Untitled Document
Sign Up | Login    
ಬಾಯಿಯ ಆರೋಗ್ಯದ ನಿರ್ಲಕ್ಷತೆ ಸಲ್ಲ!!!

ಸಾಂದರ್ಭಿಕ ಚಿತ್ರ

ನೀವು ಕಳೆದ ಬಾರಿ ಡೆಂಟಿಸ್ಟ್ ಬಳಿ ಪರೀಕ್ಷೆ ಮಾಡಿಸಿದ್ದು ಯಾವಾಗ ಎಂದು ನನ್ನ ಬಳಿ ಬಂದ ಒಬ್ಬರನ್ನ ಪ್ರಶ್ನಿಸಿದೆ, ಇದೇ ಫಸ್ಟ್‌ಟೈಮ್ ಸಾರ್‌ ಎಂದ ಅವನು. ಅವನು ಸುಮಾರು 25 ವರ್ಷದವನಾಗಿದ್ದ, ಆಶ್ಚರ್ಯವೆನಿಸಿತು. ಇನ್ನೂ ಹಲವರು, ಹಲ್ಲು ನೋವು ತಡೆಯಲಾಗದ ಪರಿಸ್ಥಿತಿಯಲ್ಲಿ, ಲವಂಗ, ನೋವಿನ ಮಾತ್ರೆಯ ಪ್ರಭಾವ ನಡೆಯದಿದ್ದಾಗ ದಂತ ವೈದ್ಯರ ಮೊರೆ ಹೋದ ಸನ್ನಿವೇಶಗಳೂ ಇದೆ. 'ಹಲ್ಲಿನ ಬಣ್ಣ ತುಂಬ ಕೆಟ್ಟದಾಗಿ ಕಾಣ್ತಾ ಇದೆ ಸರ್, ಏನು ಮಾಡೋದು' ಅಂತ ಬರುವವರ ಸಂಖ್ಯೆಯೂ ಕಡಿಮೆಯಿಲ್ಲ. ಹಾಗೆ ಬಂದ ಮಾಹಾನುಭಾವನೊಬ್ಬನ ಬಾಯಿಯನ್ನು ಪರೀಕ್ಷಿಸುತ್ತಿದ್ದೆ. ಬಾಯಿ 'ಆ' ಎಂದು ತೆರೆದ ಕ್ಷಣ, ಗಮ್ ಎನಿಸುವ ಗುಟ್ಕಾದ ಸುವಾಸನೆ. ದಿನಕ್ಕೆ ಎಷ್ಟು ಪಾಕ್ಯೆಟ್‌ ಹಾಕೊಳ್ತಿಯಪ್ಪಾ ಎಂದರೆ, ಸಾರ್ ಜಾಸ್ತಿಯಿಲ್ಲ, 10-15 ಅಷ್ಟೇ ಎಂದ ಆ ಭೂಪ!. ಇದೇ ತರಹ ಸಿಗರೇಟ್ ಸೇವನೆ ಬಗ್ಗೆ ಕೇಳಿದಾಗ ಮೀಸೆ ತಿರುವಿ, ದಿನಕ್ಕೆ 1 ಪ್ಯಾಕ್ ಮಿನಿಮಮ್ ಸಾರ್, ಮತ್ತೆ ತಲೆಬಿಸಿಯಾದ್ರೆ ಕೆಲವೊಮ್ಮೆ ಧಮ್ ಹೊಡಿತೀನಿ ಎಂದವರೂ ಇದ್ದಾರೆ. ಇನ್ನು ಕೆಲವರು, ಸಿಗರೇಟ್ ಏಕೆ ಸೇದುತೀರಾ ಎಂದರೆ, ಬೆಂಗಳೂರು ತುಂಬಾ ಚಳಿ ಸಾರ್, ಅಗಾಗ ಒಂದೊಂದು ಧಮ್ ಹೊಡಿತೀನಿ ಎಂದು ಕಾರಣ ಕೊಡುವವರೂ ಇದ್ದಾರೆ. ಹೌದು, ನಾಲ್ಕು ವರ್ಷದ ದಂತ ವೈದ್ಯಕೀಯ ಪದವಿಯ ಕೋರ್ಸ್ನಲ್ಲಿ, ಇಂತಹ ಹಲವು ಜನರನ್ನ ನೋಡಿದ್ದೇವೆ.

ನಮ್ಮ ದೇಶದಲ್ಲಿ ಬಾಯಿ ಮತ್ತು ಹಲ್ಲಿನ ಆರೋಗ್ಯದ ಕುರಿತಾಗಿ ಜನರಲ್ಲಿ ಕಾಳಜಿ ಕಮ್ಮಿ ಎಂಬ ಸತ್ಯವನ್ನು ಒಪ್ಪಲೇ ಬೇಕು. ಹಲವರಿಗೆ ಬಾಯಿಯ ಆರೋಗ್ಯದ ಬಗ್ಗೆ ಅರಿವಿದ್ದರೂ ನಿರ್ಲಕ್ಷತೆಯಿದೆ. ಬಾಯಿ ಮತ್ತು ಹಲ್ಲಿನ ತೊಂದರೆಗಳು ಎಮರ್ಜೆನ್ಸಿಯಲ್ಲ ಎಂದು ಡೆಂಟಿಸ್ಟ್ ಬಳಿ ಹೋಗುವ ಕಾರ್ಯಕ್ರಮಕ್ಕೆ ಮುಹೂರ್ತ ಕೂಡಿ ಬರುವುದಿಲ್ಲ. ಕೊನೆಗೊಂದು ದಿನ, 'ಮನೆಗೆ ಬೆಂಕಿ ಬಿದ್ದಾಗ ಬಾವಿ ತೋಡಿದರಂತೆ' ಎಂಬ ಮಾತಿನಂತೆ, ಡೆಂಟಿಸ್ಟ್ ಬಳಿ ಹೋಗುವುದು ಸರ್ವೇ ಸಾಮಾನ್ಯ.

ಬಾಯಿಯ ಆರೊಗ್ಯ, ದೇಹದ ಆರೊಗ್ಯದ ಕನ್ನಡಿ ಎಂದು ಹೇಳಲಾಗುತ್ತದೆ. ಹಲವು ರೋಗಗಳ ಲಕ್ಷಣಗಳು, ಬಾಯಿಯಲ್ಲಿ ಕಾಣಬರುತ್ತದೆ. ಉದಾಹರಣೆಗೆ, ರಕ್ತ ಹೀನತೆಯಿಂದ ನಮ್ಮ ದೇಶದಲ್ಲಿ ಬಹಳ ಜನರು ಬಳಲುತ್ತಿದ್ದಾರೆ. ನಾಲಿಗೆ ಹಾಗು ಬಾಯಿಯ ಪರೀಕ್ಷೆಯಿಂದ ಇದನ್ನು ಸುಲಭವಾಗಿ ಕಂಡು ಹಿಡಿಯಬಹುದು. ಹೀಗೆಯೇ, ಹಲವು ರೋಗ ಲಕ್ಷಣಗಳು ಬಾಯಿಯಲ್ಲಿ ಗೋಚರಿಸುತ್ತದೆ. ಅಲ್ಲದೇ, ಹಲ್ಲುಗಳಲ್ಲಿ ಆಗುವ ಹುಳುಕಿನಿಂದ, ಬ್ಯಾಕ್ಟೀರಿಯಾಗಳು, ರಕ್ತ ಸಂಚಾರಕ್ಕೆ ಸೇರಿ, ಹೃದಯ ಸಂಬಂಧೀರೋಗ ಉಲ್ಭಣಗೋಳ್ಳವ ಸಾಧ್ಯತೆಯಿದೆ. ಅದೇ ರೋಗಾಣುಗಳು ಕೆಳದವಡೆ ಅಥವಾ ಮೇಲಿನೆ ದವಡೆಗೆ ಸೇರಿ, ಬೇರೆ ತೊಂದರೆಗಳನ್ನು ಉಂಟುಮಾಡಬಹುದು. ಒಸಡಿನಲ್ಲಿ ರಕ್ತ ಬರುವುದು, ಬಾಯಿಯ ದುರ್ವಾಸನೆ, ಹಲ್ಲಿನ ಪಾಚಿ(dental plaque), ಹೀಗೆ ಹಲವು ತೊಂದರೆಗಳನ್ನು ನೀವು ಅನುಭವಿಸಿರಬಹುದು. ಇವುಗಳು ತುಂಬಾ ಸಣ್ಣ ತೊಂದರೆಗಳು ಎಂದೆನಿಸಬಹುದು, ಆದರೆ ಅವುಗಳ ಪರಿಣಾಮಗಳಿಂದ ಕಷ್ಟ ಅನುಭವಿಸಬೇಕಾದೀತು. ಸಿಗರೇಟ್, ಬೀಡಿ, ಗುಟ್ಕಾದ ವಿಷಯಕ್ಕೆ ಬಂದರೆ, ಅದರ ದುಷ್ಪರಿಣಾಮಗಳ ಅರಿವಿದ್ದರೂ, ಅದನ್ನು ಟ್ರೆಂಡ್‌ ಎಂದು ಅಂದುಕೊಂಡು ಸೇವಿಸುವವರ ಸಂಖ್ಯೆ ಹೆಚ್ಚಾಗುತ್ತಿದೆ. ಇನ್ನು, ಚಳಿಯಿಂದ ತಪ್ಪಿಸಿಕೊಳ್ಳಲು, ಟೆಂಷನ್‌ ಕಮ್ಮಿ ಮಾಡಲು ಚಟದ ದಾಸರಾಗಿರುವವರೂ ಇದ್ದಾರೆ. ತಂಬಾಕು ಕಾರ್ಕೋಟಕ ವಿಷವಿದ್ದಂತೆ! ಅದು ಬಾಯಿಯ ಅಥವಾ ಶ್ವಾಸಕೋಶದ ಕ್ಯಾನ್ಸರ್‌ಗೆ ಮುಖ್ಯ ಕಾರಣವೆಂದು ಹಲವು ಸಂಶೋಧನೆಗಳಿಂದ ಧೃಡಪಟ್ಟಿದೆ.

ದಂತ ವೈದ್ಯರೆಂದರೆ ಬರೀ ಹಲ್ಲು ಕೀಳುವ ಡಾಕ್ಟರ್‌ ಎಂದು ಹಲವರ ಅಭಿಪ್ರಾಯ. ಆದರೆ, ಇಂದು ದಂತ ವೈದ್ಯಕೀಯ ಕ್ಷೇತ್ರ ಬಹಳ ಮುಂದುವರೆದಿದೆ. ವಕ್ರದಂತತೆಗೆ ಚಿಕಿತ್ಸೆ, ಇಂಪ್ಲಾಟ್‌ ಚಿಕಿತ್ಸೆ, ಮೂಳೆ ಅಂಗಾಂಶ ಕಸಿ(bone graft), ವಸಡಿನ ಚಿಕಿತ್ಸೆ ಹೀಗೆ ಇನ್ನೂ ಹಲವು ಬಗೆಯ ಚಿಕಿತ್ಸೆ ದಂತ ವೈದ್ಯರು ಮಾಡಬಲ್ಲರು. ದಂತ ಚಿಕಿತ್ಸೆ ಶ್ರೀಮಂತರಿಗೆ ಮಾತ್ರ, ಸಾಮಾನ್ಯರಿಗೆ ಎಟಕದು ಎಂದೆನೆಸಿಬಹುದು, ಆದರೆ ಬಾಯಿ ಮತ್ತ ಹಲ್ಲಿನ ಆರೊಗ್ಯ ಪ್ರತಿಯೊಬ್ಬನಿಗೂ ಮುಖ್ಯ. ಸುಂದರ ಹಾಗು ಅನಂದದ ನಗು ಪ್ರತಿಯೊಬ್ಬನ ಆಸ್ತಿ.


ಸುಂದರ ಹಾಗು ಆನಂದದ ನಗುವಿಗಾಗಿ....

 

Author : ಅಶ್ವಿನ್ ಪಿ ಎಸ್ ಭಟ್ 

Author's Profile

ಅಂತಿಮ ವರ್ಷದ ಬಿಡಿಎಸ್ ವಿದ್ಯಾರ್ಥಿ,
ಸರ್ಕಾರಿ ದಂತ ವೈದ್ಯಕೀಯ ಕಾಲೇಜ್ ಮತ್ತು ಸಂಶೋಧನಾ ಸಂಸ್ಥೆ, ಬೆಂಗಳೂರು

ಇಮೇಲ್ : psbhatashwin@gmail.com
ಮೊಬೈಲ್ : 8050364485

More Articles From Health

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited