ನವದೆಹಲಿ : ಮಹಾತ್ಮ ಗಾಂಧಿ ಅವರ ಹತ್ಯೆಗೆ ಆರ್ ಎಸ್ ಎಸ್ ಕಾರಣ ಎಂಬ ಹೇಳಿಕೆಗೆ ತಾವು ಬದ್ದರಾಗಿದ್ದು, ವಿಚಾರಣೆ ಎದುರಿಸಲು ಸಿದ್ಧ ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ತಿಳಿಸಿದ್ದಾರೆ.
2015 ರಲ್ಲಿ ಚುನಾವಣಾ ಪ್ರಚಾರ ಭಾಷಣದಲ್ಲಿ ರಾಹುಲ್, ಮಹಾತ್ಮಾ ಗಾಂಧಿ ಹತ್ಯೆಗೆ ಆರ್ ಎಸ್ ಎಸ್ ನನ್ನ ದೂಷಿಸಿದ್ದರು. ಇದನ್ನು ಪ್ರಶ್ನಿಸಿ ಆರ್ ಎಸ್ ಎಸ್ ರಾಹುಲ್ ವಿರುದ್ಧ ಮಾನನಷ್ಟ ಮೊಕ್ಕದ್ದಮೆ ಪ್ರಕರಣ ದಾಖಲಿಸಿತ್ತು.
ಈ ವಿಷಯವಾಗಿ ಆರ್ ಎಸ್ ಎಸ್ ತಮ್ಮ ಮೇಲೆ ಹೂಡಿರುವ ಮಾನನಷ್ಟ ಮೊಕದ್ದಮೆಯನ್ನು ಕೋರ್ಟ್ ನಲ್ಲಿ ಎದುರಿಸಲಿದ್ದೇನೆ ಎಂದು ಹೇಳಿದ್ದಾರೆ. ಅಲ್ಲದೇ ತನ್ನ ವಿರುದ್ಧದ ಮಾನನಷ್ಟ ಮೊಕದ್ದಮೆ ಕೇಸ್ ರದ್ದುಪಡಿಸಲು ಕೋರಿ ಸಲ್ಲಿಸಿದ್ದ ಅರ್ಜಿಯನ್ನೂ ರಾಹುಲ್ ಗಾಂಧಿ ಸುಪ್ರೀಂ ಕೋರ್ಟ್ ನಿಂದ ವಾಪಸ್ ಪಡೆದಿದ್ದಾರೆ.
ಕಳೆದ ಬಾರಿಯ ವಿಚಾರಣೆಯಲ್ಲಿ, ರಾಹುಲ್ ಪರವಾಗಿ ವಾದಿಸಿದ್ದ ಕಪಿಲ್ ಸಿಬಲ್, ರಾಹುಲ್ ಗಾಂಧಿ ಆರ್ ಎಸ್ ಎಸ್ ಸಂಘಟನೆ ಮಹಾತ್ಮ ಗಾಂಧಿ ಹತ್ಯೆಗೆ ಕಾರಣ ಎಂದಿಲ್ಲ ಬದಲಾಗಿ ಆರ್ ಎಸ್ ಎಸ್ ನ ಜನರನ್ನು ದೂಷಿಸಿದ್ದರು ಆದರೆ ಜನರು ಆರ್ ಎಸ್ ಎಸ್ ಗೆ ಸಂಬಂಧ ಬೆಸೆದಿದ್ದರು ಎಂದು ತಿಳಿಸಿದ್ದರು. ಆದರೆ ಆರ್ ಎಸ್ ಎಸ್ ರಾಹುಲ್ ಗಾಂಧಿ ಅವರಿಂದ ಲಿಖಿತ ಕ್ಷಮಾಪಣೆಗಾಗಿ ಆಗ್ರಹಿಸಿತ್ತು.