ನವದೆಹಲಿ : ಕಾವೇರಿ ನದಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಕೊನೆಗೂ ಮಧ್ಯಪ್ರವೇಶಿಸಿದ್ದು, ನವದೆಹಲಿಯಲ್ಲಿ ತುರ್ತು ಸಭೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ಕಾವೇರಿ ನಿರ್ವಹಣಾ ಮಂಡಳಿ ರಚನೆ ಮಾಡುವಂತೆ ಸುಪ್ರೀಂ ಕೋರ್ಟ್ ನೀಡಿರುವ ಆದೇಶದ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ತುರ್ತು ಸಭೆ ನಡೆಸಿದ್ದು, ಸಭೆಯಲ್ಲಿ ಕೇಂದ್ರ ಸಚಿವರಾದ ರಾಜ್ ನಾಥ್ ಸಿಂಗ್, ಉಮಾಭಾರತಿ ಸೇರಿದಂತೆ ಹಲವು ಅಧಿಕಾರಿಗಳು ಪಾಲ್ಗೊಂಡಿದ್ದರು.
ಈ ವೇಳೆ ನಿರ್ವಹಣಾ ಮಂಡಳಿ ರಚನೆ ಸಾಧಕ-ಬಾಧಕಗಳನ್ನು ಚರ್ಚಿಸಲಾಗಿದೆ ಎಂದು ತಿಳಿದುಬಂದಿದೆ. ಕರ್ನಾಟಕ ಮತ್ತು ತಮಿಳುನಾಡು ರಾಜ್ಯದ ಪ್ರಮುಖರ ಸಭೆಯ ವಿವರವನ್ನು ಮೋದಿ ಪಡೆದರು. ಇಷ್ಟೇ ಅಲ್ಲದೆ ಅಧಿಕಾರಿಗಳಿಂದ ಕಾವೇರಿ ಕೊಳ್ಳದ ಜಲಾಶಯಗಳ ಸ್ಥಿತಿ, ನೀರು ಸಂಗ್ರಹ, ಬೆಳೆ ಹಾಗೂ ಕಾನೂನು ಸುವ್ಯವಸ್ಥೆ ಸೇರಿ ನಿರ್ವಹಣಾ ಮಂಡಳಿ ರಚನೆ ಕುರಿತು ವಿಸ್ತೃತವಾಗಿ ಚರ್ಚಿಸಿದ್ದಾರೆ.
ಇನ್ನು ನಿರ್ವಹಣಾ ಮಂಡಳಿ ರಚಿಸುವಂತೆ ಒತ್ತಾಯಿಸುತ್ತಿದ್ದ ತಮಿಳುನಾಡು ಹಾಗೂ ಪುದುಚೇರಿ ಸರ್ಕಾರಗಳು ಮಂಡಳಿಗೆ ಸದಸ್ಯರನ್ನು ನಾಮನಿರ್ದೇಶನ ಮಾಡಲು ಉತ್ಸುಕವಾಗಿದೆಯಾದರೂ, ಕರ್ನಾಟಕ ಹಾಗೂ ಕೇರಳ ರಾಜ್ಯಗಳು ಈ ಬಗ್ಗೆ ಈ ವರೆಗೂ ಯಾವುದೇ ನಿರ್ಧಾರ ಪ್ರಕಟಿಸಿಲ್ಲ.