ಶಿವಮೊಗ್ಗ : ಐಪಿಎಲ್ ಹಗರಣದ ಆರೋಪಿ ಲಲಿತ್ ಮೋದಿಯವರಿಗೆ ವೀಸಾ ಒದಗಿಸಲು ಕೇಂದ್ರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ನೆರವು ನೀಡಿರುವ ಪ್ರಕರಣವನ್ನು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಮರ್ಥಿಸಿಕೊಂಡಿದ್ದಾರೆ.
ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಪ್ರಕರಣದಲ್ಲಿ ಸುಷ್ಮಾ ಸ್ವರಾಜ್ ಯಾವುದೇ ತಪ್ಪು ಮಾಡಿಲ್ಲ. ಅವರು ರಾಜೀನಾಮೆ ನೀಡುವ ಅಗತ್ಯವಿಲ್ಲ. ಮಾನವೀಯತೆ ದೃಷ್ಟಿಯಿಂದ ನೆರವು ನೀಡಿದ್ದಾರೆ. ಇದು ಅಂಥ ಮಹಾಪರಾಧವೇನಲ್ಲ ಎಂದು ಹೇಳಿದ್ದಾರೆ.
ಲಲಿತ್ ಮೋದಿ ಅವರ ಪತ್ನಿಗೆ ಕ್ಯಾನ್ಸರ್ ಇರುವ ಕಾರಣ ಚಿಕಿತ್ಸೆಗೆ ತೆರಳಲು ಲಲಿತ್ ಮೋದಿಗೆ ವೀಸಾ ಪಡೆಯಲು ಸುಷ್ಮಾ ಸ್ವರಾಜ್ ಸಹಾಯ ಮಾಡಿದ್ದಾರೆ. ಈ ವಿಷಯವನ್ನು ಅವರೇ ಸ್ಪಷ್ಟಪಡಿಸಿದ್ದಾರೆ. ಹಾಗಾಗಿ ಅವರು ರಾಜೀನಾಮೆ ನೀಡುವ ಪ್ರಮೆಯವೇ ಇಲ್ಲ ಎಂದಿದ್ದಾರೆ.
ಶಿವಮೊಗ್ಗ ವಿಮಾನ ನಿಲ್ದಾಣ ಕಾಮಗಾರಿ ವಿಳಂಬವಾಗುತ್ತಿದೆ. ಶೀಘ್ರ ಕಾಮಗಾರಿ ಪೂರ್ಣಗೊಳಿಸದಿದ್ದರೆ ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಬಿಜೆಪಿ ಅಧಿಕಾರದ ಅವಧಿಯಲ್ಲಿ ಇಲ್ಲಿನ ವಿಮಾನ ನಿಲ್ದಾಣ ಕಾಮಗಾರಿ ಶೇ.80ರಷ್ಟು ಮುಗಿದಿತ್ತು. ಉಳಿದ ಕಾಮಗಾರಿ ಪೂರ್ಣಗೊಳಿಸಲು ಕಾಂಗ್ರೆಸ್ ಸರ್ಕಾರ ವಿಳಂಬ ಧೋರಣೆ ಅನುಸರಿಸುತ್ತಿದೆ ಎಂದು ಆರೋಪಿಸಿದರು.