ಅಹಮದಾಬಾದ್ : ವಿಶ್ವ ಎದುರಿಸುತ್ತಿರುವ ಎಲ್ಲ ಸಮಸ್ಯೆಗಳಿಗೂ ಹಿಂದೂ ಧರ್ಮದಲ್ಲಿ ಪರಿಹಾರವಿದೆ ಎಂದು ಬಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹೇಳಿದ್ದಾರೆ.
ಗುಜರಾತ್ ವಿಶ್ವವಿದ್ಯಾಲಯದ ಕನ್ ವೆನ್ ಶನ್ ಸೆಂಟರ್‌ನಲ್ಲಿ ಮಾಜಿ ರಾಷ್ಟ್ರಪತಿ ಎ.ಪಿ.ಜೆ ಅಬ್ದುಲ್ ಕಲಾಂ ಅವರ "ಟ್ರಾನ್ಸೆಂಡೆನ್ಸ್: ಮೈ ಸ್ಪಿರಿಚುವಲ್ ಎಕ್ಸ್‌ಪೀರಿಯನ್ಸಸ್ ವಿತ್ ಪ್ರಮುಖ್ ಸ್ವಾಮೀಜಿ' ಎಂಬ ಕೃತಿಯನ್ನು ಬಿಡುಗಡೆಗೊಳಿಸಿ ಮಾತನಾಡಿದ ಅವರು, ಪ್ರಪಂಚದ ಎಲ್ಲಾ ಸಮಸ್ಯೆಗಳಿಗೂ ಹಿಂದೂ ಧರ್ಮದಲ್ಲಿ ಪರಿಹಾರವಿದೆ. ನಾನು ಹಿಂದುವಾಗಿದ್ದಕ್ಕಾಗಿ ಇದನ್ನು ಹೇಳುತ್ತಿಲ್ಲ. ಸ್ವಾಮಿ ನಾರಾಯಣ ಗುರುಗಳು, ಹಿಂದೂ ಧರ್ಮಕ್ಕೆ ಹೊಸದೊಂದು ಆಯಾಮದ ಹೊಳಹು ನೀಡಿದ್ದಾರೆ ಎಂದು ಶಾ ಅಭಿಪ್ರಾಯಪಟ್ಟಿದ್ದಾರೆ.
ನನಗೆ ಬದುಕಿನಲ್ಲಿ ಕಷ್ಟಕಾಲ ಎದುರಾಗಿದ್ದ ಎರಡು ವರ್ಷಗಳ ಅವಧಿಯಲ್ಲಿ ನಾನು ದೇಶದ ಎಲ್ಲ ಧಾರ್ಮಿಕ ಕೇಂದ್ರಗಳನ್ನು ಸಂದರ್ಶಿಸಿದ್ದೇನೆ. ಭಾರತದಲ್ಲಿನ ಎಲ್ಲ ಜ್ಯೋತಿರ್ಲಿಂಗಗಳನ್ನು ಶಕ್ತಿಪೀಠಗಳನ್ನು ಸಂದರ್ಶಿಸಿದ್ದೇನೆ. ಆದರೆ ಗುಜರಾತ್‌ನಲ್ಲಿನ ಸೋಮನಾಥ ದೇವಾಲಯಕ್ಕೆ ಮಾತ್ರವೇ ಭೇಟಿ ನೀಡಲಾಗಿಲ್ಲ. ಕಾರಣ ಸೊಹರಾಬುದ್ದೀನ್ ಶೇಖ್ ಎನ್‌ಕೌಂಟರ್ ಕೇಸಿಗೆ ಸಂಬಂಧಪಟ್ಟ ಹಾಗೆ ನಾನು ಗುಜರಾತ್ ಪ್ರವೇಶಿಸುವಂತಿರಲಿಲ್ಲ ಎಂದು ನೆನಪಿಸಿಕೊಂಡರು.
ಹಿಂದು ಧರ್ಮಕ್ಕೆ ಶಂಕರಾಚಾರ್ಯರು ಆಖಾಡದ ಪರಂಪರೆಯನ್ನು ನೀಡುವ ಮೂಲಕ ಭದ್ರವಾದ ಬುನಾದಿಯನ್ನು ಹಾಕಿಕೊಟ್ಟಿದ್ದಾರೆ. ಅಂತೆಯೇ ಸ್ವಾಮಿ ನಾರಾಯಣ ಪಂಥದ ಧಾರ್ಮಿಕ ನಾಯಕರಾದ ಪ್ರಮುಖ ಸ್ವಾಮೀ ಅವರು ಕೂಡ ಹಿಂದು ಧರ್ಮದ ಏಳಿಗೆಗೆ ಒಳ್ಳೆಯ ಯೋಗದಾನ ನೀಡಿದ್ದಾರೆ ಎಂದು ಹೇಳಿದರು.