ಬೆಳಗಾವಿ : ಪ್ರತ್ಯೇಕ ರಾಜ್ಯಕ್ಕಾಗಿ ಹೋರಾಡುವುದು ನಮ್ಮ ಜನ್ಮಸಿದ್ಧ ಹಕ್ಕು ಎಂದು ಮಾಜಿ ಸಚಿವ ಉಮೇಶ್ ಕತ್ತಿ ಹೇಳಿಕೆ ನೀಡುವ ಮೂಲಕ ಪ್ರತ್ಯೇಕ ರಾಜದ ತಮ್ಮ ಮಾತನ್ನು ಸಮರ್ಥಿಸಿಕೊಂಡಿದ್ದಾರೆ.
ಬೆಳಗಾವಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ನನ್ನ ಹೇಳಿಕೆಗೆ ನಾನು ಬದ್ಧನಾಗಿದ್ದೇನೆ, ಅಚಲನಾಗಿದ್ದೇನೆ. ಇದರಿಂದ ನನ್ನ ಶಾಸಕ ಸ್ಥಾನ ಹೋದರೂ ಚಿಂತೆಯಿಲ್ಲ, ಉತ್ತರ ಕರ್ನಾಟಕದ ಅಭಿವೃದ್ಧಿ ವಿಚಾರದಲ್ಲಿ ನನ್ನ ಹೋರಾಟ ಕೈಬಿಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ನಾನು ಅಖಂಡ ಕರ್ನಾಟಕಕ್ಕಾಗಿ ಹೋರಾಟ ನಡೆಸಿದ ಮನೆತನದಿಂದ ಬಂದಿದ್ದೇನೆ. ಅಖಂಡ ಕರ್ನಾಟಕದ ಬಗ್ಗೆ ಬೆಂಗಳೂರಿನಲ್ಲಿ ಕುಳಿತು ಮಾತನಾಡುವವರಿಂದ ನಾನು ಕಲಿಯಬೇಕಿಲ್ಲ ಎಂದು ವಾಗ್ದಾಳಿ ನಡೆಸಿದರು.
ವಾಟಾಳ್ ನಾಗರಾಜ್ ವಿರುದ್ಧ ಕಿಡಿಕಾರಿದ ಅವರು, ಬೆಂಗಳೂರಿನಲ್ಲಿ ಕುಳಿತು ಮಾತನಾಡುವ ಅವರಿಗೆ ಉತ್ತರ ಕರ್ನಾಟಕದ ಜನರ ವಾಸ್ತವ ಪರಿಸ್ಥಿತಿಯ ಬಗ್ಗೆ ಯಾವುದೇ ಮಾಹಿತಿಲ್ಲ ಎಂದಿದ್ದಾರೆ.
ಪ್ರತ್ಯೇಕ ರಾಜ್ಯದ ಹೇಳಿಕೆ ಪಕ್ಷದ ಅಜೆಂಡಾ ಅಲ್ಲ, ಇದು ಉತ್ತರ ಕರ್ನಾಟಕದ ಅಭಿವೃದ್ಧಿಗಾಗಿ ನನ್ನ ಬೇಡಿಕೆ ಎಂದು ತಿಳಿಸಿದ್ದಾರೆ.