ನವದೆಹಲಿ : 2034ರ ವೇಳೆಗೆ ಭಾರತ ಶೇ.9ರಷ್ಟು ಜಿಡಿಪಿ ಸಾಧಿಸುವ ಸಾಮರ್ಥ್ಯ ಹೊಂದಿದ್ದು 10 ಯು.ಎಸ್.ಡಿ ಟ್ರಿಲಿಯನ್ ಆರ್ಥಿಕತೆಯನ್ನು ಹೊಂದಲಿದೆ ಎಂದು ಪ್ರೈಸ್ ವಾಟರ್ ಹೌಸ್ ಕೂಪರ್ಸ್(ಪಿಡಬ್ಲ್ಯೂಸಿ) ವರದಿ ಹೇಳಿದೆ.
ಭಾರತ ಪ್ರಮುಖ ಬದಲಾವಣೆಯತ್ತ ಸಾಗುತ್ತಿದೆ. 10 ಯು.ಎಸ್.ಡಿ ಟ್ರಿಲಿಯನ್ ಆರ್ಥಿಕ ದೇಶವಾಗಿ ಹೊರಹೊಮ್ಮಲು ಭಾರತ ವಾರ್ಷಿಕವಾಗಿ ಶೇ.9ರಷ್ಟು ಜಿಡಿಪಿ ಗುರಿ ಸಾಧಿಸಬೇಕು. ಕಾರ್ಪೊರೇಟ್ ವಲಯದ ಶ್ರಮಕ್ಕೆ ಸರ್ಕಾರದ ರಚನಾತ್ಮಕ ನಿರ್ಣಯಗಳು ಬೆಂಬಲವಾಗಿದ್ದಲ್ಲಿ 2034 ವೇಳೆಗೆ ಭಾರತ ಶೇ.9ರಷ್ಟು ಜಿಡಿಪಿ ಸಾಧಿಸಲಿದೆ ಎಂದು ಪಿಡಬ್ಲ್ಯೂಸಿ ವರದಿ ತಿಳಿಸಿದೆ.
ಪ್ರಸ್ತುತ ಜಾಗತಿಕ ಆರ್ಥಿಕ ಸ್ಥಿತಿ ಹದಗೆಟ್ಟಿದ್ದು ಇದು 12-18 ತಿಂಗಳು ಮುಂದುವರೆಯಲಿದೆ. ಆದರೆ ಆರ್ಥಿಕ ಸುಧಾರಣೆಗೆ ಭಾರತದಲ್ಲಿ ಸಾಕಷ್ಟು ಅವಕಾಶಗಳಿವೆ ಹಾಗೂ ಅವು ಇಂದಿನ ಸ್ಥಿತಿಗೆ ಪ್ರಮುಖವಾಗಿರುವುದಾಗಿ ಪಿಡಬ್ಲ್ಯೂಸಿ ಅಧ್ಯಕ್ಷ ಡೆನ್ನಿಸ್ ಅಭಿಪ್ರಾಯಪಟ್ಟಿದ್ದಾರೆ.
ಅಲ್ಲದೇ ಪಿಡಬ್ಲ್ಯೂಸಿ ವರದಿಯಲ್ಲಿನ ಅಂಶಗಳು ಜಾರಿಯಾದಲ್ಲಿ ಭಾರತಕ್ಕೆ ಶೇ.9ರಷ್ಟು ಜಿಡಿಪಿ ಸಾಧಿಸುವುದು ಸವಾಲಿನ ಸಂಗತಿಯಲ್ಲ ಎಂದು ಡೆನ್ನಿಸ್ ಹೇಳಿದ್ದಾರೆ.
ವಿಶ್ವ 2ನೇ ಆರ್ಥಿಕ ಕುಸಿತದತ್ತ ಜಾರುತ್ತಿರುವುದನ್ನು ತಪ್ಪಿಸಲು ದೈತ್ಯ ಆರ್ಥಿಕ ಶಕ್ತಿಯಾಗಿ ಉದಯಿಸುತ್ತಿರುವ ಭಾರತದೊಂದಿಗೆ ಹೆಚ್ಚು ಔದ್ಯಮಿಕ ಒಪ್ಪಂದಗಳನ್ನು ಮಾಡಬೇಕೆಂದು ಬ್ರಿಟನ್ ಪ್ರಧಾನಿ ಡೇವಿಡ್ ಕೆಮರೂನ್ ಇತ್ತೀಚೆಗಷ್ಟೇ ವಿಶ್ವಕ್ಕೆ ಕರೆ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.