ನವದೆಹಲಿ : ಉತ್ತಮ ಶಿಕ್ಷಣ ವಿದ್ಯಾರ್ಥಿಗಳ ಭವಿಷ್ಯಕ್ಕೆ ಭದ್ರ ಬುನಾದಿ ಎಂದು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ತಿಳಿಸಿದ್ದಾರೆ.
ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮ ದಿನಾಚರಣೆ ಹಿನ್ನಲೆಯಲ್ಲಿ ಶಿಕ್ಷಕರ ದಿನಾಚರಣೆ ಅಂಗವಾಗಿ ರಾಷ್ಟ್ರಪತಿ ಭವನದ ಬಳಿ ಇರುವ ಡಾ.ರಾಜೇಂದ್ರ ಪ್ರಸಾದ್ ಸರ್ವೋದಯ ವಿದ್ಯಾಲಯದಲ್ಲಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ವಿದ್ಯಾರ್ಥಿಗಳೊಂದಿಗೆ ವಿಶೇಷ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.
ಭಾರತದ ರಾಜಕೀಯ ಇತಿಹಾಸ, ಸ್ವಾತಂತ್ರ್ಯ ನಂತರ ಅದರ ಬೆಳವಣಿಗೆ ಹಾಗೂ ವಿಶ್ವದಲ್ಲಿ ಹರಡುತ್ತಿರುವ ಭಯೋತ್ಪಾದನೆ ವಿಚಾರವಾಗಿ ವಿದ್ಯಾರ್ಥಿಗಳಿಗೆ ವಿಶೇಷ ಪಾಠಮಾಡಿದರು.
ಹೊಸ ತಂತ್ರಜ್ಞಾನ ಮತ್ತು ವಿಧಾನಶಾಸ್ತ್ರಗಳನ್ನು ಅಳವಡಿಸಿಕೊಳ್ಳುವ ಮೂಲಕ ಕಲಿಸುವಿಕೆ ಮತ್ತು ಕಲಿಕೆಯಲ್ಲಿ ಹೊಸ ಬದಲಾವಣೆಗಳನ್ನು ತರಬೇಕು. ಒಂದು ಉತ್ತಮ ಸಮಾಜದ ಸೃಷ್ಟಿಗೆ ಪ್ರಯತ್ನಿಸಬೇಕು ಎಂದು ರಾಷ್ಟ್ರಪತಿಗಳು ಇದೇ ವೇಳೆ ಶಿಕ್ಷಕರಿಗೆ ಕರೆ ನೀಡಿದ್ದಾರೆ.
ನಾಗರಿಕತೆಯ ಮೌಲ್ಯಗಳನ್ನು, ತ್ಯಾಗ, ಸಹಿಷ್ಣುತೆ, ಬಹು ಸಂಸ್ಕೃತಿ, ಅರ್ಥೈಸುವಿಕೆ ಮತ್ತು ಸಹಾನುಭೂತಿಯನ್ನು ಶಿಕ್ಷಕರು ವಿದ್ಯಾರ್ಥಿಗಳಲ್ಲಿ ತುಂಬಬೇಕು. ವಿದ್ಯಾರ್ಥಿಗಳಲ್ಲಿ ಸ್ಪೂರ್ತಿ ನೀಡುವ ಶಿಕ್ಷಕರು ಉತ್ತಮ ವ್ಯವಸ್ಥೆಗೆ ಅಡಿಪಾಯವಿದ್ದಂತೆ ಎಂದು ತಿಳಿಸಿದರು.