ನವದೆಹಲಿ : ಜನವರಿ 1ರಿಂದ ದೇಶದಲ್ಲಿ ಎಲ್ಲ ಬಗೆಯ ತುರ್ತು ಸೇವೆಗಳಿಗೂ ಒಂದೇ ದೂರವಾಣಿ ಸಂಖ್ಯೆಯ ವ್ಯವಸ್ಥೆ ಕಲ್ಪಿಸಲು ಕೇಂದ್ರ ಸರ್ಕಾರ ಮುಂದಾಗಿದೆ.
ಪೊಲೀಸ್, ಅಗ್ನಿಶಾಮಕ ದಳ, ಆ್ಯಂಬುಲೆನ್ಸ್ ಸೇರಿದಂತೆ ಇತರೆ ತುರ್ತು ಸೇವೆಗಳಿಗೆ ಅಮೆರಿಕ ಮಾದರಿಯಲ್ಲಿ ಒಂದೇ ಸಾಮಾನ್ಯ ದೂರವಾಣಿ ಸಂಖ್ಯೆ ಚಾಲ್ತಿಗೆ ತರಲು ಕೇಂದ್ರ ಸರ್ಕಾರ ಸಿದ್ಧತೆ ನಡೆಸಿದ್ದು, ಅಮೆರಿಕದಲ್ಲಿ ಎಲ್ಲ ತುರ್ತು ಸೇವೆಗಳಿಗೆ 911 ಸಾಮಾನ್ಯ ಸಂಖ್ಯೆಯಾಗಿದ್ದು, ಇದೇ ಮಾದರಿಯಲ್ಲಿ ಭಾರತದಲ್ಲೂ ಎಲ್ಲಾ ತುರ್ತು ಸೇವೆಗಳಿಗೆ 112 ಸಾಮಾನ್ಯ ಸಂಖ್ಯೆಯಾಗಿರಲಿದೆ ಎಂದು ತಿಳಿದುಬಂದಿದೆ.
ಈ ಪ್ರಸ್ತಾವಕ್ಕೆ ಕೇಂದ್ರ ಟೆಲಿಕಾಂ ಸಚಿವ ರವಿಶಂಕರ್ ಪ್ರಸಾದ್ ಅವರು ಇದಕ್ಕೆ ಸಮ್ಮತಿ ಸೂಚಿಸಿದ್ದು, ಹೊರಹೋಗುವ ಕರೆಗಳನ್ನು ಸ್ಥಗಿತಗೊಳಿಸಿರುವ ಸಿಮ್ ಅಥವಾ ಲ್ಯಾಂಡ್ ಲೈನ್ ನಿಂದಲೂ 112ಗೆ ಕರೆ ಮಾಡಲು ಸಾಧ್ಯವಾಗುವಂತೆ ಯೋಜನೆ ರೂಪಿಸಲಾಗುತ್ತಿದೆ. ಇದು ಜಾರಿಗೆ ಬಂದ ಒಂದು ವರ್ಷದ ಅವಧಿಯಲ್ಲಿ ಉಳಿದ ತುರ್ತುಸೇವೆ ಸಂಖ್ಯೆಗಳ ಕಾರ್ಯಾಚರಣೆ ಸ್ಥಗಿತಗೊಳ್ಳಲಿದೆ ಎಂದು ತಿಳಿದುಬಂದಿದೆ.
ಸದ್ಯ ಪೊಲೀಸ್ ತುರ್ತು ಸೇವೆ ಸಂಖ್ಯೆ100, ಅಗ್ನಿಶಾಮಕ 101, ಆಂಬ್ಯುಲೆನ್ಸ್ 102 ಮತ್ತು ವಿಪತ್ತು ನಿರ್ವಹಣಾ108 ಸಂಖ್ಯೆಗಳನ್ನು ಬಳಸಲಾಗುತ್ತಿದ್ದು, ಇದೇ ಜನವರಿ 1ರಿಂದ ನೂತನ 112 ತುರ್ತು ಸೇವಾ ದೂರವಾಣಿ ಸಂಖ್ಯೆ ಕಾರ್ಯಾರಂಭ ಮಾಡಲಿದೆ.