ಬೆಂಗಳೂರು : ರಾಷ್ಟ್ರೀಯ ಆಹಾರ ಭದ್ರತೆ ಕಾಯ್ದೆ ಅನ್ವಯ ರಾಜ್ಯದಲ್ಲಿ ’ಆಹಾರ ಆಯೋಗ’ ರಚಿಸಲು ಸರ್ಕಾರ ಮುಂದಾಗಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು ಸದ್ಯದಲ್ಲೇ ಆಯೋಗದ ಅಧ್ಯಕ್ಷರನ್ನು ಆಯ್ಕೆ ಮಾಡಲಾಗುವುದು. ಆಯ್ಕೆ ಸಮಿತಿಯಲ್ಲಿ ಮುಖ್ಯಮಂತ್ರಿ ಅವರು ಸೇರಿದಂತೆ ಉಭಯ ಸದನಗಳ ಸಭಾಧ್ಯಕ್ಷರು, ಸಭಾಪತಿಗಳು, ವಿರೋಧ ಪಕ್ಷಗಳ ನಾಯಕರು ಸೇರಿದಂತೆ ಆಹಾರ ಸಚಿವರು ಸಮಿತಿಯಲ್ಲಿರುತ್ತಾರೆ ಎಂದರು.
ಆಹಾರ ಆಯೋಗ ರಚನೆಯಾಗುವವರೆಗೂ ರಾಜ್ಯ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆಯೇ ಆಯೋಗ ನಿರ್ವಹಿಸುವ ಕೆಲಸವನ್ನು ತಾತ್ಕಾಲಿಕವಾಗಿ ನಿರ್ವಹಿಸಲಿದೆ. ದೇಶದಲ್ಲೇ ಈ ಆಯೋಗ ರಚಿಸುತ್ತಿರುವ ಮೂರನೇ ರಾಜ್ಯ ಕರ್ನಾಟಕವಾಗಲಿದೆ. ಈಗಾಗಲೇ ಬಿಹಾರ ಮತ್ತು ಹರಿಯಾಣ ರಾಜ್ಯಗಳಲ್ಲಿ ಆಯೋಗ ರಚನೆಯಾಗಿ ಕರ್ತವ್ಯ ನಿರ್ವಹಿಸುತ್ತಿವೆ ಎಂದರು.
ರಾಜ್ಯದಲ್ಲಿ ಪಡಿತರ ಆಹಾರ ಧಾನ್ಯಗಳ ಅಕ್ರಮ ಸಾಗಾಣಿಕೆ ಹಾಗೂ ದುರ್ಬಳಕೆಯಾಗುತ್ತಿರುವುದನ್ನು ಪತ್ತೆಮಾಡಿ ಮಾಹಿತಿ ನೀಡುವ ಮಾಹಿತಿದಾರರಿಗೆ ಬಹುಮಾನ ನೀಡುವ ಯೋಜನೆಯನ್ನು ತಕ್ಷಣದಿಂದ ಜಾರಿಗೆ ತರಲಾಗುವುದು ಎಂದ ಆಹಾರ ಸಚಿವರು ಪಡಿತರ ಅಕ್ರಮ ಸಾಗಾಣಿಕೆ ಬಗ್ಗೆ ಮಾಹಿತಿ ನೀಡುವವರಿಗೆ ಸಾಗಾಣಿಕೆ ಮಾಡುತ್ತಿರುವ ಪಡಿತರ ಮೌಲ್ಯದ ಶೇ 5 ರಷ್ಟು ಹಣವನ್ನು ಬಹುಮಾನವಾಗಿ ನೀಡಲಾಗುವುದು. ಅಲ್ಲದೆ ಮಾಹಿತಿ ನೀಡುವ ಮಾಹಿತಿದಾರರ ಗುರುತನ್ನು ಗೌಪ್ಯವಾಗಿ ಇಡಲಾಗುವುದು. ಇದು ದೇಶದಲ್ಲೇ ಮೊದಲ ಕಾರ್ಯಕ್ರಮವಾಗಿದೆ ಎಂದರು.