ನವದೆಹಲಿ : ಸರಕು ಮತ್ತು ಸೇವಾ ತೆರಿಗೆ(ಜಿಎಸ್ ಟಿ) ಮಸೂದೆಗೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಅಂಕಿತ ಹಾಕಿದ್ದಾರೆ.
ಈಗಾಗಲೇ ರಾಜ್ಯಸಭೆ ಮತ್ತು ಲೋಕಸಭೆಯಲ್ಲಿ ಅಂಗೀಕಾರ ಪಡೆದುಕೊಂಡಿರುವ ಮಹತ್ವದ ಸರಕು ಮತ್ತು ಸೇವಾ ತೆರಿಗೆ ಮಸೂದೆಯನ್ನು ರಾಷ್ಟ್ರಪತಿಗಳ ಒಪ್ಪಿಗೆಗೆ ಕಳುಹಿಸಲಾಗಿತ್ತು. ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಐತಿಹಾಸಿಕ ಜಿ.ಎಸ್.ಟಿ. ಮಸೂದೆಗೆ ಸಹಿ ಹಾಕುವ ಮೂಲಕ ಒಪ್ಪಿಗೆ ನೀಡಿದ್ದಾರೆ ಎಂದು ರಾಷ್ಟ್ರಪತಿ ಭವನದ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಜಿಎಸ್ ಟಿ ವಿಧೇಯಕಕ್ಕೆ ಈಗಾಗಲೇ 16 ರಾಜ್ಯಗಳು ಒಪ್ಪಿಗೆ ನೀಡಿದ್ದರಿಂದ ಶೇ.50 ರಷ್ಟು ರಾಜ್ಯಗಳ ಒಪ್ಪಿಗೆ ಸಿಕ್ಕಂತಾಗಿತ್ತು. ಹೀಗಾಗಿ ರಾಷ್ಟ್ರಪತಿಗಳು ಇಂದು ತಮ್ಮ ಅಂಕಿತ ಹಾಕಿದ್ದಾರೆ.
ಕೇಂದ್ರ ಸರ್ಕಾರ ಜಿಎಸ್ ಟಿಯನ್ನು 2017ರ ಏಪ್ರಿಲ್ 1ರಿಂದ ಜಾರಿಗೊಳಿಸಲು ಚಿಂತಿಸುತ್ತಿದ್ದು, ಕಳೆದ ಆಗಸ್ಟ್ 8ರಂದು ಈ ವಿಧೇಯಕ ಸಂಸತ್ತಿನಲ್ಲಿ ಅಂಗೀಕಾರಗೊಂಡಿತ್ತು.