ನವದೆಹಲಿ : 'ಬಾಲಿವುಡ್' ಬಾಕ್ಸ್ ಆಫೀಸ್ ನಲ್ಲಿ ಕೋಟಿಗಟ್ಟಲೆ ಹಣ ಗಳಿಸುತ್ತಿರುವ ಪಿ.ಕೆ ಸಿನಿಮಾ ಹಿಂದೂ ಜನಜಾಗೃತಿ ಸಮಿತಿ ಕೆಂಗಣ್ಣಿಗೆ ಗುರಿಯಾಗಿದೆ.
ಅಮೀರ್ ಖಾನ್ ನಟನೆ ಮಾಡಿರುವ ಪಿಕೆ ಸಿನಿಮಾದಲ್ಲಿ ಹಿಂದೂ ಧರ್ಮದವರ ಧಾರ್ಮಿಕ ಭಾವನೆಗಳಿಗೆ ಧಕ್ಕೆಯುಂಟು ಮಾಡಲಾಗಿದೆ ಎಂದು ಹಿಂದೂ ಜನಜಾಗೃತಿ ಸಮಿತಿ ಆರೋಪಿಸಿದೆ. ಧಾರ್ಮಿಕ ಭಾವನೆಗಳಿಗೆ ಧಕ್ಕೆಯುಂಟುಮಾಡುತ್ತಿರುವ ಈ ಸಿನಿಮಾ ನಿಷೇಧಿಸುವಂತೆ ಪಣಜಿ ಪೊಲೀಸರಿಗೆ ದೂರು ನೀಡಿದೆ.
ರಾಜ್ ಕುಮಾರ್ ಹಿರಾನಿ ನಿರ್ದೇಶಿಸಿದ ಪಿಕೆ ಚಿತ್ರದಲ್ಲಿ ಲವ್ ಜಿಹಾದ್ ನ್ನು ಪ್ರೋತ್ಸಾಹಿಸಲಾಗಿದ್ದು, ಪಾಕಿಸ್ತಾನಿ ಮುಸ್ಲಿಂ ಯುವಕನನ್ನು ವೈಭವೀಕರಿಸಿ ತೋರಿಸಲಾಗಿದೆ. ಇಂಥಾ ಕಥಾವಸ್ತುಗಳು ಹಿಂದೂಗಳ ಮನಸ್ಸಲ್ಲಿ ಗೊಂದಲ ಸೃಷ್ಟಿಸುತ್ತವೆ. ಆದ್ದರಿಂದ ಪ್ರಸ್ತುತ ಸಿನಿಮಾದ ವಿರುದ್ಧ ಅಪರಾಧ ಕಾಯ್ದೆ 153 ಎ, 295 ಎ ಮತ್ತು 34ರಡಿಯಲ್ಲಿ ಕೇಸು ದಾಖಲಿಸಿ, ಶೀಘ್ರವೇ ಸಿನಿಮಾವನ್ನು ನಿಷೇಧಿಸಬೇಕೆಂದು ಸಂಘಟನೆ ತಮ್ಮ ದೂರಲ್ಲಿ ಒತ್ತಾಯಿಸಿದೆ.