Untitled Document
Sign Up | Login    
ಡೆಂಟಿಸ್ಟ್‌ ಎಂದರೆ ಬರೀ ಹಲ್ಲು ಕೀಳುವವರಲ್ಲ!


ಹಲ್ಲಿನ ಡಾಕ್ಟರ್‌ ಎಂದರೆ ಹಲ್ಲು ಕೀಳುವವರು ಎಂಬ ತಿಳುವಳಿಕೆ ಇವತ್ತಿಗೂ ಇದೆ. ಆದರೆ, ದಂತ ವೈದ್ಯಕೀಯ ಕ್ಷೇತ್ರ ಬಹಳ ಮುಂದುವರೆದಿದೆ. ಹಲ್ಲು, ಬಾಯಿ ಮತ್ತು ಮುಖಾಂಗದ ಆರೋಗ್ಯದ ಕುರಿತಾದಂತ ಶಾಸ್ತ್ರ ಇಂದು ಹೆಮ್ಮರವಾಗಿ ಬೆಳೆದಿದೆ. ಭಾರತದಲ್ಲಿ, ಹಲ್ಲಿನ ಮತ್ತು ಬಾಯಿಯ ಆರೋಗ್ಯಕ್ಕೆ ಅಷ್ಟೊಂದು ನೀಡುತ್ತಿಲ್ಲ ಎಂಬ ಸತ್ಯ ವಿಷಯವನ್ನು ಒಪ್ಪಲೇ ಬೇಕು. ಹಾಗೆಂದು ಸಂಪೂರ್ಣವಾಗಿ ಒಪ್ಪಲೂ ಸಾಧ್ಯವಿಲ್ಲ. ಹಲವರಿಗೆ ಅರಿವಿದ್ದರೂ ನಿರ್ಲಕ್ಷತೆಯಿದೆ. ಶ್ರಿಮಂತರಿಗೆ ಅದೆಲ್ಲಾ ಪೂರೈಸಬಹುದು, ನಮ್ಮಿಂದಾಗದು ಎಂದು ಹಿಂಜರಿಯುವ ಜನರೂ ಇದ್ದಾರೆ. ಆದರೂ, ಹಲವಾರು ಡೆಂಟಲ್ ಕಾಲೇಜುಗಳಿಂದ ಸಾಮಾನ್ಯ ಜನರೂ ಹಲ್ಲು ಮತ್ತು ಬಾಯಿಯ ಆರೋಗ್ಯದ ವಿವಿಧ ಚಿಕಿತ್ಸೆಯನ್ನು ಪಡೆಯುವಂತಾಗಿದೆ.

ದಂತ ಶಾಸ್ತ್ರದಲ್ಲಿ ಹಲವು ವಿಭಾಗಗಳಿವೆ. ಮೊದಲನೆಯದಾಗಿ, ಬಾಯಿ ಮತ್ತು ಮುಖಾಂಗದ ರೋಗಗಳನ್ನು ಪತ್ತೆ ಹಚ್ಚಲು ಓರಲ್ ಮೆಡಿಸಿನ್ ಆಂಡ್‌ ರೇಡಿಯಾಲೊಜಿ ಎಂಬ ವಿಭಾಗವಿದೆ. ಇದರ ತಜ್ನ್ಯರು ಬಾಯಿಯ ಮತ್ತು ಮುಖಾಂಗವಲ್ಲದೇ, ಶರೀರದ ಬೇರೆ ತೊಂದರೆಗಳನ್ನೂ ಪರೀಕ್ಷಿಸಿ ಸೂಕ್ತ ತಜ್ನ್ಯ ವೈದ್ಯರ ಬಳಿಗೆ ನಿಮ್ಮನ್ನು ಕಳುಹಿಸಬಲ್ಲರು. ಅಲ್ಲದೇ, ರೇಡಿಯಾಲಜಿ ಶಾಸ್ತ್ರ ಅರಿತ ಇವರು ಎಕ್ಸ್- ರೇಗಳನ್ನೂ ಬಳಸಿ ರೋಗವನ್ನು ಕಂಡು ಹಿಡಿಯುವುದರಲ್ಲಿ ಸಹಕಾರಿಯಾಗುತ್ತಾರೆ. ಓರಲ್‌ ಆಂಡ್ ಮಾಕ್ಸಿಲೋಫೇಶಿಯಲ್ ಸರ್ಜರಿ ವಿಭಾಗದವರು ಬಾಯಿ ಮತ್ತು ಮುಖಾಂಗದ ಶಸ್ತ್ರಚಿಕಿತ್ಸೆಯಲ್ಲಿ ಪರಿಣತಿ ಪಡೆದಿರುತ್ತಾರೆ. ಹಲ್ಲು ಕೀಳುವಿಕೆಯಿಂದ ಹಿಡಿದು, ಮುಖಾಂಗಕ್ಕೆ ಸಂಬಂಧಪಟ್ಟ ಶಸ್ತ್ರಚಿಕಿತ್ಸೆಯನ್ನು ಮಾಡಬಲ್ಲರು. ವಿವೇಕದ ಹಲ್ಲು ಅಥವಾ ವಿಸ್ಡಮ್‌ಟೀತ್‌ ಅನ್ನು ಕೀಳುವಲ್ಲಿ ಇವರಿಗೆ ಹೆಚ್ಚಿನ ಪರಿಣತೆ ಇರುತ್ತದೆ.ಅಪಘಾತದಲ್ಲಿ ಮುಖಾಂಗ ಹಾಗು ದವಡೆಗಳ ಮುರಿತ ಹಾಗು ಇತರ ಗಾಯಗಳಿಗೆ ಚಿಕಿತ್ಸೆ ನೀಡಬಲ್ಲರು. ಅಲ್ಲದೇ ಇಂಪ್ಲಾಂಟ್‌ಚಿಕಿತ್ಸೆಗೆ ಬೇಕಾದ ದವಡೆಯ ಶಸ್ತ್ರಚಿಕಿತ್ಸೆಯನ್ನೂ ಮಾಡುತ್ತಾರೆ.

ಹಲ್ಲಿನ ಭದ್ರ ಬುನಾದಿಯೆಂದರೆ ವಸಡು. ವಸಡಿನ ತೊಂದರೆಗಳಿಗೆ ಹಾಗು ಅದರ ಶಸ್ತ್ರಚಿಕಿತ್ಸೆಯನ್ನು ಸಮರ್ಪಕವಾಗಿ ನಿರ್ವಹಿಸಲು ಪೆರಿಯೋಡೋಂಟಿಕ್ಸ್ ಎಂಬ ವಿಭಾಗವಿದೆ. ಹಲ್ಲಿನ ಕ್ಲೀನಿಂಗ್‌ ಕೂಡ ಈ ತಜ್ನ್ಯ ವೈದ್ಯರು ಮಾಡುತ್ತಾರೆ. ಹಲ್ಲಿಗೆ ಸಿಮೆಂಟ್ ತುಂಬಿದ್ದಾರೆ ಎಂದು ನೀವು ಕೇಳಿರಬಹುದು. ಕನ್ಸರ್ವೇಟಿವ್ ಡೆಂಟಿಸ್ಟ್ರಿ ಹಾಗು ಎಂಡೋಡೋಂಟಿಕ್ಸ್ ವಿಭಾಗದವರು, ಹುಳುಕು ಹಲ್ಲಿನ ತೊಂದರೆಗಳನ್ನು ಸರಿಪಡಿಸುತ್ತಾರೆ. ಹಲ್ಲಿನ ಒಳಪದರದ ಸೋಂಕನ್ನುದೂರಮಾಡಿ ಹಲ್ಲಿನ ಸಂರಕ್ಷಣೆಯಲ್ಲಿ ಪ್ರಮುಖ ಪಾತ್ರ ಇವರದು. ರೂಟ್‌ಕೆನಾಲ್‌ಚಿಕಿತ್ಸೆ ಇವರ ವಿಶೇಷ ಪರಿಣತಿ.

ಇನ್ನು ಮಕ್ಕಳ ಹಲ್ಲಿನ ತೊಂದರೆಗಳಿಗೆ ಮಕ್ಕಳ ಹಲ್ಲಿನ ತಜ್ನ್ಯ ವೈದ್ಯರೂ ಇದ್ದಾರೆ. ಮಕ್ಕಳ ಹಲ್ಲಿನ ಹಾಗು ಮುಖಾಂಗದ ಬೆಳವಣಿಗೆ, ನ್ಯೂನತೆಗಳು, ಮಕ್ಕಳ ಹಲ್ಲಿನ ಹುಳುಕು, ಹಾಲು ಹಲ್ಲಿನ ಕೀಳುವಿಕೆಯಲ್ಲಿ ಇವರು ವಿಶೇಷ ತರಬೇತಿ ಪಡೆದಿರುತ್ತಾರೆ. ಓರ್ಥೋಡೋಂಟಿಕ್ಸ್ ವಿಭಾಗದವರು ದಂತ ವಕ್ರತೆ ಹಾಗು ಮುಖಾಂಗದ ಬೆಳವಣಿಗೆಯ ತೊಂದರೆಗಳನ್ನು ಸರಿಪಡಿಸುವುದರಲ್ಲಿ ಪ್ರಾವಿಣ್ಯತೆ ಪಡೆದಿರುತಾರೆ. ಪ್ರಾಸ್ತೋಡೋಂಟಿಕ್ಸ್ ಹಾಗು ಇಂಪ್ಲಾಂಟಾಲಾಜಿ ವಿಭಾಗದವರು, ಸಂಪೂರ್ಣ ಕೃತಕದಂತ ಪಂಕ್ತಿ, ಅರೆದಂತ ಪಂಕ್ತಿ ಹಾಗು ಇಂಪ್ಲಾಂಟ್‌ಚಿಕಿತ್ಸೆ ನೀಡುತ್ತಾರೆ. ಹಲ್ಲು ಕಳೆದುಕೊಂದಿರುವವರಿಗೆ ವಿವಿಧ ರೀತಿಯ ಹಲ್ಲು ಸೆಟ್ಟು ಮಾಡುವ ಚಾತುರ್ಯ ಇವರದು.

ರೋಗಣು ಪತ್ತೆ ಹಚುವಿಕೆ ಹಾಗು ರೋಗಗಳನ್ನು ಅರಿಯಲು ಮಾಡಬೇಕಾದ ವಿವಿಧ ಪರಿಕ್ಷೆಗಳನ್ನು ಮಾಡಲು ಓರಲ್‌ ಆಂಡ್ ಮಾಕ್ಸಿಲೋಫೇಶಿಯಲ್ ಪೆಥಾಲಜಿ ವಿಬಾಗದವರು ಸಹಕರಿಸುತ್ತಾರೆ.

ಸಮುದಾಯದಂತ ಆರೋಗ್ಯ ವಿಭಾಗದವರು ರೋಗ ತಡೆಗಟ್ಟುವಿಕೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡುವರು. ಅಲ್ಲದೇ ರೊಗಗಳ ಕುರಿತಾದ ವಿವಿಧ ರೀತಿಯ ಮಾಹಿತಿ ಒದಗಿಸುವಂತಹ ಸಂಶೋಧನೆ, ತಂಬಾಕು ಚಟವನ್ನು ಹೋಗಲಾಡಿಸುಲು ಕೌನ್ಸೆಲಿಂಗ್ ಹಾಗು ಅದಕ್ಕೆ ಅಗತ್ಯವಾದ ಚಿಕಿತ್ಸೆಯನು ಮಾಡಲು ತರಬೇತಿ ಪಡೆದಿರುತ್ತಾರೆ. ರೋಗಗಳ ಬಗ್ಗೆ ಅರಿವು, ತಂಬಾಕಿನ ದುಷ್ಪರಿಣಾಮ ಹೀಗೆ ಹಲವು ವಿಚಾರಗಳ ಕುರಿತಾಗಿ ಸಮುದಾಯಕ್ಕೆ ಅರಿವು ಮೂಡಿಸುತ್ತಾರೆ.

ಇದು ದಂತ ಶಾಸ್ತ್ರದ ಒಂದು ಕಿರು ಪರಿಚಯ. ಆಧುನಿಕ ತಂತ್ರಜ್ನ್ಯಾನದ ವರದಾನದಿಂದ ಹಲವು ರೀತಿಯ ಚಿಕಿತ್ಸೆಗಳು ಹುಟ್ಟಿಕೊಂಡಿವೆ. ಬಾಯಿ ಮತ್ತು ಮುಖಾಂಗದ ತೊಂದರೆಗಳನ್ನು ನಿರ್ಲಕ್ಷಿಸದೆ, ಸರಿಯಾದ ಸಮಯಕ್ಕೆ ದಂತ ವೈದ್ಯರ ಭೇಟಿಯಾದಲ್ಲಿ ಉತ್ತಮ ರೀತಿಯ ಚಿಕಿತ್ಸೆ ಪಡೆದುಕೊಳ್ಳಬಹುದು. ಡೆಂಟಿಸ್ಟ್‌ ಎಂದರೆ ಬರೀ ಹಲ್ಲಿನ ಡಾಕ್ಟರ್‌ ಅಲ್ಲ, ಬಾಯಿ ಮತ್ತು ಮುಖಾಂಗದ ಹಲವು ರೋಗಗಳನ್ನ ದಂತ ವೈದ್ಯರು ಪತ್ತೆ ಹಚ್ಚಿ, ಸೂಕ್ತ ಕ್ರಮವನ್ನು ಸೂಚಿಸವ ಪ್ರಾವಿಣ್ಯತೆ ಪಡೆದವರು.
ಅಲ್ಲದೇ ಇಂದು ಹಲ್ಲು ಉಳಿಸುವಿಕೆ, ಇಂಪ್ಲಾಟ್, ವಕ್ರದಂತ ಹಾಗು ನ್ಯೂನತೆಯ ಚಿಕಿತ್ಸೆಗಳು ಬಹಳ ಮುಂದುವರೆದಿದೆ. ನಗುವನ್ನ ಅಂದಗೊಳಿಸುಲು ಮಾಡಬೆಕಾದ ಚಿಕಿತ್ಸೆಗಳೂ ಲಭ್ಯವಿದೆ. ಹಾಗಾಗಿ ನಿಮ್ಮ ಹತ್ತಿರದ ಡೆಂಟಿಸ್ಟ್‌ ಅಥವಾ ಡೆಂಟಲ್‌ ಕಾಲೇಜಿಗೆ ಭೇಟಿ ನೀಡಿ, ತಮ್ಮ ಬಾಯಿ ಹಾಗು ಹಲ್ಲಿನ ಆರೋಗ್ಯದ ತಪಾಸಣೆ ಮಾಡಿಸಿ, ತೊಂದರೆಗಳಿಗೆ ಸೂಕ್ತ ಪರಿಹಾರವನ್ನು ಪಡೆಯಿರಿ.

 

Author : ಅಶ್ವಿನಿ ಪಿ ಎಸ್ ಭಟ್ 

Author's Profile

ಅಶ್ವಿನ್ ಪಿ ಎಸ್
ಅಂತಿಮ ವರ್ಷದ ಬಿ.ಡಿ.ಎಸ್ ವಿದ್ಯಾರ್ಥಿ,
ಸರಕಾರಿದಂತ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆ, ಬೆಂಗಳೂರು.

psbhatashwin@gmail.com
www.facebook.com/ForAHappySmile

More Articles From Health

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited