ಮುಂಬೈ : ಭಾರತೀಯ ರಿಸರ್ವ್ ಬ್ಯಾಂಕ್ ನ ನೂತನ ಅಧ್ಯಕ್ಷ ಉರ್ಜಿತ್ ಪಟೇಲ್, ತಮ್ಮ ಮೊದಲ ಹಣಕಾಸು ನೀತಿ ಪ್ರಕಟಿಸಿದ್ದು, ರೆಪೋ ದರವನ್ನು ಶೇ.0.25ರಷ್ಟು ಕಡಿತಗೊಳಿಸಿದ್ದಾರೆ. ಈ ಮೂಲಕ ರೆಪೋ ದರ ಶೇಕಡಾ 6.50ಯಿಂದ ಶೇಕಡಾ 6.25ಕ್ಕೆ ಇಳಿಯಲಿದೆ.
ಹಣಕಾಸು ನೀತಿ ಸಮಿತಿಯ (ಎಂಪಿಸಿ) ಪ್ರಥಮ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿದ್ದ ಪಟೇಲ್, ಮೊದಲ ಹಣಕಾಸು ನೀತಿ ಪ್ರಕಟಿಸಿದರು. ಡಾ. ಪಟೇಲ್, ಇಬ್ಬರು ರಿಸರ್ವ್ ಬ್ಯಾಂಕ್ ಅಧಿಕಾರಿಗಳು, ಸರ್ಕಾರದಿಂದ ನೇಮಕಗೊಂಡ ಮೂವರು ಸದಸ್ಯರು ಹಣಕಾಸು ನೀತಿ ಸಮಿತಿ ಸಭೆಯಲ್ಲಿ ಪಾಲ್ಗೊಂಡಿದ್ದರು.
ಆರ್ ಬಿಐ ರೆಪೊ ದರವನ್ನು 25 ಬೇಸಿಸ್ ಪಾಯಿಂಟ್‌ಗಳಷ್ಟು ಕಡಿತಗೊಳಿಸಿ ಶೇಕಡಾ 6.25ಕ್ಕೆ ನಿಗದಿಗೊಳಿಸಿದೆ. ಹಣಕಾಸು ನೀತಿ ಸಮಿತಿಯ ಆರು ಸದಸ್ಯರು ರೆಪೊ ದರ ಕಡಿತದ ಪರವಾಗಿ ಮತ ಹಾಕಿದರು. 2016-17ರ ಸಾಲಿನಲ್ಲಿ ಗ್ರಾಹಕರ ಹಣದುಬ್ಬರ ಸೂಚ್ಯಂಕವನ್ನು ಶೇಕಡಾ 5ಕ್ಕೆ ಇಳಿಸಬೇಕೆಂಬ ಗುರಿಗೆ ಅನುಗುಣವಾಗಿ ಎಂಪಿಸಿ ಈ ನಿರ್ಧಾರವನ್ನು ಕೈಗೊಂಡಿದೆ.
ರಿವರ್ಸ್ ರೆಪೊ ದರವನ್ನು ದ್ರವ್ಯತೆ ಹೊಂದಾಣಿಕೆ ಸೌಲಭ್ಯ(ಎಲ್ಎಎಫ್) ಅಡಿ ಶೇಕಡಾ 5.75ಕ್ಕೆ ನಿಗದಿಪಡಿಸಲಾಗಿದೆ. ಇನ್ನು ಕನಿಷ್ಠ ಸ್ಥಿರ ಸೌಲಭ್ಯ(ಎಮ್ಎಸ್ಎಫ್) ದರ ಕೂಡ ಶೇಕಡಾ 6.75 ಆಗಿದೆ.
ಆರ್ ಬಿಐ 25 ಬೇಸಿಸ್ ಪಾಯಿಂಟ್ ಗಳನ್ನು ಕಡಿತಗೊಳಿಸಿರುವುದರಿಂದ ಬ್ಯಾಂಕುಗಳಿಗೆ ಆರ್ ಬಿಐನಿಂದ ಸ್ವಲ್ಪ ಅಗ್ಗದ ದರದಲ್ಲಿ ಹಣಕಾಸು ಪೂರೈಕೆಯಾಗುತ್ತದೆ. ಹೀಗಾಗಿ ಗ್ರಾಹಕರಿಗೆ ಕಡಿಮೆ ಬಡ್ಡಿಗೆ ಗೃಹ, ವಾಹನ, ಕಾರ್ಪೊರೇಟ್ ಸಾಲಗಳು ದೊರಕಲಿವೆ.