ಬೆಂಗಳೂರು : ಕರ್ನಾಟಕ ಚಲನಚಿತ್ರ ಅಕಾಡೆಮಿಯಿಂದ ಕನ್ನಡ ಚಲನಚಿತ್ರೋತ್ಸವವನ್ನು ಜುಲೈ 28 ರಿಂದ 31 ರವರೆಗೆ ಚೆನ್ನೈನ ಅಲುವಾರ್ ಪೇಟ್‍ನ ಕಸ್ತೂರಿ ರಂಗ ರಸ್ತೆಯಲ್ಲಿರುವ ರಷ್ಯನ್ ಸೆಂಟರ್ ಆಫ್ ಸೈನ್ಸ್ ಅಂಡ್ ಕಲ್ಚರ್ ನಲ್ಲಿ ಏರ್ಪಡಿಸಲಾಗಿದೆ ಎಂದು ಕರ್ನಾಟಕ ಚಲನಚಿತ್ರ ಅಕಾಡೆಮಿಯ ರಿಜಿಸ್ಟ್ರಾರ್ ಹೆಚ್.ಬಿ.ದಿನೇಶ್ ತಿಳಿಸಿದ್ದಾರೆ.
ಚಲನಚಿತ್ರೋತ್ಸವ ಉದ್ಘಾಟನಾ ಸಮಾರಂಭವು ಜುಲೈ 28 ರಂದು ಸಂಜೆ 5-30 ಗಂಟೆಗೆ ನಡೆಯಲಿದೆ. ಭಾರತೀಯ ಚಲನಚಿತ್ರ ರಂಗದ ಹಿರಿಯ ಕಲಾವಿದೆ ಪದ್ಮಭೂಷಣ ಡಾ: ಬಿ. ಸರೋಜಾ ದೇವಿ ಉದ್ಘಾಟಿಸುವರು. ಖ್ಯಾತ ಕಲಾವಿದೆ ಶ್ರೀಮತಿ ಸುಹಾಸಿನಿ ಮಣಿರತ್ನಂ ಆಶಯ ನುಡಿಗಳನ್ನಾಡುವರು.
ಮುಖ್ಯ ಅತಿಥಿಗಳಾಗಿ ದಕ್ಷಿಣ ಭಾರತ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಹೆಚ್.ಡಿ. ಗಂಗರಾಜು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ನಿರ್ದೇಶಕ ಎನ್.ಆರ್. ವಿಶುಕುಮಾರ್, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ ಗೋವಿಂದು, ಇಂಡಿಯನ್ ಸಿನಿ ಅಪ್ರಿಸಿಯೇಷನ್ ಫೌಂಡೇಷನ್ ಅಧ್ಯಕ್ಷ ಎಸ್. ಕಣ್ಣನ್, ಚೈನ್ನೈ ಚಲನಚಿತ್ರ ಕಲಾವಿದರ ಸಂಘದ ಅಧ್ಯಕ್ಷ ನಾಜರ್, ಖ್ಯಾತ ಚಲನಚಿತ್ರ ನಟರಾದ ಯಶ್, ಕಾರ್ತೀಕ್, ಚೈನೈ ಚಲನಚಿತ್ರ ನಿರ್ಮಾಪಕ ಸಂಘದ ಅಧ್ಯಕ್ಷ ಎಸ್. ತನು, ಚಲನಚಿತ್ರ ನಿರ್ದೇಶಕರ ಸಂಘದ ಅಧ್ಯಕ್ಷ ವಿಕ್ರಮನ್, ಭಾರತೀಯ ಚಲನಚಿತ್ರ ಒಕ್ಕೂಟದ ಅಧ್ಯಕ್ಷ ಸಿ. ಕಲ್ಯಾಣ್, ಮಾಜಿ ಅಧ್ಯಕ್ಷ ರವಿ ಕೊಟ್ಟಾರ್ಕರ್ ಹಾಗೂ ಚೈನ್ನೈ ಕರ್ನಾಟಕ ಸಂಘದ ಅಧ್ಯಕ್ಷ ನಾರಾಯಣ್ ಭಟ್ ಪಾಲ್ಗೊಳ್ಳುವರು. ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಎಸ್.ವಿ. ರಾಜೇಂದ್ರಸಿಂಗ್ ಬಾಬು ಅವರು ಅಧ್ಯಕ್ಷತೆ ವಹಿಸುವರು.
ಉದ್ಘಾಟನಾ ಸಮಾರಂಭದ ಅಂಗವಾಗಿ ಕೇಂದ್ರ ಸರ್ಕಾರದ ಶ್ರೇಷ್ಠ ಪ್ರಾದೇಶಿಕ ಕನ್ನಡ ಚಿತ್ರ ಪ್ರಶಸ್ತಿ ಪುರಸ್ಕೃತ ತಿಥಿ ಚಿತ್ರವನ್ನು ಏರ್ಪಡಿಸಲಾಗಿದೆ. ಚಿತ್ರ್ಯೋತ್ಸವದ ಅಂಗವಾಗಿ ಜುಲೈ 29 ರಿಂದ 31 ರವರೆಗೆ ಅರಿವು, ರಂಗಿತರಂಗ, ಯೂ ಟರ್ನ್, ಮಾರಿಕೊಂಡವರು, ಇಷ್ಟಕಾಮ್ಯ, 1 ನೇ ರ್ಯಾಂಕ್ ರಾಜು, ಗೋಧಿ ಬಣ್ಣ ಸಾಧಾರಣ ಮೈಕಟ್ಟು, ಕರ್ವ ಹಾಗೂ ಮಿ. ಅಂಡ್ ಮಿಸೆಸ್ ರಾಮಾಚಾರಿ ಚಿತ್ರಗಳು ಪ್ರದರ್ಶಿತಗೊಳ್ಳಲಿವೆ ಎಂದು ಅವರು ತಿಳಿಸಿದ್ದಾರೆ.