ನವದೆಹಲಿ : ಹಣ, ಸಮಯ ಮತ್ತು ಸಂಪನ್ಮೂಲವನ್ನು ಉಳಿಸುವ ಉದ್ದೇಶದಿಂದ ದೇಶದಲ್ಲಿನ ಎಲ್ಲ ಚುನಾವಣೆಗಳನ್ನು ಏಕಕಾಲದಲ್ಲಿ ನಡೆಸುವ ಚಿಂತನೆಯನ್ನು ಪ್ರಧಾನಿ ನರೇಂದ್ರ ಮೋದಿ ಮುಂದಿಟ್ಟಿದ್ದಾರೆ.
ರಾಜಕೀಯ ಪಕ್ಷಗಳು ಮತ್ತು ಅವುಗಳ ಕಾರ್ಯಕರ್ತರು ತಮ್ಮ ಸಮಯ, ಹಣ ಮತ್ತು ಸಂಪನ್ಮೂಲವನ್ನು ಚುನಾವಣೆಗಾಗಿ ವ್ಯಯಿಸುತ್ತಿರುವುದನ್ನು ಗಮನಿಸಿ ಪ್ರಧಾನಿ ಮೋದಿ ಈ ವಿನೂತನ ಚಿಂತನೆಯನ್ನು ಮುಂದಿರಿಸಿದ್ದಾರೆ ಎಂದು ಹೇಳಲಾಗಿದೆ.
ಇತ್ತೀಚೆಗೆ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ನಡೆದ ವೇಳೆ ಪ್ರಧಾನಿ ಮೋದಿ ಅವರು ಪಕ್ಷದ ಕಾರ್ಯಕರ್ತರು ಹಾಗೂ ಪದಾಧಿಕಾರಿಗಳ ಮುಂದೆ ತಮ್ಮ ಈ ವಿಶಿಷ್ಟ ಆಲೋಚನೆಯನ್ನು ಮುಂದಿಟ್ಟಿದ್ದರು.
ಪಂಚಾಯತ್, ನಗರ ಸ್ಥಳೀಯಾಡಳಿತ ಸಂಸ್ಥೆಗಳು, ರಾಜ್ಯ ವಿಧಾನಸಭೆಗಳು ಮತ್ತು ಲೋಕಸಭೆಯ ಚುನಾವಣೆಗಳನ್ನು ದೇಶದಲ್ಲಿ ಒಟ್ಟಿಗೇ ಏಕಕಾಲದಲ್ಲಿ ನಡೆಸುವುದೇ ಒಳ್ಳೆಯದು ಎಂಬ ಅಭಿಪ್ರಾಯವನ್ನು ಮೋದಿ ವ್ಯಕ್ತಪಡಿಸಿದ್ದಾರೆ. ಹೀಗೆ ಮಾಡಿದಲ್ಲಿ ರಾಜಕೀಯ ಹಾಗೂ ಸಾಮಾಜಿಕ ಕಾರ್ಯಕರ್ತರ ಅಮೂಲ್ಯ ಸಮಯ, ಹಣ ಮತ್ತು ಸಂಪನ್ಮೂಲ ದುಂದುವೆಚ್ಚವಾಗುವುದನ್ನು ತಪ್ಪಿಸಬಹುದಲ್ಲದೆ ತಳ ಮಟ್ಟದಲ್ಲಿ ಬದಲಾವಣೆಗಳನ್ನು ತರಲು ಸಾಧ್ಯವಾಗುವುದು ಎಂದು ಮೋದಿ ಹೇಳಿದ್ದಾರೆ.