ ನಾಯಕರನ್ನು ಜೈಲಿಗೆ ಕಳುಹಿಸಲಾಗಿತ್ತು. ಆಮ್ ಆದ್ಮಿ ಪಕ್ಷದ ನಾಯಕ ಅರವಿಂದ್ ಕೇಜ್ರಿವಾಲ್ ಅವರನ್ನೂ ಜೈಲಿಗೆ ಕಳಿಸುವ ಯತ್ನ ನಡೆದಿತ್ತು ಎಂದು ದೇವೇಗೌಡ ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರೂ ಅರವಿಂದ್ ಕೇಜ್ರಿವಾಲ್ ವಿರುದ್ಧ ಮುಗಿಬಿದ್ದರು. ಆದರೆ ಈಗ ದೆಹಲಿಯಲ್ಲಿ ಅಮ್ ಆದ್ಮಿ ಪಕ್ಷ ಐತಿಹಾಸಿಕ ಜಯ ಗಳಿಸಿದೆ ಎಂದು ದೇವೇಗೌಡ ಸಂತಸ ವ್ಯಕ್ತಪಡಿಸಿದ್ದಾರೆ. ರಾಜ್ಯದಲ್ಲೂ ಜೆಡಿಎಸ್ ವಿರುದ್ಧ ಷಡ್ಯಂತ್ರ ನಡೆಯುತ್ತಿದ್ದು ಪಕ್ಷವನ್ನು ಮುಗಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.